ಬಲ್ಲಿರಾ….? ದೇಶದ ರಾಜಕೀಯ ನವೋದಯಕ್ಕೆ ಬಾಗಿಲು ತೆರೆದ ತುರ್ತುಪರಿಸ್ಥಿತಿ ವಿರುದ್ಧ ಹೋರಾಟದ ಪ್ರಮುಖ ಭೂಮಿಕೆಯೇ ಕಾಸರಗೋಡು ತಾಲೂಕು..!

ವಿ. ರವೀಂದ್ರನ್ ಬಿಚ್ಚಿಟ್ಟ ನಿನ್ನೆಗಳ ಕರಾಳ ನೆನಪು -1 \ತುರ್ತು ಪರಿಸ್ಥಿತಿಯ ಕರಾಳತೆಗೆ 50ವರ್ಷ...

by Narayan Chambaltimar
  • ✍️ ಎಂ. ನಾ. ಚಂಬಲ್ತಿಮಾರ್
    ——————————

ಅಬ್ಬಬ್ಬಾ..
1975ರ ತುರ್ತು ಪರಿಸ್ಥಿತಿ ಯ ಕ್ರೌರ್ಯದ ಕರಾಳ ಕತೆಗಳನ್ನು ಕೇಳಿದರೆ ಸಂಯಮಿ ಸನ್ಯಾಸಿಯ ನೆತ್ತರೂ ಕೊತಕೊತನೆ ಕುದಿಯಬಹುದು!
ಮಾತೇ ಎತ್ತದ ಬಡ ಭಿಕ್ಷುಕನೂ ಬದುಕಲು ಬಿಡಿ ಎಂದು ಬೊಬ್ಬಿಟ್ಟು ಕತ್ತಿ ಎತ್ತಿಯಾನು!
ಇಂದಿನವರಿಗೆ ಯಾರಿಗೂ ಗೊತ್ತಿಲ್ಲದ ದೇಶದ ಗತಕತೆಗೆ ನಮ್ಮೂರು ಕಾಸರಗೋಡು ಪ್ರಧಾನ ಭೂಮಿಕೆಯಾಗಿತ್ತು ಗೊತ್ತೇ??
ದೇಶದ ರಾಜಕೀಯ ಪರಿವರ್ತನೆಯ ಆಶಯಗಳ ಹೋರಾಟಗಳು ನಮ್ಮ ನೆಲದಲ್ಲಿ ಗುಪ್ತವಾಗಿ ಚಿಗುರೊಡೆದಿತ್ತು ಗೊತ್ತೇ?
ಇದು ರಾಜಕೀಯ ಚರಿತ್ರೆಗಳೇ ಅರಿಯದ, ಅರಿತವರು ಬರೆದು ಉಲ್ಲೇಖಿಸದ 1975-77 ರ ದಿನಮಾನದ ತುರ್ತು ಪರಿಸ್ಥಿತಿಯ ಬೆಳವಣಿಗೆ…!

ಅಂದು ನಡೆದ ಕರಾಳ ದೌರ್ಜನ್ಯದ ರಾಕ್ಷಸೀ ಪ್ರವೃತ್ತಿಯ ಕ್ರೂರತೆಯ ಅನುಭವ ಕೇಳಿದರೆ ಅತ್ಯಾಶ್ಚರ್ಯಗಳಿಂದ ಹುಬ್ಬೇರಿ, ರೋಮ ನೆಟ್ಟಗಾಗುವುದಲ್ಲ , ಎದೆ ಬಡಿತವೇ ಬೆರಗಾಗಿ ಢವಗುಟ್ಟುತ್ತದೆ.!
ಅದು ಜಗತ್ತೇ ಕಾಣದ ಆಡಳಿತ ಕ್ರೌರ್ಯದ ಪರಮಾವಧಿ!

ಕೇವಲ ಅಧಿಕಾರ ವ್ಯಾಮೋಹದಿಂದ ದೇಶದಲ್ಲಿ ಅಂದಿನ ಪ್ರಧಾನಿ ಇಂದಿರೆ ನಡೆಸಿದ ದೌರ್ಜನ್ಯಗಳ ಮೆರವಣಿಗೆಗೆ ನಾಳೆ ಭರ್ತೀ ಐವತ್ತು ವರ್ಷ!!
ತುರ್ತು ಪರಿಸ್ಥಿತಿ ಎಂಬ ಹೆಸರಲ್ಲಿ ಪ್ರಜಾಪ್ರಭುತ್ವವನ್ನು ಅಕ್ಷರಶಃ ದಮನಗೊಳಿಸಿದ ಕಿರಾತಕ ಆಡಳಿತದ, ಜಗತ್ತೇ ಕಾಣದ ಕ್ರೌರ್ಯದ ಕಥನ ಭಾರತದ ಆಧುನಿಕ ಪೀಳಿಗೆಗೆ ಗೊತ್ತೇ ಇಲ್ಲ!
ಅವರಿಗೆ ಹೇಗೆ ಹೇಳಿದರೂ ಕಲ್ಪಿಸಲಾಗದ ನಿನ್ನೆಗಳ ಕಥನದ ಬಲಿಪಶುಗಳು ನಮ್ಮ ನಡುವೆ ಕೆಲವೇ ಕೆಲವರಷ್ಟೇ ಉಳಿದಿದ್ದಾರೆ.
ಅವರು ದೇಶದ ರಾಜಕೀಯ ಚರಿತ್ರೆಯ ನಿನ್ನೆಯ ಜೀವಂತ ದೃಷ್ಟಾಂತ!!
ಇನ್ನೊಂದು ದಶಕ ದಾಟಿದರೆ ಅವರೊಬ್ಬರೂ ಇರಲಾರರು !

ದೇಶಕ್ಕೆ ಹೇಗೆ ನಟ್ಟಿರುಳು ಸ್ವಾತಂತ್ರ್ಯ ಸಿಕ್ಕಿತ್ತೋ, ಹಾಗೆಯೇ ಪಟ್ಟಭದ್ರ ಹಿತಾಸಕ್ತಿಯ ಪ್ರಧಾನಿ ಇಂದಿರಾ ಗಾಂಧಿ 1975ರ ಜೂನ್ 25ರ ಕಾರಿರುಳು ಜನತೆಯ ಪ್ರಜಾಪ್ರಭುತ್ವ ಬದ್ಧ ಸ್ವಾತಂತ್ರ್ಯ ವನ್ನುಅಧಿಕಾರ ವ್ಯಾಮೋಹದಿಂದ ಕಸಿದ್ದಿದ್ದರು.!
ಮಾಧ್ಯಮ ಸಹಿತ ಮನುಷ್ಯರ ಮಾತಾಡುವ ಹಕ್ಕನ್ನೇ ನಿರ್ಬಂಧಿಸಿ, ಅಂಕುಶ ಹೇರಿದ್ದರು.
ಯಾರಿಗೂ ಮುಕ್ತ ಅಭಿಪ್ರಾಯ
ಸ್ವಾತಂತ್ರ್ಯವೇ ಇರಲಿಲ್ಲ…

ಸರಕಾರಿ ಧೋರಣೆಯನ್ನು ಯಾರು ಪ್ರಶ್ನಿಸುತ್ತಾರೋ ಅವರ ಜನ್ಮವನ್ನೇ ಜಾಲಾಡುವಂತ ಸರಕಾರೀ ಪ್ರಾಯೋಜಿತ ದೌರ್ಜನ್ಯದ ದಮನ ನಡೆಯಿತು. ಥೇಟ್ ತಾಲೀಬಾನಿಗಳು ಮತೀಯ ಉಗ್ರಗಾಮಿತ್ವದಿಂದ ಮಾಡುವಂಥದ್ದೇ ಆಕ್ರೋಶದ ದಮನವಿದು.
ಇಂಥ ಕರಾಳತೆ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲೇ ನಡೆಯದಂಥ ಪ್ರತ್ಯಕ್ಷ/ಭೂಗತ ಹೋರಾಟಗಳು ನಡೆದ ಏಕೈಕ ಊರೆಂದರೆ ಅಂದಿನ ಕಾಸರಗೋಡು ತಾಲೂಕು!
ತುರ್ತು ಪರಿಸ್ಥಿತಿಯನ್ನು ಪ್ರಶ್ನಿಸಿ ಕಾಸರಗೋಡು ಸಹಿತ ದೇಶದೆಲ್ಲಡೆ ಆಂದೋಲನಗಳು ನಡೆದು ಆಡಳಿತ ವಿರುದ್ಧ ಜನಾಭಿಪ್ರಾಯ ರೂಪುಗೊಂಡು ಜನತಾ ಸರಕಾರ ಬರುವಷ್ಟರ ಮಟ್ಟಿಗೆ ಬದಲಾವಣೆಯ ಪಲ್ಲಟ ನಡೆದಿದ್ದರೆ, ಅಂದಿನ ಇಂದಿರಾ ಸರ್ಕಾರಿ ದೌರ್ಜನ್ಯದ ವಿರುದ್ಧ ಅತ್ಯಂತ ಪ್ರಬಲ ಹೋರಾಟದ ಆಂದೋಲನ ನಡೆದ ಕಾಸರಗೋಡು ತಾಲೂಕಿನ ಚಳುನಳಿಗೆ ಈಗ 50ರ ನಡುವಯಸ್ಸು…

ಇಂದು ದೇಶ ಕಂಡ ಪರಿವರ್ತನೆಯ ಮೋದಿ ಆಡಳಿತ ಯುಗಕ್ಕೆ ಬೀಜಾಂಕುರವಾದದ್ದೇ ಈ ಆಂದೋಲನದಿಂದ!!
ಅಂದು ನಾನು ಶೂನ್ಯ-ರಾಷ್ಟ್ರ ದೊಡ್ಡದು ಎಂದು ಪೂರ್ಣಾವಧಿ ಜನಸಂಘದ ಕಾರ್ಯಕರ್ತನಾಗಿ ಕುಂಬಳೆಯಲ್ಲಿದ್ದ ವಿ. ರವೀಂದ್ರನ್ 50ವರ್ಷಗಳ ಬಳಿಕವೂ ಕುಂಬಳೆಯಲ್ಲೇ ಇದ್ದಾರೆ. ಅಂದಿನ ತ್ಯಾಗೋಜ್ವಲವಾದ ಪ್ರಜಾಪ್ರಭುತ್ವ ಸಂರಕ್ಷಣೆಯೆಂಬ ಎರಡನೇ ಸ್ವಾತಂತ್ರ್ಯ ಹೋರಾಟದಲ್ಲಿ ಮೀಸೆ ಅರಳುವಮುನ್ನವೇ
ಪಾಲ್ಗೊಂಡು, ದೌರ್ಜನ್ಯಗಳ ಮೆರವಣಿಗೆಯನ್ನೆಲ್ಲಾ ಮೆಟ್ಟಿಕೊಂಡು -ಮುತ್ತಿಕೊಂಡು
ನೆತ್ತರು ಹರಿಸಿ, ಉಪವಾಸ ಬದುಕಿ ಅನುಭವಿಸಿದ ಕರಾಳ ಕಥನ ಉಂಟಲ್ಲಾ ಅದು ರೋಮಾಂಚಕ.
ಭಾವ ತೀವ್ರ.


ಅದನ್ನವರ ಮಾತುಗಳಲ್ಲೇ ಮಾತುಗಳಲ್ಲೇ ಕೇಳುವಾಗ ಗಡಿನಾಡ ನೆಲದಲ್ಲಿ ಹೀಗೆಲ್ಲಾ ನಡೆದಿತ್ತೇ ಎಂದಚ್ಚರಿ ಮೂಡುತ್ತದೆ.
ಹೌದು.. ಈ ಕಥನಗಳನ್ನು ಜೋಡಿಸಿ ವಿ. ರವೀಂದ್ರನ್ ಮಲಯಾಳದಲ್ಲೊಂದು ಕೃತಿ ರಚಿಸಿದ್ದಾರೆ. ಅದು “ತುರ್ತು ಪರಿಸ್ಥಿತಿಯ ಕರಾಳ ದಿನಗಳು” ಎಂಬ ಹೆಸರಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ.
ರವೀಂದ್ರನ್ ಬರಹಗಾರನಲ್ಲ. ಆದರೆ ತುರ್ತುಪರಿಸ್ಥಿತಿಯಲ್ಲಿ ಐತಿಹಾಸಿಕ ಹೋರಾಟದ ಸೆರೆಮನೆವಾಸದ ದೌರ್ಜನ್ಯ ದ ಕಹಿನೀರು ಕುಡಿದವರು. ಎಂದೆಂದೂ ಮರೆಯಲಾಗದಂತೆ ಅಂದಿನ ಒಂದೊಂದು ನೆನಪೂ ಅವರ ಮನದಲ್ಲಿ ಅಚ್ಚಳಿಯದೇ ಹೆಪ್ಪುಗಟ್ಟಿದೆ. ಅದು ದೇಶದೆಲ್ಲೆಡೆ ಪ್ರಕ್ಷಬ್ಧ ಪರಿಸ್ಥಿತಿ ನಿರ್ಮಿಸಿದ ಕಾಲ. ಜೈಲುಗಳೆಲ್ಲ ತುಂಬಿ ತುಳುಕಿದ ಕಾಲ. ಹೇಗೆ ದಮನಿಸಿದರೂ ಹೋರಾಟಗಳು ಸದ್ದಡಗದ ದಿನಗಳು. ಇಂಥ ಹೋರಾಟಕ್ಕೆ ಕಾರಣವಾದರೂ ಏನು..?

1971ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ರಾಯ್ ಬರೇಲಿಯಿಂದ ಗೆದ್ದಿದ್ದರು. ಆದರೆ ಈ ಗೆಲುವು ಸಕ್ರಮವಾಗಿರಲಿಲ್ಲ. ತನ್ನ ಚುನಾವಣಾ ಪ್ರಚಾರಕ್ಕವರು ಸರಕಾರಿ ವ್ಯವಸ್ಥೆಗಳನ್ನೆಲ್ಲ ಬಳಸಿದ್ದರು. ಇದನ್ನು ಪ್ರಶ್ನಿಸಿ ಪ್ರತಿಸ್ಪರ್ಧಿ ರಾಜ್ ನಾರಾಯಣ್ ಅಲಹಾಬಾದ್ ಕೋರ್ಟಿಗೆ ದೂರಿತ್ತರು. ಆರೋಪ ಸಾಬೀತಾಗಿ ಇಂದಿರಾ ಗೆಲುವು ಅಸಿಂಧು ಎಂದೇ ಘೋಷಣೆಯಾಯಿತು. 6ವರ್ಷ
ಯಾವ ಚುನಾನಣೆಗೂ ಸ್ಪರ್ಧಿಸದಂತೆ ನಿರ್ಬಂಧ ಹೇರಲ್ಪಟ್ಟಿತು.
ಪ್ರಧಾನಿ ಇಂದಿರಾ ಗಾಂಧಿ ಕೆರಳಿದ್ದೇ ಇಲ್ಲಿಂದ…
ಈ ತೀರ್ಪಿಗೆ ತಡೆ ಕೋರಿ ಇಂದಿರಾ ಪರ ವಕೀಲ ನಾನಾ ಭಾಯ್ ಫಾಲ್ಖೀವಾಲ ಮೇಲ್ಮನವಿ ಸಲ್ಲಿಸಿದರು.
ನ್ಯಾಯಾಲಯದಿಂದ ಮರಳಿಬಂದ ಇಂದಿರಾ ಏಕಾಏಕಿ 1975ರ ಜೂನ್ 25ರಂದು ನಡುರಾತ್ರಿ ದೇಶಕ್ಕೆ ತುರ್ತುಪರಿಸ್ಥಿತಿ ಘೋಷಿಸಿಯೇ ಬಿಟ್ಟರು. ಇದು ಭಾರತದ ರಾಜಕೀಯದ ನವೋದಯದ
ಮುನ್ನುಡಿ ಆಗುತ್ತದೆಂದು ಅಂದು ಯಾರಿಗೂ ಕಲ್ಪನೆಯೇ ಇರಲಿಲ್ಲ. ಆದರೆ ಆ ದಿನಗಳಲ್ಲಿ ನಡೆದ ಗುಪ್ತ ಸಭೆ, ಬಹಿರಂಗ ಹೋರಾಟ, ಪೋಲೀಸ್ ದೌರ್ಜನ್ಯ ಉಂಟಲ್ಲಾ…
ಅದೆಲ್ಲ ಇಂದಿನವರಿಗೆ ಗೊತ್ತೇ ಇಲ್ಲ ಎಂದು ವಿ. ರವೀಂದ್ರನ್ ನಿನ್ನೆಗಳ ನೆನಪಿಗೆ ಜಾರಿದರು…
(ಇದರ ಮುಂದಿನ ಕಂತು ನಾಳೆ ಮುಂದುವರಿಯಲಿದೆ….)

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00