ಖ್ಯಾತ ಭಾಗವತ ದಿನೇಶ ಅಮ್ಮಣ್ಣಾಯರಿಗೆ ಕಡಬ ಪ್ರಶಸ್ತಿ :ಆ. 31ರಂದು ಎಡನೀರು ಮಠದಲ್ಲಿ ಕಡಬ ಸಂಸ್ಮರಣೆ -ಬಯಲಾಟ

by Narayan Chambaltimar

ತೆಂಕುತಿಟ್ಟು ಯಕ್ಷಗಾನದಲ್ಲಿ ಖ್ಯಾತಿವೆತ್ತ ಕಲಾವಿದರಾಗಿ ಮೆರೆದ ಕಡಬ ನಾರಾಯಣ ಅಚಾರ್ಯ ಹಾಗೂ ಅವರ ಪುತ್ರ ಕಡಬ ವಿನಯ ಆಚಾರ್ಯ ರ ಸಂಸ್ಮರಣೆಯೊಂದಿಗೆ ನೀಡುವ ಕಡಬ ಪ್ರಶಸ್ತಿ ಗೆ ಈ ಸಾಲಿನಲ್ಲಿ ಖ್ಯಾತ ಭಾಗವತ ದಿನೇಶ ಅಮ್ಮಣ್ಣಾಯರು ಆಯ್ಕೊಗೊಂಡಿದ್ದು, ಆ. 31ರಂದು ಎಡನೀರು ಮಠದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

ತೆಂಕುತಿಟ್ಟು ಯಕ್ಷಗಾನದ ಚೆಂಡೆ -ಮದ್ದಳೆ ನುಡಿತಕ್ಕೆ ನಾದಾತ್ಮಕ ಕಲಾಸೌಂದರ್ಯವನ್ನಿತ್ತು ಭಾಗವತಿಕೆ ಕಳೆಗಟ್ಟಲು ಪೋಷಕ ನುಡಿತ ಮೇಳೈಸಿದ ಕಡಬ ನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ವಿನಯ ಆಚಾರ್ಯ ಅವರ ಹೆಸರನ್ನು ಸ್ಮರಣೀಯವಾಗಿಸಲು ವರ್ಷಂಪ್ರತಿ ಸಂಸ್ಮರಣೆಯೊಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ.


ತೆಂಕುತಿಟ್ಟು ಯಕ್ಷಗಾನದಲ್ಲಿ ಒಂದು ಕಾಲಕ್ಕೆ ಪದ್ಯಾಣ -ಕಡೆ ನಾರಾಯಣ ಆಚಾರ್ಯ ಜೋಡಿ ಮೆರೆದರೆ ಮತ್ತೊಂದು ಕಾಲಕ್ಕೆ ಅಮ್ಮಣ್ಣಾಯ -ಕಡಬ ವಿನಯಾಚಾರ್ಯ ಜೋಡಿ ರಂಗಸ್ಥಳದಲ್ಲಿ ಮೆರೆದಿತ್ತು.
ಅನನ್ಯ ಹಿಮ್ಮೇಳ ವಾದಕರಾಗಿ ಅಗಲಿದ ಕಡಬ ನಾರಾಯಣ ಆಚಾರ್ಯರಂತೆಯೇ ಅವರ ಸುಪುತ್ರ ಕಡಬ ವಿನಯ ಆಚಾರ್ಯ ಕೂಡಾ ಪ್ರಗಲ್ಭ ಹಿಮ್ಮೇಳ ವಾದಕರಾಗಿ ಎಳೆ ಹರೆಯದಲ್ಲೇ ಮಿಂಚಿ ಅಕಾಲದಲ್ಲಿ ಆಗಲಿದ್ದರು.ಇವರ ಸ್ಮೃತಿಯೊಂದಿಗೆ ಕಡಬ ಸಂಸ್ಮರಣಾ ಸಮಿತಿ ನೇತೆತ್ವದಲ್ಲಿ ವರ್ಷಂಪ್ರತಿ ಸಂಸ್ಮರಣೆ-ಬಯಲಾಟ ಸಹಿಚ ಪ್ರಶಸ್ತಿ ಪ್ರದಾನ ನಡೆಯುತ್ತಿದೆ.

ಈ ಬಾರಿ ತೆಂಕುತಿಟ್ಟಿನ ಹಿರಿಯ ಭಾಗವತ , ರಸರಾಗ ಚಕ್ರವರ್ತಿ ಬಿರುದಾಂಕಿತ ದಿನೇಶ ಅಮ್ಮಣ್ಣಾಯರಿಗೆ ಗೌರವನಿಧಿ ಸಹಿತ 2025ನೇಸಾಲಿನ ಕಡಬ
ಪ್ರಶಸ್ತಿ ಸಲ್ಲಲಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಆ.31ರಂದು ಅಪರಾಹ್ನ2 ರಿಂದ ಎಡನೀರು ಮಠದಲ್ಲಿ ಜರಗಲಿದೆ. ಎಡನೀರು ಮಠಾಧೀಶ ಶ್ರೀಸಚ್ಛಿದಾನಂದ ಭಾರತಿ ಶ್ರೀಪಾದರು ಆಶೀರ್ವಚನ ನೀಡುವರು.
ಕರ್ನಾಟಕದ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಂ ಭಟ್ ಉದ್ಘಾಟಿಸುವರು. ಹಿರಿಯ ಕಲಾವಿದ ಎಂ. ಕೆ. ರಮೇಶಾಚಾರ್ಯ ಕಡಬ ಸಂಸ್ಮರಣಾ ಭಾಷಣ ಮಾಡುವರು. ಹಿರಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅಭಿನಂದನಾ ಭಾಷಣ ಮಾಡುವರು. ಬಳಿಕ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ಜರಗಲಿದೆ. ಈ ಕುರಿತು ವಿವರಿಸಿದ ಪತ್ರಿಕಾಗೋಷ್ಟಿಯಲ್ಲಿ ಕಡಬ ಸಂಸ್ಮರಣಾ ಸಮಿತಿ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ, ಕಾರ್ಯದರ್ಶಿ ಗಿರೀಶ್ ಕಾವೂರು, ಗೌರವಾಧ್ಯಕ್ಷ ಜಿ. ಟಿ. ಆಚಾರ್ಯ ಮುಂಬೈ, ಕೋಶಾಧಿಕಾರಿ ಭಾಸ್ಕರ ಆಚಾರ್ಯ ಅಂಡಿಂಜೆ, ಕಲಾವಿದ ಲೋಕೇಶ್ ಕಟೀಲು, ರಾಜಗೋಪಾಲ ಕಡಬ ಉಪಸ್ಥಿತರಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00