ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿ ರಾಷ್ಟ್ರಪತಿ ಭೇಟಿ ನೀಡುವ ಕಾರ್ಯಕ್ರಮ ಔದ್ಯೋಗಿಕವಾಗಿ ಖಚಿತವಾಗಿದೆ ಕೇರಳಕ್ಕಾಗಮಿಸುವ ಅವರ ಕಾರ್ಯಕ್ರಮದ ಪ್ರೊಟೋಕಾಲ್ ಬಿಡುಗಡೆಯಾಗಿದೆ. ದೇಶದ ಪ್ರಥಮ ಪ್ರಜೆಯೊಬ್ಬರು ಶಬರಿಮಲೆ ಸನ್ನಿಧಾನ ಸಂದರ್ಶಿಸುವುದು ಇದೇ ಮೊದಲ ಬಾರಿಯಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳಕ್ಕಾಗಮಿಸಿ, ಶ್ರೀ ಶಬರಿಮಲೆ ಸನ್ನಿಧಾನ ಸಂದರ್ಶಿಸಲಿರುವುದು ಖಚಿತವಾಗಿ ಘೋಷಣೆಯಾಗಿದೆ. ಅ. 21ರಂದು ಸಂಜೆ ತಿರುವನಂತಪುರ ತಲುಪುವ ಅವರು ಅಂದು ರಾಜಭವನದಲ್ಲಿ ವಾಸಿಸುವರು. 22ರಂದು ಬೆಳಿಗ್ಗೆ 9.30ಕ್ಕೆ ಹೆಲಿಕಾಪ್ಟರ್ ಮೂಲಕ ತಿರುವನಂತಪುರದಿಂದ ನಿಲಯ್ಕಲ್ ಗೆ ತೆರಳುವರು. ಬಳಿಕ ಅಲ್ಲಿಂದ ರಸ್ತೆ ಮೂಲಕ ಪಂಪಾ ತಲುಪಿ, ಕೆಲವೊಮ್ಮೆ ಪಂಪಾ ಸ್ನಾನ ನಡೆಸಿ, ಸಾಂಪ್ರದಾಯಿಕ ವಿಧಾನದಂತೆ ಇರುಮುಡಿ ಕಟ್ಟ ತುಂಬಿಸಿ ದೇವಸ್ವಂ ಮಂಡಳಿಯ ” ಗೂರ್ಖಾ ” ಜೀಪಿನಲ್ಲಿ ಮಲೆಯನ್ನು ಏರಿ ಸನ್ನಿಧಾನ ತಲುಪುವರು. ಮಧ್ಯಾಹ್ನ 12.30ರಿಂದ 1ರ ನಡುವೆ ಅವರು ಶಬರಿಮಲೆ ಅಯ್ಯನ ದರ್ಶನ ಮಾಡುವರು.
ಅನಂತರ ಶಬರಿಮಲೆ ಸನ್ನಿಧಾನ ಅತಿಥಿ ಬಂಗಲೆಯಲ್ಲಿ ವಿಶ್ರಾಂತಿ, ಔತಣ ಸೇವಿಸಿ ಅಪರಾಹ್ನ 3ಕ್ಕೆ ವಿಶೇಷ ವಾಹನದಲ್ಲಿ ನಿರ್ಗಮಿಸುವರು. ಅಂದು ರಾತ್ರಿ ರಾಜಭವನದಲ್ಲಿ ವಿಶ್ರಾಂತಿ ಪಡೆಯಲಿರುವ ಅವರು ಈನಡುವೆ ಕೇರಳ ರಾಜ್ಯಪಾಲರು ಏರ್ಪಡಿಸುವ ಔತಣ ಕೂಟದಲ್ಲಿ ಭಾಗವಹಿಸುವರು.
23ರಂದು ರಾಜಭವನ ಆವರಣದಲ್ಲಿ ಮಾಜಿ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಅವರ ಪ್ರತಿಮೆ ಅನಾವರಣ ನಡೆಸಲಿರುವ ಅವರು ಮಧ್ಯಾಹ್ನ ವಿಶೇಷ ಹೆಲಿಕಾಪ್ಟರ್ ನಲ್ಲಿ ಶಿವಗಿರಿ ಮಠಕ್ಕೆ ಭೇಟಿ ನೀಡುವರು.
ಶಿವಗಿರಿ ಮಠದಲ್ಲಿ ಶ್ರೀನಾರಾಯಣ ಗುರು ಮಹಾಸಮಾಧಿಯ ಶತಾಬ್ಧಿ ಆಚರಣೆಯನ್ನು ಅವರು ಉದ್ಘಾಟಿಸುವರು. ಬಳಿಕ ವರ್ಕಲದಿಂದ ಪಾಲಾ ಸೖಂಟ್ ಥಾಮಸ್ ಕಾಲೇಜಿನ ಕಾರ್ಯಕ್ರಮಕ್ಕೆ ತೆರಳುವರು. ರಾತ್ರಿ ಕೋಟಯಂ ಕುಮರಕಂನ ತಾಜ್ ರೆಸಿಡೆನ್ಸಿಯಲ್ಲಿ ತಂಗುವ ಅವರು 24ರಂದು ಕೋಟಯಂ ನಿಂದ ಹೆಲಿಕಾಪ್ಟರ್ ಮೂಲಕ ಕೊಚ್ಚಿಗೆ ಆಗಮಿಸುವರು. ಕೊಚ್ಚಿಯ ಸೖಂಟ್ ಥೆರೇಸಾ ಕಾಲೇಜಿನ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವರು ಅಂದು ಸಂಜೆಯೇ ದೆಹಲಿಗೆ ನಿರ್ಗಮಿಸುವರು.









