ಕಾಸರಗೋಡು ಜಿಲ್ಲೆಯಲ್ಲಿ ಹುಲಿ ಸಾನ್ನಿಧ್ಯದ ಕುರುಹುಗಳೇ ಇಲ್ಲ, ಆದರೆ ನಾಡಿನಲ್ಲಿ ಚಿರತೆ ಸಂಖ್ಯೆ ಹೆಚ್ಚಳ : ಅರಣ್ಯಾಧಿಕಾರಿ

by Narayan Chambaltimar
  • ಗಡಿನಾಡ ಕಾಡುಗಳ ಆರು ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಹುಲಿ ಗಣತಿಗೆ ಸಮಾಪ್ತಿ

ಕಾಸರಗೋಡು : ರಾಷ್ಟ್ರೀಯ ಹುಲಿ ಗಣತಿಯಂಗವಾಗಿ ಕಾಸರಗೋಡು ಜಿಲ್ಲೆಯ ಮೀಸಲು ಅಭಯಾರಣ್ಯ ಪ್ರದೇಶದಲ್ಲಿ ಡಿ. 1ರಿಂದ ಆರಂಭಗೊಂಡ ಹುಲಿ ಗಣತಿಯ ಸಮೀಕ್ಷೆ ಡಿ. 8 ಸೋಮವಾರ ಅಂತ್ಯಗೊಂಡಿದೆ. ಜಿಲ್ಲೆಯಲ್ಲಿ ಈ ಬಾರಿಯ ಸಮೀಕ್ಷೆಯಲ್ಲೂ ಹುಲಿ ಸಾನ್ನಿಧ್ಯದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಆದರೆ ಜನವಾಸದ ನಾಡಲ್ಲಿ ಚಿರತೆ ಹೆಚ್ಚಳವನ್ನು ಅರಣ್ಯಾಧಿಕಾರಿ ದೃಢೀಕರಿಸಿದ್ದಾರೆ. ಚಿರತೆಗಳ ಗಣತಿ ನಡೆದಿಲ್ಲವಾದರೂ ಜಿಲ್ಲೆಯ ಹಲವೆಡೆ ಚಿರತೆಗಳು ವಾಸಿಸುತ್ತಿವೆ ಎಂದು ಆವರು ಹೇಳಿದರು.

 

ಕಾಸರಗೋಡು ಜಿಲ್ಲೆಯ ದಟ್ಟ ಕಾಡೊಳಗೆ ಚಿರತೆ ಸಂಖ್ಯೆ ಕಡಿಮೆಯಾಗಿ ಅದು ನಾಡನ್ನು ಹೊಂದಿದ ಕಾಡನ್ನು ಆಶ್ರಯಿಸುತ್ತಿದೆ. ನಾಡಿನಲ್ಲಿ ನಾಯಿಗಳ ಸಂಖ್ಯಾವರ್ಧನೆಯಾಗಿದ್ದು, ಅದು ಚಿರತೆಗೆ ಸ್ವಾದಿಷ್ಟವಾದ ಸುಲಭದ ಆಹಾರವಾಗುತ್ತಿದೆ. ಜತೆಗೆ ಕೃಷಿಕರ ತೋಟ ಮತ್ತು ಮನೆ ಪರಿಸರದ ಕಾಡುಗಳನ್ನು ಸ್ವಚ್ಛಗೊಳಿಸಿರಿಸದೇ ಇರುವುದರಿಂದ ಚಿರತೆಗಳ ವಾಸಕ್ಕೆ ಪೂರಕ ವಾತಾವರಣ ಒದಗುತ್ತದೆ. ಪರಿಣಾಮ ದಟ್ಟ ಕಾಡಿಗಿಂತ ಕಾಡಿಗೆ ಹತ್ತಿರದ ಊರಲ್ಲಿ ಚಿರತೆ ವಾಸಿಸತೊಡಗಿದೆ.
-ಸಿ. ವಿ. ವಿನೋದ್ ಕುಮಾರ್
(ಕಾಸರಗೋಡು ರೇಂಜ್ ಫಾರೆಸ್ಟ್ ಆಫೀಸರ್)

ಕೇರಳದ ಅರಣ್ಯ ಪ್ರದೇಶವನ್ನು 684 ಬ್ಲಾಕ್ ಗಳಾಗಿ ವಿಭಜಿಸಿ ಗಣತಿ ನಡೆದಿದೆ. ಮೊದಲ ದಿನದಿಂದ ಮೊದಲ್ಗೊಂಡು ಸತತ ಮೂರು ದಿನಗಳ ಕಾಲ ಸಸ್ಯಾಹಾರಿ ಮತ್ತು ಮಾಂಸಾಹಾರಿ ಮೃಗಗಳ ಸಾನ್ನಿಧ್ಯ, ಅವುಗಳ ಕಾಲ್ಗುರುತು, ಮಲ ವಿಸರ್ಜನೆ, ಮರಗಳನ್ನು ಕೊರೆದ ಕುರುಹು, ವಾಸನೆ, ಮರಗಳಲ್ಲಿ ಉಗುರಿನ ಗುರುತು, ಶಬ್ದದ ಸುಳಿವು ಮತ್ತು ಖುದ್ದು ಕಾಣಲ್ಪಟ್ಟ ಗಮನಿಸುವಿಕೆ ಇತ್ಯಾದಿಗಳ ಆಧಾರದಲ್ಲಿ ಸಮೀಕ್ಷೆ ನಡೆಯಿತು. ಬಳಿಕದ ಎರಡು ದಿನ ನಿಗದಿತ ಬ್ಲಾಕ್ ಗಳಲ್ಲಿ
ಪ್ರಾಣಿ ಸಂಚಾರದ ನಿರೀಕ್ಷಣಾ ದಾರಿ ಗುರುತಿಸಿ ಅವುಗಳ ಚಲನವಲನ ವೀಕ್ಷಿಸುವ ಪ್ರಕ್ರಿಯೆ ನಡೆಯಿತು.

ಕಾಸರಗೋಡು ಜಿಲ್ಲೆಯ ಮುಳಿಯಾರು, ಕಾರಡ್ಕ, ಪರಪ್ಪ, ಅಡೂರು, ಮಂಡೆಕೋಲು, ಪನತ್ತಡಿ ಎಂಬೀ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿ ಪ್ರಕ್ರಿಯೆ ನಡೆದಿದೆ.

ರಾಷ್ಟ್ರೀಯ ಯೋಜನೆಯಂತೆ ಒಳ ಕಾಡು ಪ್ರದೇಶದಲ್ಲಿ ನಿರ್ದಿಷ್ಟ ಉದ್ದೇಶದೊಂದಿಗೆ ಗಣತಿ ಕಾರ್ಯಾಚರಣೆ ನಡೆದಿದೆ. ಹುಲಿ ಸಾನ್ನಿಧ್ಯ ಲಕ್ಷಣ ಗುರುತಿಸುವುದಷ್ಟೇ ಇದರ ಉದ್ದೇಶ ಎಂದು ಜಿಲ್ಲೆಯ ಸರ್ವೇ ಚಟುವಟಿಕೆಗಳಿಗೆ ನೇತೃತ್ವ ನೀಡಿದ ರೇಂಜ್ ಫಾರೆಸ್ಟ್ ಆಫೀಸರ್ ಹಾಗೂ ಸಂಯೋಜಕ ಸಿ. ವಿ. ವಿನೋದ್ ಕುಮಾರ್ ತಿಳಿಸಿದರು.

ಜಿಲ್ಲೆಯಲ್ಲಿ ನಡೆದ ಹುಲಿ ಸಮೀಕ್ಷೆಯಲ್ಲಿ ಕಾಞಂಗಾಡು ರೇಂಜ್ ಫಾರೆಸ್ಟ್ ಆಫೀಸರ್ ಕೆ. ರಾಹುಲ್, ಡೆಪ್ಯೂಟಿ ರೇಂಜ್ ಫಾರೆಸ್ಟ್ ಆಫೀಸರ್ ಎನ್. ವಿ. ಸತ್ಯನ್, ಸೆಕ್ಷನ್ ಫಾರೆಸ್ಟ್ ಆಫೀಸರ್ ಕೆ. ಎ. ಬಾಬು, ಬಿ. ಸೋಮಪ್ಪ, ಬಿ. ಎಸ್. ವಿನೋದ್ ಕುಮಾರ್, ಎಂ. ಪಿ. ರಾಜು, ಎಂ. ಚಂದ್ರನ್, ಪಿ ಗಣೇಶ್, ವಿವಿಧ ಬ್ಲಾಕ್ ಉಸ್ತುವಾರಿ ಹೊಂದಿದ ಯು. ಜಿ. ಅರ್ಜುನ್, ಕೆ. ಜೆ. ಅನೂಪ್, ಎಸ್. ಅಭಿಲಾಶ್, ಬಿ. ವಿನೀತ್, ಆರ್. ಅರುಣ್, ಕೆ. ಪಿ. ಅಭಿಲಾಷ್, ಕೆ. ವಿಶಾಖ್, ಎಂ. ಎನ್. ಸುಜಿತ್, ವಿಘ್ನೇಶ್ ವಿಜಯನ್, ಎನ್. ಜಿ. ಒ ಜಯರಾಂ ಕುಟ್ಟಿಯಾನಂ, ಕಾಸರಗೋಡು ಸರಕಾರಿ ಕಾಲೇಜಿನ ಜಂತು ಶಾಸ್ತ್ರ ವಿಭಾಗ ವಿದ್ಯಾರ್ಥಿಗಳಾದ ವಿ. ಸ್ವಾತಿ, ಫಾತಿಮ ಮುರ್ಷಾನ, ಗೀತು, ವಿವಿಧ ಫಾರೆಸ್ಟ್ ಬೀಟ್ ನ ವನಪಾಲಕರು ಸಮೀಕ್ಷೆಯಲ್ಲಿ ಪಾಲ್ಗೊಂಡರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00