ಕೊಚ್ಚಿ: ಕೇರಳದಲ್ಲಿ ಸ್ಥಳೀಯಾಡಳಿತ ಚುನಾವಣೆಯ ಬಿರುಸಿನ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯ(ಎಸ್. ಐ. ಆರ್) ಪರಿಶೋಧನಾ ಪ್ರಕ್ರಿಯೆಗಳನ್ನು ಮುಂದೂಡಬೇಕೆಂದು ರಾಜ್ಯ ಸರಕಾರ ಹೖಕೋರ್ಟಿಗೆ ಮನವಿ ಅರ್ಜಿ ಸಲ್ಲಿಸಿದೆ. ಈ ಸಂಬಂಧ ರಾಜ್ಯ ಸರಕಾರ ಮತ್ತು ಕೇಂದ್ರ ಚುನಾವಣಾ ಆಯೋಗದ ವಾದ ಆಲಿಸಿದ ಹೖಕೋರ್ಟು ಜಸ್ಟೀಸ್ ಪಿ. ಜಿ. ಅರುಣ್ ಈ ವಿಷಯದಲ್ಲಿ ಸುಪ್ರೀಂ ಕೋರ್ಟನ್ನು ಅವಲಂಬಿಸುವುದು ಉಚಿತ ಎಂದು ಸಲಹೆ ಇತ್ತರು.

ಸ್ಥಳೀಯಾಡಳಿತ ಚುನಾವಣಾ ಕರ್ತವ್ಯ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಗೆ ಏಕಕಾಲದಲ್ಲಿ ಅಧ್ಯಾಪಕರು ಸಹಿತ ಸರಕಾರಿ ನೌಕರರನ್ನು ವಿನ್ಯಾಸಗೊಳಿಸುವುದರಿಂದ ಸರಕಾರದ ದೖನಂದಿನ ಚಟುವಟಿಕೆಗಳು ಸ್ತಬ್ಧವಾಗುತ್ತಿದೆ. ಇದರಿಂದಾಗಿ ಆಡಳಿತ ಸ್ತಂಭನ ಉಂಟಾಗುತ್ತದೆ ಎಂದು ಹೖಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ಸರಕಾರ ಉಲ್ಲೇಖಿಸಿದೆ.
ಕೇರಳದಲ್ಲಿ ಡಿ. 21ರ ಮುಂಚಿತ ಸ್ಥಳೀಯಾಡಳಿತ ಸಂಸ್ಥೆಯ ಚುನಾವಣೆಯನ್ನು ಸಂವಿಧಾನ ಬದ್ಧವಾಗಿ ಪೂರ್ತೀಕರಿಸಬೇಕಾಗಿದೆ. ಈ ಚುನಾವಣಾ ನಿರ್ವಹಣೆಗೆ 1,76,000 ಮಂದಿ ಸಿಬಂದಿಗಳು ಹಾಗೂ 68,000ಪೋಲೀಸರನ್ನು ನಿಯೋಜಿಸಲಾಗಿದೆ. ಇದೇ ವೇಳೆ ಎಸ್. ಐ. ಆರ್ ಗಾಗಿ 25,668 ಮಂದಿ ನೌಕರರನ್ನೂ ನಿಯೋಗಿಸಲಾಗಿದೆ. ಇದರಿಂದಾಗಿ ಸರಕಾರದ ದೖನಂದಿನ ಚಟುವಟಿಕೆಗಳು ಮೊಟಕಾಗುವ ಪರಿಸ್ಥಿತಿ ಇದೆ ಎಂದು ಸರಕಾರದ ಪರವಾಗಿ ಅಡ್ವಕೇಟ್ ಜನರಲ್ ಗೋಪಾಲಕೃಷ್ಣ ಕುರುಪ್ ಹೖಕೋರ್ಟಿನಲ್ಲಿ ಮಂಡಿಸಿದ್ದಾರೆ. ಆದರೆ ಎನ್ಯುಭರೇಷನ್ ಫಾರಂ ವಿತರಣೆ 58ಶೇಕಡಾ ಪೂರ್ಣಗೊಂಡಿದ್ದು, ಚುನಾವಣೆಗೆ ಅಗತ್ಯವಾದರೆ ಬಿಎಲ್ಒ ಗಳನ್ನು ಬಳಸಬಹುದೆಂದೂ ಚುನಾವಣಾ ಆಯೋಗ ಹೇಳಿದೆ.








