ರಾತ್ರಿ ಎಷ್ಟೇ ಕಣ್ಮುಚ್ಚಿ ಮಲಗಿದರೂ ಪೋಲೀಸರ ಬೂಟುಗಾಲಿನ ಸದ್ದು ಆದಿನದ ಅನುಭವಗಳನ್ನೆಲ್ಲ ನೆನಪಿಸುತ್ತದೆ….

ತುರ್ತುಪರಿಸ್ಥಿತಿ ಯ ನೆನಪುಗಳು - ವಿ. ರವೀಂದ್ರನ್

by Narayan Chambaltimar

ದೇಶದ ಎರಡನೇ ಸ್ವಾತಂತ್ರ್ಯ ಸತ್ಯಾಗ್ರಹವೆಂದೇ ಬಿಂಬಿತವಾದ ತುರ್ತುಪರಿಸ್ಥಿತಿ ಅಂದಿನ ಪ್ರಧಾನಿ ಇಂದಿರಾಗಾಂಧಿ ದೇಶಕ್ಕಿತ್ತ ದೌರ್ಜನ್ಯ ದ ಕಾಣಿಕೆ. ಹೇಗೆ ಅರ್ಧ ರಾತ್ರಿ ಸ್ವಾತಂತ್ರ್ಯ ಸಿಕ್ಕಿತ್ತೋ, ಅದನ್ನವರು 1975ರ ಜೂನ್ 25ರ ನಡುರಾತ್ರಿ ಜನರಿಂದ ಕಸಿದುಕೊಂಡಿದ್ದರು. ಕಸಿದದ್ದಷ್ಟೇ ಅಲ್ಲ, ಇದನ್ನು ಪ್ರಶ್ನಿಸುವ ಸಾಧ್ಯತೆಗಳುಳ್ಳ ನಾಯಕರನ್ನೆಲ್ಲ ಬಂಧಿಸಿ ಜೈಲಿಗಟ್ಟಿದರು..

ಏಕಾಏಕಿ ದೇಶಕ್ಕೆ ದೇಶವೇ ದಿಗ್ಭ್ರಮೆಗೊಂಡಿತ್ತು. ಪ್ರಜಾಪ್ರಭುತ್ವ ದ ಭವಿಷ್ಯವೇನೆಂದೇ ಪ್ರಶ್ನಿಸಿತ್ತು.
ಪರಿಣಾಮ ಎರಡೇ ದಿನದಲ್ಲಿ ತುರ್ತುಪರಿಸ್ಥಿತಿ ವಿರುದ್ಧ ಆಂದೋಲನ ಹುಟ್ಟಿತು. ನಾನಾಗ ಎಳೆ ಹುಡುಗ. ಕುಂಬಳೆಯಲ್ಲಿ
ಜನಸಂಘದ ಪೂರ್ಣವಧಿ ಕಾರ್ಯಕರ್ತ. ಆ ದಿನಗಳನ್ನು
ನೆನೆದರೆ ಈಗಲೂ ಒಂದೊಂದು ಘಟನೆ ಕಣ್ಣಮುಂದಾಡುತ್ತದೆ ಎಂದರು ವಿ. ರವೀಂದ್ರನ್.
ಎಷ್ಟೇ ರಾತ್ರಿ ಕಣ್ಮುಚ್ಚಿ ಮಲಗಿದರೂ ಆ ದಿನಗಳ ನೆನಪೇ ಎಚ್ಚರಗೊಳಿಸುತ್ತವೆ. ಮೆಟ್ಟಿಲೇರಿ ಬರುವ ಪೋಲೀಸರ ಬೂಟುಗಾಲಿನ ಸಪ್ಪಳ ಅನುಭವಗಳನ್ನು ಬಡಿದೆಬ್ಬಿಸುತ್ತವೆ..

ಹೋರಾಟದ ಸಲುವಾಗಿಯೇ ಗುಪ್ತವಾಗಿ ಕೋಝಿಕ್ಕೋಡ್ ನ ಜನಸಂಘ ಕಾರ್ಯಾಲಯದಲ್ಲಿ ಬೈಠಕ್ ಇತ್ತು. ನಾನೂ ಸೇರಿದಂತೆ ಪೂರ್ಣಾವಧಿ ಕಾರ್ಯಕರ್ತರು ರೈಲಿನಲ್ಲಿ ಹೋದೆವು. ಪಾಳಯಂ ರಸ್ತೆಯ ಜನಸಂಘದ ಕಾರ್ಯಾಲಯ ತಲುಪಿದೆವು. ಅಲ್ಲಿ ಕಾರ್ಯಾಲಯ ಪ್ರತಿನಿಧಿ ನಳರಾಜನ್ ಇದ್ದರು. “ಪೋಲೀಸ್ ಅನುಮತಿ ಇಲ್ಲ. ಬೈಠಕನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ನಿಮ್ಮನ್ನು ಅಲ್ಲಿಗೊಯ್ಯಲು ವಾಹನ ಬರುತ್ತದೆ. ನೀವಿಲ್ಲಿ ವಿಶ್ರಾಂತಿ ಪಡೆಯಿರಿ” ಎಂದರು.
ಕೇರಳದ ನಾನಾ ದಿಕ್ಕುಗಳಿಂದ ಪ್ರತಿನಿಧಿಗಳು ಆಗಮಿಸಲಿಕ್ಕಿದ್ದರು. ಆದ್ದರಿಂದ ಕಾರ್ಯಾಲಯದ ಬಾಗಿಲು ತೆರೆದೇ ಇರಿಸಲಾಗಿತ್ತು. ನಾವು ನಿದ್ರೆಗೆ ಜಾರಿದ್ದೆವು. ಆ ಮಂಪರಿನಲ್ಲೇ ಪೋಲೀಸರ ಬೂಟುಗಾಲಿನ ಸದ್ದು ಮೆಲ್ಲನೇ ಕೇಳಿತು. ಕಣ್ಣುಜ್ಜಿ ತೆರೆಯುವಷ್ಟರಲ್ಲಿ ನಮ್ಮನ್ನು ಪೋಲೀಸರು ಸುತ್ತುವರಿದಿದ್ದರು. ಅದು ಚಡ್ಡಿ, ಟೋಪಿ ಧರಿಸಿದ್ದ ಅಂದಿನ ಎಂ. ಎಸ್. ಪಿ. ಪೋಲೀಸ್. ಏನನ್ನೂ ಕೇಳಲಿಲ್ಲ. ತಕ್ಷಣವೇ ನಮ್ಮ ಕಣ್ಣು, ಕೈಕಾಲು ಕಟ್ಟಿದರು. ಆ ಕತ್ತಲೆಯಲ್ಲೇ ನಮ್ಮನ್ನು ಕರೆದೊಯ್ದು ಪೋಲೀಸ್ ವಾಹನಕ್ಕೇರಿಸಿದರು.
ಜೂನಿನ ಮುಂಗಾರು ಮಳೆ ಚಿಟಿಪಿಟಿಯಾಗಿ ನೆಲಕ್ಕೆ ಮುತ್ತಿಡುವ ಸದ್ದು ಬಿಟ್ಟರೆ ಬೇರೆ ಪೋಲೀಸರ ಅಸಭ್ಯ ಮಾತುಗಳಲ್ಲದೇ ಮತ್ತೇನೂ ಕೇಳುತ್ತಿರಲಿಲ್ಲ.
ಆ ಕತ್ತಲೆಯ ಮೌನದಲ್ಲಿ ಏನು ಘಟಿಸುತ್ತದೆ ಎಂದು ನೋಡುವಂತಿಲ್ಲ..
ಕಣ್ಣನ್ನೇ ಕಟ್ಟಿದ್ದರು.
ಮುಟ್ಟಿ ನೋಡಲು ಕೈಗಳನ್ನೇ ಬಂಧಿಸಿದ್ದು. ಪೋಲೀಸರು ನಮ್ಮನ್ನೇಕೆ ಕೊಂಡೊಯ್ಯುತ್ತಾರೆಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡೆವು.

ಆ ವಾಹನದಲ್ಲಿ ಕೇರಳ ರಾಜ್ಯ ಜನಸಂಘದ ಸಂಘಟನಾ ಕಾರ್ಯದರ್ಶಿ ಪಿ. ನಾರಾಯಣನ್, ಜನ್ಮಭೂಮಿ ದೈನಿಕದ ಪಿ. ವಿ. ಕೆ ನೆಡುಂಗಾಡಿ, ಆರೆಸ್ಸೆಸ್ ಪ್ರಚಾರಕರೂ ಇದ್ದರು. ಅವರ ಪಿಸುಮಾತಿನ ಸ್ವರದಲ್ಲೇ ಅವರನ್ನು ಗುರುತಿಸಿಕೊಂಡೆವು.

1970ರಲ್ಲಿ ವಯನಾಡಿನ ನಕ್ಸಲ್ ನಾಯಕ ವರ್ಗೀಸ್ ರನ್ನು ಕಣ್ಣುಕಟ್ಟಿ, ಕೈಕಟ್ಟಿ ಪೋಲೀಸರು ಹತ್ಯೆ ಮಾಡಿದ್ದರು. ಅದೇ ರೀತಿ ನಮ್ಮನ್ನು ನಿಗೂಢವಾಗಿ ಕೊಲ್ಲಲು ಕೊಂಡೊಯ್ಯುತ್ತಾರೋ..? ಅನುಮಾನ ಕಾಡಿತು.
ಆದರೆ ಹಾಗಾಗಲಿಲ್ಲ. ನಮ್ಮನ್ನು ಪೋಲೀಸ್ ಕಂಟ್ರೋಲ್ ರೂಮಿಗೆ ಒಯ್ದರು. ಅಲ್ಲಿಗೆ ತಲುಪುವಾಗ ಅಲ್ಲಿಂದ “ಅಯ್ಯೋ ನನ್ನನ್ನು ಕೊಲ್ಲುತ್ತಾರೆ… “”ಎಂಬ ಆರ್ತನಾದ ಕೇಳುತಿತ್ತು.
ಹಾಗೆಯೇ “ಅವನ ಬಾಯಿಗೆ ಬಟ್ಟೆ ತುರುಕು “ಎಂಬ ಪೋಲೀಸ್ ಮಾತುಗಳೂ ಕೇಳಿಸಿತು. ಪೋಲೀಸರ ಬೂಟುಗಾಲಿನ ಸ್ಪರ್ಧಾತ್ಮಕ ಹೊಡೆತ, ತುಳಿತಗಳ ಸದ್ದಿನ ನಡುವೆ ಆ ಆರ್ತನಾದ ಕೇಳಿಸದಾಯಿತು. ಅದುನರಳುವಿಕೆಯ ಮೊರೆತವಾಯಿತು. ಮತ್ತೆ ಗೊತ್ತಾದದ್ದು ಅದು ಜನಸಂಘದ ಕೋಝಿಕ್ಕೋಡ್ ಜಿಲ್ಲಾಧ್ಯಕ್ಷ ಯು. ದತ್ತಾತ್ರೇಯ ರಾಯರ ದ್ವನಿ ಎಂದು!
ಅಂದು ನಮ್ಮನ್ನು ಕುಡಿಯಲು ನೀರಿಲ್ಲದೇ, ಅನ್ನಾಹಾರಗಳೇನೂ ಇಲ್ಲದೇ ಪೋಲೀಸ್ ಲಾಕಪಿನಲ್ಲಿ ಎರಡು ದಿನ ಇಟ್ಟರು. ಯಾವ ವಿಚಾರಣೆಯೂ ಇರಲಿಲ್ಲ. ನಾವು ಹಸಿದು ಕಂಗೆಟ್ಟು ನಿತ್ರಾಣಗೊಂಡೆವು.
ಎರಡನೇ ದಿನ ಸಂಜೆ ಒಬ್ಬ ಪೋಲೀಸ್ ಕೇಳಿದ “ನಿಮ್ಮಲ್ಲಿ ಹಣ ಇದ್ದರೆ ಏನಾದರೂ ತಂದು ಕೊಡುವೆ” ಎಂದು. ನಡುರಾತ್ರಿ ಮಲಗಿದ್ದವರನ್ನು ಎಬ್ಬಿಸಿ ತಂದವರಲ್ಲವೇ ನಾವು. ನಮ್ಮಲ್ಲಿ ದುಡ್ಡೆಲ್ಲಿಂದ…??

(ಮುಂದುವರಿಯುವುದು….)

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00