ಪಡಿತರ ವಿತರಣಾ ಗೋದಾಮಿನ ತಲೆ ಹೊರೆ ಕಾರ್ಮಿಕರಿಗೆ ಸರಕಾರದ ಆದೇಶವಿದ್ದರೂ ಗುತ್ತಿಗೆದಾರರು ವೇತನ ಹೆಚ್ಚಿಸದೇ ಇರುವುದರಿಂದ ಕಾರ್ಮಿಕರು ಜುಲೈ 14ರಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ಪರಿಣಾಮ ಪಡಿತರ ವಿತರಣಾ ವ್ಯವಸ್ಥೆ ಮೊಟಕಾಗುವ ಸಾಧ್ಯತೆಗಳಿವೆ.
ಪಡಿತರ ವಿತರಣೆ (ರೇಶನ್) ಗೆ ಸಂಬಂಧಿಸಿ ಸಿವಿಲ್ ಸಪ್ಲೈಸ್ ಎನ್. ಎಫ್. ಎಸ್. ಎ. ಗೋದಾಮಿನಲ್ಲಿ ಲೋಡ್/ಅನ್ಲೋಡ್ ನಡೆಸುವ ತಲೆಹೊರೆ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಜ್ಜಾಗಿದ್ದಾರೆ.
ಸರಕಾರದ ಆದೇಶವಿದ್ದರೂ ಗೋದಾಮುಗಳಲ್ಲಿ ದುಡಿಯುವ ತಲೆಹೊರೆ ಕಾರ್ಮಿಕರಿಗೆ ವೇತನ ಹೆಚ್ಚಿಸದಿರುವ ರಾಜ್ಯ ಗುತ್ತಿಗೆದಾರರ ಕಾರ್ಮಿಕ ವಿರೋಧಿ ನೀತಿ ಪ್ರತಿಭಟಿಸಿ ಜುಲೈ 14ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಆಹಾರ ಪೂರೈಕೆಯ ವಲಯದಲ್ಲಿ ದುಡಿಯುವ ಕಾರ್ಮಿಕರು ಸಾಂಕೇತಿಕ ಸೂಚನಾ ಮುಷ್ಕರ ನಡೆಸಿದರು.
ಮಂಜೇಶ್ವರ ಎನ್. ಎಫ್. ಎಸ್. ಎ ಗೋದಾಮಿನಲ್ಲಿ ನಡೆದ ಸಾಂಕೇತಿಕ ಸೂಚನಾ ಮುಷ್ಕರವನ್ನು ತಲೆಹೊರೆ ಕಾರ್ಮಿಕರ ಯೂನಿಯನ್ (ಸಿಐಟಿಯು) ಜಿಲ್ಲಾ ಉಪಾಧ್ಯಕ್ಷ ಬಿನೀಶ್ ಉದ್ಘಾಟಿಸಿದರು. ಜಿಲ್ಲಾ ಘಟಕ ಸದಸ್ಯ ಚನಿಯಪ್ಪ ಸ್ವಾಗತಿಸಿದರು. ಹರಿಶ್ಚಂದ್ರ ವಂದಿಸಿದರು.






