-
ರಜನಿ ಭಟ್ ಅಂಕಣ – ಈವಾರ-3
ನಮ್ಮ ಮನೆಗೆ ಬರುವ ರಸ್ತೆ ಹಾಳಾಗಿ ಹೋಗಿದೆ!
ಎಷ್ಟೆಂದರೆ ಸ್ಕೂಟರ್ ಓಡಿಸುವಾಗ ನಾಲ್ಕು ಕಾಲುಗಳಿದ್ದರು ನೆಲಕ್ಕೆ ಕೊಡಲು ಅವುಗಳು ಕಡಿಮೆ ಅನ್ನುವಷ್ಟು! ಸ್ವಲ್ಪ ಇಳಿಜಾರು ಇರುವ ಕಾರಣ ಮಳೆ ಬರುವುದು ಸುರುವಾದ ಸಮಯದಲ್ಲಿ ಸುರಿದ
ಮಳೆನೀರು ಹರಿಯುತ್ತಾ ಬಂದಿದ್ದು ಈಗ ಕಣಿಯಾಗಿದೆ. ಕಾರಿನಲ್ಲಿ ಹೋದರೆ ಚಕ್ರಗಳು ಅದರೊಳಗೆ ಬಿದ್ದರೆ ಟೋ ಗಾಡಿ ತಂದು ತೆಗೆಯಬೇಕಷ್ಟೆ! ತೊಂದರೆ ಆಗುವ ವಿಷಯವಾದರೂ ಇಲ್ಲಿ ತೊಂದರೆಯ ಬಗ್ಗೆ ಮಾತಾಡುವ ವಿಷಯ ಆಗದೆ ಬೇರೆ ರೀತಿ ಮಾತಾಡುವ… ಅಂದರೆ ಈ ಕಣಿಯನ್ನು ನೋಡಿದಾಗ ನನಗೆ, ಬೆಟ್ಟದಿಂದ ಇಳಿದು ಬರುವ ನದಿಯಂತೆ ಹೋಲಿಕೆ ಕಾಣುತ್ತದೆ. ಹದವಾದ ಮಳೆ ಬರುವಾಗ ಹಿಮಾಲಯದಿಂದ ಉಗಮಗೊಂಡು ಹರಿದು ಬರುವ ಗಂಗೆ ಬ್ರಹ್ಮಪುತ್ರೆಯರಂತೆ ಇದು ಉಪಮೆಗೊಳ್ಳುತ್ತದೆ.
ಇದರ ಹರಿವನ್ನು ಸೂಕ್ಷ್ಮವಾಗಿ ಗಮನಿಸುವಾಗ ಅದೆಷ್ಟು ಪಾಠ ಹೇಳುವಂತಿದೆ. ಆರಂಭದಲ್ಲಿ ಸಣ್ಣ ಹರಿವಿನಿಂದ ಕೆಳಗಿಳಿದು ಬರುವಾಗ ಉಂಟಾಗುವ ಎಡರು ತೊಡರುಗಳನ್ನು ದಾಟಿ ದಾರಿ ಮಾಡಿ ಓರೆ ಕೋರೆಯಾಗಿ ಹರಿಯುವ ಪರಿ ಬಲು ಚಂದ. ತನ್ನ ದಾರಿಗಾಗಿ ಯಾರನ್ನು ಕೇಳದೆ ಅಡೆತಡೆಗಳಿಗೆ ಲೆಕ್ಕಿಸದೆ ದಾರಿ ಮಾಡಿಕೊಳ್ಳುವುದೂ ಒಂದು ಕಲೆ!
ಇದು ಪಾದರಸದಂತೆ ತಾನಾಯಿತು ತನ್ನ ಪಾಡಾಯಿತು ಎಂದು ಕೆಲಸಮಾಡುವುದು ನೋಡುವಾಗ ನನಗೆ ನೆನಪಿಗೆ ಬರುವುದು ನನ್ನ ಮಗನ ಶಾಲೆಯ ಸೆಕ್ಯೂರಿಟಿಯಾದ ಗಣೇಶ ಎಂಬವರನ್ನು. ಮೂಲತ: ಉತ್ತರಪ್ರದೇಶದವರಾದ ಇವರು ಮಂಗಳೂರಿಗೆ ಬಂದು ಒಂಭತ್ತು ವರುಷಗಳು ಸಂದಿವೆ. ನನಗೆ ಕಳೆದ ನಾಲ್ಕುವರುಷಗಳಿಂದ ಇವರನ್ನು ಪರಿಚಯ. ಯಾವತ್ತು ನನಗೆ ಸೋಜಿಗವನೇ ಉಂಟು ಮಾಡಿದ ವ್ಯಕ್ತಿ ಇವರು . ಇದನ್ನ ಯಾಕೆ ಹೇಳುತ್ತೇನೆ ಎಂದರೆ ಸೆಕ್ಯೂರಿಟಿ ಕೆಲಸಗಾರರಾಗಿ ಅವರು ಮಾಡುವ ಕೆಲಸದ ಚಾಕಚಕ್ಯತೆ , ಒಂದಿಷ್ಟು ಕೋಪ ಬಾರದೆ ವ್ಯವಹರಿಸುವ ರೀತಿ ಯಾರೇ ಬಂದರೂ ಕುಳಿತಲ್ಲಿಂದ ಓಡಿ ಬಂದು ಮಾತನಾಡಿಸುವ ರೀತಿ, ಇದನ್ನು ನಾನು ಹಲವು ಬಾರಿ ನೋಡಿದ್ದಿದೆ. ಇನ್ನೂ ಹೇಳಬೇಕೆಂದರೆ ಮಗನನ್ನು ಬಿಟ್ಟು ನಾನು ನನ್ನ ಗಾಡಿಯಲ್ಲಿ ಕುಳಿತು ಗಣೇಶ್ ಅವರು ಮಾಡುವ ಕೆಲಸವನ್ನು ನೋಡಲೆಂದೇ ಹತ್ತು ನಿಮಿಷಗಳು ಅಲ್ಲೇ ಇರುತ್ತಿದ್ದೆ. ಇರುತ್ತೇನೆ ಈಗಲೂ.

ಸೆಕ್ಯೂರಿಟಿ ಎಂದಾಗುವಾಗ ಅಲರ್ಟ್ ಆಗಿರಬೇಕು, ಸುತ್ತುಮುತ್ತ ಸದಾ ಒಂದು ಕಣ್ಣನ್ನು ತೆರೆದುಕೊಂಡೇ ಇರಬೇಕು , ಶಾಲೆ ಅಂದಾಕ್ಷಣ ಜವಾಬ್ದಾರಿಗಳು ಇನ್ನೂ ಹೆಚ್ಚು. ಬರುವ ಪ್ರತಿಯೊಬ್ಬರನ್ನು ಮಾತನಾಡಿಸಿ ಯಾರು ಏನು ಎತ್ತ ಎಂಬುದನ್ನು ವಿಚಾರಿಸಬೇಕು, ಶಾಲೆಯಿಂದ ಮಕ್ಕಳು ಹೊರಗೆ ಹೋಗುವಾಗ ನೋಡಿಕೊಳ್ಳಬೇಕು , ಇದೆಲ್ಲ ಒಪ್ಪೋಣ. ಆದರೆ ಮಕ್ಕಳೊಂದಿಗೆ ಮಕ್ಕಳಾಗಿ , ಶಾಲಾ ಟೀಚರ್ಗಳೊಂದಿಗೆ ಶಾಲೆಯ ಸಿಬ್ಬಂದಿಗಳ ಜೊತೆ ಆಪ್ತನಾಗಿ, ಬರುವ ಪೇರೆಂಟ್ ಗಳ ಜೊತೆ ಅದೆಷ್ಟು ಪ್ರೀತಿಯಿಂದ ಮಾತನಾಡುತ್ತಾ.. ಪ್ರತಿಯೊಬ್ಬ ಮಕ್ಕಳ ಹೆತ್ತವರನ್ನು ನೆನಪಿನಲ್ಲಿಟ್ಟು ಅವರ ಗಾಡಿ ಬಂದರೆ ಸಾಕು ತನ್ನ ವಿಶಲ್ ನ್ನು ಬಾಯಿಗಿರಿಸಿ ಪಿಪಿ ಎನ್ನುತ್ತಾ ಆ ಮಕ್ಕಳನ್ನು ಕರೆದು ಗಾಡಿಯಲ್ಲಿ ಕೂರಿಸಿ ಬಾಯ್ ಬಾಯ್ ಮಾಡುವ ಉತ್ಸಾಹ ಇದೆಯಲ್ಲ ..ಅದು ಕಣ್ರೀ ಈ ಗಣೇಶನನ್ನು ಹತ್ತಿರ ಬರುವಂತೆ ಮಾಡುವುದು.

ಮಳೆಗಾಲದಲ್ಲಂತೂ ಶಾಲೆಯ ಎದುರು ಮೆಜೆಸ್ಟಿಕ್ಗಿಂತಲೂ ಕಡೆಯ ಚಿತ್ರಣ. ಒಂದೆಡೆ ಧಾರಾಕಾರ ಮಳೆ , ಅದರ ನಡುವೆ ಮಕ್ಕಳನ್ನು ಬಿಡಲು ಬರುವ ಹೆತ್ತವರ ಗಾಡಿಗಳು, ಅದು ಮಾತ್ರವಲ್ಲ ರಸ್ತೆಯಲ್ಲಿ ಆಚೆ ಈಚೆ ಚಲಿಸುವ ಗಾಡಿಗಳು ಬೇರೆ! ಅವರನ್ನೆಲ್ಲ ಗಣೇಶ್ ಅದೆಷ್ಟೋ ಸ್ಮೂತ್ ಆಗಿ ನಿಭಾಯಿಸುತ್ತಾರೆ. ಇದು ಸಾಮಾನ್ಯದ ಕೆಲಸವಲ್ಲ . ಮಳೆ ಕೋಟು ಧರಿಸಿ ರಸ್ತೆಯಲ್ಲಿ ನಿಂತು ಬಾಯಲ್ಲಿ ಬೊಬ್ಬೆ ಹೊಡೆಯುತ್ತಾ ಗಾಡಿಯವರು ಹೇಳಿದ್ದು ಕೇಳದಾಗ ಗಾಡಿಗಳ ಸಮೀಪಕ್ಕೆ ಬಂದು ಅವುಗಳಿಗೆ ದಾರಿ ಮಾಡಿ ಕೊಟ್ಟು ಬಿಡಲು ಬರುವ ಹೆತ್ತವರು ಹಾಗೂ ಮಕ್ಕಳನ್ನು ಜೋಪಾನವಾಗಿ ಗೇಟಿನ ಬಳಿ ಕರೆದುಕೊಂಡು ಹೋಗುವ ವ್ಯವಸ್ಥೆಯು ಮಾಡುವುದು ನೋಡಿದಾಗ ಈ ಗಣೇಶ ಎಂಬ ಸಾಮಾನ್ಯ, ಅಸಾಮಾನ್ಯನಾಗಿ ಕಂಡು ನನಗೆ ಸೋಜಿಗವೇ ಅನಿಸುತ್ತಾನೆ.

ಕೆಲಸವನ್ನು ಅರಸಿಕೊಂಡು ಬಂದು ಇಲ್ಲಿಯೆ ನೆಲೆಸಿದ ಗಣೇಶ ವರುಷಕ್ಕೊಮ್ಮೆ ತನ್ನೂರಿಗೆ ರಜದಲ್ಲಿ ಹೋದಾಗ ಆ ಸ್ಥಾನಕ್ಕೆ ಬೇರೆ ಸೆಕ್ಯೂರಿಟಿಗಳು ಬಂದರೂ ಗಣೇಶನ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ! ನನಗಂತು ಅವರು ತಿರುಗಿ ಬರುವ ತನಕ ದಿನವೂ ಕಾಣುತ್ತಿದ್ದ ಗಣೇಶ ನಡೆವ ಓಡುವ ಜಾಗದಲ್ಲೆಲ್ಲ ಖಾಲಿ ಛಾಯೆ ಮನಸ್ಸಿಗೆ ಕಂಡುಬರುತ್ತದೆ. ಅವರು ಬಂದು ಅವರ ಜಾಗವನ್ನು ತುಂಬಿ ಕೆಲಸಕ್ಕಿಳಿದಾಗ ಸತ್ಯ ಹೇಳ್ತೇನೆ ಕಣ್ರಿ ಸಮಾಧಾನ ಅನ್ನಿಸ್ತದೆ.
ಒಂದ್ಸಲ ನಾನು ಪೇಟೆಯಿಂದ ಮನೆಗೆ ಮರಳುವ ಸಮಯ ನಾಲ್ಕು ಐದು ಘಂಟೆಯ ಆಸುಪಾಸಲ್ಲಿ ಶಾಲೆ ಕೆಲಸ ಮುಗಿಸಿ ಗಣೇಶ ನಡೆದು ಹೋಗುತ್ತಿದ್ದರು. ಅವರ ಬಳಿ ಗಾಡಿ ನಿಲ್ಲಿಸಿ “ಬನ್ನಿ ನಿಮ್ಮನ್ನ ಎಲ್ಲಿ ಬಿಡಬೇಕು ಹೇಳಿ ಅಂತ ಕೇಳಿದಾಗ ” ಬೇಡ, ಬೇಡ.. ನಾನು ನಡೆದೇ ಹೋಗ್ತೇನೆ. ಇಡೀ ದಿನ ಒಳಗೆ ಇರುವುದಲ್ವ.. ನಡೆದ್ರೆ ಶರೀರಕ್ಕೆ ಆರಾಮ ಆಗತ್ತೆ” ಅಂತ ನುಣುಚಿಕೊಂಡ್ರು. ಲಿಫ್ಟ್ ಕೊಡ್ತೇನಂದ್ರೂ ಯಾರ ಗಾಡಿಯಲ್ಲಿ ಹತ್ತದೆ ತಮ್ಮಷ್ಟಕ್ಕೆ ನಡೆದುಕೊಂಡು ಹೋಗುವವರು ಇವರು. ಸಂಜೆಯ ನಂತರ ಬೆಳಗ್ಗೆ ತನಕ ಬಿಲ್ಡಿಂಗ್ ಕಾವಲು ಕೆಲಸಕ್ಕೆ ಹೋಗುವ ಇವರ ಮಡದಿ ಹಾಗು ಮಗಳು ಸದ್ಯಕ್ಕೆ ಮಂಗಳೂರಿಗೆ ಬಂದು ನೆಲೆಸಿದ್ದಾರೆ.
ವರುಷಕ್ಕೊಮ್ಮೆ ರಜದಲ್ಲಿ ಉತ್ತರಪ್ರದೇಶಕ್ಕೆ ಹೋಗುವಾಗೆಲ್ಲ ಶಾಲೆಯಲ್ಲಿ ಏನೋ ಖಾಲಿ ಖಾಲಿ ಶೂನ್ಯತೆ ಆವರಿಸುವುದು ನನಗೆ ಮಾತ್ರವಲ್ಲ ಉಳಿದ ಹೆತ್ತವರಿಗೂ ಅನುಭವಕ್ಕೆ ಬಂದಿದೆ. ದಿನದಲ್ಲಿ ಮೂರು ಬಾರಿ ಶಾಲೆಗೆ ಭೇಟಿ ಕೊಡುವ ನಾನು, ಗಣೇಶನನ್ನು ನೋಡುವುದು ಬಹಳಷ್ಟು ಬಾರಿ. ಅವರು ಪ್ರತಿಬಾರಿಯೂ ” ಮೇಡಂ ನಮಸ್ತೆ” ಅನ್ನದೆ ಇಲ್ಲ.ನಾಲ್ಕು ವರುಷಗಳ ಮೊದಲು ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ. ಅದೇ ನಗುಮೊಗ, ಅದೇ ಹುರುಪು, ಅದೇ ಉತ್ಸಾಹ…. ಇವರು ಲೈಕ್ ಕಮೆಂಟ್ ಗಳಿಗಾಗಿ ಬದುಕುವವರಲ್ಲ. ನಿಜವಾದ ಜೀವನೋತ್ಸಾಹಿಗಳು.
ಕಷ್ಟಗಳು ಮನುಷ್ಯರಿಗೆ ಮರಕ್ಕಿವೆ. ಆದರೆ ಅದನ್ನ ಮುಖದಲ್ಲಿ ತೋರಿಸದೆ ಬದುಕುವುದು ಒಂದು ಕಲೆ! ಗಣೇಶ ನಿಗೂ ಸಂಕಟ ಸಂಕಷ್ಟಗಳು ಇರಬಹುದು ಊಹೂಂ, ಒಂದಿನವೂ ಅವರು ತೋರಿಸದೆ ” ಹೇಗಿದ್ದೀರಿ” ಅಂತ ಕೇಳಿದರೆ ಫಸ್ಟ್ ಕ್ಲಾಸ್ ಅಂತ ಪ್ರತಿದಿನವೂ ಹೇಳುವಂತ ವ್ಯಕ್ತಿ ಹಾಗೂ ವ್ಯಕ್ತಿತ್ವ ಅವರದು.
” ಗಣೇಶ..ನೀವ್ಯಾಕೆ ಕನ್ನಡ ಮಾತಾಡಲ್ಲ” ಅಂತ ಮೊನ್ನೆ ಕೇೆಳಿದ್ದಕ್ಕೆ ” ಇಲ್ಲ…ಇಲ್ಲ….” ಅಂತ ಕಲಿಯಲಾಗಲಿಲ್ಲ ಅನ್ನುವ ಅರ್ಥದಲ್ಲಿ ಹೇಳಿದರು. ಅಂದರೆ ಕನ್ನಡದಲ್ಲಿ ಉತ್ತರಿಸುವಷ್ಟು ತಿಳಿದಿದ್ದರು, ಮಾತನಾಡಲು ಭಯ ಅಷ್ಟೆ! ಹಾಗಾಗಿ ಇವತ್ತು ಹೀಗೆ ಹೇಳಿ ಬಂದಿರುವೆ ” ನನ್ನಲ್ಲಿ ಕನ್ನಡದಲ್ಲಿ ಮಾತಾಡ್ತೀರಾ”
” ಇಲ್ಲ…ಇಲ್ಲ” ಅನ್ನುತ್ತಾ ತಲೆ ಆಡಿಸಿ ಅರ್ಧ ಒಪ್ಪಿಗೆ ಸೂಚಿಸಿದ್ದಾರೆ.ಹಾಗಾಗಿ ಅವರನ್ನು ಕಂಡಾಗಲೆಲ್ಲ ನಾನಿನ್ನು ಕನ್ನಡಲ್ಲೆ ಮಾತಾಡೋದು…ಅಂತ ದೊಡ್ಡಕ್ಕೆ ಹೇಳಿ ಬಂದಿರುವೆ. ಬಿಟ್ಟ ಕಣ್ಣುಗಳಿಂದ ನನ್ನನ್ನು ಗಣೇಶ್ ನೋಡುತ್ತಿದ್ದುದು ನನ್ನ ಗಾಡಿಯ ಕನ್ನಡಿಯಲ್ಲಿ ಕಾಣಿಸಿದ್ದವು.

ರಜನಿ ಭಟ್ ಕನ್ನಡದ ಪತ್ರಿಕೆ, ನಿಯತಕಾಲಿಕಗಳಲ್ಲಿ ಬರೆವ ಲೇಖಕಿ. ಮಂಗಳೂರಿನ ಗೃಹಿಣಿ. ಅವರ ಲಲಿತ ಬರಹಗಳಲ್ಲಿ ಜೀವನಚಿತ್ರಗಳಿವೆ.








