ಮಂಜೇಶ್ವರದಲ್ಲಿ ನಾಡೋಜ ಕವಿ ಕಯ್ಯಾರ ಕಿಞ್ಞಣ್ಣ ರೈ ಸಂಸ್ಮರಣೆ ಮತ್ತು ಕೃತಿ ಬಿಡುಗಡೆ

by Narayan Chambaltimar

ಮಂಜೇಶ್ವರ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಾಡೋಜ ,ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಸಂಸ್ಮರಣೆ ಮತ್ತು ಕೃತಿಬಿಡುಗಡೆ ಕಾರ್ಯಕ್ರಮವು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಮೊಹಮದ್ ಅಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆ ತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಶ್ರೀಧರ. ಎನ್ ಸಂಸ್ಮರಣಾ ಭಾಷಣ ಮಾಡಿದರು.

ತಮ್ಮ ಕೊನೆ ಉಸಿರಿನ ತನಕ ಕಾಸರಗೋಡು ಕರ್ನಾಟಕವನ್ನು ಸೇರಬೇಕು ಎಂದು ಹಂಬಲಿಸಿದ, ಅದಕ್ಕಾಗಿ ನಿರಂತರ ಹೋರಾಟವನ್ನು ಮಾಡಿದ ಗಡಿನಾಡ ಕಿಡಿ ಕಯ್ಯಾರರದು ಧೀಮಂತ ವ್ಯಕ್ತಿತ್ವ. ರಾಷ್ಟ್ರೀಯತೆ ,ಆದರ್ಶ ಜೀವನ, ಮಾನವ ಪ್ರೀತಿ ,ದುಡಿಮೆಯ ಮಹತ್ವ ಅವರ ಸಾಹಿತ್ಯದ ಜೀವಾಳ. ವಿದ್ಯಾರ್ಥಿಗಳಿಗೆ ಮುಂದಿನ ತಲೆಮಾರಿಗೆ ಕಯ್ಯಾರರ ಸಾಹಿತ್ಯ, ಬದುಕಿನ ಆದರ್ಶ ದಾರಿದೀಪವಾಗಿದೆ ಎಂದು ಡಾ. ಶ್ರೀಧರ. ಎನ್ ಹೇಳಿದರು.ಕಯ್ಯಾರರ ಪುತ್ರ,ನಿವೃತ್ತ ಪ್ರಾಧ್ಯಾಪಕ ಪ್ರಸನ್ನ ರೈ.ಕೆ ,ಕಯ್ಯಾರರ ಅಳಿಯ ಭುವನ ಪ್ರಸಾದ್ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಕಛೇರಿ ಅಧೀಕ್ಷಕ ದಿನೇಶ. ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದೀಕ್ಷಿತ ಮೀಯಪದವು ಅವರ ಲಘು ಬರಹಗಳ ಕೃತಿ
‘ಧ್ವನಿ’ಯನ್ನು ಕ.ಸಾ.ಪ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಬಿಡುಗಡೆಗೊಳಿಸಿದರು. ಮೀಯಪದವು ವಿದ್ಯಾವರ್ಧಕ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್.ಟಿ ಕೃತಿ ಪರಿಚಯ ಮಾಡಿದರು.

ಕಾರ್ಯಕ್ರಮದಂಗವಾಗಿ ಕಯ್ಯಾರರ ಬದುಕು ಬರಹಗಳ ಕುರಿತು ವಿಚಾರಗೋಷ್ಠಿ ನಡೆಯಿತು.ವಿದ್ಯಾರ್ಥಿಗಳಾದ ಸರ್ವಾಣಿ ಬಿ.ಕೆ ,ಕಿಶನ್ ರಾಜ್,ಸೈಫನ್ ಸಾಬ್, ಅನುಪ್ರಭ ,ಶಿವಾನಿ, ತನ್ವಿ ಪ್ರಬಂಧ ಮಂಡಿಸಿದರು. ವಿದ್ಯಾ ಲಕ್ಷ್ಮಿ, ನಂದಿನಿ, ಲಾವಣ್ಯ ,ಪೂಜಾ, ಶಿವಾನಿ,ತನುಶ್ರೀ,ತೇಜಾಕ್ಷಿ, ಅನೂಶ ಕಯ್ಯಾರರ ಕಾವ್ಯಗಾಯನ ನಡೆಸಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶಿವಶಂಕರ. ಪಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸುಜೀಶ್.ಎಸ್ ವಂದಿಸಿದರು.
ಸಹಾಯಕ ಪ್ರಾಧ್ಯಾಪಕಿ ಜಯಂತಿ.ಕೆ ಕಾರ್ಯಕ್ರಮ ನಿರೂಪಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00