ಉಪ್ಪಳ: ಉಪ್ಪಳ ಗೇಟಿನ ರೖಲು ಹಳಿಯಲ್ಲಿ ಪತ್ತೆಯಾದ ಮಂಗಳೂರಿನ ರೌಡಿ ಶೀಟರ್, ಕುಖ್ಯಾತ ಕ್ರಿಮಿನಲ್ ಹಿನ್ನೆಲೆಯುಳ್ಳ ನೌಫಲ್ ಯಾನೆ ಟೋಪಿ ನೌಫಲ್ ಯ(42)ಎಂಬಾತನ ನಿಗೂಢ ಮರಣದ ಶಂಕೆಗಳಿಗೆ ತೆರೆ ಬಿದ್ದಿದೆ. ರೖಲು ಹಳಿ ಬದಿಯಲ್ಲಿ ಶವವಾಗಿ ಪತ್ತೇಯಾದ ಈತನ ಸಾವು ಕೊಲೆ ಅಲ್ಲವೆಂದೂ, ರೖಲು ಬಡಿದು ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಉಲ್ಲೇಖಿಸಿದೆ. ಇದರೊಂದಿಗೆ ಊಹಾಪೋಹದ ಕೊಲೆ ವದಂತಿಗೆ ತೆರೆಬಿದ್ದಿದೆ.

ಪ್ರಕರಣದ ನಿಗೂಢತೆ ನೀಗಿದ ಹಿನ್ನೆಲೆಯಲ್ಲಿ ಶಂಕೆಯಿಂದ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ತೆಗೆದಿದ್ದ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ. ಸುಮಾರು 25ರಷ್ಟು ಕೇಸು ಮತ್ತು ಕ್ರಿಮಿನಲ್ ಗ್ಯಾಂಗ್ ಕಟ್ಟಿ ಮೂರು ಕೊಲೆ ಕೇಸುಗಳನ್ನೂ ಹೊಂದಿದ್ದ ಈತ ಉಪ್ಪಳ ಗೇಟ್ ಬಳಿ ರೖಲು ಹಳಿಯ ಬದಿ ಅನಾಥ ಶವವಾಗಿ ಪತ್ತೆಯಾದಾಗ ನಿಗೂಢತೆ ಸೃಷ್ಟಿಯಾಗಿತ್ತು.
ಉಪ್ಪಳ ಪರಿಸರದ ಮಾದಕ ದ್ರವ್ಯ ಮಾರಾಟ ಜಾಲದೊಂದಿಗೆ ನಿಕಟತೆಯಲ್ಲಿದ್ದ ಈತ ಈ ಪರಿಸರಕ್ಕೆ ನಿರಂತರ ಆಗಮಿಸುತ್ತಿದ್ದನೆನ್ನಲಾಗಿದೆ.
ಮೃತದೇಹ ಪತ್ತೆಯಾದ ಸ್ಥಳಕ್ಕೆ ಮರಣೋತ್ತರ ಪರೀಕ್ಷೆ ನಡೆಸಿದ ಪೋಲೀಸ್ ಸರ್ಜನ್ ಆಗಮಿಸಿ, ಸ್ಥಳ ಮಹಜರು ನಡೆಸಿದ್ದಾರೆ. ಅವರ ಅಭಿಪ್ರಾಯದಂತೆ ರೖಲು ಬಡಿದು ಹೊರಕ್ಕೆಸೆಯಲ್ಪಟ್ಟಾಗ ಹಳಿಯ ಬದಿಯಲ್ಲಿದ್ದ ಕಬ್ಬಿಣದ ಕಂಬಕ್ಕೆ ಬಿದ್ದು ಕೊರಳಿನಲ್ಲಿ ಗಾಯವಾಗಿ ಮರಣ ಸಂಭವಿಸಿದೆ ಎನ್ನಲಾಗಿದೆ. ಈ ಉಲ್ಲೇಖ ಪ್ರಕರಣದ ನಿಗೂಢತೆ ಭೇದಿಸಿದೆ.








