ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಪೆರ್ವಾಡಿನಲ್ಲಿನಿನ್ನೆ ರಾತ್ರಿ ಕಾರು ಮತ್ತು ಸ್ಕೂಟರ್ ಬಡಿದು ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬಿಜೆಪಿ ಕಾರ್ಯಕರ್ತ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಆರಿಕ್ಕಾಡಿ ಪಾರೆಸ್ಥಾನ ಸಮೀಪ ವಾಸಿ ಕೃಷ್ಣ ಬೆಳ್ಚಪ್ಪಾಡರ ಪುತ್ರ ಎನ್. ಹರೀಶ್ ಕುಮಾರ್(37)ಮೃತ ವ್ಯಕ್ತಿ. ಕಾರಿನಲ್ಲಿದ್ದ ಮಹಿಳೆ ಮತ್ತು ಇನ್ನೊಬ್ಬರನ್ನು ಕೂಡ ಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿಸಲಾಗಿದೆ. ಸೋಮವಾರ ರಾತ್ರಿ 11ರ ವೇಳೆಗೆ ಕಾಸರಗೋಡಿನಿಂದ ಕುಂಬಳೆಗೆ ಬರುತ್ತಿದ್ದ ಸ್ಕೂಟರ್ ಮತ್ತು ಕಾಸರಗೋಡು ಕಡೆಗೆ ಸಂಚರಿಸುತ್ತಿದ್ದ ಕಾರು ಪರಸ್ಪರ ಬಡಿದು ಅಪಘಾತ ಉಂಟಾಯಿತು. ಅಪಘಾತದ ರಭಸಕ್ಕೆ ಸ್ಕೂಟರ್ ನಜ್ಜುಗುಜ್ಜಾಗಿದೆ. ಕಾರು ತಲೆಕೆಳಗಾಗಿ ಮಗುಚಿದೆ. ಗಾಯಾಳು ಹರೀಶನನ್ನು ಕೂಡಲೇ ಕುಂಬಳೆ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮುಂಜಾವದ ವೇಳೆ ಮೃತಪಟ್ಟರು.
ಆದರೆ ಹರೀಶ್ ಅವರ ಮರಣಕ್ಕೆ ಸಹಕಾರಿ ಆಸ್ಪತ್ರೆಯ ವೖದ್ಯರ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು. ಸಮರ್ಪಕ ಚಿಕಿತ್ಸೆ ನೀಡುವುದಾಗಲೀ, ಉನ್ನತ ಚಿಕಿತ್ಸೆಗೆ ಶಿಫಾರಸು ಮಾಡುವುದಾಗಲಿ ಮಾಡದೇ ವೖದ್ಯರು ನಿರ್ಲಕ್ಷ್ಯ ಮಾಡಿರುವುದೇ ಜೀವಾಪಾಯಕ್ಕೆ ಕಾರಣ ಎಂದು ಬಿಜೆಪಿ ದೂರಿದೆ. ವೖದ್ಯರು ಮರಣ ಕಾರಣದ ವರದಿ ನೀಡದೇ ಮೃತದೇಹವನ್ನು ಪೋಸ್ಟ್ ಮಾರ್ಟಂ ಗೆ ಕೊಂಡೊಯ್ಯವುದಿಲ್ಲ ಎಂದು ಪ್ರತಭಟನಾಕಾರರು ಹೇಳಿದ್ದಾರೆ.
ಮೃತರು ತಾಯಿ ರತ್ನಾವತಿ ಹಾಗೂ ಬಂಧು ಬಳಗವನ್ನಗಲಿದ್ದಾರೆ. ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪೋಲೀಸರು ಆಸ್ಪತ್ರೆಗೆ ಕಾವಲು ಏರ್ಪಡಿಸಿದ್ದಾರೆ. ಮೃತ ಹರೀಶ್ ಕಳೆದ ಗ್ರಾ. ಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು.






