- ಆಟಿ ಕಳೆಂಜನಂತೆಯೇ ಮನೆ -ಮನೆ ಪ್ರದಕ್ಷಿಣೆ ಹಾಕುತ್ತಿವೆ ಆಡಿ -ವೇಡನ್ ಎಂಬ ಮರಿದೈವಗಳು..
- ಇದು ಗಡಿನಾಡಿನ ಕುಂಬಳೆ ಸೀಮೆಯ ಆಟಿಗೆ ರಂಗು ತುಂಬುವ ಜನಪದ ಸೊಬಗು..!
ಕಣಿಪುರ ಚಿತ್ರಗಾಥೆ :
ಬಹುಭಾಷಾ ಸಂಸ್ಕೃತಿಗಳ ತವರೂರಾದ ಕುಂಬಳೆ ಸೀಮೆಯಲ್ಲೀಗ ತುಳು ನಾಡಿನ ಆಟಿ ಕಳಂಜನಂತೆಯೇ
ಮಲಯಾಳಂ ಸಂಸ್ಕೃತಿಯ ಆಡಿ -ವೇಡನ್ ದೈವಗಳು ಮನೆ ಮನೆ ಪ್ರದಕ್ಷಿಣೆ ನಡೆಸಿ ಊರೂರು ನಡೆಯುತ್ತಿದೆ.
ದುರಿತ ದುಮ್ಮಾನಗಳ ಮಾಸವೆಂದೇ ಪ್ರಚಲಿತವಾದ ಆಟಿಯೆಂಬ ಕರ್ಕಾಟಕದಲ್ಲಿ ಬಡತನದ ಬವಣೆ ಅನುಭವಿಸುವ ಮಾನವರ ದುರಿತ ನಿವಾರಣೆಗೆ ಬರುವ ಪಾರ್ವತಿ -ಪರಮೇಶ್ವರ ಸ್ವರೂಪ ಇದೆಂದು ಜನಪದ ನಂಬಿಕೆ. ಪ್ರಾಚೀನ ಕಾಲದಿಂದಲೇ ಕೈದಾಟಿ ಬಂದ ಈ ಸಾಂಸ್ಕೃತಿಕ ಆಚಾರ ಆಧುನಿಕ ತಲೆಮಾರಲ್ಲೂ ಲೋಪವಾಗದೇ ಗಡಿನಾಡ ನೆಲದಲ್ಲಿ ಮುಂದುವರಿಯುತ್ತದೆ. ವರ್ಷಂಪ್ರತಿ ಆಟಿ ಮಾಸದಲ್ಲಿ ಗಡಿನಾಡ ಕೇರಳಕ್ಕೆ ಬಂದರೆ ಈ ವೈವಿಧ್ಯ ಮರಿದೈವಗಳ ದರ್ಶನ ಸಿಕ್ಕೇ ಸಿಗುತ್ತದೆ..

ತುಳು ನಾಡಿನಲ್ಲಿ ಜನರ ಕಷ್ಟಕೋಟಲೆ ನೀಗಿಸಲು ಶಿವಗಣ ಕಳೆಂಜ ಬಂದರೆ ಮಲಬಾರಿನ ಗಡಿನಾಡಲ್ಲಿ ಆಡಿ -ವೇಡನೂ ಬರುತ್ತದೆ. ಆಡಿ ಎಂದರೆ ಪಾರ್ವತಿಯೂ, ವೇಡನ್ ಎಂದರೆ ಪರಮೇಶ್ವರ ಸಂಕಲ್ಪ ಎಂದರ್ಥ. ಮನೆಯಂಗಳಕ್ಕೆ ಬಂದು ಆಚಾರ ವಿಧಿಯಂತೆ ಕುಣಿದು ಅನುಗ್ರಹ ನೀಡಿ ತೆರಳುವ ಈ ದೈವ ರೂಪಗಳನ್ನು ಎಳೆಯ ಮಕ್ಕಳು ಕಟ್ಟುವುದು ವಾಡಿಕೆ.
ಆದ್ದರಿಂದಲೇ ಇದನ್ನು ಮರಿದೈವಗಳೆನ್ನುತ್ತಾರೆ. ದೈವದೊಂದಿಗೆ ಒಂದು ಚೆಂಡೆ ಹೆಗಲೇರಿಸಿ ಒಬ್ಬರು ಹಿರಿಯರು ಜತೆಗಿರುತ್ತಾರೆ. ಅವರು ಕಿರು ಸ್ತೋತ್ರ(ತೋತ್ತಂ) ಹಾಡಿ ನುಡಿಸಿದರೆ, ದೈವ ಕೈಯಲ್ಲೊಂದು ಗಂಟೆ ಆಡಿಸುತ್ತಾ ಅಂಗಳದಲ್ಲಿ ಕೆಲವೇ ಕ್ಷಣದ ಪುಟ್ಟ ನರ್ತನ ಮಾಡುವುದು ರೂಢಿ.

ಕರ್ಕಾಟಕ (ಆಟಿ) ಒಂದರಿಂದ
ಸಂಕ್ರಮಣದ ವರೆಗಿನ ಅವಧಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಪಾರ್ವತಿ ಸಂಕಲ್ಪದ ಆಡಿ ದೈವವನ್ನು ವಣ್ಣಾನ್ ಸಮುದಾಯದವರು ಕಟ್ಟಿದರೆ, ವೇಡನ್ ದೈವವನ್ನು ಮಲಯನ್ ಸಮುದಾಯವರು
ಕಟ್ಟುವುದು ರೂಢಿ. ಮನೆಯಿಂದ ದೈವ ವೇಷಧಾರಿಗಳಾಗಿ ಹೊರಡುವ ಈ ದೈವಕ್ಕೆ ಪ್ರಯಾಣ ಮಧ್ಯೆ ನುಡಿತಗಳೇನಿಲ್ಲ. ಆದರೆ ದೈವ
ನಡೆದು ಬರುವ ಸದ್ದನ್ನು ಅದರ ಕಾಲ್ಗೆಜ್ಜೆಗಳೇ ಸಾರುತ್ತದೆ..!

ಊರಿಗೆ ಆಡಿ –ವೇಡನ್ ದೈವಗಳು ಬಂದರೆ ಮನೆಯಿಂದ ಮನೆಗೆ ಅದರ ಏಕ ಚೆಂಡೆಯೇ ನಾದದ ಮೂಲಕ ಸಂದೇಶ ರವಾನೆಯಾಗುತ್ತದೆ.
ಹೀಗೆ ತಿಳಿದಾಗ ನೀರಿಗೆ ಅರಶಿನ ಹುಡಿ, ಸುಣ್ಣ ಬೆರೆಸಿದ ‘ ಕುರ್ದಿ’
ತಯಾರಿಸಿಡಬೇಕು. ಬಳಿಕ ಅಂಗಳದಲ್ಲಿ ದೀಪ ಹಚ್ಚಿಟ್ಟು
ಅದರ ಸುತ್ತಲೂ ಕುರ್ದಿ ಎರೆಯಬೇಕು. ಈ ಸ್ಥಳದಲ್ಲಿ ಬಳಿಕ ಮರಿದೈವ ಕುಣಿಯುತ್ತದೆ. ಇದರಿಂದ ಮನೆಯ ದೋಷ-ದುರಿತಗಳು ನೀಗುತ್ತವೆಂಬುದು ಪ್ರಾಚೀನರಿಂದ ಕೈದಾಟಿ ಬಂದ ಆಚಾರ. ಹೀಗೆ ಕುಣಿವ ದೈವಕ್ಕೆ ದಕ್ಷಿಣೆ ಯಾಗಿ ಕಾಣಿಕೆ, ಭತ್ತ,, ತೆಂಗಿನಕಾಯಿ ನೀಡುವುದು ವಾಡಿಕೆಯಾಗಿತ್ತು.
ಆದರೆ ಬದಲಾದ ಆಧುನಿಕ ಕಾಲದಲ್ಲಿ ವಣ್ಣಾನ್, ಮಲಯ ಸಮಾಜದವರು ತಮ್ಮ ಆಚಾರ ಸಂಪ್ರದಾಯಗಳನ್ನು ಎಳೆಯರಿಗೆ ಕೈ ದಾಟಿಸಿ ಮುಂದುವರಿಸುತ್ತಾರೆ. ಆದರೆ ಮನೆ, ಮನೆಗಳಲ್ಲಿ ದೈವಗಳನ್ನು ಸ್ವಾಗತಿಸುವ ಪರಂಪರಾಗತ ಆಚಾರ ಕ್ರಮಗಳು ಮರೆಯಾಗುತ್ತಿವೆ. ದೈವಗಳು ಬಂದು ಕುಣಿದರೆ ದಕ್ಷಿಣೆ ನೀಡುತ್ತಾರೆ ಅಷ್ಟೇ..!

ಕರ್ಕಾಟಕ ಮಾಸದ ಏಳರಿಂದ 16ರ ತನಕ ಮಲಯ ಸಮುದಾಯದ ವೇಡನ್ ದೈವ ಊರೂರು ನಡೆದರೆ, 16ರಿಂದ 28ರ ತನಕ ವಣ್ಣಾನ್ ಸಮುದಾಯದ ಆಡಿ ದೈವ ಊರು ಸುತ್ತುತ್ತದೆ.
ಕಾಸರಗೋಡು -ಕಣ್ಣೂರು ಜಿಲ್ಲೆಗಷ್ಟೇ ಸೀಮಿತ ವಾದ ಈ ಆಚಾರ ದೈವಗಳನ್ನು ಕಟ್ಟುವ ಕುಲಕಸುಬು ಹೊಂದಿದ ಸಮಾಜ ನಿಷ್ಠೆಯಿಂದ ಮುಂದುವರಿಸುತ್ತದೆ.
ಏಕೆಂದರೆ ಅವರ ಪರಂಪರಾಗತ ಕುಲಕಸುಬು ಈ ಎಳೆಯರ ಮೂಲಕವಷ್ಟೇ ಮುಂದುವರಿಯಬೇಕಿದೆ.
ಒಟ್ಟಿನಲ್ಲಿ ತುಳುನಾಡ ಕುಂಬಳೆ ಸೀಮೆಯಲ್ಲಿ ಆಟಿ ಕಳೆಂಜ ನಂತೆಯೇ ಆಡಿ , ವೇಡನ್ ದೈವಗಳೂ ಇವೆ. ಆಟಿಯ ಆಚಾರಕ್ಕೆ ರಂಗು ತುಂಬುತ್ತವೆ.








