ಮಂಗಳೂರು : ಕಾಸರಗೋಡಿನ ಯುವಕನೋರ್ವನನ್ನು ಪರಿಚಯ ಹೊಂದಿ, ಪ್ರೀತಿಯ ಪ್ರಣಯದ ನಾಟಕವಾಡಿ ಜತೆಯಾಗೋಣ ಬಾ ಎಂದು ಕರೆಸಿ ಹಲ್ಲೆಗೈದು, ದರೋಡೆ ನಡೆಸಿದ ಪ್ರಕರಣವೊಂದು ನಡೆದಿದೆ. ಈ ಸಂಬಂಧ ಮಹಿಳೆ ಸೇರಿದಂತೆ ಆರುಮಂದಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಬೈಂದೂರಿನ ಸೈಫುಲ್ಲ (38), ಹಂಗಳೂರು ನಿವಾಸಿ ಸವಾದ್ (28), ಮುಹಮ್ಮದ್ ನಾಸರ್ ಷೆರೀಫ್ (36),. ಅಬ್ದುಲ್ ಸತ್ತಾರ್ (23), ಆಸ್ಮ (43), ಶಿವಮೊಗ್ಗದ ಅಬ್ದುಲ್ ಅಜೀಜ್ ಬಂಧಿತ ಆರೋಪಿಗಳಾಗಿದ್ದಾರೆ.

ಕಾಸರಗೋಡು ನಿವಾಸಿಯಾದ 37ರ ಯುವಕನಿಗೆ ಕುಂದಾಪುರದ ಮಹಿಳೆ ಜಾಲತಾಣದಲ್ಲಿ ಸಂಪರ್ಕವಾಗಿ ಗೆಳೆತನ ಬೆಳೆದಿತ್ತು. ಆಕೆ ಪ್ರಣಯದ ಬಲೆಬೀಸಿ ಈತನನ್ನು ಕುಂದಾಪುರಕ್ಕೆ ಕರೆಸಿದ್ದಳು. ಜತೆಯಾಗಿ ಸುತ್ತಾಡಿ ಬಳಿಕ ಆತನನ್ನು ಮನೆಗೆ ಕರೆದೊಯ್ದಳು. ಈವೇಳೆ ಆಕೆಯ ಕಡೆಯ ಐದಾರು ಮಂದಿ ತಲುಪಿ ಗದರಿಸಿ / ಬೆದರಿಸಿ ಹಲ್ಲೆ ನಡೆಸಿದರು. ಕೈವಶ ಇದ್ದ 6,200ರೂ ಅಪಹರಿಸಿದರು.
ಯುಪಿಎ ಮೂಲಕ ಖಾತೆಯಿಂದ 30,000ಸಾವಿರ ರೂ ಕಸಿದುಕೊಂಡರು. ಅಲ್ಲದೇ ಎಟಿಎಂ ಕಾರ್ಡ್ ಕಬಳಿಸಿ ಅದರಿಂದಲೂ 40ಸಾವಿರ ರೂ ಅಪಹರಿಸಿದ್ದಲ್ಲದೇ ಬಿಡುಗಡೆಗಾಗಿ 3ಲಕ್ಷ ರೂ ಬೇಡಿಕೆಯೊಡ್ಡಿದ್ದರು. ಇದಕ್ಕೆವಿಸಮ್ಮತಿಸಿದಾಗ ಹಲ್ಲೆ ನಡೆಸಿದ್ದರು. ಪ್ರೇಮದ ಸೋಗಿನಲ್ಲಿ ಬಲೆಗೆ ಬೀಳಿಸಿ ದೈಹಿಕ ಸಂಬಂಧ ನಡೆಸುವ ಆಸೆ ಚಿಗುರಿಸಿ ಯುವಕನನ್ನು ಮಹಿಳೆ ಕುಂದಾಪುರಕ್ಕೆ ಬರಮಾಡಿಕೊಂಡಿದ್ದಳು.
ಈ ಸಂಬಂಧ ಯುವಕ ಕುಂದಾಪುರ ಪೋಲೀಸರ ಮೊರೆ ಹೋದ ಹಿನ್ನೆಲೆಯಲ್ಲಿ
ಕ್ರಿಮಿನಲ್ ಗೂಢಾಲೋಚನೆ, ಅಪಹರಣ, ದೌರ್ಜನ್ಯ ಮತ್ತಿತ್ತರ ಕಾಯ್ದೆಯನ್ನು ಹೇರಿ ಆರೋಪಿಗಳನ್ನು ಬಂಧಿಸಲಾಗಿದೆ.






