ಕಾಸರಗೋಡು : ಜಿಲ್ಲೆಯ ಉಕ್ಕಿನಡ್ಕ ಸಹಿತ ವಯನಾಡಿನ ಉದ್ದೇಶಿತ ಸರಕಾರಿ ಮೆಡಿಕಲ್ ಕಾಲೇಜುಗಳಿಗೆ ಪ್ರವೇಶಾನುಮತಿ ಲಭಿಸಿದ್ದು ಜಿಲ್ಲೆಯ ಮೆಡಿಕಲ್ ಕಾಲೇಜ್ ಎಂಬ ಕನಸು ಚಿಗುರಿದೆ. ಕೇರಳದ ಉಭಯ ಮೆಡಿಕಲ್ ಕಾಲೇಜುಗಳ ಎಂ. ಬಿ. ಬಿ. ಎಸ್. ಪ್ರವೇಶಾತಿಗೆ ರಾಷ್ಟ್ರೀಯ ಮೆಡಿಕಲ್ ಕಮಿಷನ್ ಅನುಮತಿ ದೊರೆತಿದ್ದು, ಈ ಶೈಕ್ಷಣಿಕ ವರ್ಷವೇ ಪ್ರವೇಶಾತಿ ನೀಡಿ ಕಾಲೇಜು ಕಾರ್ಯಾರಂಭ ಆಗಲಿದೆಯೆಂದು ರಾಜ್ಯ ಆರೋಗ್ಯ ಸಚಿವೆ ಘೋಷಿಸಿದ್ದಾರೆ.
ಕಾಸರಗೋಡಿನ ಉಕ್ಕಿನಡ್ಕ ಮತ್ತು ವಯನಾಡಿನ ಮೆಡಿಕಲ್ ಕಾಲೇಜು ಅಸ್ತಿತ್ವಕ್ಕೆ ಬರುವುದರೊಂದಿಗೆ ಎಲ್ಲಾ ಜಿಲ್ಲೆಗಳಲ್ಲೂ ಮೆಡಿಕಲ್ ಕಾಲೇಜ್ ಹೊಂದಿದ ಅಪೂರ್ವ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗುತ್ತಿದೆ. ಆರೋಗ್ಯ ರಂಗದಲ್ಲಿದು ಕೇರಳದ ಮಹತ್ತರ ಸಾಧನೆಯಾಗಿದೆ.

ನೂತನ ಮೆಡಿಕಲ್ ಕಾಲೇಜುಗಳಿಗೆ ಪ್ರವೇಶನಾನುಮತಿ ದೊರಕಿದ ಹಿನ್ನೆಲೆಯಲ್ಲಿ ಕೇರಳದಲ್ಲಿ ಸರಕಾರಿ ವಲಯದಲ್ಲಿ 100ಮಂದಿಗೆ ಎಂ. ಬಿ. ಬಿ. ಎಸ್ ಶಿಕ್ಷಣಕ್ಕೆ ಅವಕಾಶ ಒಲಿಯಲಿದೆ.
ಕಳೆದ ಅನೇಕ ವರ್ಷಗಳಿಂದ ಆರೋಗ್ಯ ರಂಗದಲ್ಲಿ ಹಿಂದುಳಿದ ಕಾಸರಗೋಡು, ವಯನಾಡು ಜಿಲ್ಲೆಯ ಜನತೆ ಉನ್ನತ ಚಿಕಿತ್ಸೆಗಾಗಿ ಮಂಗಳೂರು, ಮಣಿಪಾಲ, ಕೋಝಿಕ್ಕೋಡ್, ಮೈಸೂರು ಆಶ್ರಯಿಸುವ ಸಮಸ್ಯೆ ಇದರಿಂದ ನೀಗಿದೆ. ಮೂಲಭೂತ ಸೌಕರ್ಯ, ಸೌಲಭ್ಯ ಈಗಾಗಲೇ ಒದಗಿರುವುದರಿಂದ ಪ್ರಸಕ್ತ ವರ್ಷವೇ ಮೆಡಿಕಲ್ ಕಾಲೇಜು ಕಾರ್ಯಾರಂಭಗೊಳ್ಳಲಿದೆ.
ಪ್ರಸ್ತುತ ರಾಜ್ಯ ಸರಕಾರದ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ 4ಮೆಡಿಕಲ್ ಕಾಲೇಜ್ ಕಾರ್ಯಾರಂಭಿಸಲಾಗುತ್ತಿದ್ದು, ಸರಕಾರಕ್ಕಿದು ಸಾಧನೆಯ ಗರಿಮೆಯಾಗಿದೆ.
ಮೆಡಿಕಲ್ ಕಾಲೇಜ್ ಅಂಗೀಕಾರ ಲಭ್ಯತೆಯೊಂದಿಗೆ ವೈದ್ಯರುಗಳ ನೇಮಕ, ಸ್ಪೆಷಲಿಸ್ಟ್ ಚಿಕಿತ್ಸಾ ಸೌಲಭ್ಯ, ಸಂಶೋಧನಾ ಸೌಕರ್ಯ ಉಕ್ಕಿನಡ್ಕದಲ್ಲಿ ಒದಗಲಿದೆ.
ತನ್ಮೂಲಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಇದು ಬಾಗಿಲು ತೆರೆಯಲಿದೆ.







