ನವದೆಹಲಿ : ನೂತನ ಉಪರಾಷ್ಟ್ರಪತಿ ಆಯ್ಕೆಗೆ ಎನ್. ಡಿ. ಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿ. ಪಿ. ರಾಧಾಕೃಷ್ಣನ್ ಕಣಕ್ಕಿಳಿಯಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸೇರಿದ ಬಿಜೆಪಿ ಪಾರ್ಲಿಮೆಂಟರಿ ಮಂಡಳಿ ಸಭೆಯಲ್ಲಿ ಇವರ ಆಯ್ಕೆ ನಡೆಯಿತು.
ಕೇಂದ್ರ ಸಚಿವ ಜೆ. ಪಿ. ನಡ್ಡಾ ಎನ್. ಡಿ. ಎ ಅಭ್ಯರ್ಥಿ ಯನ್ನು ಘೋಷಿಸಿ ಉಪರಾಷ್ಟ್ರಪತಿ ಆಯ್ಕೆ ಅವಿರೋಧವಾಗಿ ನಡೆಯಬೇಕೆಂಬದು ಆಗ್ರಹವಾಗಿದ್ದು ಈ ಸಂಬಂಧ ವಿಪಕ್ಷಗಳ ಜತೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರ ನಾಯಕತ್ವದಡಿ ಕೆಲಸ ಮಾಡಿದ ಅನುಭವಿಯಾದ ರಾಧಾಕೃಷ್ಣನ್ ಅವರು ಕೊಯಮತ್ತೂರಿನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
1957ರ ಅಕ್ಟೋಬರ್ 20ರಂದು ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದ್ದ ರಾಧಾಕೃಷ್ಣನ್ 1970ರ ದಶಕದಲ್ಲಿ ಆರ್. ಎಸ್. ಎಸ್ ಸೇರಿದ್ದರು. 2023ರಲ್ಲಿ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು.
ಜಗದೀಪ್ ಧನ್ಕರ್ ಅವರು ದಿಢೀರ್ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಸ್ಥಾನ ತೆರವಾಗಿದೆ. ಸೆಪ್ಟೆಂಬರ್ 9ರಂದು ನೂತನ ಉಪರಾಷ್ಟ್ರಪತಿ ಚುನಾವಣೆನಿಗದಿಯಾಗಿದೆ.









