ದೇಲಂಪಾಡಿ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 81ನೇ ವಾರ್ಷಿಕಾಚರಣೆ: ಡಾ. ಎಂ. ಮೋಹನ ಆಳ್ವರಿಗೆ ಕೀರಿಕ್ಕಾಡು ಪ್ರಶಸ್ತಿ ಪ್ರದಾನ

by Narayan Chambaltimar

ದೇಲಂಪಾಡಿ: ಕಳೆದ ಎಂಟು ದಶಕಗಳಿಂದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ‌ ಕಲಾ ಸಂಘ ನಿರಂತರ ಸಾಂಸ್ಕೃತಿಕ ಚಟುವಟಿಕೆಯಿಂದ ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಬದ್ಧತೆಯಿಂದ ಕೆಲಸ ಮಾಡಿ, ಅನನ್ಯ ಕೊಡುಗೆ ನೀಡಿದೆ ಎಂದು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

 


ಬನಾರಿಯ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ನಡೆದ ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 81ನೆಯ ವಾರ್ಷಿಕೋತ್ಸವ, ಕೀರಿಕ್ಕಾಡು ಸಂಸ್ಮರಣೆ ಹಾಗೂ
ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ
ಅವರಿಗೆ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.

ಸಾಂಸ್ಕೃತಿಕ ಜಗತ್ತನ್ನು ಬಲು ಎತ್ತರಕ್ಕೆ ಏರಿಸಿದ ಸಾಂಸ್ಕೃತಿಕ ರಾಯಭಾರಿ ಡಾ.‌ಮೋಹನ ಆಳ್ವರು, ಅವರಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಅವರು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಡಾ.ಎಂ.ಮೋಹನ ಆಳ್ವ ಮಾತನಾಡಿ ‘ನಮ್ಮ ‘ಸೌಂದರ್ಯ ಪ್ರಜ್ಞೆ, ಬದುಕಿನ ಮೌಲ್ಯಗಳು, ಕಲೆ ಸಂಸ್ಕೃತಿಗಳು ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಒಗ್ಗಿಸಿಕೊಂಡು ಔಟ್ ಡೇಟೆಡ್ ಆಗದೆ ಉಳಿಸುವುದು ಇಂದಿನ ದೊಡ್ಡ ಸವಾಲು ಎಂದು ಹೇಳಿದರು. ಈ ಬದಲಾವಣೆಗಳಿಂದ ಯಕ್ಷಗಾನಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಯಕ್ಷಗಾನ ಕಲೆ ಕಾಲಕ್ಕೆ ತಕ್ಕಂತೆ ದೊಡ್ಡ ಕ್ರಾಂತಿ ಮಾಡಿದೆ. ಯಕ್ಷಗಾನವು ಶಾಸ್ತ್ರೀಯ ಕಲೆಯಾಗಿ ಬೆಳೆಯಬೇಕು.ಆಗ ಅದಕ್ಕೆ ದೊಡ್ಡ ನ್ಯಾಯ ಸಿಕ್ಕಿದಂತಾಗುತ್ತದೆ. ಇದು ಕರ್ನಾಟಕದ ಕಲೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ವಿಶೇಷ ಪರೀಕ್ಷೆ ನಡೆಸಿ ಗಡಿನಾಡು ಭಾಗದ ಕಲಿಕೆ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಅವಕಾಶ ನೀಡಲಾಗುವುದು ಎಂದ ಅವರು ಎಲ್ಲಾ ಶಿಕ್ಷಣ ಮಾಧ್ಯಮಗಳಲ್ಲಿ ಕನ್ನಡ ಮಾಧ್ಯಮ ಶಾಲೆಯೇ ಶ್ರೇಷ್ಠ ಎಂದು ಹೇಳಿದರು. ಕಲೆಯ‌ ಮೂಲಕ ಸಮಾಜದಲ್ಲಿ ನಾಡಿನಲ್ಲಿ ಬಲು ದೊಡ್ಡ ಬದಲಾವಣೆ ಮಾಡಿದವರು ಕೀರಿಕ್ಕಾಡು ಮಾಸ್ಟರ್ ಎಂದು ಡಾ.ಆಳ್ವ ಹೇಳಿದರು.
ಮುಂಬೈ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ.ತಾಳ್ತಜೆ ವಸಂತಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ
ಕೀರಿಕ್ಕಾಡು ಮಾಸ್ಟರ್‌ ವಿಷ್ಣುಭಟ್ ಅವರು


ದೇಲಂಪಾಡಿಯನ್ನು ಯಕ್ಷಗ್ರಾಮವಾಗಿ ಬೆಳೆಸಿದವರು ಎಂದು ಬಣ್ಣಿಸಿದರು. ಪರಂಪರಾಗತವಾಗಿ ಇಲ್ಲಿ ಕಲೆ ಬೆಳೆಯುತ್ತಿರುವುದು ಅತ್ಯಂತ ಶ್ರೇಷ್ಠವಾದುದು ಎಂದು ಹೇಳಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ.ಮೋಹನ ಕುಂಟಾರ್ ಅಭಿನಂದನಾ ಭಾಷಣ ಮಾಡಿ ಮೋಹನ್ ಆಳ್ವ ಅವರ ಹೆಸರೇ ಕನ್ನಡ‌ ನಾಡಿಗೆ ರೋಮಾಂಚನ.
ಕಲೆ, ಸಂಸ್ಕೃತಿಯ ಮೂಲಕ ನಾಡೇ ನಾಡೇ ಸಂಭ್ರಮಿಸುವಂತೆ ಮಾಡಬಹುದು ಎಂದು ತೋರಿಸಿಕೊಟ್ಟವರು ಡಾ.ಮೋಹನ ಆಳ್ವರು.
ಶಿಕ್ಷಣ ಕ್ಷೇತ್ರದ ಜೊತೆ
‌ ಸಾಂಸ್ಕೃತಿಕ ಲೋಕದಲ್ಲಿ ಕ್ರಾಂತಿ ಮಾಡಿದವರು ಎಂದು ಅವರು ಬಣ್ಣಿಸಿದರು.
ಹಿರಿಯ ಪತ್ರಕರ್ತರಾದ ಎಸ್. ನಿತ್ಯಾನಂದ ಪಡ್ರೆ ಕೀರಿಕ್ಕಾಡು ವಿಷ್ಣು ಭಟ್ ಸಂಸ್ಮರಣಾ ಭಾಷಣ ಮಾಡಿದರು. ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ತೊಟ್ಟೆತ್ತೋಡಿ ಮುಖ್ಯ ಅತಿಥಿಯಾಗಿದ್ದರು.
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಡಾ.ರಮಾನಂದ ಬನಾರಿ ಮಂಜೇಶ್ವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ವಿಶ್ವವಿನೋದ ಬನಾರಿ ಸನ್ಮಾನ ಪತ್ರ ವಾಚಿಸಿದರು. ನಾರಾಯಣ ದೇಲಂಪಾಡಿ ವಂದಿಸಿದರು. ರಾಮಣ್ಣ ಮಾಸ್ತರ್ ದೇಲಂಪಾಡಿ ಕಾರ್ಯಕ್ರಮ ನಿರೂಪಿಸಿದರು

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00