- 4ದಶಕದಲ್ಲಿ ಮೂರೂವರೆ ಸಾವಿರದಷ್ಟು ಹಾವುಗಳನ್ನು ಸೆರೆ ಹಿಡಿದ ಅಪೂರ್ವ ಸರ್ಪ ಸಾಂಗತ್ಯ..!
ಕುಂಬಳೆ: ಕಳೆದ ನಾಲ್ಕು ದಶಕಗಳಿಂದ ಹಾವುಗಳನ್ನು ಹಿಡಿಯುವ ನಾನು ಈ ವರೆಗೆ ಸರಿ ಸುಮಾರು ಮೂರೂವರೆ ಸಾವಿರ ಹಾವುಗಳನ್ನು ಹಿಡಿದಿದ್ದೇನೆ. ಈ ಪೖಕಿ ನಾಗರಹಾವುಗಳೇ ಅಧಿಕ. ನಮ್ಮ ಕುಂಬಳೆ-ಬದಿಯಡ್ಕ ಪರಿಸರದಲ್ಲಂತೂ ನಾಗರ ಹಾವುಗಳ ಸಂಖ್ಯೆ ಅಧಿಕವಿದೆ. ಅದೇಕೋ ನಾನರಿಯೆ ಎನ್ನುತ್ತಾ ಮಾತಿಗಳಿದ ಕುಂಬಳೆ ಕಂಚಿಕಟ್ಟೆ ನಿವಾಸಿ ಸ್ನೇಕ್ ಸುರೇಶ್ ಮಾತು ಕೇಳಿದರೆ ಬೆರಗಾಗುತ್ತದೆ…

15ರ ಹರೆಯದಲ್ಲಾರಂಭ…
ಎಳವೆಯಲ್ಲೇ ಕೆರೆಯಲ್ಲಿ ಕಪ್ಪೆ, ನೀರೊಳ್ಳೆಗಳನ್ನು ಹಿಡಿದು ಆರಂಭ. 15ರ ಹರೆಯದಲ್ಲೇ ಹಾವು ಹಿಡಿವ ಧೖರ್ಯ. ಆ ಬಳಿಕ ಈ ತನಕ ಸಾವಿರ ಗಟ್ಟಲೆ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿರುವ ಸುರೇಶ್ ಈಗ ಕೇರಳ ಅರಣ್ಯ ಇಲಾಖೆಯ ಔದ್ರೋಗಿಕ ಲೖಸನ್ಸ್ ಹೊಂದಿದ ಹಾವು ಹಿಡಿವ ವ್ಯಕ್ತಿ. ಪರಿಸರದಲ್ಲಿ ಯಾರಲ್ಲಿಗೆ ಹಾವು ಬಂದರೂ ಇವರಿಗೆ ಕರೆ ನಿಶ್ಚಿತ. ಹೀಗೆ ಕರೆ ಬಂದಲ್ಲಿಗೆ ತೆರಳಿ ಹಾವು ಹಿಡಿದು, ಅದನ್ನು ಕಾಸರಗೋಡಿನ ಅರಣ್ಯ ಇಲಾಖಾ ಕಚೇರಿಗೆ ಕೊಂಡೊಯ್ದು ಕೊಡಬೇಕು. ಅವರದನ್ನು ಕಾಡಿಗೆ ಬಿಡುತ್ತಾರೆ. ಈ ಸೇವೆಗೆ ಸುರೇಶರಿಗೆ ಅರಣ್ಯ ಇಲಾಖೆಯಿಂದೇನೂ ಸಂಭಾವನೆಯಿಲ್ಲ. ಜನರು ನೀಡಿದ ದುಡ್ಡಲ್ಲೇ ಈ ಸೇವೆ ಸಾಗಬೇಕು. ಈ ರೀತಿಯ ಉರಗ ಸೇವೆ ಮಾಡುವ ಸುಮಾರು 175ರಷ್ಟು ಮಂದಿ ಜಿಲ್ಲೆಯಲ್ಲಿದ್ದರೂ ಸುರೇಶ್ ಮಾತ್ರ ವಿಭಿನ್ನರು.

ಕರುಣಾಹೃದಯಿಯಿಂದ ಹಾವು, ನವಿಲುಗಳಿಗೆ ಜೀವದಾನ
ಅವರು ಹಾವುಗಳಿಗೆ ಗಾಯಗೊಂಡರೆ ಚಿಕಿತ್ಸೆ ನೀಡುತ್ತಾರೆ. ತನ್ನೂರಲ್ಲಿ ಗಾಯದಿಂದ ನರಳುತ್ತಿದ್ದ ನಾಗರಹಾವೊಂದನ್ನು ಕಂಡು ಅದನ್ನು ಮನೆಗೆ ಕೊಂಡೊಯ್ದು ವಾರಗಟ್ಟಲೆ ಇರಿಸಿ ಚಿಕಿತ್ಸೆ ನೀಡಿ, ಚೇತರಿಸಿದ ಬಳಿಕ ಕಾಡಿಗೆ ಬಿಟ್ಟ ಕರುಣಾಮಯಿ ಇವರು.!
ಹಾಗೆಯೇ ಕಾಲುಗಂಟು ಮುರಿದ ನವಿಲನ್ನು ಮೃಗಾಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಅದನ್ನು ಮನೆಯಲ್ಲೇ ಉಳಿಸಿ ವೖದ್ಯರ
ಸಲಹೆಯಂತೆ ಚಿಕಿತ್ಸಿಸಿ, ಚೇತರಿಸಿದ ಬಳಿಕ ಕಾಡಿಗೆ ಬಿಟ್ಟಿದ್ದಾರೆ. ಇದೇ ರೀತಿ ಕೆಲವು ಪಕ್ಷಿಮರಿಗಳು ಇವರ ಕರುಣೆಯ ಕೖಗಳಿಂದ ಪುನರ್ ಜನ್ಮ ಪಡೆದಿವೆ. ಇದೆಲ್ಲವನ್ನು ಮನೆಯಲ್ಲೇ ಇಟ್ಟು ಆರೖಕೆ ಮಾಡಿ ಬಿಡುವ ಇವರ ಕರುಣಾಹೃದಯದಿಂದ ಅನೇಕ ಜೀವಿಗಳು ಬದುಕಿವೆ!

ಬದುಕಿ ಬಂದದ್ದೇ ಅದೃಷ್ಟ…
ಒಮ್ಮೆ ಕುಂಬಳೆಯ ಉದ್ಯಮಿ ನಾರಾಯಣ ಪ್ರಭುಗಳ ಮನೆಗೆ ನಾಗರ ಹಾವು ನುಗ್ಗಿತ್ತು. ಸುರೇಶರಿಗೆ ಕರೆ ಬಂತು. ಚಾಕಚಕ್ಯತೆಯಿಂದ ಅದನ್ನು ಹಿಡಿದಾಗ ಅದು ಕೖಯ್ಯ ಮೊಣಗಂಟಿಗೆ ಕಚ್ಚಿತು. ವಿಷಪೂರಿತ ನಾಗರಹಾವಿನ ಕಡಿತದಿಂದ ಪರಿಸ್ಥಿತಿ ವಿಷಮಕ್ಕೆ ಹೋಯಿತು. ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ವೖದ್ಯರು “ತಿಳಿಸುವವರಿಗೆಲ್ಲಾ ತಿಳಿಸಿ, ಬದುಕುವುದು ಕಷ್ಟ” ಎಂದರು. ಆದರೆ ಉದ್ಯಮಿ ನಾರಾಯಣ ಪ್ರಭು ಕಂಗೆಡದೇ ಚಿಕಿತ್ಸೆ ಕೊಡಿಸಿದರು. ಸುಮಾರು 3ಲಕ್ಷ ರೂ ವೆಚ್ಚ ವ್ಯಯಿಸಿ ಅವರು ಮಾಡಿಸಿದ ಚಿಕಿತ್ಸೆಯಿಂದ ನಾನಿಂದಿಗೂ ಇದ್ದೇನೆ. ಹಾವುಗಳ ಸಂಗದಲ್ಲೇ ಬದುಕುತ್ತೇನೆ ಎಂದರು ಸುರೇಶ್.
ಹಾವು ಹಿಡಿಯುವ ಕಾಯಕದಲ್ಲಿ ಎಚ್ಚರ, ಏಕಾಗ್ರತೆ ಅಗತ್ಯ. ತಾಳ್ಮೆ ಅತಿ ಮುಖ್ಯ. ಹಾವು ಹಿಡಿತ ಮತ್ತು ಹಾವುಗಳ ಕುರಿತಾಗಿ ಅರಣ್ಯ ಇಲಾಖೆ ತರಬೇತಿ ನೀಡುತ್ತದೆ. ಮಾರ್ಗದರ್ಶನ ಒದಗಿಸುತ್ತದೆ. ಆದರೂ ನನಗೆ ಮೂರ್ನಾಕು ಸಲ ಹಾವು ಕಚ್ಚಿದೆ. ನೇರ ಕಾಸರಗೋಡು ಜನರಲ್ ಆಸ್ಪತ್ರೆಗೆ ತೆರಳಿದರೆ ಅಲ್ಲದಕ್ಕೆ ಔಷಧಿ, ಚಿಕಿತ್ಸೆ ದೊರಕುತ್ತದೆ ಎನ್ನುತ್ತಾರೆ ಸುರೇಶ್.
ಗೋಪಾಲಕೃಷ್ಣ-ಮೋಹಿನಿ ದಂಪತಿಯ ಐವರು ಮಕ್ಕಳಲ್ಲಿ ಮೊದಲಿಗನಾದ ಸುರೇಶ್ ಮರದ ಕೆಲಸ ಮಾಡುತ್ತಿದ್ದರು. ಈಗ ಪೂರ್ಣಾವಧಿ ಹಾವು ಹಿಡಿಯುವುದೇ ಉದ್ಯೋಗವಾಗಿದೆ. ಕುಂಬಳೆ ಬದಿಯಡ್ಕ, ಬಂದ್ಯೋಡು, ಉಪ್ಪಳ ಪರಿಸರದಲ್ಲಿ ಲೆಕ್ಕವಿಲ್ಲದಷ್ಟು ವೖವಿಧ್ಯ ಹಾವುಗಳನ್ನು ಸೆರೆಹಿಡಿದಿದ್ದಾರೆ.
ಕಾಸರಗೋಡು ಭೂಭಾಗ ಮುರಕಲ್ಲು ಪ್ರದೇಶದ ಒಣಭೂಮಿ. ಆದ್ದರಿಂದಲೇ ಇಲ್ಲಿ ನಾಗರಹಾವುಗಳ ಸಂಖ್ಯೆ ಹಿಂದಿನಿಂದಲೂ ಅಧಿಕವಿತ್ತು. ಆದರೆ ಈಗ ನವಿಲುಗಳ ಸಂಖ್ಯೆ ಹೆಚ್ಚಿದೆ. ನಾಗರಹಾವಿನ ಸಂಖ್ಯೆ ತುಸು ಕುಗ್ಗಿದೆ. ವಾತಾವರಣ ಮತ್ತು ಪ್ರಕೃತಿಯ ಸಮತೋಲನಕ್ಕೆ ಹಾವುಗಳು ಪೂರಕ.
-ಸತ್ಯನ್
– ಅರಣ್ಯಾಧಿಕಾರಿ, ಕಾಸರಗೋಡು





