ಕಾಸರಗೋಡು: ಅತ್ಯುತ್ತರ ಕೇರಳದ ದೈವಸ್ಥಾನಗಳಲ್ಲಿ ಆಚಾರನುಷ್ಠಾನಗಳನ್ನು ನಿರ್ವಹಿಸುವ ಸ್ಥಾನಿಕರ(ಅಚ್ಚನ್ ಮಾರ್) ಸಮಸ್ಯೆಗಳುಗೌರವಯುತವಾದುದು. ಅದನ್ನು ಗಂಭೀರವಾಗಿ ಪರಿಗಣಿಸಿ ಅವರ ಸೇವಾ ಸೌಲಭ್ಯ ಪರಿಷ್ಕರಿಸುವುದಾಗಿ ಕೇರಳ ಸಹಕಾರಿ – ದೇವಸ್ವಂ ಸಚಿವ ವಿ. ವಾಸವನ್ ಭರವಸೆ ಇತ್ತರು.
ಉತ್ತರ ಮಲಬಾರ್ ತೀಯ ಸಮುದಾಯ ಕ್ಷೇತ್ರ ಸಂರಕ್ಷಣ ಸಮಿತಿ ನೇತೃತ್ವದಲ್ಲಿ ಪೆರಿಯ ಎಸ್. ಎನ್. ಕಾಲೇಜೀನ ಸಭಾಂಗಣದಲ್ಲಿ ಜರುಗಿದ ಆಚಾರ ಸಂಗಮ ಉದ್ಘಾಟಿಸಿ ಸಚಿವರು ಮಾತನಾಡಿದರು.

ಕ್ಷೇತ್ರ ಆಚಾರ ಸ್ಥಾನಿಕರ ಹಾಗೂ ದೇವಸ್ವಂ ಮಂಡಳಿ ನೌಕರರ ವೇತನ ಮತ್ತು ಇತರ ಸೌಲಭ್ಯ ಹೆಚ್ಚಳಕ್ಕಾಗಿ ರಾಜ್ಯ ಸರಕಾರ ಮುಂಗಡ ಪತ್ರದಲ್ಲಿ 5.14 ಕೋಟಿ ರೂ ಮೀಸಲಿಟ್ಟಿದೆ. ವೇತನ ಪರಿಷ್ಕರಣೆಯಲ್ಲಿ ಪ್ರಾಯೋಗಿಕ ಬದಲಾವಣೆ ತರಲು ಸರಕಾರ ಉದ್ದೇಶಿಸಿದೆ. ಕೇರಳದ ಐದೂ ದೇವಸ್ವಂ ಮಂಡಳಿ ಅಧ್ಯಕ್ಷರುಗಳ ಸಭೆ ಕರೆದು ವೇತನ ಪರಿಷ್ಕರಣೆ ಕುರಿತು ಕರಡು ಯೋಜನೆ ರೂಪಿಸಲಾಗುವುದೆಂದು ಸಚಿವರು ಹೇಳಿದರು. ಕಾನಾನು ಇಲಾಖೆಯ ಅನುಮತಿ ಸಿಕ್ಕಿದೊಡನೆಯೇ ಮಲಬಾರ್ ದೇವಸ್ವಂ ಮಂಡಳಿಯ ಮಸೂದೆಯನ್ನು ಸರಕಾರದ ಮುಂದಿರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಉತ್ತರ ಮಲಬಾರ್ ತೀಯ ಸಮುದಾಯ ಸಂರಕ್ಷಣ ಸಮೀತಿ ಅಧ್ಯಕ್ಷ ರಾಜನ್ ಪೆರಿಯ ಅಧ್ಯಕ್ಷತೆ ವಹಿಸಿದರು.
ಶಾಸಕರುಗಳಾದ ಸಿ. ಎಚ್, ಕುಂಞಂಬು, ಎಂ. ರಾಜಗೋಪಾಲನ್ ಅತಿಥಿಗಳಾಗಿ ಪಾಲ್ಗೊಂಡರು.
ಸಮಾರಂಭದಲ್ಲಿ ತೀಯ ಸಮುದಾಯ ಕ್ಷೇತ್ರ ಸಂರಕ್ಷಣ ಸಮಿತಿ ವತಿಯಿಂದ ಕ್ಷೇತ್ರ ಸ್ಥಾನಿಕರುಗಳಿಗೆ ಚಿಕಿತ್ಸಾ ಸಹಾಯ ಮತ್ತು ಓಣಂ ಉಡುಪುಗಳನ್ನು ವಿತರಿಸಲಾಯಿತು. ಮಲಬಾರ್ ದೇವಸ್ವಂ ಅಧ್ಯಕ್ಷ ಒ. ಕೆ. ವಾಸು, ಪುಲ್ಲೂರು ಪೆರಿಯ ಗ್ರಾ. ಪಂ
ಅಧ್ಯಕ್ಷ ಸಿ. ಕೆ. ಅರವಿಂದಾಕ್ಷನ್, ಮಾಜಿ ಹೊಸದುರ್ಗ ಕೋಟಯಂ ಜಿಲ್ಲಾಧಿಕಾರಿ ಪಿ. ಕೆ. ಜಯಶ್ರೀ ಮೊದಲಾದವರು ಪಾಲ್ಗೊಂಡರು. ನಾರಾಯಣನ್ ಚೂರಿಕ್ಕಾಡ್ ಸ್ವಾಗತಿಸಿದರು. ಕೆ. ವಿ. ಶಶಿಧರನ್ ವಂದಿಸಿದರು.








