- ಪರಿಷ್ಕೃತ ಭಾಷಾ ಮಸೂದೆಯಲ್ಲಿ ಕನ್ನಡ, ತಮಿಳು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳು ಸಂರಕ್ಷಿಸಲ್ಪಟ್ಟಿವೆ-ಸಚಿವ
ತಿರುವನಂತಪುರ: ಮಲಯಾಳಂ ಭಾಷಾ ಮಸೂದೆ ಹೆಸರಲ್ಲಿ ಕರ್ನಾಟಕ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಸಚಿವರು ಮಸೂದೆಯಲ್ಲೇನಿದೆ ಎಂದರಿಯದೇ ಕೇರಳ ಮತ್ತು ಮಲಯಾಳಂ ಬಗ್ಗೆ ವಾಸ್ತವ ವಿರುದ್ಧ ಹೇಳಿಕೆ ನೀಡುತ್ತಿದಾರೆಂದು ಕೇರಳ ಕೖಗಾರಿಕೆ ಮತ್ತು ಕಾನೂನು ಸಚಿವ ಪಿ. ರಾಜೀವ್ ತಿಳಿಸಿದರು. ತಿರುವನಂತಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಕರ್ನಾಟಕ ಮುಖ್ಯಮಂತ್ರಿ ಕೇರಳ ವಿರುದ್ಧ ವಾಸ್ತವವರಿಯದೇ ಬಹಿರಂಗ ಹೇಳಿಕೆ ನೀಡುವಾಗ ಕೇರಳದ ಕಾಂಗ್ರೆಸ್ ನಾಯಕರು ಅವರಿಗೆ ಮಸೂದೆಯಲ್ಲೇನಿದೆ ಎಂಬ ವಾಸ್ಚವ ತಿಳಿಸದೇ ಮೌನವಾಗಿದ್ದು, ಕೇರಳ ವಿರೋಧಿ ಧೋರಣೆ ತಳೆಯುತ್ತಿದ್ದಾರೆಂದು ಆರೋಪಿಸಿದರು.

ಮಲಯಾಳಂ ಭಾಷಾ ಮಸೂದೆಯನ್ನು ಕೇರಳ ಸರಕಾರ ವರ್ಷದ ಹಿಂದೆಯೇ ಮಂಡಿಸಿ ಅಂಗೀಕರಿಸಿತ್ತು. ಆದರೆ ಅಂದು ಇದಕ್ಕೆ ರಾಷ್ಟ್ರಪತಿ ಅಂಕಿತ ಹಾಕದೇ ಮರಳಿಸಿದ್ದರು. ಇದರಂತೆ ಮಸೂದೆಯ ನ್ಯೂನತೆ ಪರಿಶೋಧಿಸಿ ತಿದ್ದುಪಡಿ ಮಾಡಿ ವಿಧಾನಸಭೆಯಲ್ಲಿ ಮರು ಮಂಡನೆ ಮಾಡಿ ಇದೀಗ ಅಂಗೀಕರಿಸಲಾಗಿದೆ. ಪರಿಷ್ಕೃತ ಮಸೂದೆಯಲ್ಲಿ ಕೇರಳದ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರಿಗೆ ಅವರವರ ಮಾತೃಭಾಷೆಯಲ್ಲೇ ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಅವರು ಬಯಸಿದಲ್ಲಿ ಮಲಯಾಳಂ ಕಲಿಕೆಗೂ ಅವಕಾಶವಿದೆ ಎಂದಿದೆ. ಕೇರಳ ಸರಕಾರ ಮಸೂದೆಯ ಮರೆಯಲ್ಲಿವಯಾವ ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ಕಸಿಯುತ್ತಿಲ್ಲ. ಬದಲು ಸಂರಕ್ಷಿಸುತ್ತಿದೆ. ಈ ವಾಸ್ತವಗಳನ್ನರಿಯದೇ, ಮಸೂದೆಯನ್ನೇ ಓದದೇ ಕರ್ನಾಟಕ ಸಿಎಂ ಹಾಗೂ ಸಚಿವರು ಬಹಿರಂಗ ಹೇಳಿಕೆ ಇತ್ತಿರುವುದು ಅಸಮಂಜಸ ಎಂದು ಸಚಿವರು ಹೇಳಿದರು.
ಭಾಷಾ ಮಸೂದೆ ಕುರಿತು ಕನ್ನಡದ ಕಾಳಜಿಯಿಂದ ಕರ್ನಾಟಕ ಮುಖ್ಯಮಂತ್ರಿಗೆ ಕೇರಳದ ಜತೆ ಸಂಪರ್ಕ ಹೊಂದಿ ವಿಷಯವೇನೆಂದು ತಿಳಿಯಬಹುದಾಗಿತ್ತು. ಆದರೆ ಹಾಗೆ ಮಾಡದೇ ಬಹಿರಂಗವಾಗಿ ಹೇಳಿಕೆ ನೀಡಿರುವುದು ಉಭಯ ರಾಜ್ಯಗಳ ಸಾಹೋದರ್ಯ ಸಂಬಂಧಕ್ಕೆ ಹಾನಿಯುಂಟುಮಾಡುವಂತದ್ದೆಂದು ಅವರು ಉಲ್ಲೇಖಿಸಿದರು. ಕೇರಳ ಕರ್ನಾಟಕದ ಜತೆ ಭಾಷಾ ಸಂಘರ್ಷದ ಸಮರ ಬಯಸುತ್ತಿಲ್ಲ ಮತ್ತು ಸೌಹಾರ್ದ ಸಂಬಂಧವನ್ನೇ ಬಯಸುತ್ತಿದೆ. ಈ ದೃಷ್ಟಿಯಲ್ಲಿ ವಾಸ್ತವ ಅರಿಯದೇ ಕರ್ನಾಟಕ ಕೇರಳವನ್ನು ಟೀಕಿಸುವಾಗ ಕೇರಳದ ಕಾಂಗ್ರೆಸ್ಸಿಗರು ಸುಮ್ಮನಿರುವುದೇಕೆಂದು ಸಚಿವರು ಪ್ರಶ್ನಿಸಿದರು.
ಕೇರಳ ಮತ್ತು ಮಲಯಾಳಂ ವಿರುದ್ಧ ಕರ್ನಾಟಕ ಸಿಎಂ ಹೇಳಿಕೆ ನೀಡಿದಾಗ ಮಸೂದೆಯಲ್ಲಿ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಹಕ್ಕು ಸಂರಕ್ಷಿಸಲ್ಪಟ್ಟಿದೆ ಎಂಬ ಮಾಹಿತಿಯನ್ನು ಕೇರಳದ ಕಾಂಗ್ರೆಸ್ಸಿಗರು ಕರ್ನಾಟಕಕ್ಕೆ ತಿಳಿಸಬೇಕಿತ್ತು. ಇದು ಹೊಣೆಗಾರಿಕೆ. ಇದರ ಬದಲು ಮೌನದ ನಿಲುವು ತಳೆಯುವುದು ಸರಿಯೇ?.
ಇದು ರಾಜ್ಯ ವಿರುದ್ಧ ನಿಲುವಲ್ಲವೇ?
ಪಿ. ರಾಜೀವ್, ಸಚಿವರು








