ಉಳುಮೆ ಮಾಡದೇ ಹಡೀಲು ಬಿದ್ದ ಬಂಜರು ಭೂಮಿಗೆ ಬಿತ್ತುಂಡೆ ಎಸೆದು ಭತ್ತ ಬೆಳೆಸಿದ ಸಾಧನೆ!!

ಜಪಾನಿನ 'ಫುಕುವೋಕಾ' ಪದ್ಧತಿಯ, ಒಂದು ಹುಲ್ಲಿನ ಕ್ರಾಂತಿ ಗಡಿನಾಡ ಕುಂಬಳೆಯಲ್ಲೂ ಸಕ್ಸಸ್!!

by Narayan Chambaltimar

ಕುಂಬಳೆ: ಕೃಷಿ ಮಾಡದೇ ಪಾಳು ಬಿದ್ದ ಹಡಿಲು ಗದ್ದೆಯನ್ನು ಯಾವ, ಕಾರಣಕ್ಕೂ ಬರಿದೇ ಬಿಡಬೇಡಿ. ಅಲ್ಲಿ ಉಳುಮೆ ಇಲ್ಲದೇ, ಗೊಬ್ಬರ ಹಾಕದೆ, ಕೇವಲ ನೆಟ್ಟು ಬಿಟ್ಟರೂ ಸಾಕು, ಏನೇನೂ ನಷ್ಟವಿಲ್ಲದೇ ಭತ್ತ ಬೆಳೆಯುತ್ತದೆ. ಬರಿದಾದ ಭೂಮಿ ಉಪಯೋಗ ಶೂನ್ಯವಾಗುವುದಕ್ಕಿಂತ ಸಿಕಿದಷ್ಟೂ ಸಹಜ, ಸ್ವಚ್ಛ, ರಾಸಾಯನಿಕ ಮುಕ್ತ ಅನ್ನವಲ್ಲವೇ..? ಎಂದು ಪ್ರಶ್ನಿಸುವುದಲ್ಲ. ತಾನೇ ಮಾದರಿಯಾಗಿ ನಾಡಿಗೆ ಆದರ್ಶವಾಗಿದ್ದಾರೆ ಪೇರಾಲ್ ಕಣ್ಣೂರಿನ ನಾವೂರು ಗುತ್ತು ಕೃಷ್ಣ ಆಳ್ವ.
ಹೌದು… ಜಪಾನಿನಲ್ಲಿ ಜನಪ್ರಿಯವಾಗಿ ಜಗತ್ತಿನಾದ್ಯಂತ ಒಂದು ಹುಲ್ಲಿನ ಬೆಳೆ ಎಂದೇ ಖ್ಯಾತಿ ಪಡೆದು ಭತ್ತದ ಬೆಳೆಯಲ್ಲಿ ಆಂದೋಲನ ಎಬ್ಬಿಸಿದ “ಫುಕುವೋಕಾ” ಕೃಷಿ ವಿಧಾನ ಈಗ ಕಾಸರಗೋಡಿನ ಮಣ್ಣಿಗೂ ಕಾಲೂರಿ ಯಶಸ್ಸಿನ ಪಾಠ ಹೇಳಿದೆ. ಭತ್ತದ ಕೃಷಿಗೆ ಜನರಿಲ್ಲ, ದುಬಾರಿ ಎಂದೆಲ್ಲಾ ಗದ್ದೆಯನ್ನು ಹಡೀಲು ಬಿಟ್ಟವರ ಕಣ್ಣೆದುರು ಹೊಸ ಭರವಸೆಯ ಪಾಠವಾಗಿದ್ದಾರೆ.

ಆರಂಭ ಮತ್ತು ಎದುರಿಸಿದ ಸವಾಲು…

ನಾವೂರು ಗುತ್ತು ಕೃಷ್ಣ ಆಳ್ವರ ಪುತ್ರ ಅಶ್ವಿನಿ ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿ ಜಪಾನ್ ಕಂಪೆನಿಯಲ್ಲಿ ದುಡಿದವರು. ಜಪಾನಿನಲ್ಲಿ ರೖತರ ಜತೆ ಬೆರೆತವರು. ಹೊಲಗಳಲ್ಲಿ ಓಡಾಡಿದವರು. ಜಪಾನಿ ಭಾಷೆ ಬಲ್ಲವರು. ಅಲ್ಲವರು ಓದಿ, ನೋಡಿ ಅರಿತ ವಿಧಾನವೇ ಫುಕುವೋಕಾ ಎಂಬ ಒಂದು ಹುಲ್ಲಿನ ಸಹಜ ಕೃಷಿ ಪದ್ಧತಿ. ಜಪಾನಿಂದ ಭಾರತಕ್ಕೆ ವರ್ಗಾವಣೆಗೊಂಡು ಬಂದ ಅಶ್ವಿನಿಗೆ ತನ್ನೂರ ಹಡೀಲುಬಿದ್ದ, ಕಾಡುತುಂಬಿ ನಾಶಗೊಂಡ ಗತ ಕಾಲದ ಗದ್ದೆಯಲ್ಲಿದನ್ನು ಮಾಡಿದರೇನು? ಯೋಚನೆ ಬಂತು. ಕಲ್ಪನೆಯನ್ನು ಅಪ್ಪನಿಗೆ ಹೇಳಿದ. ಅಪ್ಪ-ಮಗ ಜೋಡಿ ಏನೇನೂ ವೆಚ್ಚವಿಲ್ಲದ, ವಿಶೇಷ ಪರಿಶ್ರಮ ಬಯಸದ ಈ ಕೃಷಿಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಮುಂದಾದರು.

ಜಾಗಬೇಕಲ್ಲ…?

ಇದೊಂದು ಪ್ರಯೋಗಶೀಲ ಕಲ್ಪನೆ. ಲಾಭದ ವಾಣಿಜ್ಯ ದೃಷ್ಟಿಯ ಬೆಳೆಯಲ್ಲ. ಹಾಗೆಂದು ಪೇರಾಲ್ ಕಣ್ಣೂರಿನ ಊರ ಮುಖಂಡ ಟಿ. ಕೆ. ಕುಂಞಾಮು ಹಾಜಿ ಅವರಲ್ಲಿ ವಿಷಯ ತೋಡಿಕೊಂಡರು. ಈ ವಿಷಯಕ್ಕವರು ಉಳಿದೆಲ್ಲರಂತೆಯೇ ನಕ್ಕರು. ಇದು ನಮ್ಮ ನಾಡಿಗೆ ಸೂಕ್ತ ಅಲ್ಲ ಎಂದರು. ಆದರೂ ಪ್ರಯೋಗ ತಾನೇ?
ಈ ವರ್ಷದ ಮಟ್ಟಿಗೆ ಉಚಿತವಾಗಿ ಭೂಮಿ ಬಳಸಿಕೊಳ್ಳಿ ಎಂದರು. ಇದರಂತೆ ಸುಮಾರು ಎರಡೆಕ್ರೆ ಉಪಯೋಗ ಶೂನ್ಯವಾಗಿದ್ದ ಬಂಜರು ನೆಲದ ಒಂದು ಪಾರ್ಶ್ವದಲ್ಲಿ ಪ್ರಾಯೋಗಿಕವಾಗಿ
ಮಣ್ಣಿನುಂಡೆಗಳಲ್ಲಿ ಬೀಜ ಬಿತ್ತಿ ಭೂಮಿಗೆಸೆದರು. ಅಷ್ಟರಲ್ಲೇ ಎಡೆಬಿಡದೇ ಸತತ ಹತ್ತು ದಿನ ಮಳೆಯೂ ಸುರಿಯಿತು!
ಅದು ತಗ್ಗು ಪ್ರದೇಶ. ನೀರು ತಳಕಟ್ಟಿ ನಿಲ್ಲುವ ಜಾಗ. ಎಸೆದ ಬೀಜಗಳೆಲ್ಲ ನಾಶವಾಗುವುದೆಂದೇ ಇವರು ನಂಬಿದ್ದರು. ಆದರೆ ಮಳೆ ಬಿಟ್ಟೊಡನೆಯೇ ಅಳಿದುಳಿದ ಬೀಜ ಗಿಡವಾಗಿ ಚಿಗುರಿತು. ಇತರ ಹುಲ್ಲು, ಕಳೆಗಳ ಜೊತೆ ಭತ್ತವೂ ಬೆಳೆಯಿತು!

ಇದು ಪ್ರಯೋಗ, ಪಾಠ..

ಮೊದಲ ಬಾರಿ ಮಣ್ಣಿನಲ್ಲಿ ಗೋಳಿಬಜೆ ಆಕಾರದ ಉಂಡೆಮಾಡಿ ಅದರೊಳಗೆ ಭತ್ತದ ಬೀಜವನ್ನಿಟ್ಟು ನೆಲಕ್ಕೆಸೆವಾಗ ಇವರಿಗೆ ಎಷ್ಟು ಬೀಜವನ್ನು ಹಾಕಬೇಕೆಂಬ ಕಲ್ಪನೆ ಇರಲಿಲ್ಲ. ಅವರು ಬಾಚಿ ತುರುಕಿದ್ದರು. ಇದರಲ್ಲಿ ಬಹುಪಾಲು ಮಳೆಯ ಪ್ರತಿಕೂಲಾವಸ್ಥೆಯಿಂದ ನಾಶಗೊಂಡಿವೆ. ಉಳಿದದ್ದು ಗುಂಪಾಗಿ ಮೊಳೆತು ಚಿಗುರಿ ಫಲವನ್ನಿತ್ತಿದೆ. ಆದ್ದರಿಂದಲೇ ತೆನೆಗಳು ಕುಬ್ಜವಾಗಿದೆ. ಭತ್ತವೂ ಕಡಿಮೆ. ಆದರೂ
ಕಟಾವು ನಡೆದಿದೆ.

ರೋಗರಹಿತ ರಾಸಾಯನಿಕ ಮುಕ್ತ ಅಕ್ಕಿ

ಈ ಪ್ರಯೋಗಕ್ಕೆ ಅವರು ಕುಟ್ಟಿ ಪುಂಜ ತಳಿಯನ್ನು ಬಳಸಿದ್ದರು.
ಪ್ರಯೋಗಾತ್ಮಕ ನಡೆದ ಬಿತ್ತನೆಯಲ್ಲಿ ಬಹುಪಾಲು ನಾಶಗೊಂಡರೂ ನಷ್ಟವೇನಿಲ್ಲ.
ಕಳೆ ಗಿಡಗಳ ಜತೆಯಲ್ಲಿ ಬೆಳೆದ ಭತ್ತದ ಗಿಡದಲ್ಲಿ ಸಂಪೂರ್ಣ ರೋಗ ರಹಿತವಾದ, ನೆಲದ ಫಲವಂತಿಕೆಯ ಗುಣಮಟ್ಟದ ಭತ್ತ ಸಿಕ್ಕಿದೆ. ಇದು ಮುಂದಿನ ಸರದಿಯ ಕೃಷಿಗೆ ತಾಜಾ ಬೀಜವಾಗಿ ಒದಗುತ್ತದೆ. ಜತೆಗೆ ತೆನೆಯನ್ನಷ್ಟೇ ಕಟಾವು ಮಾಡುವುದರಿಂದ ಗಿಡವನ್ನು ನೆಲದಲ್ಲಿ ಒಣಗಲು ಬಿಡಲಾಗುತ್ತದೆ. ಇದು ಮುಂದಿನ ಸರದಿಗೆ ಭೂಮಿಯ ಫಲವಂತಿಕೆ ಹೆಚ್ಚಿಸುತ್ತದೆ.

ಇದೇ ಪ್ರಯೋಗದ ಎರಡನೇ ಬೆಳೆಗೆ ಗ್ರಾ. ಪಂ ಸಹಾಯ

ಇದೇ ಪಯೋಗದ ಎರಡನೇ ಬೆಳೆಯನ್ನು ಇಲ್ಲಿ ಖಾಲಿ ಇದ್ದ ಬರಡು ಜಾಗದಲ್ಲಿ ಮಾಡಲಾಗಿದೆ. ಪುತ್ತಿಗೆ ಗ್ರಾ. ಪಂ. 2.40ಲಕ್ಷ ರೂ ವೆಚ್ಚ ಭರಿಸಿ ಉದ್ಯೋಗ ಖಾತರಿ ಕಾರ್ಮಿಕರ ಮೂಲಕ ಕಾಡು ಕಡಿಸಿ, ನೆಲ ಕೃಷಿ ಯೋಗ್ಯ ಮಾಡಲಾಗಿದೆ. ಬಳಿಕ ಮಣ್ಣಿನುಂಡೆಗಳಲ್ಲಿ ಬಿತ್ತಿದ ಬೀಜ ಇತರ ಕಳೆಗಿಡಗಳೊಂದಿಗೆ ಬೆಳೆದಿವೆ. ತನ್ನ ಪಾಡಿಗಿದು ಸಂಪನ್ನವಾಗಿದೆ. ಇದಕ್ಕೆ ಉಳುಮೆ, ಗೊಬ್ಬರ ಇತ್ಯಾದಿ ಯಾವುದೂ ಮಾಡಿಲ್ಲ. ಭತ್ತವೂ ಇತರ ಹುಲ್ಲುಗಳಂತೆ ಸಹಜವಾಗಿಯೇ ಬೆಳೆದು ಫಲ ನೀಡುತ್ತದೆ ಎಂಬುದನ್ನು ಈ ನೆಲ ಸಾರಿ ಹೇಳುತ್ತದೆ.

ಇದು ಲಾಭ ದೃಷ್ಟಿಕೋನದ ಬೆಳೆಯಲ್ಲ. ಈ ವಿಧಾನದಂತೆ ಮನೆಯಂಗಳ ಸಹಿತ ಎಂಥಾ ಬೋಳು ಗುಡ್ಡೆಯಲ್ಲೂ ಭತ್ತದ ಕೃಷಿ ಮಾಡಬಹುದು. ಇದಕ್ಕೇನೂ ವಿಶೇಷ ಖರ್ಚಿಲ್ಲ. ಸಿಕ್ಕಿದ ಬೆಳೆಯೇ ಲಾಭ!
ನಮ್ಮ ನಾಡಿನಲ್ಲಿ ಎಕ್ರೆಗಟ್ಟಲೆ ಗದ್ದೆಗಳು ನಾನಾ ಕಾರಣ ಮುಂದಿಟ್ಟು ಹಡೀಲು ಬಿದ್ದಿವೆ. ಬಂಜರು ಭೂಮಿಯಾಗಿದೆ. ಇಲ್ಲಿಗಿದು ಹೇಳಿ ಮಾಡಿಸಿದ ವಿಧಾನ. ಮೊದಲ ಸರದಿಯಲ್ಲಿ ಸೋಲು ಬಂದರೂ ನಷ್ಟವಿಲ್ಲ ತಾನೇ?
ವರ್ಷಂಪ್ರತಿ ಈ ವಿಧಾನದ ಕೃಷಿ ಮಾಡಿದರೆ ಮಣ್ಣಿನ ಫಲವಂತಿಕೆ ಹೆಚ್ಚಾಗುತ್ತದೆ. ಸಮೃದ್ಧ ಬೆಳೆ ಬಂದೇ ಬರುತ್ತದೆ. ಇತರರಿಗೂ ಪ್ರೇರಣೆಯಾಗಲಿ ಎಂದೇ ನಾವಿದನ್ನು ಮಾಡಿದ್ದೇವೆ. ಲಾಭದಾಯಕವಾಗುವ ವಾಣಿಜ್ಯ ದೃಷ್ಟಿಯ ಬೆಳೆಯಿಂದ ಭೂಮಿಯೇ ವಿಷಮಯವಾಗಿದೆ. ಆದರೆ ಈ ವಿಧಾನ ಖರ್ಚಿಲ್ಲದೇ ಫಲ ಕೊಡುತ್ತದೆ. ಭೂಮಿಯನ್ನು ಮತ್ತೆ ಫಲವಂತಿಕೆಯ ಮಣ್ಣಾಗಿಸುತ್ತದೆ.
– ಕೃಷ್ಣ ಆಳ್ವ
ನಾವೂರು ಗುತ್ತು

ಅತ್ಯುತ್ತರ ಕೇರಳದ ಕಾಸರಗೋಡಿನ ಪಾಲಿಗೆ ಈ ಕೃಷಿವಿಧಾನ ಹೊಸತು. ಆದ್ದರಿಂದಲೇ ಪುತ್ತಿಗೆ ಗ್ರಾ. ಪಂ. ಕೃಷಿ ಅಧಿಕಾರಿ, ಪಂಚಾಯತು ಬೆಂಬಲದ ಪ್ರೋತ್ಸಾಹವಿತ್ತಿದೆ.
ಈ ಕುರಿತಾದ ಹೆಚ್ಚಿನ ತಾಜಾ ಅನುಭವದ ಕೃಷಿಪಾಠಕ್ಕೆ ಈ ಬೆಳೆಯ ಭೂಮಿಯನ್ನೇ ನೋಡಬೇಕು. ಮಣ್ಣನ್ನು ಮೆಟ್ಟಿ ನಡೆದು ಬಂಗಾರದ ತೆನೆಗಳ ಕತೆ ಅರಿಯಬೇಕು. ಅನ್ನ ಉಣ್ಣುವವರೆಲ್ಲರೂ ಅರಿಯಬೇಕಾದ ಕತೆ ಇದು…
ಕೃಷ್ಣ ಆಳ್ವ ನಾವೂರು -9447792607

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00