- ಪಕ್ಷಕ್ಕಾಗಿ ಮಹಿಳೆಯರು ಪೂರ್ಣಾವಧಿ ಕಾರ್ಯಕರ್ತರಾಗಿ ಕೇಂದ್ರ ಯೋಜನೆಗಳ ಪ್ರಚಾರಕರಾಗಬೇಕು: ನವ್ಯಾ ಹರಿದಾಸ್
ಕಾಸರಗೋಡು: ದೇಶದ ಸಂಪೂರ್ಣ ಜನಸಾಮಾನ್ಯರನ್ನು ಕೇಂದ್ರ ಸರಕಾರಿ ಯೋಜನೆಗಳ ಫಲಾನುಭವಿಗಳನ್ನಾಗಿಸಲು ಬಿಜೆಪಿ ಮಹಿಳಾ ಮೋರ್ಛ ಕಾರ್ಯಕರ್ತರು ರಂಗಕ್ಕಿಳಿದು ಪ್ರವರ್ತಿಸಬೇಕು ಹಾಗೂ ಕೇಂದ್ರ ಯೋಜನೆಗಳ ಪ್ರಚಾರಕರಾಗಬೇಕೆಂದು ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ನವ್ಯಾ ಹರಿದಾಸ್ ಹೇಳಿದರು. ಕಾಸರಗೋಡಿನಲ್ಲಿಂದು ಬಿಜೆಪಿ ಮಹಿಳಾ ಮೋರ್ಛಾ ವತಿಯಿಂದ ನಡೆದ ಮಹಿಳಾ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಹಿಳಾ ಸಬಲೀಕರಣ ಮತ್ತು ಮಹಿಳಾ ಸ್ತ್ರೀ ಶಾಕ್ತೀಕರಣದ ವಿಷಯದಲ್ಲಿ ಉಳಿದ ಪಕ್ಷಗಳೆಲ್ಲ ಕೇವಲ ಬೂಟಾಟಿಕೆಯ ಮಾತನ್ನಾಡುತ್ತಿದ್ದರೆ ಬಿಜೆಪಿ ಚುನಾವಣೆಯಲ್ಲಿ ಮಹಿಳೆಯರಿಗೆ ಅತ್ಯಧಿಕ ಅವಕಾಶಗಳನ್ನೊದಗಿಸಿ ಮಾದರಿಯಾಗಿದೆ. ಕೇರಳಾದ್ಯಂತ ಬಿಜೆಪಿ ಶಕ್ತಿ ಸಂವರ್ಧಿಸಿಕೊಂಡಿದೆ ಎಂದುಲ್ಲೇಖಿಸಿದ ಅವರು ಕೇಂದ್ರಗೃಹ ಸಚಿವ ಅಮಿತ್ ಷಾ ಕೇರಳ ಬಿಜೆಪಿಗೆ ಗುರಿಯೊಂದನ್ನು ಕೊಟ್ಟಿದ್ದಾರೆ.
ಅದುವೇ ಕೇರಳದಲ್ಲಿ ಬಿಜೆಪಿ ಶಾಸಕರನ್ನು ಸೃಷ್ಟಿಸುವ ಮಿಷನ್-2026. ಈ ಗುರಿ ಸಾಧನೆಗೆ ವಿಶೇಷವಾಗಿ ಮಹಿಳೆಯರು ಪಣತೊಡಬೇಕು. ಪಕ್ಷಕ್ಕಾಗಿ ಮಹಿಳೆಯರು ಪೂರ್ಣೋವಧಿ ಕಾರ್ಯಕರ್ತರಾಗಬೇಕೆಂದು ಅವರು ಕರೆ ಇತ್ತರು.

ಇತ್ತೀಚಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಎಲ್ಲಾ ಮಹಿಳಾ ಸದಸ್ಯರನ್ನು ಸಮಾರಂಭಧಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಅಭಿನಂಧಿಸಿದರು. ಮಹಿಳಾ ಮೋರ್ಛಾ ಜಿಲ್ಲಾ ಅಧ್ಯಕ್ಷೆ ಕೆ. ಎಸ್. ರಮಣಿ ಅಧ್ಯಕ್ಷತೆ ವಹಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್, ಅಶ್ವಿನಿ ಕೆ. ಎಂ, ಜಿಲ್ಲಾ ಖಜಾಂಜಿ ವೀಣಾ ಅರುಣ್ ಶೆಟ್ಟಿ, ಉದುಮ ಮಂಡಲಾಧ್ಯಕ್ಷೆ ಶೖನಿಮೋಳ್, ಕಾಸರಗೋಡು ಮಂಡಲ ಉಪಾಧ್ಯಕ್ಷೆ ಲೀಲಾವತಿ, ಮಹಿಳಾ ಮೋರ್ಛಾ ಜಿಲ್ಲಾ ಪ್ರ. ಕಾರ್ಯದರ್ಶಿ ಅನಿತಾ ನಾಯ್ಕ್, ಪ್ರೇಮಲತಾ, ಶ್ರೀಲತಾ ಮೊದಲಾದವರು ಮಾತನಾಡಿದರು.











