ಶಬರಿಮಲೆ: ಪಂಪಾ ತೀರದಲ್ಲಿ ಮೊದಲಬಾರಿಗೆ ಜಾಗತಿಕ ಅಯ್ಯಪ್ಪ ಭಕ್ತರ ಮಹಾಸಂಗಮಕ್ಕೆ ಸಿದ್ಧತೆ

ವಿವಿಧ ದೇಶ‌, ರಾಜ್ಯಗಳ ಆಹ್ವಾನಿತ ಭಕ್ತರಿಗೆ ವಿಶೇಷ ದರ್ಶನ ಸೌಲಭ್ಯ ಒದಗಿಸುವ ಭರವಸೆ

by Narayan Chambaltimar

ತಿರುವನಂತಪುರ: ಶಬರಮಲೆ ಕ್ಷೇತ್ರವನ್ನು ಜಾಗತಿಕ ತೀರ್ಥಾಟನಾ ಕ್ಷೇತ್ರವನ್ನಾಗಿಸಿ ಉನ್ನತೀಕರಿಸಿ ಬಿಂಬಿಸುವ ಸಂಕಲ್ಪದೊಂದಿಗೆ ಜಾಗತಿಕ ಅಯ್ಯಪ್ಪ ಭಕ್ತರ ಮಹಾ ಸಂಗಮ ಏರ್ಪಡಿಸಲು ಕೇರಳ ಸರಕಾರವೇ ಮುಂದಾಗಿದೆ. ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ ಸಂಯುಕ್ತವಾಗಿ ಜಾಗತಿಕ ಮಟ್ಟದ ಅಯ್ಯಪ್ಪ ಭಕ್ತರ ಸಂಗಮಕ್ಕೆ ಮುಂದಾಗಿದೆ. ಮುಂಬರುವ ಸೆಪ್ಟೆಂಬರ್ ಮೂರನೇವಾರದಲ್ಲಿ ಪಂಪಾ ತೀರದಲ್ಲಿ ಐತಿಹಾಸಿಕವಾದ ಮೊದಲ ಅಯ್ಯಪ್ಪ ಭಕ್ತ ಮಹಾ ಸಂಗಮ ನಡೆಯಲಿದೆ.

ತ ತ್ವಮಸಿ’ ಎಂಬ ವಿಶ್ವ ಮಾನವತೆಯ ಮಹಾಸಂದೇಶದೊಂದಿಗೆ ವಿಶ್ವದಾದ್ಯಂತ ಹರಡಿರುವ ಅಯ್ಯಪ್ಪ ಭಕ್ತ ಸಮೂಹವನ್ನು
ಒಂದೆಡೆ ಒಟ್ಟು ಸೇರಿಸಿ ಅಯ್ಯಪ್ಪ ಸಂದೇಶವನ್ನು ವಿಶ್ವಕ್ಕೆ ಸಾರುವ ಧ್ಯೇಯದಿಂದ ಐತಿಹಾಸಿಕ ಮಹತ್ವದ ಸಮಾವೇಶ ಆಯೋಜಿಸಲಾಗಿದೆ ಎಂದು ದೇವಸ್ವಂ ಮಂಡಳಿ ಸಚಿವ ಎನ್. ವಾಸವನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಿರುವಾಂಕೂರು ದೇವಸ್ವಂ ಮಂಡಳಿಯ 75ನೇ ವಾರ್ಷಿಕದಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.

ವಿಶ್ವದ ನಾನಾ ರಾಜ್ಯಗಳಲ್ಲಿ ಹರಡಿರುವ ಅಯ್ಯಪ್ಪ ಭಕ್ತರುಗಳ ಪ್ರಾತಿನಿಧಿಕವಾಗಿ ಸುಮಾರು 5ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇರಿಸಲಾಗಿದೆ. ಒಂದು ದಿನ ಪರ್ಯಂತ ನಡೆಯುವ ಸಮಾವೇಶದಲ್ಲಿ ಅಯ್ಯಪ್ಪ ಚಿಂತನ ಮತ್ತು ದಾರ್ಶನಿಕತೆಯ ವಿವಿಧ ಸೆಮಿನಾರ್ ನಡೆಯಲಿದೆ.ಸೆ. 16ರಿಂದ 221ರನಡುವಣ ಒಂದು ದಿನ ಕಾರ್ಯಕ್ರಮ ನಡೆಯಲಿದ್ದು, ದಿನಾಂಕ ನಿರ್ಣಯವಾಗಿ ಶೀಘ್ರ ಘೋಷಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಳ್ಳುವ ಆಹ್ವಾನಿತ ಭಕ್ತರಿಗೆ ಮುಂಚಿತ ದಿನವೇ ಪಂಪಾ ತೀರದಿಂದ ಶಬರಿಮಲೆ ಸನ್ನಿಧಾನಕ್ಕೆ ತೆರಳಿ ದರ್ಶನ ನಡೆಸುವ ಸೌಕರ್ಯಗಳನ್ನೂ ಒದಗಿಸಲಾಗುವುದು. ಇದು ಪ್ರಾಯೋಗಿಕ ರೀತಿಯಲ್ಲಿ ನಡೆಯಲಿದ್ದು, ಕಾರ್ಯಕ್ರಮ ಯಶಸ್ವಿಯಾದರೆ ವರ್ಷಂಪ್ರತಿ ನಡೆಸುವ ಚಿಂತನೆಗಳೂ ಇವೆಯೆಂದು ಸಚಿವರು ಸೂಚನೆ ಇತ್ತಿದ್ದಾರೆ. ಕಳೆದ ಮಂಡಲ-ಮಕರ ದೀಪೋತ್ಸವ ಕಾಲಕ್ಕೆ ಸುಮಾರು 53ಲಕ್ಷಕ್ಕೂ ಅಧಿಕ ಅಯ್ಯಪ್ಪ ಭಕ್ತರು ಶಬರಿಮಲೆ ದರ್ಶನ ಮಾಡಿದ್ದಾರೆ. ಯಾರಿಗೂ ಯಾವುದೇ ಸಮಸ್ಯೆಗಳ ದೂರುಗಳಿಲ್ಲದೇ ದರ್ಶನ ಸೌಭಾಗ್ಯ ಒದಗಿಸಲು ಸಾಧ್ಯವಾಗಿದೆ. ಈ ಅನುಭವಗಳ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಭಕ್ತರಿಗೆ ಇನ್ನಷ್ಟು ಸರಳವಾದ , ಉತ್ತಮ ಸೌಕರ್ಯಗಳನ್ನು ಒದಗಿಸಲಾಗುವುದೆಂದು ಸಚಿವರು ಹೇಳಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00