ಮಂಗಲ್ಪಾಡಿ : ಕೋಮುಶಕ್ತಿಗಳ ಬೆಂಬಲದೊಂದಿಗೆ ಕುಟಿಲ ಮತ್ತು ಕೀಳು ತಂತ್ರಗಳ ಮೂಲಕ ಅಧಿಕಾರಕ್ಕೇರಿದ ಎಡರಂಗವು ಜನಹೃದಯಗಳಿಂದ ಶಾಶ್ವತವಾಗಿ ಮರೆಯಾಗುವ ಹಂತದಲ್ಲಿದೆ. ಒಂದು ಕಾಲದಲ್ಲಿ ಶ್ರಮಿಕರು, ಕೃಷಿಕರು, ಭೂರಹಿತರು ಮುಂತಾದ ದಮನಿತ ಜನರಿಗಾಗಿ ಹೋರಾಡುತ್ತಿದ್ದ ಸಿಪಿಎಂ ಇಂದು ಸ್ವತಃ ಶೋಷಕರಾಗಿ ಮಾರ್ಪಟ್ಟದ್ದು ವಿಷಾದಕರ. ಕಂಡ ಕಂಡ ವಿಷಯಗಳಿಗೆ ತೆರಿಗೆ ವಿಧಿಸಿ ಜನರನ್ನು ಚೆನ್ನಾಗಿ ಸುಲಿಗೆ ಮಾಡಿದ ಸಿಪಿಎಂ ಈಗ ಬಹುಕೋಟಿ ವ್ಯವಹಾರಗಳ ಖದೀಮರ ಡಾರ್ಲಿಂಗ್ ಆಗಿ ಮಾರ್ಪಟ್ಟಿದೆ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ, ಎಣ್ಮಕಜೆ ಗ್ರಾ. ಪಂ. ಅಧ್ಯಕ್ಷ ಸೋಮಶೇಖರ ಜೆ. ಎಸ್ ಶೇಣಿ ಅಭಿಪ್ರಾಯಪಟ್ಟರು.

ಆಡಳಿತದ ಸಕಲ ವಲಯಗಳಲ್ಲೂ ವಿಫಲವಾದ ಎಡರಂಗವು ಇತರರ ಖಾಸಗಿ ಜೀವನಕ್ಕೆ ಇಣುಕಿ ನೋಡುವ ಇಣುಕಿ ರೋಗಿಗಳ ಮಟ್ಟಕ್ಕೆ ತಲುಪಿದೆ. ಕೀಳು ಆರೋಪಗಳನ್ನು ಮುಂದಿಟ್ಟು ಅಧಿಕಾರವನ್ನು ಉಳಿಸಿಕೊಳ್ಳಬಹುದೆಂಬ ಇವರ ಕನಸು ಕನಸಾಗಿಯೇ ಉಳಿಯಲಿದೆ. ಇದು ಭಾರತದ ಕೊನೆಯ ಸಿಪಿಎಂ ಕ್ಯಾಬಿನೆಟ್ ಎಂದು ಇತಿಹಾಸದಲ್ಲಿ ಉಲ್ಲೇಖಿಸಲ್ಪಡಲಿದೆ. ಮಂಗಲ್ಪಾಡಿಯಲ್ಲಿ ಸಿಪಿಎಂ ಹಾಗೂ ಬಿಜೆಪಿ ತೊರೆದು ಹಲವರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿರುವುದು ಸಿಪಿಎಂನ ಅವನತಿ ಹಾಗೂ ಕಾಂಗ್ರೆಸ್ ನ ಉಚ್ಛ್ರಾಯ ಸ್ಥಿತಿಗೆ ಉದಾಹರಣೆಯಾಗಿದೆ ಎಂದರು.

ಅವರು ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಕ್ರಿಯ ಸಿಪಿಎಂ ಕಾರ್ಯಕರ್ತರಾದ ಹನೀಫ್ ವರ್ಕಾಡಿ ಮುಟ್ಟಂ, ಹಮೀದ್ ಮುಟ್ಟಂ ಹಾಗೂ ಭಾಗೀರಥಿ ಸುಂದರ ಶಿರಿಯಾ ರನ್ನು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು. ಸೋಮಶೇಖರ್ ರವರು ಇವರನ್ನು ಶಾಲು ಹೊದಿಸಿ ಪಕ್ಷಕ್ಕೆ ಬರ ಮಾಡಿಕೊಂಡರು.
ಬಾಬು ಬಂದ್ಯೋಡು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಹಮ್ಮದ್ ಡಿಎಂಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಸಭೆಯಲ್ಲಿ ನೇತಾರರಾದ ಫಾರೂಕ್ ಶಿರಿಯಾ, ಬರ್ನಾರ್ಡ್ ಡಿ ಅಲ್ಮೇಡಾ, ಮೊಹಮ್ಮದ್ ಸೀಗಂಡಡಿ, ಪ್ರದೀಪ್ ಶೆಟ್ಟಿ, ಬಾಬು ಇಚ್ಲಂಗೋಡು, ಗೀತಾ ಬಂದ್ಯೋಡು, ತಾಹಿರಾ ಮಣಿಮುಂಡ, ಭಾಗೀರಥಿ ಸುಂದರ ಅಂಬಟೆಮೂಲೆ, ಶಶಿಧರ ಮುಟ್ಟಂ, ಇಬ್ರಾಹಿಂ ಹಾಜಿ ಇಚ್ಲಂಗೋಡು, ಯೂಸುಫ್ ಮುಟ್ಟಂ, ಮೊಹಮ್ಮದ್ ಮೇರ್ಕಳ, ಶಿಹಾಬ್ ಎಂಕೆ, ಇಸ್ಮಾಯಿಲ್ ಬೇಕೂರ್, ರಾಜೇಶ್ ನಾಯ್ಕ್, ಬಾಲಕೃಷ್ಣ ಕುಲಾಲ್, ಜಬೀರ್ ಮುಟ್ಟಂ, ಶಾಹುಲ್ ಹಮೀದ್, ಕರೀಂ ಪೂನಾ, ಮೊಹಮ್ಮದ್ ಹನೀಫ್, ರಝಾಕ್ ಅಡ್ಕ, ಝೈನುದ್ದೀನ್ ಪಚ್ಚಂಬಳ, ಕುಂಞಾಲಿ ಇಚ್ಲಂಗೋಡು, ತುಳಸಿ ಶಿರಿಯಾ ಮುಂತಾದವರು ಉಪಸ್ಥಿತರಿದ್ದರು.
ಅಶ್ರಫ್ ಮುಟ್ಟಂ ಸ್ವಾಗತಿಸಿ, ಹುಸೈನ್ ಕುಬಣೂರ್ ವಂದಿಸಿದರು.







