- ಕನ್ನಿಕೆಯರಿಗೆ ಚಪ್ಪರ ಮದುವೆ ಸಹಿತ ನಡೆಯುವ ಸಾಮೂಹಿಕ ವಿವಾಹ ಸರಳತೆಗೊಂದು ಸಮುದಾಯದ ಪಾಠ!!
ಕುಂಬಳೆ : ಅತ್ಯುತ್ತರ ಕೇರಳದ ಕಾಸರಗೋಡು ಮೂಲದ ವಾಣಿಯ – ಗಾಣಿಗ ಸಮಾಜದ ಆರಾಧನಾ ದೖವಕ್ಷೇತ್ರವಾದ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿಂದು ವೃಶ್ಚಿಕ ಮಾಸದ ಉದಯಾಸ್ತಮಾನ ಸಲುವಾಗಿ ಸಮುದಾಯದ ಸಾಮೂಹಿಕ ವಿವಾಹ ಜರುಗಿತು. 13 ಜೋಡಿ ವಧೂವರರು ಮುಚ್ಚಿಲೋಟ್ ಭಗವತಿ ಸಾನ್ನಿಧ್ಯದಲ್ಲಿ ಗುರುಹಿರಿಯರ ಸಮ್ಮುಖ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹಿತರಾಗಿ ದಾಂಪತ್ಯ ಜೀವನಕ್ಕೆ ಕಾಲೂರಿದರು.

ಗಡಿನಾಡು ಕಾಸರಗೋಡಿನ ಕುಂಬಳೆ ಬಳಿಯ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರ ಕಾಸರಗೋಡು ಮತ್ತು ಸುಳ್ಯ, ಮಡಿಕೇರಿ, ಪುತ್ತೂರು, ಮಂಗಳೂರು ವ್ಯಾಪ್ತಿಯನ್ನೊಳಗೊಂಡ ಮಲಯಾಳಿ ಮನೆಮಾತಿನ ವಾಣಿಯ, ಗಾಣಿಗ ಸಮುದಾಯದ ಆರಾಧ್ಯ ಕ್ಷೇತ್ರ. ಈ ಸಮುದಾಯಕ್ಕೆ ಸಂಬಂಧ ಪಟ್ಟವರು ಇಂದಿಗೂ ತಮ್ಮ ಜನಾಂಗದ ದೖವಸ್ಥಾನದಲ್ಲೇ ಸಾಮೂಹಿಕ ವಿವಾಹವಾಗುವುದು ಪರೆಂಪರೆಯಿಂದಲೇ ಕೖದಾಟಿ ಬಂದ ರೂಢಿ. ಇದರಂತೆ ವೃಶ್ಚಿಕ ಮಾಸದ ಉದಯಾಸ್ತಮಾನ ದಿನವಾದ ಇಂದು 13ಜೋಡಿಯ ಮದುವೆ ನಡೆಯಿತು. ಬಡವನಿರಲಿ, ಶ್ರೀಮಂತನಿರಲಿ ಎಲ್ಲರ ಮದುವೆಯೂ ಒಂದೇ ಕಡೆ ಆಡಂಬರ ರಹಿತವಾಗಿ ಸರಳತೆಯಿಂದ ಸಾಮೂಹಿಕವಾಗಿ ನಡೆಯುವುದಿಲ್ಲಿನ ರೂಢಿ.
ವರ್ಷಕ್ಕೆರಡು ಬಾರಿ ಸಾಮೂಹಿಕ ಮದುವೆ
ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ವರ್ಷಕ್ಕೆರಡು ಬಾರಿ ಸಾಮೂಹಿಕ ಮದುವೆ ನಡೆಯುತ್ತದೆ. ಮಾರ್ಚ್ ತಿಂಗಳಲ್ಲಿ ಬರುವ ಮೀನ ಮಾಸದ ಪೂರಂ ದಿನ ಮತ್ತು ವೃಶ್ಚಿಕ ಮಾಸದ ಉದಯಾಸ್ತಮಾನದ ದಿನ ಮದುವೆ ನಡೆಯುವುದು ಸಂಪ್ರದಾಯ. ಆ ದಿನ ಯಾವುದೇ ಇರಲಿ, ಆದಿನವೇ ಶುಭದಿನವೆಂದು ನಂಬಿ ನಿಗದಿತ ಮುಹೂರ್ತಗಳೇನೂ ಇಲ್ಲದೇ ನಡೆಯುವ ಮದುವೆ ನಿರಾಡಂಬರದ ಸರಳತೆಗೆ ಉದಾಹರಣೆಯಾಗಿದೆ.

ಮುಚ್ಚಿಲೋಟಮ್ಮನ ನಡೆಯಲ್ಲಿ ದೀಪ ಹಚ್ಚುವುದೇ ಮುಹೂರ್ತ…
ಮದುವೆಯ ದಿನ ಸಮುದಾಯ ದ ದೖವಸ್ಥಾನದ ಮುಖ್ಯಸ್ಥರಾದ ಅಚ್ಚನ್ ಮಾರ್, ವಧೂವರನ ಕುಟುಂಬದ ಗುರು ಹಿರಿಯರ ಸಮ್ಮುಖ ಬೆಳಿಗ್ಗೆ ದೀಪ ಹಚ್ಚುವಲ್ಲಿಂದ ಕಾರ್ಯಕ್ರಮಗಳಿಗೆ ಆರಂಭ. ಈ ದೀಪ ಹಚ್ಚುವುದೇ ಮಂಗಲ ಮುಹೂರ್ತ. ಬಳಿಕ ಎಳೆಯ ಹೆಣ್ಮಕ್ಕಳ ಚಪ್ಪರ ಮದುವೆ ನಡೆಯುವುದು ರೂಢಿ.
ಏನಿದು ಚಪ್ಪರ ಮದುವೆ..?
ಈ ಬಾರಿ 35 ಹೆಣ್ಮಕ್ಕಳ ಚಪ್ಪರ ಮದುವೆ ಜರುಗಿತು. ಎಳೆಯ ಮಕ್ಕಳು ಪ್ರೌಢರಾಗುವ ಮುನ್ನ ಚಪ್ಪರ ಮದುವೆ ನಡೆಸಿ ಕುಲದೇವತೆಯಾದ ಮುಚ್ಚಿಲೋಟ್ ಭಗವತಿಯ ಸಂರಕ್ಷಣಾ ಆಶೀರ್ವಾದ ಪಡೆಯಬೇಕೆಂಬ ರೂಢಿಯಂತೆ ಇದು ಜರಗುತ್ತದೆ. ನವ ವಧುವಿನಂತೆಯೇ ಬಾಲಕಿಯರನ್ನು ಸಿಂಗಾರ ಮಾಡಿಸಿ, ದೖವಸ್ಥಾನಕ್ಕೆ ಪ್ರದಕ್ಷಿಣೆ ಬರಿಸಿ, ಅಚ್ಚಮ್ಮಾರರಿಂದ ಅನುಗ್ರಹ ಪಡೆಯುವುದು ಇದರ ವಿಧಾನ. ಮುಂದೆ ಸಮುದಾಯದಿಂದಲೇ ವಿವಾಹಿತಳಾಗುವ ತನಕ ಕುಲದೇವತೆಯ ರಕ್ಷಣೆಯಲ್ಲಿ ಆಕೆ ಇರುವಳೆಂಬುದು ನಂಬಿಕೆ.
ಮದುವೆಗೆ ವಧೂವರನ ಮನೆಯವರೇ ನಿಶ್ಚಿತಾರ್ಥ ಮಾಡಿ ಮದುವೆಯ ದಿನ ದೖವಸ್ಥಾನದಲ್ಲಿ ಹೆಸರು ನೋಂದಾಯಿಸುತ್ತಾರೆ. ಬಳಿಕ ವಧೂ ವರನ ಶೃಂಗಾರ ಮಾಡುವ ಕೋಣೆಯಲ್ಲೇ ಪರಸ್ಪರ ತಾಳಿ ಕಟ್ಟುವ ಪ್ರಕ್ರಿಯೆ ನಡೆಯುತ್ತದೆ. ಹೆಸರು ನೋಂದಾಯಿಸಿದಷ್ಟೂ ಮಂದಿಗೆ ಸಂಪೂರ್ಣ ಸಿಂಗಾರಗಳು ಆದ ಬಳಿಕವೇ ಮದುವೆ. ಮದುವೆ ಮಂಟಪದಲ್ಲಿ ಎಲ್ಲರೂ ಸಾಲಂಕೃತರಾಗಿ ಕುಳಿತ ಬಳಿಕ ಪರಸ್ಪರ ಹಾರ ವಿನಿಮಯದಲ್ಲಿ ಮದುವೆ ಕೊನೆಗೊಳ್ಳುತ್ತದೆ.
ಹೀಗೆ ಅನಾದಿ ಕಾಲದಿಂದಲೂ ನಡೆಯುವ ಈ ಸಾಂಪ್ರದಾಯಿಕ ಮದುವೆಯಲ್ಲಿ ವಾಣಿಯ, ಗಾಣಿಗ ಸಮಾಜ ಆಚಾರ ಪಾಲಿಸುತ್ತಾ ಮುಂದುವರಿಯುತ್ತದೆ. ದೖವಸ್ಥಾನದಲ್ಲಿ ಮದುವೆಗೆ ವಿಶೇಷ ನೆಂಟರಿಷ್ಟ ಆಪ್ತರನ್ನೆಲ್ಲಾ ಆಹ್ವಾನಿಸಿ ಅದ್ದೂರಿಶ ಔತಣ ನೀಡುವ ಕ್ರಮವೇನಿಲ್ಲ. ಎಲ್ಲರಿಗೂ ಒಂದೇ ರೀತಿಯ ಮದುವೆ, ಒಂದೇ ಅಡುಗೆಯ ಭೋಜನ. ಆದರೆ ವಿವಾಹಾ ನಂತರ ಅವರವರು ಖಾಸಗಿ ಸಮಾರಂಭಗಳನ್ನೇರ್ಪಡಿಸಿ ಆಪ್ತರನ್ನೆಲ್ಲಾ ಆಹ್ವಾನಿಸಿ ಔತಣ ಕೂಟ ಏರ್ಪಡಿಸುವ ಸಂಪ್ರದಾಯವಿದೆ.

ಪೆರ್ಣೆ ಮುಚ್ಚಿಲೋಟ್ ಕ್ಷೇತ್ರದಲ್ಲಿ ವರ್ಷಕ್ಕೆರಡು ಬಾರಿ ನಡೆಯುವ ಸಾಮೂಹಿಕ ಮದುವೆಗೆ ದಿನ ನಿರ್ಣಯಿಸುವ, ಮುಹೂರ್ತ ನೋಡುವ ಸಂಪ್ರದಾಯಗಳಿಲ್ಲ. ಅದು ವಾಡಿಕೆಯ ರೂಢಿಯಂತೆ ನಡೆಯುತ್ತದೆ. ಬಡವನೆಂದೋ, ಶ್ರೀಮಂತನೆಂದೋ ವ್ಯತ್ಯಾಸವಿಲ್ಲದೇ ಒಂದೇ ಚಪ್ಪರದಡಿ ಒಟ್ಟಿಗೆ ಮದುವೆಯಾಗಿ ಒಟ್ಟಾಗಿ ಒಂದೇ ಅಡುಗೆಯನ್ನು ಉಂಡು ಬೆರೆಯುವ ಈ ವ್ಯವಸ್ಥೆ ನಮ್ಮ ಸಮಾಜದಲ್ಲಿ ಐಕ್ಯತೆಯನ್ನು ಭೋದಿಸುತ್ತದೆ. ಹಾಗೆಯೇ ಹತ್ತರ ಹರೆಯಕ್ಕಿಂತ ಮುಂಚೆಯೇ ಕನ್ನಿಕೆಯರಿಗೆ ನಡೆಸುವ ಚಪ್ಪರ ಮದುವೆ ಮತ್ತೆಲ್ಲೂ ಕಾಣದ ವಿಶೇಷ. ಇದು ಬಾಲಕಿ ಪ್ರೌಢಳಾಗುವ ಹಂತಕ್ಕೆ ಆಕೆ ಸಾಮುದಾಯಿಕ ಕಟ್ಟುಪಾಡುಗಳೊಂದಿಗೆ ಸಮಾಜ ನಿಷ್ಟವಾಗಿ ಕುಲದೇವತೆಯ ಅನುಗ್ರಹದಿಂದ ಪೊರೆಯಲ್ಪಡುತ್ತಾಳೆಂಬ ಸಂದೇಶ ಸಾರುತ್ತದೆ.
-ಗೋಪಾಲ ಮಾಸ್ತರ್ ಪಂಜತ್ತೊಟ್ಟಿ
(ವಾಣಿಯ -ಗಾಣಿಗ ಸಮಾಜ ಮುಖಂಡರು)
Pics :Naveen kumble








