ಯಕ್ಷಗಾನದ ಧ್ವನಿವರ್ಧಕ ನಿಯಂತ್ರಣ: ಜನಪ್ರತಿನಿಧಿಗಳು ಸರಕಾರಕ್ಕೆ ಒತ್ತಡ ಹೇರಿ ಸೂಕ್ತ ತೀರ್ಮಾನಕ್ಕೆ ಸಹಕರಿಸಬೇಕು- ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಟಿ.ಶಾಮ ಭಟ್

ಎಡನೀರು ಮಠದಲ್ಲಿ ಭಾಗವತ ದಿನೇಶ ಅಮ್ಮಣ್ಣಾಯರಿಗೆ ಕಡಬ ಸಂಸ್ಮರಣಾ ಪ್ರಶಸ್ತಿ ಪ್ರದಾನ: ಅವಿಸ್ಮರಣೀಯ ಹಿಮ್ಮೇಳ ಸಾಧಕ ಕಡಬದ್ವಯರ ಸಂಸ್ಕರಣೆ

by Narayan Chambaltimar

ಎಡನೀರು :ದ. ಕ ಸಹಿತ ಕರಾಶಳಿಯಲ್ಲಿ ಇತ್ತೀಚಿನ ಗಣೇಶೋತ್ಸವ ಸಂದರ್ಭಗಳಲ್ಲಿ ರಾತ್ರಿ 10ರ ಬಳಿಕ ಯಕ್ಷಗಾನ ಪ್ರದರ್ಶನದ ಧ್ವನಿ ವರ್ಧಕ ಬಳಕೆ ನಿಷೇಧಿಸಿರುವುದು ವಿಷಾದಕರ ಮತ್ತು ಆಘಾತಕಾರಿ ಬೆಳವಣಿಗೆ. ಧ್ವನಿವರ್ಧಕ ನಿಯಂತ್ರಣ ಕಾನೂನು ಖಾಯಂ ಆದರೆ ಯಕ್ಷಗಾನ ಕ್ಷೇತ್ರಕ್ಕದು ಭಾರೀ ದೊಡ್ಡ ಹೊಡೆತ ನೀಡಲಿದೆ. ಅನೇಕ ಮೇಳಗಳಲ್ಲಿ ಅನೇಕ ಕಲಾವಿದರಿದ್ದು , ಅವರನ್ನವಲಂಬಿಸಿ ನೂರಾರು ಮಂದಿ ಬದುಕುವ ವೃತ್ತಿಕ್ಷೇತ್ರವಿದು. ಆದ್ದರಿಂದ ಜನಪ್ರತಿನಿಧಿಗಳು ಈ ವಿಷಯದಲ್ಲಿ ಸರಕಾರಕ್ಕೆ ಒತ್ತಡ ಹೇರಿ ಸೂಕ್ತ ತೀರ್ಮಾನ ಕೈಗೊಳ್ಳಲು ಸಹಕರಿಸಬೇಕು ಎಂದು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶಾಮ ಭಟ್ಟರು ನುಡಿದರು.

ಎಡನೀರು ಮಠದಲ್ಲಿ ಆ. 31ರಂದು ಮಂಗಳೂರಿನ ಕಡಬ ಸಂಸ್ಮರಣ ಸಮಿತಿಯ 6ನೇ ವರ್ಷದ ವಾರ್ಷಿಕೋತ್ಸವ ಮತ್ತು ಯಕ್ಷಗಾನದಲ್ಲಿ ಮೆರೆದು ಖ್ಯಾತರಾಗಿ ಅಗಲಿದ ದಿ. ಕಡಬ ನಾರಾಯಣ ಆಚಾರ್ಯ ಮತ್ತು ದಿ. ಕಡಬ ವಿನಯ ಆಚಾರ್ಯ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

 

ಯಕ್ಷಗಾನ ಕಲಾವಿದರು ಕಲಾರಂಗದಲ್ಲಿ ಸುದೀರ್ಘ ಕಾಲ ಬಾಳಿ,ಮಿಂಚಬೇಕಿದ್ದರೆ ಪ್ರತಿಭೆಯೊಂದೇ ಸಾಲದು.
ಕಲಾವಿದರಲ್ಲಿ
ಎಚ್ಚರದ ಜೀವನ ಶಿಸ್ತು ಅಗತ್ಯ. ಶಿಸ್ತಿನ ಬದುಕಿನಿಂದ ಆರೋಗ್ಯ ಸಾಮರ್ಥ್ಯ ಕಾಪಾಡಿಕೊಂಡರೆ ಮಾತ್ರವೇ
ಕಲಾವಿದರಿಗೆ ಸುದೀರ್ಘ ರಂಗದಲ್ಲಿ ತೊಡಗಿಸಿಕೊಳ್ಳಲು
ಸಾಧ್ಯ ಎಂದರು.

ವಿಶ್ವಕರ್ಮರ ಕೊಡುಗೆ ಅಪಾರ
ಯಕ್ಷಗಾನ ಕ್ಷೇತ್ರಕ್ಕೆ ವಿಶ್ವಕರ್ಮ ಸಮಾಜ ಅನೇಕ ಕಲಾವಿದರ ಮೂಲಕ ಅಪಾರಕೊಡುಗೆ ನೀಡಿದೆ.
ಯಾವುದೇ ಮೇಳದಲ್ಲೂ ಕನಿಷ್ಟ ಎರಡು -ಮೂರು ವಿಶ್ವಕರ್ಮರಿದ್ದೇ ಇರುತ್ತಾರೆ. ಅವರಿದ್ದಲ್ಲಿ ತಾಳ, ಶ್ರುತಿ ಪೆಟ್ಟಿಗೆ, ಮದ್ದಳೆಯೂ ಇರುತ್ತದೆ.
ಕಲೆಗೆ ಅವರು ನೀಡಿದ ಕೊಡುಗೆ ದೊಡ್ಡದು. ಅದು ಮಾನನೀಯ ಎಂದು ಟಿ. ಶಾಮ್ ಭಟ್ ಶ್ಲಾಘಿಸಿದರು.

ಎಡನೀರು ಶ್ರೀಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚಚನವಿತ್ತರು.

ಸಮಾರಂಭದಲ್ಲಿ ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯ ದಂಪತಿಯರಿಗೆ
ಕಡಬ ಸಂಸ್ಮರಣಾ ಪ್ರಶಸ್ತಿಯನ್ನು ರಜತ ಪದಕದೊಂದಿಗೆ ನಗು ಸಹಿತ ಸಾಂಪ್ರದಾಯಿಕ ಕ್ರಮದಲ್ಲಿ ಸಲ್ಲಿಸಿ ಗೌರವಿಸಲಾಯಿತು. ಈ ವೇಳೆ ಕಡಬ ಸಂಸ್ಮರಣಾ ಸಮಿತಿ ಪದಾಧಿಕಾರಿಗಳು ಮತ್ತು ಕಡಬ ಕುಟುಂಬದವರು ಉಪಸ್ಥಿತರಿದ್ದರಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾಗವತ ದಿನೇಶ ಅಮ್ಮಣ್ಣಾಯರು ಈ ಪ್ರಶಸ್ತಿಯನ್ನು ಹೆಮ್ಮೆಯಿಂದ ಸ್ವೀಕರಿಸುವುದಲ್ಲ, ಮುಡಿಯುತ್ತೇನೆ ಎಂದರು. ಅಪ್ಪ ನಾರಾಯಣ ಆಚಾರ್ ರ ಗರಡಿಯಲ್ಲಿ ರೂಪುಗೊಂಡ ವಿನಯ ಅತ್ಯಂತ ಎಳೆ ಹರೆಯದಲ್ಲಿ ಅತ್ಯಂತ ಸೃಜನಶೀಲತೆಯಿಂದ ಸಾಧಕ ಮತ್ತು ಶೋಧಕ ಕಲಾವಿದನಾಗಿ
ರೂಪುಗೊಂಡಿದ್ದನು. ಆತ ನನ್ನ ಕಣ್ಣೆದುರೇ ಬೆಳೆದ ಹುಡುಗ. ಆತನನ್ನು ಎಡನೀರು ಮೇಳಕ್ಕೆ ಸೇರಿಸಿದವನೂ ನಾನೇ. ಈಗ ಅಪ್ಪ-ಮಗನ ಸಂಸ್ಮರಣಾ ಪ್ರಶಸ್ತಿ ಎಡನೀರಿನಲ್ಲೇ ನನಗೊಲಿಯುವುದು ವಿಧಿ:ಲಿಖಿತವೋ ಏನೋ ಎಂದರು. ಕಡಬದ್ವಯರ ಜತೆಗಿನ ಒಡನಾಟ ಸ್ಮರಿಸಿ ಭಾವುಕರಾದರು.

ತಾಳಮದ್ದಳೆ ಕ್ಷೇತ್ರದ ಖ್ಯಾತ ಅರ್ಥದಾರಿ, ಕಟೀಲು ಮೇಳದ ಪ್ರಬಂಧಕ ಸುಣ್ಣಂಬಳ ವಿಶ್ವೇಶ್ವರ ಭಟ್ ಅಭಿನಂದನಾ ಭಾಷಣ ಮಾಡಿ ಯಕ್ಷಗಾನ ರಂಗದಲ್ಲೇ ಅತ್ಯಪೂರ್ವ ನಿಷ್ಠೆ, ಶಿಸ್ತು ಮತ್ತು ರಂಗದಲ್ಲಿ ಭಾವತರಂಗವನ್ನೆಬ್ಬಿಸುವ ಅಪರೂಪದ ಭಾಗವತ ದಿನೇಶ ಅಮ್ಮಣ್ಣಾಯರು. ಅವರುದಿಸಿ ಬರುವ ಕಾಲಕ್ಕೆ ಪ್ರಬಲ ಪ್ರತಿಸ್ಫರ್ಧಿಗಳಿದ್ದರು. ಆದರೆ ತನ್ನ ಪದಯಾನವನ್ನು ಭಿನ್ನವಾಗಿ ಸೃಜಿಸಿ, ಅದಕ್ಕೆ ನ್ಯಾಯ ಸಲ್ಲಿಸಿದ ಅಪರೂಪದ ಸಾಧಕ ದಿನೇಶ ಅಮ್ಮಣ್ಣಾಯ ಎಂದರು. ಕರ್ನಾಟಕ ರಾಜ್ಯಯೋತ್ಸವ ಪ್ರಶಸ್ತಿ ವಿಜೇತ, ಹಿರಿಯ ಕಲಾವಿದ ಎಂ. ಕೆ. ರಮೇಶ ಆಚಾರ್ಯ ಕಡಬದ್ವಯರ ಸಂಸ್ಮರಣ ಭಾಷಣ ಮಾಡಿದರು.

ಮಂಗಳೂರು ಕಡಬ ಸಂಸ್ಮರಣ ಸಮಿತಿ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಅಧ್ಯಕ್ಷತೆ ವಹಿಸಿದರು. ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ, ವಕೀಲ ಶ್ರೀಧರ ಶೆಟ್ಟಿ ಪುಳಿಂಚ, ಮುಲ್ಕಿ ಮಯೂರಿ ಫೌಂಢೇಷನ್ ಅಧ್ಯಕ್ಷ ಜಯ ಕೆ ಶೆಟ್ಟಿ, ಆರ್. ಎಸ್. ಎಸ್. ಹಿರಿಯ ಕಾರ್ಯಕರ್ತ ಬಾಲಕೃಷ್ಣ ಪಿ ಭಂಡಾರಿ, ಕಟಪಾಡಿ ಆನೆಗುಂದಿ ಪೀಠದ ಪ್ರಧಾನ ಕಾರ್ಯದರ್ಶಿ ಎಂ. ಬಿ. ಲೋಕೇಶ ಆಚಾರ್ಯ ಅಭ್ಯಾಗತರಾಗಿ ಪಾಲ್ಗೊಂಡರು. ಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿದ್ದರು.
ಸಂಸ್ಮರಣಾ ಸಮಿತಿ ಕಾರ್ಯದರ್ಶಿ ಗಿರೀಶ್ ಕಾವೂರು ಸ್ವಾಗತಿಸಿದರು. ಸಮಿತಿ ಗೌರವಾಧ್ಯಕ್ಷ ಜಿ. ಟಿ. ಆಚಾರ್ಯ ಮುಂಬೈ ಪ್ರಾಸ್ತಾವಿಕ ಮಾತನಾಡಿದರು. ಜತೆ ಕಾರ್ಯದರ್ಶಿ ಜಗದೀಶ್ ಬೇಲಾಡಿ ವಂದಿಸಿದರು. ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಸುರಭಿಜಾತೆ ಆಖ್ಯಾನದ ತಾಳಮದ್ದಳೆ ನಡೆಯಿತು. ಬಳಿಕ ಪ್ರಸಿದ್ಧ ಕಲಾವಿದರಿಂದ ಶ್ರೀರಾಮ ದರ್ಶನ ಯಕ್ಷಗಾನ ಬಯಲಾಟ ನಡೆಯಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00