ವಾಟ್ಸಪ್ ಸ್ಟೇಟಸ್ ಗಳು ನಮ್ಮ ಸ್ಟೇಟಸ್ ತೋರಿಸುತ್ತವೆಯಾ? ಸ್ಟೇಟಸ್ ವಿಷ್ಯವೂ ಸ್ಟೇಟಸ್ಸೇ ಹೌದು….

by Narayan Chambaltimar

ವಾಟ್ಸಪ್ ಸ್ಟೇಟಸ್ ಗಳು ನಮ್ಮ ಸ್ಟೇಟಸ್ ತೋರಿಸುತ್ತವೆಯಾ?
ಸ್ಟೇಟಸ್ ವಿಷ್ಯವೂ ಸ್ಟೇಟಸ್ಸೇ ಹೌದು….

✍️ ಈ ವಾರ – ರಜನಿ ಭಟ್ ಬರಹ
—————————–

ರಾತ್ರೆ ಮಲಗಲು ಹೋಗುವ ಮೊದಲು ನಾನು ಸ್ಟೇಟಸ್ ನೋಡುವುದು ಒಂದು ರೂಢಿ  ಮಾಡಿರುವೆ…ಮಾಡಿದ್ದಲ್ಲ ಆಗೋಗಿದೆ ಅನ್ನಬಹುದು. ಈ ಮೊಬೈಲೇ ಹಾಗೆ ಅಂಗೈಗೆ ಬಂದರೆ ಪ್ರಪಂಚವೇ ಮುಳುಗಿದರು ಗೊತ್ತಾಗದಂತೆ…ನಮ್ಮನ್ನು ಬಂಧಿಸಿ ಬಿಡುತ್ತದೆ. ಕೈಯೊಳಗೆ ಇದು ಇದ್ದರೆ ಹಾಲು ಉಕ್ಕಿ ಹೊಳೆಯಾಗಿ ಹರಿದರೂ ಹಾಲು ತಳ ಹಿಡಿದು ಮೂಗಿಗೆ ವಾಸನೆ ಬಡಿದು ಯಾರದೋ ಮನೆಲಿ ಪಾತ್ರೆ ತಳ ಹಿಡಿದು ವಾಸನೆ ಬರುತ್ತಿದೆ ಎಂದು ತಿಳ್ಕೊಳ್ಳೊ ಮಟ್ಟಿಗೆ ನಮ್ಮನ್ನು ಹೋಗಲು ಬಿಡುವುದಿಲ್ಲ. ತಲೆ ತಗ್ಗಿಸಿ ಮೊದಲಿನ ಕಾಲದ ಮದುಮಗಳಂತೆ ಎಷ್ಟು ಹೊತ್ತು ಬೇಕಾದರು ಕೂರಿಸಿಬಿಡುವ ಚಾಕಚಕ್ಯತೆ ಹೊಂದಿರುವ ಧೀರ ಯಾ ಧೀರೆ.

ಮಕ್ಕಳು ಮೊಬೈಲ್ ಹಿಡಿಯಲು ಹಿರಿಯರೇ ಕಾರಣ. ಆದ್ದರಿಂದ ಮಕ್ಕಳು ಇರುವಾಗ ನಾವು ಮೊಬೈಲ್ ನೋಡಿದರೆ ತಾನೇ ಅವರು ನೋಡುವುದು! ಆದರೆ ಮಕ್ಕಳು ಶಾಲೆಗೆ ಹೊರಟ ಕೂಡಲೇ ನಮ್ಮ ಕೈಗಳು ಮನೆ ಕೆಲಸ ಬಿಟ್ಟು ಮೊಬೈಲ್ ಹಿಡಿಯುವುದು. ಕೆಲಸಗಳು ಇರುವಂತದ್ದೆ, ಆದರೆ ಮೊಬೈಲ್ ಹಿಡಿಯಲು ಸ್ವಲ್ಪ ಸಮಯ ಈಗಲೇ ಸಿಗುವುದು ಎಂದು ಕುಳಿತರೇ ಘಂಟೆ ಓಡಿದೆ ಎಂದರಿವಿಗೆ ಬರುವುದು ನಾವು ಇಹಕ್ಕೆ ಬಂದಾಗಲೇ‌..ಅರ್ಥಾತ್ ಮೊಬೈಲ್ ನಿಂದ ಹೊರಗೆ ಬಂದಾಗಲೇ.

ಮೊಬೈಲ್ ಹುಚ್ಚು ಹೇಗೂ ಇದೆ, ವಾಟ್ಸ್ ಅಪ್ ಹುಚ್ಚು ತುಸು ಹೆಚ್ಚೇ..ಹಾಗಿರುವಾಗ ಈ ಸ್ಟೇಟಸ್ ಗಳ  ಹುಚ್ಚು ಇರದೇ? ಊರಿಗೆ ಬಂದವಳು ನೀರಿಗೆ ಬಾರದಿರುವಳೇ ಎಂಬಂತೆ….ವಾಟ್ಸಪ್ ಇರುವಾಗ ಸ್ಟೇಟಸ್ ನೋಡದಿರುವಳೇ…ಎಂಬುದು ಶುದ್ಧ ಸತ್ಯ.

ಇನ್ನು ಸ್ಟೇಟಸ್ ವಿಚಾರ ಆರಂಭವಾದರೆ ನೋಡುವ ಸ್ಡೇಟಸ್ ಗಮ್ಮತ್ತೇ ಇದೆ. ಕೆಲವರು ವೈಯಕ್ತಿಕವಾಗಿ ಸ್ಟೇಟಸ್ ಹಾಕಿದರೆ ಇನ್ನು ಕೆಲವರು ಶುಭೋದಯದ ಜತೆ ಸ್ಟೇಟಸ್ ಹಾಕುತ್ತಾರೆ. ಮತ್ತೆ ಕೆಲವರು ತಮ್ಮ ಪಯಣದ ಬಗ್ಗೆ ಹಾಕಿದರೆ ಇನ್ನು ಕೆಲವರು ತಮ್ಮ ತಮ್ಮ ಸಾಧನೆಗಳನ್ನು ಹಾಕುತ್ತಾರೆ. ಇನ್ನು ಕೆಲವರು ಸ್ವಲ್ಪ ಹೆಜ್ಜೆ ಮುಂದೆ ಹೋಗಿ ಖಾಸಗೀತನವನ್ನು ಹೊರಪ್ರಪಂಚಕ್ಕೆ ತಿಳಿಯ ಬಯಸುತ್ತಾರೆ. ಇದು ಸ್ಟೇಟಸ್ ಹಾಕುವವರ ಕಥೆಯಾದರೆ ನೋಡುವವರ ಕಥೆಯೂ ಬೇರೆ ಇದೆ!

ಸ್ಟೇಟಸ್ ನೋಡುವವರ ಪೈಕಿಯಲ್ಲಿ ಒಬ್ಬರು ಹಾಕಿದ ಕೂಡಲೇ ನೋಡಲು ಕಾಯುವವರು ಸಹ ಇದ್ದಾರೆ. ಕೆಲವರು ಹಾಕಿದ ಸ್ಟೇಟಸ್ ಗೆ ಹಾರ್ಟ್ ಚಿಹ್ನೆ ಸೂಚಿಸುವ ಮೂಲಕ ತಮ್ಮ ಪ್ರೀತಿ ತೋರಿಸುತ್ತಾರೆ. ಇನ್ನು ಕೆಲವರು ಕಮೆಂಟ್ ಹಾಕಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ತಮಗೂ ಅದಕ್ಕೂ ಸಂಬಂಧವೇ ಇರದ್ದು ಎಂದು ಕೆಲವರು ಮೂಕಪ್ರೇಕ್ಷಕರಾಗಿ ನೋಡಿ ಹೋಗುತ್ತಾರೆ. ಇನ್ನು ಕೆಲವರು ಈ ಮೌನಪ್ರೇಕ್ಷಕರಲ್ಲಿದ್ದುಕೊಂಡು ಈ ಸ್ಟೇಟಸ್ ನ ಕುರಿತು ಹಿಂದಿನಿಂದ ಭಯಂಕದ ಡಿಸ್ಕಷನ್ ನಡೆಸಿ ತಮ್ಮ ಬೇನೆ ಬೇಜಾರಗಳನ್ನು ಇನ್ನೊಬ್ಬರ ಸ್ಟೇಟಸ್ ನ ಡಿಸ್ಕಷನ್ ಲ್ಲಿ ಮರೆತುಬಿಡುತ್ತಾರೆ.

ನಾನು ಸ್ಟೇಟಸ್  ಹಾಕುತ್ತೇನೆ ಹೌದು, ಆದರೆ ಅದರಿಂದ ಹೆಚ್ಚು ಉಳಿದವರ ನೋಡುತ್ತೇನೆ. ಕೆಲವರ ಸ್ಟೇಟಸ್ ಅಂತೂ ಹಾಸ್ಯಮಯವಾಗಿರುತ್ತದೆ. ಇನ್ನು ಕೆಲವರದ್ದು ಫಾರ್ವರ್ಡೆಡ್ ಇದ್ದರೂ ಮತ್ತೆ ಮತ್ತೆ ನೋಡಬೇಕೆನಿಸುವಂಥದ್ದು. ಇನ್ನು ಕೆಲವರದು ಒಮ್ಮೆ ನೋಡಿ ಓನ್ಲಿ ಒನ್ ಟೈಮ್ ಅಂತ ಸಾಕಾಗಿ ಹೋಗುವಂಥದ್ದು.. ಮತ್ತೆ ಕೆಲವರದು ರಾಶಿ ರಾಶಿ ಒಮ್ಮೆಗೆ ಹಾಕಿ ನೋಡುವವರು ನೋಡಿ ಇಲ್ಲದಿದ್ದರೆ ಕೂರಿ ಅಂತ ಸಾರಿ ಹೇಳುವ ನಡೆ ನಮಗೂ ನೋಡುವವರಿಗೂ ಸಂಬಂಧವೇ ಇಲ್ಲ  ಎನ್ನುವಂತದ್ದು.. ಇನ್ನು ಕೆಲವರದ್ದು ಕದ್ದ ಸ್ಟೇಟಸ್ ತಮ್ಮದೇ ಹೆಸರಲ್ಲಿ… ಹೀಗೆ ಹತ್ತು ಹಲವು. ಒಂದಿಷ್ಟು ಹೊತ್ತು ಸಣ್ಣ ನಗುವಿನಿಂದ ಹಿಡಿದು ಹಲವು ರಸಗಳ ರಸದೌತಣ ಸಣ್ಣ ಮಟ್ಟಿಗೆ ಹೌದೇ ಹೌದು‌.

ಇತ್ತೀಚೆಗೆ ಒಬ್ಬರು ಸ್ಟೇಟಸ್ ಹಾಕುತ್ತಿದ್ದುದು ನಾನು ನೋಡುತ್ತಿದ್ದೆ ಹಾಗೆ ಅವರು ಹಾಕುವಾಗ ಅದರ ಕ್ಯಾಪ್ಷನ್ ನನಗೆ ಬಹಳ ಇಷ್ಟವಾಗಿಬಿಡುತ್ತಿತ್ತು.
ಕಾಕತಾಳೀಯವೋ ಎಂಬಂತೆ ನಾನು ನೋಡುವ ಸಂದರ್ಭದಲ್ಲಿ ಅವರು ಹಾಕುತ್ತಿದ್ದುದು ಸರಿ ಹೋಗುತ್ತಿತ್ತು. ಆ ಕ್ಯಾಪ್ಷನ್ ಗೆ ನಾನು ಕಾಯುವಂತೆ ಮಾಡುತ್ತಿದ್ದುದು ಸುಳ್ಳಲ್ಲ‌. ಒಂದಿನ ಅವರಲ್ಲಿ ಹೀಗೆ ಮೆಸೇಜ್ ಮಾಡಿ ಹೇಳಿದೆ… ” ನಿಮ್ಮ ಸ್ಟೇಟಸ್ ಮೊದಲುವನಾನೇ ನೋಡುದಾಂತ… ” ಅದಕ್ಕವರು ನಕ್ಕ ಇಮೋಜಿ ಕಳಿಸಿದ್ರು. ಯಾಕೆ ಮೇಡಂ ಅಂದ್ರು. ಅದೇನೋ ಕಾಕತಾಳೀಯ ನಾ ಮೊಬೈಲ್ ಮುಟ್ಟಿದಾಗ ಹೆಚ್ಚಿನ ಸಮಯದಲ್ಲಿ ನಿಮ್ಮ ಸ್ಟೇಟಸ್ ಇರತ್ತೆ ನನಗಂತೂ ನಗುವೇ ಬರತ್ತೆ ಅಂದೆ‌. ಓಹ್ ಹೌದಾ ತ್ಯಾಂಕ್ಸ್ ಅಂದ್ರು‌. ತಗೊಳ್ಳಿ, ಎರಡು ದಿನ ಅವರ ಸ್ಟೇಟಸೇ ಇಲ್ಲ. ಬಹುಶಃ ನನ್ನ ಮ್ಯೂಟ್ ಮಾಡಿರಬೇಕು ಅಂದುಕೊಂಡೆ. ಹೋಗಲಿ ನಮ್ಮ ಆಯುಷ್ಯ ಅಷ್ಟೇ ಅಂದುಕೊಂಡು ಸುಮ್ಮನಿರುವುದು! ಹಾಗೇ ಎಲ್ಲಾದರು ಅವರು ನನ್ನ ಮ್ಯೂಟ್ ಂದ ತೆಗೆದು ಅವರ ಸ್ಟೇಟಸ್ ಕಾಣುವ ಹಾಗೆ ಆದರೆ ಸುಮ್ನೆ ನಾ ನೋಡೋದು ಮೆಸೆಜ್ ಮಾಡೋದು ರಗಾಳೆ ಬೇಡ ಅಂತ ಅವರ ಸ್ಟೇಟಸ್ ನ್ನು ಮ್ಯೂಟ್ ಮಾಡಿರುವೆ… ಹಾಗಂತ ನನ್ನ ಸ್ಟೇಟಸ್ ಧಾರಾಳವಾಗಿ ಅವರು ನೋಡುತ್ತಾರೆ. ನನಗೇನೂ ಕಿರಿಕಿರಿ ಇಲ್ಲ!

ಸ್ಟೇಟಸ್ ಒಂದು ನೆಪ ಮಾತ್ರ…‌‌ ಯಾವುದೇ ಬಂಧಗಳಲ್ಲು ಅಷ್ಟೆ… ಪರಿಧಿಯಾಚೆಗೆ ಅತಿಯಾದರೆ ಕಿರಿಕಿರಿಯೇ. ಅದಕ್ಕೆ ಆಸ್ಪದವೀಯದೆ ಆ ಪರಿಧಿಯೊಳಗೆ ನಮ್ಮ ನಾವು ಇರಿಸಲು ನೋಡಬೇಕು . ಅದಕ್ಕೆ ನಮ್ಮ ನಾವೇ ತಯಾರು ಮಾಡಿದರೆ ನಮಗೂ ಕ್ಷೇಮ ಉಳಿದವರಿಗೂ….

ಸ್ಟೇಟಸ್ ನ ವಿಷಯದ ಒಂದು ಮಗ್ಗುಲು ಇದಾದರೆ ಇನ್ನೊಂದು ಮಗ್ಗುಲು ತಮ್ಮ ಭಾವನೆಗಳನ್ನು ಕವನ,ಸಣ್ಣ ಬರಹ ಇಲ್ಲವೇ ಯಾರದೋ ಕೋಟ್ಸ್ ಹಾಕಿ ವ್ಯಥೆಯನ್ನು ಹೊರಹಾಕುವವರು ಇಲ್ಲದಿಲ್ಲ. ಈಗ ಭಾವನೆಗಳು ಏನಿದ್ದರೂ ಇಮೋಜಿಗಳಲ್ಲಿ. ಅತ್ತಲಿದ್ದವರ ಮುಖ ಕಾಣದೆ ಹೋದರೂ ವಾಕ್ಯಗಳಲ್ಲಿ ಅರಿವಾಗದಿದ್ದರೂ ಒಂದು ಇಮೋಜಿ ಎಲ್ಲದರ ಟೋನ್ ನ್ನು ತಿಳಿಸುತ್ತದೆ. ಉದಾ: ಏನೋ ನೀನು ಅಂತ ಬರೆದ್ರೆ ಯಾವ ಅರ್ಥ ಬರತ್ತೆ ? ಹಾಕಿದ್ರೆ ಕೋಪದ ಇಮೋಜಿ ಎಂದೂ … ‍ ಏನೆಂದು
ಇವುಗಳಲ್ಲೆಲ್ಲ ಅರ್ಥ ಮಾಡೋದಿಕ್ಕಾಗತ್ತೆ….

ಹಾಗಾಗಿ ಈ ಸ್ಟೇಟಸ್ ಗಳು ಕೆಲವೊಮ್ಮೆ ನಮ್ಮ ಸ್ಟೇಟಸ್ ತೋರಿಸುತ್ತವೆಯೋ ಏನೋ ಅಂದ್ಕೊಳ್ಳುವಂತೆ ಮಾಡುತ್ತದೆ. ಮನುಷ್ಯನ ಭಾವನೆಗಳನ್ನು ಮೊಬೈಲ್ ಆಳತೊಡಗಿತ್ತಲ್ಲಾ ಎಂಬ ಖೇದವೂ ಇಲ್ಲದಿಲ್ಲ.ಒಂದು ಕಾಲ ಇತ್ತು ಟೆಲಿಫೋನ್ ರಿಂಗಾದ್ರೆ ಮನೆಯವರು ಎಲ್ಲರೂ ಓಡಿಬಂದು ಎತ್ಕೊಳ್ಳೋದು ಮಾತುಕಥೆಗಳು… ಉಳಿದವರು ರಿಸೀವರ್ ಗೆ ಕಿವಿಯಿರಿಸಿ ಕೇಳೋದು ಅಬ್ಬಬ್ಬಾ… ಕಾಲ ಬದಲಾಯಿತೊ ನಾವು ಬಿಜಿಯಾದೆವೋ…ಮೊಬೈಲ್ ಬಂದಿದೆ ಕರೆ ಮಾಡಿದರೆ ತೆಗೆಯದಿದ್ರೆ ವಾಟ್ಸಪ್ ಮಾಡಿ ಅನ್ನೋ ಮೆಸೆಜ್ ಬಂದಿರತ್ತೆ…. ವಾಟ್ಸಪ್ ಲ್ಲಿ ಸಹ ತೊಂದರೆ ಕೊಟ್ಟೆನೇನೊ ಎನ್ನುವಂಥ ಸಂಕುಚಿತ ಮನಸ್ಸು ನಮ್ಮ ನಡುವೆ ಬೆಳೆದಿದೆ.

ಇರಲಿ, ಅಂದ ಹಾಗೆ ಮಗ ಶಾಲೆಗೆಹೋದ ಅಂತ ಮೊಬೈಲ್ ಹಿಡ್ಕೊಂದು ಇದನ್ನ ಬರೆದೆ. ಕೆಲಸಗಳು ರಾಶಿ ಇವೆ…

ಹಾ ವಿಷ್ಯ ಏನಂದ್ರೆ ರಾತ್ರೆ ಮಲಗುವ ಮುನ್ನ ಮೊಬೈಲ್ ನೋಡಬಾರದು…ನಿಜ… ಆದರೆ ಸ್ಟೇಟಸ್ ನೋಡಿ ನಂತರ ಪುಸ್ತಕ ಓದಿ ನಾನು ಮಲಗೋದು‌. ಎರಡೂ ನಂಗೆ ನಿದ್ದೆ ತರಿಸುತ್ತುವೆ.

ಅದೇನೇ ಇರಲಿ…ನಿಮ್ಮ ಸ್ಟೇಟಸ್ ಕಥೆಗಳು ಅನುಭವಗಳು ನಗೆತರಿಸುವಂತಹದ್ದು ಇರಬಹುದಲ್ಲಾ… ಅದನ್ನ ನನಗೂ ಹೇಳಿ…ಸ್ವಲ್ಪ ನಾನೂ ನಗ್ತೇನೆ..

ಸಿಗ್ಲಾ

  • ಮುಂದಿನ ಈ ‘ವಾರ’ದಲ್ಲಿ ಸಿಗೋಣ…
    ಧನ್ಯವಾದಗಳು
    ರಜನಿ.ಭಟ್

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00