ಗಡಿನಾಡು ಕಾಸರಗೋಡಿನ ಅನಿವಾಸಿ ಉದ್ಯಮಿ, ಧಾರ್ಮಿಕ, ಶೖಕ್ಷಣಿಕ ದಾನಿ ಎಡಕ್ಕಾನ ಮಹಾಬಲೇಶ್ವರ ಭಟ್ಟರಿಗೆ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ದ. ಕ ಜಿಲ್ಲಾಡಳಿತದ ವತಿಯಿಂದ ಮಂಗಳೂರು ಕೇಂದ್ರ ಮೖದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯೊಂದಿಗೆ ಇಂದು ಪ್ರಶಸ್ತಿ ಪ್ರದಾನವಾಗಲಿದೆ.
- Kanipura Special
ಕುಂಬಳೆ : ಗಡಿನಾಡು ಕಾಸರಗೋಡಿನ ಕುಂಬಳೆ ಸೀಮೆಯ ಪ್ರಮುಖ ಸೀಮಾ ದೇಗುಲಗಳ ಜೀರ್ಣೋದ್ಧಾರಕ್ಕೆ ಅನನ್ಯ ಕೊಡುಗೆ ಇತ್ತ, ಅನೇಕ ಅಸಹಾಯಕರ ಬದುಕಿಗೆ ಬೆಳಕಾದ ಮತ್ತು ಸನಾತನ ಸಂಸ್ಕೃತಿಯ ಶಿಕ್ಷಣ ಪರಂಪರೆಯನ್ನು ಪ್ರೋತ್ಸಾಹಿಸಿದ ಅನಿವಾಸಿ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಭಟ್ಟರ ಸಿರಿಮುಡಿಗೆ ದ. ಕ. ಜಿಲ್ಲಾ ರಾಜ್ಯೋತ್ಸವಪ್ರಶಸ್ತಿ ಪ್ರಕಟವಾಗಿದೆ.
ಸದ್ದಿಲ್ಲದೇ ಸಮಾಜಮುಖೀ ಕೊಡುಗೆ ನೀಡುತ್ತಲೇ ಬಂದ ಅವರು ಎಲ್ಲೂ ಪ್ರಶಸ್ತಿ, ಸನ್ಮಾನ, ಪ್ರಚಾರ, ಜಾಹೀರಾತು ಬಯಸದೇ ನೇಪಥ್ಯದಲ್ಲಿ ನಿಂತ ಅಪರೂಪದ ಕೊಡುಗೆಯ ಸಾಧಕರು.
ಎಡಕ್ಕಾನ ಶ್ರೀ ಶ್ಯಾಮ ಭಟ್ ಅವರ ಪುತ್ರರಾದ ಮಹಾಬಲೇಶ್ವರ ಭಟ್ಟರು 1968 ನ. 24ರಂದು ಜನಿಸಿದವರು. ಅವರದ್ದು ಮಧ್ಯಮ ವರ್ಗ ಕುಟುಂಬದಲ್ಲಿ ಆರನೇ ಮಗುವಾಗಿ ಜನನ. ಆದರೆ ಪರಿಶ್ರಮ, ಸಾಧನಾ ಪಯಣ, ಧೖರ್ಯದ ಮುನ್ನುಗ್ಗುವಿಕೆಯಿಂದ ಜೀವನ ಮತ್ತು ಉದ್ಯಮದಲ್ಲಿ ಯಶಸ್ಸು ಕಂಡವರು.

- ಬಾಲ್ಯ, ಶಿಕ್ಷಣ
—————
ಇಂದೀಗ ಜಾಗತಿಕ ವಲಯದಲ್ಲಿ ಭಾರತದ ಪ್ರತಿಷ್ಟಿತ ಉದ್ಯಮಿಯಾಗಿ ತನ್ನ ಹೆಸರಿನ ಮೊಹರು ಒತ್ತಿರುವ ಮಹಾಬಲೇಶ್ವರ ಭಟ್ಟರು 1975ರಿಂದ 1984ರ ವರೆಗೆ
ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಫ್ರೌಢ ಶಾಲೆಯಲ್ಲಿ
ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದವರು. ಅನಂತರ 84ರಿಂದ ವಿಜಯ ಸಂಜೆ ಕಾಲೇಜು ಬೆಂಗಳೂರಿನಲ್ಲಿ ಪಿಯು ಓದಿದರು. ಆ ಕಾಲದಲ್ಲವರು ತನ್ನ ಭಾವನ ಸಣ್ಣ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಶಿಕ್ಷಣ ವೆಚ್ಚ ಭರಿಸಿದ್ದರು!
ಬಳಿಕ 1968 ರಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಪದವಿ ಶಿಕ್ಷಣ ಪಡೆದರು. ಜತೆಯಲ್ಲೇ 1992ರಲ್ಲಿ ಚಾರ್ಟೇಡ್ ಅಕೌಂಟೆನ್ಸಿಯಲ್ಲಿ ಮೊದಲ ಪರೀಕ್ಷೆಯಲ್ಲೇ ತೇರ್ಗಡೆಯಾಗಿ ಪ್ರತಿಭೆ ಮೆರೆದರು. ಬಳಿಕ ಮುಂಬಯಿ ಅದ್ವಾನಿ ಆರ್ಳಿಕಾಪ್ ಗ್ರೂಪ್ ನಲ್ಲಿ ಮೇನೇಜ್ ಮೆಂಟ್ ಟ್ರೖನಿ ಆಗಿ ವೃತ್ತಿ ಜೀವನದ ಅರಂಭ. ಮುಂದೆ ಬಹರೖನ್ ನ ಕೇವಲ್ ರಾಮ್ ಗ್ರೂಪಿನ ಅಕೌಂಟ್ಸ್ ಮೇನೇಜರ್ ಆಗಿ ಪ್ರಧಾನ ಹುದ್ದೆಯ ಸೇವೆ.
ಆದರೆ ತನ್ನ ಶಿಕ್ಷಣ, ಪ್ರತಿಭೆ, ಮತ್ತು ಚಿಂತನೆಗೆ ತಕ್ಕ ಕೆಲಸ ಇದಲ್ಲವೆಂದು ಯಾವಾಗ ತೋರಿತೋ… ಉದ್ಯೋಗ ಸಿಕ್ಕ ಎರಡೇ ವರ್ಷದಲ್ಲಿ ಭಟ್ಟರು ಕೆಲಸಕ್ಕೆ ರಾಜೀನಿಮೆಯಿತ್ತರು. ಊರಿಗೆ ಮರಳಿದರು.

1996ರಲ್ಲಿ ಅವರು ಸಿಂಗಾಪುರ ಮೂಲದ ಶಂಕರ್ಸ್ ಎಂಪೋರಿಯಂ ಸಂಸ್ಥೆಯ ರಷ್ಯಾ ವ್ಯಾಪಾರ ವಿಭಾಗದ ಫೖನಾನ್ಸ್ ಮುಖ್ಯಸ್ಥರಾದರು. ಮೋಸ್ಕೋಗೆ ತೆರಳಿದರು. ರಷ್ಯಾದಲ್ಲಿ ಉದ್ಯಮ ನಿರ್ವಹಿಸಿದರು. ಅನಂತರ 2002ರಲ್ಲವರು ಧೖರ್ಯದಿಂದ ತನ್ನ ಕೆಲಸಕ್ಕೆರಾಜೀನಾಮೆ ಇತ್ತರು. ಹೆಲಿಕ್ಸ್ ಗ್ರೂಪ್ ಆಫ್ ಕಂಪೆನೀಸ್ ಎಂಬ ಹೆಸರಲ್ಲಿ ಸ್ವಂತ ಉದ್ಯಮ ಸಂಸ್ಥೆ ಆರಂಭಿಸಿದರು. ರಷ್ಯಾದಲ್ಲಿ ವಿತರಣೆ ಮತ್ತು ಲಾಜಿಸ್ಟಿಕ್ಸ್ ಸೇವಾ ವ್ಯವಹಾರ ಆರಂಭಿಸಿದರು. ಕ್ರಮೇಣ ಉಕ್ರೇನ್, ದುಬಾಯಿ, ಕೀನ್ಯಾದಲ್ಲಿ ಆದರ ಘಟಕಗಳನ್ನೂ ವಿಸ್ತರಿಸಿದರು. ಇಂದೀಗ ಗಡಿನಾಡಿನ ನಮ್ಮೂರ ಜನರೂ ಒಳಗೊಂಡಂತೆ 350ರಷ್ಟು ನೌಕರರು ಅವರ ಸಂಸ್ಥೆಯಲ್ಲಿ
ದುಡಿಯುತ್ತಾರೆ..
ಊರು ತೊರೆದು ವಿದೇಶದಲ್ಲಿ ಉದ್ಯಮ ನಡೆಸುವ ಮಹಾಬಲೇಶ್ವರ ಭಟ್ಟರು ಅಚಲ ದೖವ ಭಕ್ತಿಯ ಧಾರ್ಮಿಕ ವ್ಯಕ್ತಿ. ಶುಧ್ಧ ಆಚಾರ ಪರಂಪರೆ ಪಾಲಿಸುವ ಸನಾತನಿ. ತನ್ನ ಊರಾದ ಧರ್ಮತ್ತಡ್ಕ ಬಳಿಯ ಕಂಬಾರು ದೇವಳದ ಜೀರ್ಣೋದ್ಧಾರ,
ಉಪ್ಪಳ ಕೊಂಡೆವೂರು ನಿತ್ಯಾನಂದ ಆಶ್ರಮದ 15 ಸಾವಿರ ಚದರ ಅಡಿಯ ಸಿಬಿಎಸ್ಇ ಮಾನ್ಯತೆಯ ಬಹು ಅಂತಸ್ತಿನ ಶಾಲಾ ಕಟ್ಟಡ, ಕಾಸರಗೋಡು ಚೖತನ್ಯ ವಿದ್ಯಾಲಯದ ಕಟ್ಟಡ ಸಹಿತ ಭೌತಿಕ ಸಾಹಚರ್ಯದ ಕೊಡುಗೆ, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ , ಅಡೂರು ದೇವಾಲಯ, ಮುಗು ದೇವಳಗಳ ನವೀಕರಣ ಸೇರಿದಂತೆ ಗಡಿನಾಡು ಕಾಸರಗೋಡಿನ ಶಿಕ್ಷಣ/ದೇವಾಲಯಕ್ಕವರು ನಿರೀಕ್ಷೆಗೂ ಮೀರಿದ ಅಪಾರ ದಾನ ಮಾಡಿದ್ದಾರೆ.
ಅಲ್ಲದೇ ಅನೇಕ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಶಿಕ್ಷಣಕ್ಕೆ ಆರ್ಥಿಕ ಅನುದಾನ, ವೖದ್ಯಕೀಯ ನೆರವು, ಕೋವಿಡ್ ಸಮಯದಲ್ಲಿ ದುಬಾಯಿಯಿಂದ ಭಾರತದ ತಾಯ್ನಾಡಿಗೆ ಮರಳಲು 50ಕ್ಕೂ ಅಧಿಕ ಮಂದಿಗೆ ಟಿಕೆಟ್ ನೆರವು, ವಿದೇಶದ ತುಳು, ಕನ್ನಡ ಸಮ್ಮೇಳನಕ್ಕೆ ನೆರವು, ಯಕ್ಷಗಾನ, ಗಣೇಶೋತ್ಸವಕ್ಕೆ ಸಹಾಯ ನೀಡಿದ ಇವರ ಕೊಡುಗೆ ಅಸಾಮಾನ್ಯ. ಗಡಿನಾಡು ಕಾಸರಗೋಡಿನ ಧಾರ್ಮಿಕ, ಕಲಾ ಸಾಂಸ್ಕೃತಿಕ ಮತ್ತು ಶೖಕ್ಷಣಿಕ ವಲಯದಲ್ಲದು ಅಪೂರ್ವ. ಅವರಿಗೆ ರಾಜ್ಯೋತ್ಸವ ಗೌರವದ ದ. ಕ ಪುರಸ್ಕಾರ ಸಂದಿರುವುದು ಗಡಿನಾಡಿಗೆ ಅಭಿಮಾನ.






