ಕುಂಬಳೆ: ಯುವ ನ್ಯಾಯವಾದಿ ಹಾಗೂ ಡಿವೈಎಫ್ಐ-ಸಿಪಿಐಎಂ ನಾಯಕಿಯಾಗಿದ್ದ ರಂಜಿತಾ (34)ಆತ್ಮಹತ್ಯೆ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡು ನಾಪತ್ತೆಯಾದ, ಸಹವರ್ತಿ ನ್ಯಾಯವಾದಿ ಯುವಕನನ್ನು ತಿರುವನಂತಪುರದಿಂದ ಬಂಧಿಸಲಾಗಿದೆ. ಈ ವ್ಯಕ್ತಿಯನ್ನು ಇಂದು ಸಂಜೆ ಕಾಸರಗೋಡಿಗೆ ಕರೆತಂದು ವಿಚಾರಣೆ ನಡೆಸಲಾಗುವುದೆಂದು ಪೋಲೀಸ್ ಮೂಲಗಳು ತಿಳಿಸಿದೆ.
ರಂಜಿತಾಳ ಆತ್ಮಹತ್ಯೆಯ ಕುರಿತಾಗಿ ತನಿಖೆ ಊರ್ಜಿತಗೊಳಿಸಬೇಕೆಂದು ಸಿಪಿಐಎಂ ಕುಂಬಳೆ ಏರಿಯಾ ಕಮಿಟಿ, ಲೋಕಲ್ ಕಮಿಟಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕುಂಬಳೆ ಪೋಲೀಸರು ತನಿಖೆ ನಡೆಸಿ ಯುವ ವಕೀಲನನ್ನು ಬಂಧಿಸಿದ್ದಾರೆ.

ಸೆಪ್ಟಂಬರ್ 30ರಂದು ಕುಂಬಳೆ ಯ ತನ್ನ ಕಚೇರಿಯಲ್ಲಿ ತಾನು ಸಾಯುತ್ತೇನೆಂದು ಬರೆದಿಟ್ಟು ನ್ಯಾಯವಾದಿ ರಂಜಿತಾ ಆತ್ಮಹತ್ಯೆ ಮಾಡಿದ್ದಳು. ಈ ಕೃತ್ಯ ಎಸಗುವ ಮುನ್ನ ಇದೇ ವಕೀಲನ ವೀಡಿಯೋ ಕಾಲ್ ಆಕೆಗೆ ಬಂದಿತ್ತು. ಈ ಕರೆಯ ಕುರಿತಾಗಿ ಫೋರೆನ್ಸಿಕ್ ಪರಿಶೋಧನೆ ನಡೆಯುತ್ತಿದೆ. ಈತನ ವಿಚಾರಣೆ ಮತ್ತು ಫೋರೆನ್ಸಿಕ್ ವರದಿ ಲಭಿಸುವುದರೊಂದಿಗೆ ಆತ್ಮಹತ್ಯೆಯ ನಿಗೂಢತೆ ಬಯಲಾಗಬಹುದೆಂದು ನಿರೀಕ್ಷಿಸಲಾಗಿದೆ. ರಂಜಿತಾಳ ಆತ್ಮೀಯನಾಗಿದ್ದ ಯುವ ವಕೀಲ ಈಕೆ ಆತ್ಮಹತ್ಯೆ ನಡೆಸಿದ್ದನ್ನು ಅರಿತು ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಅಲ್ಲದೇ ಅದೇ ದಿನ ಕಾಸರಗೋಡಿನಿಂದ ಪರಾಯರಿಯಾಗಿದ್ದನು.ಇದು ಶಂಕೆಗೆ ಪ್ರಬಲ ಕಾರಣವಾಗಿತ್ತು







