ಕುಂಬಳೆ :ರಾಷ್ಟ್ರೀಯ ಹೆದ್ದಾರಿಯ ಪೆರ್ವಾಡಿನಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಮುಂಜಾವ ಮೃತಪಟ್ಟ ಬಿಜೆಪಿ ಕಾರ್ಯಕರ್ತ ಎನ್. ಹರೀಶ್ ಕುಮಾರ್ ಯ(37)ಮೃತ ದೇಹವನ್ನು ಉನ್ನತ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿದೆ.

ಪೋಸ್ಟ್ ಮಾರ್ಟಂ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೖಗೊಳ್ಳಲಾಗುವುದೆಂದು ಕುಂಬಳೆ ಠಾಣಾಧಿಕಾರಿ ತಿಳಿಸಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಹರೀಶ್ ಗೆ ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಸಕಾಲಿಕವಾಗಿ ಸೂಕ್ತ ಚಿಕಿತ್ಸೆ ಸಿಗದೇ ಇರುವುದು ಮತ್ತು ವೖದ್ಯರ ನಿರ್ಲಕ್ಷ್ಯವೇ ಮರಣಕ್ಕೆ ಕಾರಣ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಇಂದು ಬೆಳಿಗ್ಗೆ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಇದರಿಂದ ಆಸ್ಪತ್ರೆಯಲ್ಲಿ ಸಂಘರ್ಷ ವಾತಾವರಣ ನೆಲೆಸಿ, ಪೋಲೀಸರು ಬಳಿಕ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು.
ಆಸ್ಪತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಭೇಟಿ ಇತ್ತು, ಆಸ್ಪತ್ರೆ ಅಧಿಕೃತರ ಜತೆ ಮಾತುಕತೆ ನಡೆಸಿದರು. ಈ ವೇಳೆ ಚಿಕಿತ್ಸಾ ದಾಖಲೆ ಮತ್ತು ಚಿಕಿತ್ಸೆ ನೀಡಿದ ವೖದ್ಯರ ವರದಿ ಒದಗಿಸುವ ಭರವಸೆ ಲಭಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೊನೆಗೋಳಿಸಲಾಯಿತು. ಬಳಿಕ ಮೃತದೇಹ ಪರಿಯಾರಂ ಕೊಂಡೊಯ್ಯಲಾಯಿತು.
ನಿನ್ನೆ ರಾತ್ರಿ ಪೆರುವಾಡಿನ ರಾ. ಹೆದ್ದಾರಿಯಲ್ಲಿ ಕಾರು ಮತ್ತು ಸ್ಕೂಟರ್ ಪರಸ್ಪರ ಬಡಿದು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಕಾರು ಮಗುಚಿದ್ದು, ಕಾರಿನ ಪೆಟ್ರೋಲ್ ರಸ್ತೆಯಲ್ಲಿ ಹರಿದಿದೆ. ಅಗ್ನಿ ಶಾಮಕ ದಳದವರು ರಸ್ತೆ ತೊಳೆದ ಕಾರಣ ಇನ್ನಷ್ಟು ಸಂಭಾವ್ಯ ಅಪಘಾತ ತಪ್ಪಿತು.







