- ಪುತ್ತಿಗೆ ಡಿವಿಜನಿನ ಎಣ್ಮಕಜೆ ಪಂ. ಏಳು ವಾರ್ಡುಗಳ ಮರು ಮತ ಎಣಿಕೆಗೆ ಬಿಜೆಪಿ ಒತ್ತಾಯ, ಸೋಮಶೇಖರ್ ಗೆ ಗೆಲುವು
ಕಾಸರಗೋಡು : ಕಾಸರಗೋಡು ಜಿ. ಪಂ. ನ ಬೇಕಲ ಮತ್ತು ಪುತ್ತಿಗೆ ಡಿವಿಜನಿನ ಮರು ಮತ ಎಣಿಕೆ ಇಂದು ಬೆಳಿಗ್ಗೆ ನಡೆದು, ಫಲಿತಾಂಶದಲ್ಲಿ ಬದಲಾವಣೆಯಾಗಿಲ್ಲ. ಬೇಕಲದಲ್ಲಿ ಎಡರಂಗದ ಟಿ. ವಿ. ರಾಧಿಕ 267ಮತಗಳಿಂದ ಯುಡಿಎಫ್ ನ ಷಾಹಿದ ರಶೀದ್ ಅವರನ್ನು ಪರಾಭವಗೊಳಿಸಿದರು. ಪುತ್ತಿಗೆ ಡಿವಿಜನಿನಲ್ಲಿ ಯುಡಿಎಫ್ ನ ಜೆ. ಎಸ್. ಸೋಮಶೇಖರ ಅವರು ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಮಣಿಕಂಠ ರೖ ಅವರನ್ನು 438ಮತಗಳಿಂದ ಪರಾಭವಗೊಳಿಸಿದರು.

ನಿನ್ನೆ ನಡೆದ ಮತ ಎಣಿಕೆಯಲ್ಲಿ ಪುತ್ತಿಗೆಯಲ್ಲಿ ಯುಡಿಎಫ್ ಮತ್ತು ಬೇಕಲದಲ್ಲಿ ಎಡರಂಗ ಗೆಲುವು ಪಡೆಯಿತೆಂದು ಘೋಷಿಸಲಾಗಿತ್ತು. ಆದರೆ ಎಣಿಕೆ ತಪ್ಪಿದೆ ಎಂದಾರೋಪಿಸಿ ಮರು ಮತ ಎಣಿಕೆಗೆ ಪರಾಜಯ ಕಂಡ ಅಭ್ಯರ್ಥಿಗಳು ಒತ್ತಾಯಿಸಿದ್ದರು.
ಪುತ್ತಿಗೆ ಡಿವಿಜನಿನ ಎಣ್ಮಕಜೆ ಪಂಚಾಯತಿಗೆ ಒಳಪಟ್ಟ ಏಳು ವಾರ್ಡುಗಳ ಮತಗಳನ್ನು ಮರು ಎಣಿಕೆ ಮಾಡಬೇಕೆಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರೖ ಒತ್ತಾಯಿಸಿದ್ದರು. ಇದರಂತೆ ಮರು ಎಣಿಕೆ ನಡೆದಿದ್ದು, ಫಲಿತಾಂಶದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ.
ಇದರೊಂದಿಗೆ ಜಿ. ಪಂ. ನಲ್ಲಿ 9ಸ್ಥಾನದೊಂದಿಗೆ ಎಡರಂಗ ಅಧಿಕಾರ ಉಳಿಸಿಕೊಂಡಿದೆ. ಯುಡಿಎಫ್ 8ಸ್ಥಾನ ಮತ್ತು ಬಿಜೆಪಿ 1ಸ್ಥಾನ ಪಡೆದಿದೆ. ಜಿ. ಪಂ. ನ ಕುತ್ತಿಕೋಲ್ ಡಿವಿಜನ್ ನಿಂದ ಆಯ್ಕೆಯಾದ ಸಿಪಿಐಎಂ. ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಸಾಬು ಅಬ್ರಹಾಂ ಜಿ. ಪಂ. ಅಧ್ಯಕ್ಷರಾಗಲಿದ್ದಾರೆ.
ಜಿ. ಪಂ. ಪುತ್ತಿಗೆ ಡಿವಿಜನ್ ಬಿಜೆಪಿ ಯ ಭರವಸೆಯ ಸೀಟಾಗಿತ್ತು. ಈ ಹಿಂದೆ ಇದೇ ಡಿವಿಜನ್ ನಲ್ಲಿ ಬಿಜೆಪಿ ಸತತ ಗೆಲುವು ಪಡೆದಿತ್ತು. ಕಳೆದ ಬಾರಿ ತೃತೀಯ ಸ್ಥಾನ ಪಡದಿದ್ದ ಯುಡಿಎಫ್ ಈ ಬಾರಿ ಗೆದ್ದಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.





