ಆಗಸದಲ್ಲಿ ಬೆಳ್ಮುಗಿಲಿನೊಂದಿಗೆ ಪ್ರಕೃತಿ ಅರಳುವ ಕಾಲ ಬಂತು..

ಮನುಷ್ಯರನ್ನೆಲ್ಲಾ ಬೆಸೆದು ಒಂದುಗೂಡಿಸುವ ಮಾನವತೆಯ ಹಬ್ಬ ಓಣಂ ಸಡಗರದಲ್ಲಿದೆ ನಾಡು...

by Narayan Chambaltimar
  • ✍️*
    ಎಂ.ನಾ.ಚಂಬಲ್ತಿಮಾರ್

ಮತ್ತೊಮ್ಮೆಪ್ರಕೃತಿ ಧರ್ಮದಂತೆ ಓಣಂ ಬಂದಿದೆ…
ಭೂಮಿಯರಳಿದೆ.
ತರುಲತೆಗಳಾದಿ ಭೂರಮೆ ಹಸಿರಿನ ಪೊನ್ನುಡುಗೆ ಉಟ್ಟಿದೆ.
ಪ್ರಕೃತಿ ಹಸುರಿನ ಫಲ ನೀಡಲಾರಂಭಿಸಿದೆ. ಹೀಗೆ ಋತು ಪಲ್ಲಟಕ್ಕೆ ಸ್ವಾಗತದ ಸೋಬಾನೆಯೊಂದಿಗೆ ಓಣಂ ಬಂದಿದೆ…
ಕೇರಳೀಯರೆಂದಲ್ಲ, ಮನುಜ ಮತವನ್ನು, ಮತಾತೀತ ಸಮತೆಯನ್ನು ಬಯಸುವವರು ಜಗತ್ತಿನಲ್ಲಿ ಯಾರೆಲ್ಲ, ಎಲ್ಲೆಲ್ಲಿ ಇದ್ದಾರೋ…ಅವರೆಲ್ಲ ಆಚರಿಸುವ ಒಲುಮೆಯ- ಭಾತೃತ್ವದ ರಾಷ್ಟೀಯ ಹಬ್ಬ ಓಣಂ ಎಂದರೆ ಮನುಜರಿಗಷ್ಟೇ ಅಲ್ಲ, ಪ್ರಕೃತಿಗೂ ಸಂಭ್ರಮ..

ಅದಿಂದು ಕೇವಲ ಕೇರಳಕ್ಕಷ್ಟೇ ಸೀಮಿತವಾಗಿಲ್ಲ. ಕೇರಳೀಯರು ಇದ್ದೆಡೆಯೆಲ್ಲಾ ಅನ್ಯ ರಾಜ್ಯ ,ದೇಶ ವ್ಯಾಪಕವಾಗಿದೆ. ಸಮಗ್ರ ನಾಗರಿಕರ ಒಗ್ಗೂಡುವಿಕೆಯ, ವಿವಿಧತೆಯಲ್ಲಿ ಏಕತೆಯ ಹಬ್ಬವಾಗಿದೆ. ನಿಜಾರ್ಥದ ಸಾರ್ವಜನಿಕ ಐಕ್ಯತೆಯ ಉತ್ಸವವಾಗಿದೆ. ಹೀಗೆ ಎಲ್ಲರನ್ನೊಂದಾಗಿಸುವ ಇನ್ನೊಂದು ಸಂಭ್ರಮ ಜಗತ್ತಲ್ಲೇ ಇನ್ನೊಂದಿಲ್ಲ ಎಂಬುದೇ ವೈಶಿಷ್ಟ್ಯ..! ಆದ್ದರಿಂದಲೇ ಓಣಂ ಗೆ ಜಾಗತಿಕ ಮಾನ್ಯತೆ.
ಎಲ್ಲರ ಪಾಲ್ಗೊಳ್ಳುವಿಕೆಯ ನೈಜ ಸಂಭ್ರಮ.

ಸಾಮಾನ್ಯವಾಗಿ ಇಂಗ್ಲೀಷ್ ಕ್ಯಾಲಂಡರ್ ಪ್ರಕಾರ ಓಣಂ ಬರುವುದು ಆಗಸ್ಟ್\ಸೆಪ್ಟೆಂಬರ್ ತಿಂಗಳಲ್ಲಿ. ಮಲಯಾಳಂ ಮಾಸಾಚರಣೆಯಂತೆ ಅದು ‘ಚಿಂಙ್ಙಂ( ಸೋಣ-ಶ್ರಾವಣ) ಮಾಸದ ಸಮೃದ್ಧಿಯ ಸಂಕೇತದ ಹಬ್ಬ. ಅದು ಕೃಷಿ ಪ್ರಧಾನ ಬದುಕಿನ ಕೊಯ್ಲುತ್ಸವಕ್ಕೆ ನಾಂದಿ ಹಾಡುವ ಆಚರಣೆ. ಇಲ್ಲಿ ಬಡವ ಬಲ್ಲಿದನೆಂಬ ಬೇಧವೋ, ಮೇಲ್ಜಾತಿ-ಕೆಳಜಾತಿ ಅಂತರಗಳ
ವರ್ಗಶ್ರೇಣಿ ತಾರತಾಮ್ಯವೋ ಯಾವೂದೂ ಇಲ್ಲ. ಇದು ಸಮತೆ ಮಮತೆಯ ಜೀವನ ಪ್ರೀತಿಯ ಮಾನುಷಿಕತೆಯ ಹಬ್ಬ. ಈ ಕಾರಣದಿಂದಲೇ ಇದು ನಿತ್ಯನವೀನ.
ಈ ಆಶಯದಿಂದಲೇ ಇದು ನಿರಂತರ ಸಮಕಾಲೀನ.
ಓಣಂ ಎಂದರೆ ಗತಕಾಲೀನ ಮಧುರ ಸ್ಮೃತಿಗಳನ್ನುಣಿಸುವ, ಗತಕಾಲದ ಸುಂದರ ಮೆಲುಕುಗಳನ್ನು ಗಣಿಸುವ ಹಬ್ಬ. ಕೇವಲ ಕುಟುಂಬವಷ್ಟೇ ಅಲ್ಲ, ಬಂಧುಮಿತ್ರಾದಿಗಳು ಸಹಿತ ಜಾತಿ ಮತಗಳಿಲ್ಲದೇ ಊರ ಮಂದಿಗಳೆಲ್ಲಾ ಒಟ್ಟಾಗಿ ಕುಣಿದು ಕುಪ್ಪಳಿಸಿ, ಎಲ್ಲರೂ ಒಗ್ಗೂಡುವ ಭಾವೈಕ್ಯತೆಯ ಹಬ್ಬ. ಅಂಥ ಹಬ್ಬದ ಮೆರುಗು ವರ್ಣನಾತೀತ. ಇದುವೇ ನೈಜ ನಾಡಹಬ್ಬ. ಇದು ಸಾರ್ವಜನಿಕ ಎಂಬ ಪದಕ್ಕೆ ಅರ್ಥ ತುಂಬುತ್ತದೆ. ಮನುಷ್ಯ ಎಂಬ ಮಾನವಿಕತೆಗೆ ಒರತೆಗೆ
ಜೀವ ನೀಡುತ್ತದೆ.

ಓಣಂ ಎಂದರೆ ಸಮೃದ್ಧವಾದ ಬಗುಬಗೆಯ ಖಾದ್ಯ ವೈವಿಧ್ಯತೆಗಳ ಭೋಜನ ವೈಶಿಷ್ಟ್ಯವೇ ವಿಶೇಷತೆ.
ಅದರ ಹೆಸರೇ ಓಣಂ ಸದ್ಯ. ನಿತ್ಯದೂಟ/ಇತರೇ ಹಬ್ಬದೂಟ ‘ಸದ್ಯ’ ಅಲ್ಲ ಅದು ಕೇವಲ ಭಕ್ಷಣ.
ಸದ್ಯ ಎಂದರೆ ಓಣಂ ಔತಣ. ಅದು ಪಕ್ಕಾ ಸಸ್ಯಾಹಾರಿ. 40ಕ್ಕೂ ಅಧಿಕ ನೆಲಮೂಲ ಪ್ರಾಕೃತಿಕ ರಸದೌತಣದ ಹೆಸರೇ “ಸದ್ಯ” ಎಂದು. ಅಂದ್ರೆ ಉಣ್ಣುವ ಆಹಾರವೂ ಔಷಧಿಯಾಗಬೇಕೆಂಬ ಪ್ರಕೃತಿ ತತ್ವ..

ಆಧುನಿಕ ವರ್ತಮಾನಕ್ಕೂ ಅದು ಸಂಪೂರ್ಣ ಕಳೆಗುಂದಿಲ್ಲ…
ಎಷ್ಟೇ ಬಡತನ ಬಂದರೂ.., ಹೊಟ್ಟೆಗೆ ಹಿಟ್ಟಿಲ್ಲದ ಗತಿ ಬಂದರೂ ಓಣಂ ದಿನ ಕೇರಳೀಯರು ಉಪವಾಸ ಇರಲಾರರು, ಸಮೃದ್ಧಿಯ ಬದುಕನ್ನು ಆಚರಿಸಿಯೇ ಆಚರಿಸುತ್ತಾರೆಂಬುದು ಶತಸಿದ್ಧ.


ಏಕೆಂದರೆ….
ಓಣಂ ಮಹಾಧರ್ಮಿಷ್ಟ ಅರಸ ಮಹಾಬಲಿಯ ಹಬ್ಬ. ಆತ ಅಸುರನಾದರೂ, ಮಾನವಿಕತೆಯ ಸಾಕಾರಮೂರ್ತಿಯಾಗಿದ್ದ, ಪ್ರಜೆಗಳನ್ನೆಲ್ಲ ಒಂದೇ ಕಂಗಳಿಂದ ಕಂಡು ಪ್ರೀತಿಸಿ, ನ್ಯಾಯ ಒದಗಿಸಿದ್ದ. ಇದು ಮಹಾಚಕ್ರವರ್ತಿಯ ತ್ಯಾಗದ ಕತೆ. ಒಂದಾನೊಂದು ಕಾಲಕ್ಕೆ ಈಗಿನ ಕೇರಳ ಪ್ರಾಂತ್ಯವನ್ನೊಳಗೊಂಡ ಭೂ ಪ್ರದೇಶವನ್ನು ಮಹಾಬಲಿ ಚಕ್ರವರ್ತಿ ಆಳುತ್ತಿದ್ದ. ಆ ಕಾಲಕ್ಕೆ ಪ್ರಜೆಗಳೆಲ್ಲರೂ ಸತ್ಯನಿಷ್ಠ, ಧರ್ಮನಿಷ್ಠರಾಗಿದ್ದರು. ಕಳ್ಳತನ, ನೀಚತ್ವ, ಲಂಪಟತೆ, ಮೋಸ ಇತ್ಯಾದಿಗಳೊಂದೂ ಇರಲಿಲ್ಲ. ಭೂಮಿಯೇ ಸ್ವರ್ಗವಾಗಿ ಅವತರಿಸಿದ ಕಾಲ! ಈ ಖ್ಯಾತಿ ದಶದಿಕ್ಕಿಗೂ ಹರಡಿತು. ಮಹಾಬಲಿಯ ಆಡಳಿತ ಇದೇ ರೀತಿ ವಿಸ್ತರಿಸಿದರೆ ಇಂದಲ್ಲ ನಾಳೆ ಸ್ವರ್ಗದ ಇಂದ್ರಪೀಠಕ್ಕೂ ಅಪಾಯ ತಪ್ಪಿದ್ದಲ್ಲ ಎಂದು ಆತಂಕಗೊಂಡ
ದೇವೇಂದ್ರ ಮಹಾವಿಷ್ಣುವಿನ ಮೊರೆ ಹೋಗುತ್ತಾನೆ, ತನ್ನ ಸ್ವಾರ್ಥ /ಭೀತಿಯಿಂದ
ಕಿವಿಯೂದುತ್ತಾನೆ.
ಇದರಂತೆ ಮಹಾವಿಷ್ಣು ವಾಮನಾವತಾರದಲ್ಲಿ ಭೂಮಿಗಿಳಿಯುತ್ತಾನೆ. ಮಹಾಬಲಿಯಲ್ಲಿಗೆ ಬಂದು ಮೂರಡಿ ಭೂಮಿ ಭಿಕ್ಷೆ ಕೇಳುತ್ತಾನೆ. ಬಾಲಕ ವಾಮನನ ಎರಡು ಅಡಿ ಮಹಾಬಲಿಯ ಸಾಮ್ರಾಜ್ಯವನ್ನಿಡೀ ವ್ಯಾಪಿಸಿಕೊಂಡಾಗ ವ್ಯಾಪಿಸಿಕೊಂಡಾಗ ಮೂರನೇ ಅಡಿಯನ್ನಿಡಲು ಜಾಗವೇ ಇಲ್ಲ! ಕೊಟ್ಟ ಮಾತಿನಂತೆ ಮೂರನೇ ಅಡಿಯನ್ನು ತನ್ನ ತಲೆಯ ಮೇಲಿರಿಸಲು ಮಹಾಬಲಿ ವಿನಂತಿಸುತ್ತಾನೆ. ವಾಮನಮೂರ್ತಿಯ ತ್ರಿವಿಕ್ರಮ ಹೆಜ್ಜೆ ಯಿಂದ ಮಹಾಬಲಿ ಪಾತಾಳಕ್ಕೆ ತಳ್ಳಲ್ಪಡುತ್ತಾನೆ! ಆದರೆ ತನಗೆ ಪ್ರತೀ ವರ್ಷಕ್ಕೊಮ್ಮೆ ತನ್ನ ರಾಜ್ಯಕ್ಕೆ ಪ್ರಜಾಜನರನ್ನು ನೋಡಲು ಬರುವಂತೆ ಅವಕಾಶ ಕೇಳಿಕೊಳ್ಳುವ ಮಹಾಬಲಿಗೆ ವಾಮನಾವತಾರದ ವಿಷ್ಣು ಅದೆಲ್ಲವನ್ನೂ ಒದಗಿಸುತ್ತಾನೆ.
ಇದು ಬಲಿ ಚಕ್ರವರ್ತಿಗೆ ಒದಗಿದ ಮೋಕ್ಷದ ಕತೆ ಮೋಸದ ಕತೆಯಲ್ಲ..

ಇದೇ ಕತೆ ತುಳುನಾಡಲ್ಲೂ ಇದೆ. ತುಳುನಾಡಲ್ಲಿ ಮಹಾಬಲಿ ದೀಪಾವಳಿಯ ಬಲಿಯೇಂದ್ರ ಪರ್ಬಕ್ಕೆ ಬಂದರೆ ಕೇರಳದಲ್ಲಿ ಓಣಂ ಹಬ್ಬಕ್ಕೆ ಬರುತ್ತನೆಂಬುದಷ್ಟೇ ವ್ಯತ್ಯಾಸ. ಇದಕ್ಕೆ ತುಳು – ಮಲಯಾಳ ನಾಡಿನ ಸಾಂಸ್ಕೃತಿಕ ಕ್ಯಾಲಂಡರ್ ವ್ಯತ್ಯಾಸವೇ ಕಾರಣ..
ಏನೇ ಇರಲಿ ಓಣಂ ಸಮತೆ, ಮಮತೆಯ ನೆಲದ ಸಂಸ್ಕೃತಿ ಆರಾಧನೆಯ ಹಬ್ಬ. ಅದು ವಿಭಜನೆಯನ್ನು ಮೀರಿದ ಮಣ್ಣಿನ ಹಬ್ಬ. ಎಲ್ಲ ಹಬ್ಬಗಳ ಆಶಯವೂ ಮಾನವನ ಉತ್ಕರ್ಷಕ್ಕೆ ಇರುವುದು. ಆದ್ದರಿಂದಲೇ ಹಬ್ಬಕ್ಕೆ ಉತ್ಸವ ಎಂದು ಹೆಸರು. ಈಗೀಗ ಆಚರಿಸುವವರಿಗೆ ಅದರ ಮಹತ್ವ /ಆಶಯ / ಧ್ಯೇಯ ಗೊತ್ತಿಲ್ಲದಿರುವುದೇ ಸಾಂಸ್ಕೃತಿಕ ವಿಪರ್ಯಾಸ. U

ಓಣಂ ಉಣ್ಣುವುದಕ್ಕಿರುವುದ್ದಲ್ಲ. ಒಂದಾಗಲಿಕ್ಕಿರುವುದು ಮತ್ತು ಒಲುಮೆಯಿಂದರಲು ಬಯಸುವ ಹಬ್ಬ. ಈಗ ನಾವೆಲ್ಲಿ ಅಂತರಂಗದ ಪ್ರೀತಿ, ಮಮತೆಯಿಂದ ಒಂದಾಗುತ್ತೇವೆ??
ಜಾತಿ /ಧರ್ಮ/ ಮತ /ಕುಲಗಳ ಮರೆಯಲ್ಲಿ ಮಾನುಷಿಕ ವಿಘಟನೆ ಮಾಡುವ ಮಾನವರೆದೆಯಲ್ಲಿ
ಮಮತೆಯ ಹೂ ರಂಗೋಲಿ ಯಾರು ರಚಿಸುವರೋ?
ಉಸಿರಲ್ಲಿ ಒಲುಮೆಯ ಗಾಳಿ ಯಾರು ಬಿತ್ತುವರೋ ಗೊತ್ತಿಲ್ಲ.

ಅದು ಚಿಂತನೆಗಿರಲಿ, ವಾಸ್ತವದಲ್ಲಿ
ಮಾವೇಲಿಯ ನೆನಪಲ್ಲಿ ವರ್ಷಕ್ಕೊಮ್ಮೆಯಾದರೂ ಓಣಂ ಮನುಷ್ಯರೆಲ್ಲರೂ ಒಂದೇ ಥರ ಎಂದು ಸಂಕಲ್ಪಿಸುವ ಹಬ್ಬ. ಬಹುಶಃ ಇಂತದ್ದೊಂದು ಸಂಕಲ್ಪದ, ಮಾನವತೆಯ ಮಹಾಮಂತ್ರ ಮೊಳಗಿಸುವ ಭಾವೈಕ್ಯತೆಯ ಹಬ್ಬ ದೇಶದ ಯಾವರಾಜ್ಯದಲ್ಲೂ ಇಲ್ಲ..! ಮತ-ಧರ್ಮಗಳ ಕಟ್ಟುಪಾಡು ಮೀರಿ ಮಾನವತೆಯ ಸದಾಶಯವನ್ನು ಆಚರಿಸುವ, ಸಮೃದ್ಧಿಯ ಸಂಕೇತಗಳನ್ನು ಪೋಷಿಸುವ , ಭಾವೈಕ್ಯದ ಅಮೃತವನ್ನು ಕೈದಾಟಿಸುವ ಹಬ್ಬ ಕೇರಳದಲ್ಲಿ ಮನುಷ್ಯ ಸಂಕುಲವನ್ನು ಒಂದೇ ಸರಪಳಿಯಲ್ಲಿ ಬೆಸೆದಿದೆ.
ಇದು ಶ್ರೀನಾರಾಯಣ ಗುರುಗಳ ಆಶಯ. ಆದ್ದರಿಂದಲೇ ಅದು ಸರ್ವಮಾನ್ಯವಾಗಿದೆ, ಸರ್ವ ಸ್ವೀಕೃತವಾಗಿದೆ.
ಓಣಂ ತ್ಯಾಗದ ಕತೆ ಸಾರುತ್ತದೆ. ಉತ್ಕೃಷ್ಟ ರಾಜನಾಗಿ ಭೂಮಂಡಲವಿಡೀ ಗೆದ್ದರೂ ದಾನ ಕೇಳಿ ಬಂದವನ ಮುಂದೆ ಸರ್ವಸ್ವವವನ್ನೂ ತ್ಯಾಗ ಮಾಡಿದ ಕತೆ ಹೇಳುತ್ತದೆ. ಬಂದವನು ಭಗವಂತನೆಂದೇ ಅರಿತರೂ ಜೀವನದ ಅಂತಿಮವಾದ ಪರಮಮೋಕ್ಷ ಪದವಿಯ ಕತೆಯನ್ನೂ ಸೂಚಿಸುತ್ತದೆ. ಆದರೆ ಮೋಕ್ಷಾನಂತರದಲ್ಲಿ ವರ್ಷಕ್ಕೊಮ್ಮೆ ಮಹಾಬಲಿ ತನ್ನೂರಿಗೆ ಬರುವಾಗ ಪ್ರಜೆಗಳು ಅರಸನನ್ನು ಸ್ವೀಕರಿಸುವ ಹಬ್ಬವೇ ಓಣಂ..ಮತ್ತದರ ವೈಶಿಷ್ಟ್ಯ..
ಎಲ್ಲ ಹಬ್ಬಗಳಲ್ಲೂ ತಿಂದು ತೇಗುವುದೇ ಅಲ್ಲ. ಧರ್ಮದ ಹೆಸರಲ್ಲಿ ಮತಾಂಧತೆ ರೂಪಿಸುವುದಲ್ಲ. ಹಬ್ಬಗಳು ನಾಗರೀಕತೆ ಬೆಳೆಸಬೇಕು. ಮಾನವತೆ ಉಳಿಸಬೇಕು. ಸಂಸ್ಕೃತಿ ಪೋಷಿಸಬೇಕು. ಓಣಂ ಇದನ್ನು ಮಾಡುತ್ತಲೇ ಬಂದಿದೆ. ಇದು ರಾಜಕೀಯ ರಹಿತ ಕಾಯಕ.
ಇದೇ ಕೆಲಸ ಇನ್ನಿತರ ಸಾರ್ವಜನಿಕ ಹಬ್ಬಗಳಲ್ಲಿ ಏಕಿಲ್ಲ??
ಉತ್ಸವ ಎಂಬುದು ಉತ್ಕರ್ಷವೇ ಆದಲ್ಲಿ ಉತ್ಸವ ಮೂಲಕ ನಮ್ಮಲ್ಲಿ ಎಷ್ಟು ಸಾಮಾಜಿಕ, ಜನಜೀವನದ ಉತ್ಕರ್ಷ ನಡೆದಿದೆ?
ಒಮ್ಮೆ ನಾವು ಕುಳಿತು ಚಿಂತಿಸೋಣ
ಆ ಬಳಿಕ ಯೋಚಿಸೋಣ.
ಶುಭಂ..

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00