- ಕುಂಬಳೆ ಗ್ರಾ. ಪಂ. ಭ್ರಷ್ಟಾಚಾರದ ದುರಾಡಳಿತಕ್ಕೆ ಪ್ರತಿಭಟನೆ: ಸಿಪಿಐಎಂ ನೇತೃತ್ವದಲ್ಲಿ ವಾಹನ ಜಾಥ, ಪಂ. ಕಚೇರಿಗೆ ಮಾರ್ಚ್
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿನಲ್ಲಿ ಮುಸ್ಲಿಂ ಲೀಗ್ ನೇತೃತ್ವದ ಆಡಳಿತ ಸಮಿತಿ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅವ್ಯವಹಾರಗಳ ದುರಾಡಳಿತವನ್ನು ಪ್ರತಿಭಟಿಸಿ ಸಿಪಿಐಎಂ ಕುಂಬಳೆ ಪಂ. ಘಟಕದ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ವಾಹನ ಪ್ರಚಾರ ಮಾರ್ಚ್ ಮತ್ತು ಧರಣಿ ನಡೆಯಿತು.
ನ. 2ರಂದು ಬೆಳಿಗ್ಗೆ ಕಳತ್ತೂರಿನಿಂದ ಆರಂಭಗೊಂಡು ಪಂಚಾಯತಿನ 22ಕೇಂದ್ರಗಳಲ್ಲಿ ಸಂಚರಿಸಿ ಪಂಚಾಯತಿನ ಭ್ರಷ್ಟ ಆಡಳಿತವನ್ನು ಜನಸಮಕ್ಷ ಮಂಡಿಸಿ, ಇಂದು ಬೆಳಿಗ್ಗೆ ಕುಂಬಳೆ ಪೇಟೆಯಲ್ಲಿ ಸಮಾರೋಪಗೊಂಡಿತು. ಸಮಾರೋಪಕ್ಕೆ ಮುನ್ನ ಪಂ. ಕಚೇರಿಗೆ ಮಾರ್ಚ್ ನಡೆಯಿತು.

ಬಳಿಕ ಪೇಟೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಿಪಿಐಎಂ ಕುಂಬಳೆ ಏರಿಯಾ ಘಟಕ ಕಾರ್ಯದರ್ಶಿ ಸಿ. ಎ. ಸುಬೖರ್ ಸಮಾರೋಪ ಭಾಷಣ ಮಾಡಿದರು. ಕೇರಳ ರಾಜ್ಯ ಪ್ರಾದೇಶಿಕ ಅಭಿವೃದ್ಧಿಯೊಂದಿಗೆ ಮುನ್ನಡೆಯುವಾಗ ಕುಂಬಳೆ ಪಂಚಾಯತ್ ಯುಡಿಎಫ್ ಆಡಳಿತ ದರೋಡೆಕೋರರಂತೆ ಭ್ರಷ್ಟಾಚಾರ ನಡೆಸಿ ಕೊಳ್ಳೆಹೊಡೆಯುವ ತಂಡವಾಗಿ ಬದಲಾಗಿದೆ. ಒಂದೇ ಒಂದು ಅಭಿವೃದ್ಧಿ ಯೋಜನೆ ಪಂ. ಆಡಳಿತ ವತಿಯಿಂದ ಕಳೆದ ಐದು ವರ್ಷ ನಡೆದಿಲ್ಲ. ಬಸ್ ನಿಲ್ದಾಣ ಕಾಂಪ್ಲೆಕ್ಸ್ ಒದಗಿಸಿಕೊಡುವ ಭರವಸೆ ಇತ್ತು, ದಿನದೂಡಿದ್ದಲ್ಲದೇ ಇಂದಿನ ವರೆಗೆ ಅದರ ನಿರ್ಮಾಣಕ್ಕೆ ಹೊರಟಿಲ್ಲ. ಬದಲು ಬಸ್ ಷೆಲ್ಟರ್ ನಿರ್ಮಿಸಿ 40ಲಕ್ಷ ರೂ ಕಬಳಿಸಲು ಯತ್ನಿಸಿದ ಪಂ. ಆಡಳಿತ ಕುಂಬಳೆಯಲ್ಲಿ ಭ್ರಷ್ಟಾಚಾರದ ಮೆರವಣಿಗೆಯನ್ನೇ ನಡೆಸಿದೆ ಎಂದವರು ಆರೋಪಿಸಿದರು.
ಕುಂಬಳೆ ಸಿಪಿಐಎಂ ಪ್ರಾದೇಶಿಕ ಘಟಕ ಕಾರ್ಯದರ್ಶಿ ಕೆ. ಬಿ. ಯೂಸುಫ್ ಅಧ್ಯಕ್ಷತೆ ವಹಿಸಿದರು. ರತ್ನಾಕರ ಗಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.







