- ಕುಂಬಳೆ ಪಂ. ಎಡರಂಗ ಅಭ್ಯರ್ಥಿಗಳ ಚುನಾವಣಾ ಪ್ರಚಾರಾಂತ್ಯ ಮೆರವಣಿಗೆ, ಬಹಿರಂಗ ಸಭೆ
ಕುಂಬಳೆ : ಕಳೆದ ನಾಲ್ಕೈದು ದಶಕಗಳಿಂದ ಕುಂಬಳೆ ಗ್ರಾಮ ಪಂಚಾಯತನ್ನು ಯು. ಡಿ. ಎಫ್ ಹೆಸರಲ್ಲಿ ಮುಸ್ಲಿಂ ಲೀಗ್ ಆಳುತ್ತಾ, ಬಿಜೆಪಿ ಪ್ರತಿಪಕ್ಷವಾಗಿದ್ದರೂ, ಕೇರಳದ ಇತರೆಡೆ ಎಡರಂಗ ಆಳುವ ಗ್ರಾ. ಪಂ. ನಂತೆ ಯಾವುದೇ ಪ್ರಾದೇಶಿಕ, ಸಮಕಾಲೀನ ಅಭಿವೃದ್ಧಿಗಳೇನೂ ನಡೆಯದೇ ಕೇವಲ ಯೋಜನೆಗಳ ಹೆಸರಲ್ಲಿ ದರೋಡೆ ನಡೆಸುವ ಕೆಲಸವಷ್ಟೇ ನಡೆದಿದೆ. ಕ್ರಿಯಾತ್ಮಕ ವಿಪಕ್ಷ ಎಂಬ ನೆಲೆಯಲ್ಲಿ ಜನಪಕ್ಷದಲ್ಲಿ ನಿಂತು ಹೋರಾಡಬೇಕಿದ್ದ ಬಿಜೆಪಿ ಎಲ್ಲಾ ಅವ್ಯವಹಾರಗಳ ಭ್ರಷ್ಟಾಚಾರಕ್ಕೆ ಸಾಥ್ ನೀಡಿ ಜನರೆದುರು ಮೊಸಳೆ ಕಣ್ಣೀರು ಸುರಿಸಿದೆ. ಹೊರಗೆ ಮತೀಯ ವಿಚಾರದಲ್ಲಿ ದುಷ್ಮನ್ ನಂತೆ ಮಾತನಾಡಿ ಒಳಗೆ ಭಾಯಿ-ಭಾಯಿ ಎಂಬಂತೆ ಭ್ರಷ್ಟತೆಯಲ್ಲಿ ಕೖ ಜೋಡಿಸಿರುವ ಇವರ ವಿರುದ್ಧ ಕುಂಬಳೆ ಪಂ. ವ್ಯಾಪಕ ಜನತೆ ರೋಸಿ ಹೋಗಿದ್ದಾರೆ. ಆಕ್ರೋಶಗೊಂಡಿದ್ದಾರೆ. ಪರಿಣಾಮವೇ ಎಡರಂಗ ದುರ್ಬಲವಾದ ಕುಂಬಳೆ ಗ್ರಾ. ಪಂ. ನ ಎಲ್ಲಾ ವಾರ್ಡುಗಳಲ್ಲೂ ಯುಡಿಎಫ್ -ಬಿಜೆಪಿ ನಡುವೆ ಎಲ್. ಡಿ. ಎಫ್ ನಿರ್ಣಾಯಕವಾಗಿ ರೂಪುಗೊಂಡಿದೆ, ಜನ ಬೆಂಬಲದ ನಿರೀಕ್ಷೆ ಮೂಡಿಸಿದೆ ಎಂದು ಸಿಪಿಐಎಂ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯ ವಿಪಿಪಿ ಮುಸ್ತಫ ಅಭಿಪ್ರಾಯಪಟ್ಟರು.

ಡಿ. 11ರಂದು ನಡೆಯಲಿರುವ ಸ್ಥಳೀಯಾಡಳಿತ ಚುನಾವಣಾ ಹಿನ್ನೆಲೆಯಲ್ಲಿ ಕುಂಬಳೆ ಗ್ರಾ. ಪಂ. ನ ಎಡರಂಗದ ಅಭ್ಯರ್ಥಿಗಳ ಮತ್ತು ಅಭಿಮಾನಿ ಕಾರ್ಯಕರ್ತರ ಪ್ರಚಾರಾಂದೋಲನದ ಪರಿ ಸಮಾಪ್ತಿ ಎಂಬಂತೆ ಹಮ್ಮಿಕೊಂಡ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಯನ್ನು ಸೋಮವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

ಕುಂಬಳೆ ಗ್ರಾ. ಪಂ. ನಲ್ಲಿ ಭ್ರಷ್ಟಾಚಾರ, ಅವ್ಯವಹಾರದ ಸುರಿಮಳೆಯಾಗುತ್ತಿದೆ. ಉತ್ತರ ಕೇರಳ ಮಾದರಿಯ ಯಾವುದೇ ಅಭಿವೃದ್ಧಿ ಇಲ್ಲಿ ಇಣುಕಿ ನೋಡಿದ್ದಿಲ್ಲ. ಜಿ. ಪಂ. ಸದಸ್ಯರು ಯಾರೆಂದೇ ಜನತೆಗೆ ಗೊತ್ತಿಲ್ಲ. ಜಿಪಂ/ ಬ್ಲಾಕ್ ಪಂ ಯೋಜನೆಗಳೆಲ್ಲ ಕುಂಬಳೆ ಮಟ್ಟಿಗೆ ಬ್ಲಾಕ್ ಆಗಿವೆ. ಇದ್ಯಾವುದನ್ನೂ ಪ್ರಶ್ನಿಸದೇ, ಭ್ರಷ್ಟತೆಯನ್ನು ಪ್ರಾಮಾಣಿಕ ವಿರೋಧಿಸದೇ, ಜನರ ನಡುವೆ ಮತೀಯ ವೖರತ್ವದ ಧ್ವೇಷ ರಾಜಕಾರಣ ಮಾಡುತ್ತಾ, ರಹಸ್ಯವಾಗಿ ಭಾಯಿ-ಭಾಯಿ ಎಂಬಂತಿರುವ ಲೀಗ್ -ಬಿಜೆಪಿ ಒಳ ಒಪ್ಪಂದದಿಂದಲೇ ಕುಂಬಳೆ ಪಂ. ಗೆ ಹಿನ್ನಡೆಯಾಗಿದೆ. ಈ ಸತ್ಯವನ್ನರಿತ ಜನತೆ ಈಗ ಜಾಗೃತರಾಗಿ ಎಡರಂಗದ ಮೇಲೆ ಭರವಸೆ, ನಿರೀಕ್ಷೆ ಇರಿಸಿದ್ದಾರೆಂದು ವಿಪಿಪಿ ಮುಸ್ತಫ ನುಡಿದರು. ಕೇವಲ ಕುಂಬಳೆ ಪಂ. ಅಷ್ಟೇ ಅಲ್ಲ, ಈ ಪ್ರದೇಶದ ಸಮಗ್ರ ಅಭಿವೃದ್ಧಿ ಕುಂಠಿತ ಮತ್ತು ಸಾಮಾಜಿಕ ಹಿನ್ನೆಡೆಗೆ ಇಲ್ಲಿಂದ ಕಾಲಾನುಕಾಲ ಚುನಾಯಿತರಾದವರು ಮತ್ತು ಅವರು ಪ್ರತಿನಿಧೀಕರಿಸುವ ಪಕ್ಷವೇ ಕಾರಣವಾಗಿದೆ. ಈಗ ಕಾಲ ಬದಲಾಗಿರೋದರಿಂದ ಜನತೆ ಅಭ್ಯುದಯದ ಪ್ರಗತಿಶೀಲ ಚಿಂತನೆ ನಡೆಸಬೇಕೆಂದು ಮುಸ್ತಫ ಕರೆ ಇತ್ತರು.
ಸಿಪಿಐಎಂ ಕುಂಬಳೆ ಏರಿಯಾ ಸೆಕ್ರೆಟರಿ ಸಿ. ಎ. ಸುಬೈರ್ ಸ್ವಾಗತಿಸಿದರು. ಆರ್. ಜೆ. ಡಿ. ನಾಯಕ ಅಹ್ಮದಾಲಿ ಅಧ್ಯಕ್ಷತೆ ವಹಿಸಿದರು. ಸಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ಕೃಷ್ಣನ್, ಮಂಜೇಶ್ವರ ತಾಲೂಕು ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್, ಐ. ಎನ್. ಎಲ್ ರಾಜ್ಯ ಸಮಿತಿ ಸದಸ್ಯ ಅಝೀಝ್ ಕಡಪ್ಪರ, ರಘುದೇವನ್ ಮಾಸ್ತರ್ ಮತ್ತು ಕುಂಬಳೆ ಗ್ರಾ. ಪಂ. ಸಮಗ್ರ ಅಭ್ಯರ್ಥಿಗಳು ಉಪಸ್ಥಿತರಿದ್ದರು








