ಬಸಳೆ ಚಪ್ಪರವೂ ಬೆಳ್ಳುಳ್ಳಿ ಒಗ್ಗರಣೆಯೂ…

by Narayan Chambaltimar
  • ಈ ವಾರ – ರಜನಿ ಭಟ್ ಕಲ್ಲಡ್ಕ ಅಂಕಣ 4

ಬಸಳೆ ಚಪ್ಪರವೂ ಬೆಳ್ಳುಳ್ಳಿ ಒಗ್ಗರಣೆಯೂ..

ಮೊನ್ನೆ ಬಸಳೆ ಬೆಂದಿ ಮಾಡಿದ್ದೆ. ಬೆಂದಿ ಎಂದರೆ ನಮ್ಮ ಹವ್ಯಕ  ಭಾಷೆಯಲ್ಲಿ ಅನ್ನೋದು. ಸಾಂಭಾರಿನ ಹಾಗೆ ಸ್ವಲ್ಪ ಬೇರೆ ಅಷ್ಟೆ. ಬಸಳೆಯನ್ನು ತೊಳೆದು ಕಟ್ ಮಾಡಿ ಬೆಲ್ಲ, ಉಪ್ಪು, ನೀರಿನಲ್ಲಿ ಗಿವುಚಿದ ಹುಳಿಯನ್ನು ಹಾಕಿ ಬೇಯಿಸಬೇಕು. ಜೀರಿಗೆ , ಕೆಂಪುಮೆಣಸು  ಒಂದು ಚಮಚ ಎಣ್ಣೆ ಹಾಕಿ ಹುರಿದು ಹೆರೆದ  ತೆಂಗಿನ ಕಾಯಿಯ ಜತೆ ಗಿವುಚಿ ಉಳಿದ ಹುಳಿ ಹಾಕಿ ರುಬ್ಬಿ ಮಿಶ್ರ ಮಾಡಬೇಕು. ಕುದಿದ ನಂತರ ಬೆಳ್ಳುಳ್ಳಿ ಒಗ್ಗರಣೆ ಹಾಕಬೇಕು. ಅದರ ಘಮ ಮನೆಯಿಡೀ ಹಾಗು ಊಟದ ತಟ್ಟೆ ಇಡೀ ಇರುವುದು ನಿಶ್ಚಿತವೇ!

ಹಾಗೆ ಆಯ್ತು ನಮ್ಮಲ್ಲೂ, ಮಾಡಿದ ಬಸಳೆ ಬೆಂದಿ ಊಟದ ತಟ್ಟೆಯ ಎದುರು ಬಂದಾಗ ಮಕ್ಕಳಲ್ಲಿ ಬಸಳೆ ಸೊಪ್ಪು ಬೇಕು ಬಸಳೆ ದಡಿ (ದಂಟು) ಬೇಕು ಎಂದು ಜಗಳ. ಪಾತ್ರೆಯಲ್ಲಿರುವ ಸೌಟನಿಂದ ತಿರುಗಿಸಿ ತಿರುಗಿಸಿ ಒಗ್ಗರಣೆಗೆ ಹಾಕಿದ ಬೆಳ್ಳುಳ್ಳಿ ಹುಡುಕೋದು. ಊಟ ಮುಗಿದಾಗ ಬೆಂದಿಯ ರಸ ಮಾತ್ರ ಪಾತ್ರೆಯಲ್ಲಿ ಕಾಣಿಸುವಾಗ ಮನಸ್ಸು ತುಂಬಿ ಬರುವುದು ಯಾಕೆಂದರೆ ಮನೆಯಲ್ಲಿ ಬೆಳೆದ ಬಸಳೆ ತಾಜಾ ತಾಜಾ ಆಗಿ ಮಕ್ಕಳ ಹೊಟ್ಟೆ ಸೇರಿದ ಸಂತೃಪ್ತಿ ಅಮ್ಮ ನಾದ ನನಗೆ.

 

ಇದೇ ಸೀನ್ ನಾನು ಚಿಕ್ಕವಳಿದ್ದಾಗ ಇತ್ತು. ಇದಕ್ಕಿಂತಲು ಹತ್ತು ಪಟ್ಟು ಮಿಗಿಲಾದುದು ಅನ್ನಬಹುದು. ಚೌತಿ ಹಬ್ಬ ಮುಗಿವ ಸಮಯ, ಮಳೆ ಸಹ ಧೋ ಎನ್ನದೆ ಹದವಾಗಿ ಸುರಿವ ಸಂದರ್ಭದಲ್ಲಿ ಮನೆಯ ಹಿತ್ತಿಲಲ್ಲಿ ತೊಂಡೆ ಹಾಗು ಬಸಳೆ ಗಿಡಗಳು ಏಳುತ್ತಿದ್ದವು. ನೆಡುವ ಮೊದಲು ಈ ಬಾರಿ ಯಾವ ಜಾಗ ಆಗಬದುದೆಂದು ಮನೆ ಸದಸ್ಯರೊಳಗೆ ಚರ್ಚೆ ನಡೆಯುವುದು ಸಹಜ. ಅದು ಸಾಮಾನ್ಯವಾಗಿ ರಾತ್ರೆಯ ಊಟದ ವೇಳೆ. ಆ ಸಮಯದಲ್ಲಿ ಎಲ್ಲರ ಉಪಸ್ಥಿತಿ ಇದ್ದೇ ಇರುತ್ತಿತ್ತು. ಅಮ್ಮ ಪೀಠಿಕೆ ಸುರುಮಾಡಿದಾಗ ಅಪ್ಪ ಅಲ್ಲಿ ಬೇಡ ಬೇರೆ ಜಾಗ ನೋಡು ಎಂದರೆ ಅಕ್ಕ ತಂಗಿಯರಾದ ನಾವು ಅಲ್ಲಿ ನಮ್ಮ ಹೂಗಿಡಗಳಿವೆ ಬೇಡ ಎನ್ನುವ ತಕರಾರು.‌ ಕೊನೆಗೆ ಎಲ್ಲರಿಗು ಅನುಕೂಲ ಜಾಗ ಪೈನಲ್ ಆಗುವಲ್ಲಿಗೆ ಚರ್ಚೆ  ಮುಗಿಯುತ್ತದೆ‌. ಹಳೆಯ ಚಪ್ಪರದಿಂದ ಕರಗದೆ ಉಳಿದ ಬಸಳೆ ಬಳ್ಳಿಯನ್ನು ಒಂದೇ ಅಳತೆ ಉದ್ದದ, ಎರಡು ಬಳ್ಳಿ ಜತೆ ಮಾಡಿ ಎರಡು ಬುಡ ನೆಟ್ಟು  ಅದಕ್ಕೊಂದು ಆಧಾರಕ್ಕೆ ಅಡಿಕೆ ಮರದ ಸಲಿಕೆ ಊರಿ ಈ ನೆಟ್ಟ ಬಳ್ಳಿಗಳನ್ನು ಅದಕ್ಕೆ ಕಟ್ಟಿ ಬಿಟ್ಟರೆ ಆ ದಿನದ ಕೆಲಸ ಮುಗಿಯಿತು. ಎಡೆ ಎಡೆಯಲ್ಲಿ ಅಮ್ಮ ಹಟ್ಟಿಯ ಗೊಬ್ಬರ ಹಾಕಿದರೆ ಬಸಳೆ ಮಳೆ ಮುಗಿದು ಬಿಸಲು ಕಾಯಕಾರಂಭಿಸಿದ ಹಾಗೆ ದಷ್ಟಪುಷ್ಟವಾಗಿ ಬೆಳೆದು ಮೇಲೆ ಬದುಬಿಡುತ್ತದೆ. ಅದಕ್ಕೆ ಚಪ್ಪರ ಹಾಕಿದರೆ ಅದನ್ನೇರಿ ಬಳುಕುತ್ತಾ ಕುಣಿಯುತ್ತಾ ನಡೆಯುವುದು, ಚಪ್ಪರ ತುಂಬಿದಾಗ ಅದನ್ನು ನೋಡುವುದು ಚಂದ. ಬೇಸಗೆ ಬಂತೆಂದರೆ ಅದರ ಬುಡದಲ್ಲಿ ಅಡಿಕೆಯ ಸಲಿಕೆ ಅಡ್ಡಕ್ಕೆ ಹಾಕಿ  ಪಾತ್ರೆ ತೊಳೆಯುವ ವ್ಯವಸ್ಥೆ. ಅದರ ನೀರು ಹೋಗಿ ಕೈಯಗಲದ ಬಸಳೆ ಎಲೆಗಳು ಹಸಿರು ಹಸಿರು ಚಪ್ಪರ. ಯಾರ ದೃಷ್ಟಿಯೂ ತಾಗಬಾರದೆಂದು  ಅಪ್ಪನ ಎಲೆ ಪೆಟ್ಟಿಗೆಯಿಂದ ಸುಣ್ಣದ ಕರಡಿಗೆ ತೆಗೆದು  ಒಡೆದ ಮಡಿಕೆಯ ಮೇಲೆ ಕಣ್ಣು ಮೂಗು ಬಾಯಿ ಬರೆದು ಚಪ್ಪರದ ಮೇಲೆ ಸ್ಥಾಪನೆ. ಅದು ಸಾಲದೆಂದು ಸಣ್ಣದಾದ ಪೊರಕೆ, ಅಪ್ಪನ ಹರಿದು ಹೋದ ಸಿಂಗಲ್ ಹವಾಯಿ ಚಪ್ಪಲಿ ಕಟ್ಟಿದಲ್ಲಿಗೆ ಬಸಳೆ ಚಪ್ಪರದ ಕೆಲಸ ಮುಗೀತು.

ವಾರಕ್ಕೆ ಒಮ್ಮೆ ಅದರಲ್ಲೂ ಭಾನುವಾರ  ಮನೆಯಲ್ಲಿ ಬಸಳೆ  ಬೆಂದಿ. ಅಮ್ಮ ಅಪ್ಪನ ಎಲೆಪೆಟ್ಟಿಗೆಯಿಂದ (ಕವಳೆ ಡಬ್ಬ)  ಚೂರಿ ತಗೊಂಡು ಬಸಳೆ ಬಳ್ಳಿಯನ್ನು ಚಪ್ಪರದಿಂದ ತುಂಡು ಮಾಡಿ ತೆಗೆದು ನಮ್ಮ ಕೈಗೆ ಕೊಡುತ್ತಿದ್ದಳು. ಅದನ್ನು ನಾವು ತೆಗೆದುಕೊಂಡು ಹೋಗಿ ಮೆಟ್ಟುಕತ್ತಿಯಲ್ಲಿ ಕುಳಿತು ಎಲೆ ದಂಟು ಬೇರೆ ಮಾಡಿ ತೊಳೆದು ತುಂಡು ಮಾಡಿ ಅಮ್ಮನ ಕೈಗೆ ಕೊಟ್ಟರೆ, ಅಮ್ಮ ಮಣ್ಣಿನ ಮಡಿಕೆಯಲ್ಲಿ ಅದನ್ನು ಹಾಕಿ ನೀರು ಸೇರಿಸಿ ಬೇಯಲು ಇಡುತ್ತಿದ್ದಳು. ಉಪ್ಪು ಹುಳಿ ಬೆಲ್ಲ ಸೇರಿಸಿ ಅದು  ಬೆಂದಾಗ ಮನೆಯಿಡೀ ಬಸಳೆಯ ತಾಜಾ ಪರಿಮಳ. ನಾವು ಯಾರಾದರೊಬ್ರು  ತೆಂಗಿ‌ನ ಕಾಯಿ ಹೆರಮಣೆಯಲ್ಲಿ ಹೆರೆದಾಗ ಅಮ್ಮನ ಮಸಾಲೆ ತಯಾರಾಗುತ್ತಿತ್ತು. ಅದನ್ನು ಕಡೆಯುವ ಕಲ್ಲಿಗೆ ಹಾಕಿ ರುಬ್ಬುವ ಕೆಲಸ ಮಕ್ಕಳಾದ ನಮ್ಮದು. ನುಣ್ಣಗೆ ಅರೆದ ನಂತರ ತೆಗೆದು ಅಮ್ಮನಿಗೆ ಕೊಟ್ಟರೆ ನಂತರ ನಮ್ಮದು ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ಗೌಜಿ. ಯಾರು ಎಷ್ಟು ಸಿಪ್ಪೆ ತೆಗೆಯುತ್ತೀರೋ ಅಷ್ಟು ಬೆಳ್ಳುಳ್ಳಿ ಅವರವರಿಗೆ ಎಂದಾಗ ಅಕ್ಕತಂಗಿಯರಾದ ನಮ್ಮೊಳಗೆ ಸ್ಪರ್ಧೆ! ಕೊನೆಗೆ ಅಪ್ಪನು ಜತೆ ಆಗಿ ಬೆಳ್ಳುಳ್ಳಿ ಸಿಪ್ಪೆ  ತೆಗೆಯುವುದರಲ್ಲಿ ಮನೆಯವರ ಎಲ್ಲರ ಪಾತ್ರವೂ ‌ಬಂತು. ಇದರ ನಡುವೆ ಅದೆಷ್ಟು ಮಾತುಗಳು ಡೋಂಗಿಗಳು ನಡೆದು ನಗು ಸಿಟ್ಟು ಬೇಸರ ಎಲ್ಲವೂ ಅದರಲ್ಲಿ ಬರುತ್ತಿದ್ದವು. ಅಲ್ಲಿಂದ ಏಳುವಾಗ ಅಪ್ಪನ ಉವಾಚ ಆಗುತ್ತಿತ್ತು. ” ನನ್ನ ಎಲೆ ಪೆಟ್ಟಿಗೆಯಿಂದ ಹೋದ ಚೂರಿ (ಪೀಶಾಕತ್ತಿ) ಬರಲಿಲ್ಲ. ತಗೋಂಡು ಹೋದವರು ತಂದು ಇಡಿ”. ಇಷ್ಟೆಲ್ಲ ನಡೆಯುವಾಗ ಅಲ್ಲಿ ಹಬ್ಬದ ವಾತಾವರಣ ಏರ್ಪಡುತ್ತಿತ್ತು. ನಂತರ ಊಟದ ಸಾಲಿನಲ್ಲಿ ಕುಳಿತು ಕಟ್ಟಿಗೆ ಒಲೆಯಲ್ಲಿ ಮಾಡಿದ ಅನ್ನ ಹಾಗು ಮಣ್ಣಿನ ಮಡಿಕೆಯ ಬಸಳೆ ಬೆಂದಿಯ ಊಟ… ಆ ದಿನ ಹಸಿವು ಎಂದೂ ಇರದ ಹಸಿವು… ಬಸಳೆ ಬೆಂದಿ ಖಾಲಿ!

ಇಂದು ನನ್ನ ಮನೆಯಲ್ಲಿ ನನ್ನ ಮಕ್ಕಳು ಅದೇ ರೀತಿ ಇದ್ದಾರೆ. ನಮ್ಮ ಮನೆಯಲ್ಲಿ ಅಂತಹ ದೊಡ್ಡ ಮಟ್ಟದ ವಾತಾವರಣ ಇರದಿದ್ದರೂ ಸ್ವಲ್ಪ‌ಮಟ್ಟಿಗೆ ಹಾಗೆಯೇ!  ಅವರಿಗೇನೂ ನಾನು ನನ್ನ ಕಥೆ ಹೇಳಲಿಲ್ಲ. ಆದರು ಅದೇ ವಾತಾವರಣ ಬರಬೇಕಿದ್ದರೆ ನನ್ನ ಉವಾಚ ಹೀಗಿರುತ್ತದೆ. ” ಎಲ್ಲ ಜೀನ್ ನಲ್ಲಿ ಬರುವುದು. ಎಷ್ಟಾದರು ನನ್ನ ಮಕ್ಕಳು ನನ್ನದೇ ಜೀನ್ ಅಲ್ವ”

ಕಡಿಮೆ ಬೆಳ್ಳುಳ್ಳಿ ಸಿಕ್ಕವರು “ನನಗೆ ಕಡಿಮೆ ಸಿಕ್ಕಿದ್ದು” ಎಂದು ದೂರು ತರುವಾಗ ” ಇನ್ನು ಮುಂದೆ ಬೆಳ್ಳುಳ್ಳಿ ಒಗ್ಗರಣೆಯೆ ಹಾಕುವುದಿಲ್ಲ ಬಸಳೆ ಬೆಂದಿಯೂ ಮಾಡುದಿಲ್ಲ ನಾನು” ಅಂತ ಸಿಟ್ಟಿನಲ್ಲಿ ಅನ್ನುತ್ತೇನೆ….ಚಿಕ್ಕವರಿದ್ದಾಗ ನನ್ನಮ್ಮ ನಮಗೆ ಅಂದಂತೆ…. ಆದರೆ ನಾನು ವಾರಕ್ಕೊಮ್ಮೆ ಮಾಡುತ್ತೇನೆ ಹಾಗೆಯೇ ನಮ್ಮ ಬಾಲ್ಯದಲ್ಲಿ ಪ್ರತಿ ಭಾನುವಾರ ಹೆಚ್ಚಾಗಿ ಬಸಳೆ ಬೆಂದಿಯೂ ಬೆಳ್ಳುಳ್ಳಿ ಒಗ್ಗರಣೆಯೂ ಖಾಯಂ ಇರುತ್ತಿತ್ತು ಜೂನ್ ನ ಮುಂಗಾರು ಮಳೆ ಬಂದು ಚಪ್ಪರ ಬೀಳುವ ತನ

  • ರಜನಿ.ಭಟ್ ಕಲ್ಮಡ್ಕ…

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00