- ಈ ವಾರ – ರಜನಿ ಭಟ್ ಬರಹ
ಬದುಕು ಎಂಬುದು ಜಟಿಲವೋ ಸರಳವೋ ಹೇಳಲು ಕಷ್ಟ! ಅದರ ಸೂತ್ರ , ಗಣಿತದಲ್ಲಿದ್ದಂತೆ (a + b)2 = a2 + 2ab + b2 ಎಂದು ಪೂರ್ವನಿರ್ಧಾರಿತವೂ ಅಲ್ಲ! ಕೆಲವರಿಗೆ ಬದುಕು ಸರಳರೇಖೆಯಂತಿದ್ದರೆ ಇನ್ನು ಕೆಲವರಿಗೆ ಅದು ಏರಿಳಿತಗಳ ಝಿಗ್ ಝಾಗ್ ಲೈನ್ಸ್ …. !
ನಾವು ಬಸ್ ಅಥವಾ ರೈಲು ಪ್ರಯಾಣ ಮಾಡ್ತೀವಿ ಅಂತಿಟ್ಕೊಳ್ಳಿ. ಸೀಟಲ್ಲಿ ಕುಳಿತಾಗ ಸ್ವಲ್ಪ ಅತ್ತಿತ್ತ ನೋಡಿ ಮಾತಾಡುವವರಾಗಿದ್ದರೆ, ಅಪರಿಚಿತರು ಹತ್ರ ಕುಳಿತಿದ್ದರೆ ಸಣ್ಣ ಮುಗುಳು ನಗುವಿನಿಂದ ಪರಸ್ಪರ ಸಣ್ಣ ಪರಿಚಯಕ್ಕೆ ಅಡಿಪಾಯ ಹಾಕ್ತೇವೆ.ನಂತರ ಎಲ್ಲಿಂದ ಎಲ್ಲಿಗೆ ಹೋಗಬೇಕು ಅಂತ ಮಾತಿಗೆ ಆರಂಭಿಸ್ತೇವೆ. ಮುಂದೆ, ಊರಿನಲ್ಲಿ ಅವರಿದ್ದಾರೆ ಇವರಿದ್ದಾರೆ ನೆಂಟ್ರಿದ್ದಾರೆ ಅವರನ್ನು ಬಲ್ಲಿರಾ ಅಂತ ಮಾತನ್ನು ಮುಂದುವರಿಸಿ ಪರಿಚಯ ಹತ್ತಿರ ಮಾಡಲು ನೋಡುತ್ತೇವೆ. ತಮ್ಮ ಜೀವನ ಕಥೆಗಳಿಂದ ಸುರುವಾದುದು ಸಮಸ್ಯೆಗಳು ಅಲ್ಲಿಂದ ಮನೆಯ ಬಗ್ಗೆ ಮನೆ ಮಂದಿಯ ಬಗ್ಗೆ ಆಡ್ತೇವೆ. ಯಾಕೆ ಹೀಗೆ? ಅಲ್ಪ ಸಮಯದಲ್ಲಿ ಅವರ್ಯಾಕೆ ಹತ್ತಿರವಾಗಬೇಕು? ನಾವೇಕೆ ಅವರಲ್ಲಿ ನಮ್ಮ ಕಥೆಗಳು ಸಮಸ್ಯೆಗಳನ್ನು ಹಂಚಿಕೊಳ್ಬೇಕು? ಅದುವೇ ಕಂಫರ್ಟ್ ಝೋನ್. ಇದು ಎಲ್ಲರಲ್ಲು ನಮಗೆ ಸಿದ್ಧಿಸಲ್ಲ!

ನೋಡಿ, ನಮ್ಮ ಮನೆಯಲ್ಲಿದ್ದವರು, ಅಥವಾ ಮನೆಯ ಅಕ್ಕ ಪಕ್ಕ ಇದ್ದವರು ಹಲವಾರು ವರ್ಷಗಳ ಪರಿಚಯ ಇದ್ದರು ಸಹ ಆ ಕಂಫರ್ಟ್ ಝೋನ್ ಸಿಗಬೇಕೆಂದಿಲ್ಲ. ನಮ್ಮ ಸಮಸ್ಯೆಗಳನ್ನು ಕಥೆಗಳನ್ನು ಅವರು ಕೇಳುವರು. ಆದರೆ ಹೇಳಲು ನಮಗೆ ಆ ಭರವಸೆ ಬೇಕಲ್ಲ! ಅದು ಹೇಗೆ ಲಭಿಸಬಹುದು?
ನಮ್ಮ ಭಾವನೆಗಳಿಗೆ ಸಿಗುವ ಸ್ಪಂದನೆಗಳಲ್ಲಿ ಅದು ಅಡಗಿದೆ. ಅವರ ಮುಖಭಾವದಲ್ಲಿ ಅದು ಕಾಣಸಿಗುತ್ತದೆ. ಅವರ ದೃಷ್ಟಿಯಲ್ಲಿ ನಮಗೆ ಗೋಚರಿಸುತ್ತದೆ. ನಾವು ಹೇಳೋದು ಇಷ್ಟ ಆಗ್ತಿದೆಯೋ ಇಲ್ಲವೋ ಎಂದು.. ಮಾತು ಮುಂದುವರಿಯಲು ನೇರವಾದ ಕಾರಣಗಳಿವು. ಮಾತಿನ ನಡುವೆ ಬಾಯಿ ಹಾಕಿ ಬೇರೆ ವಿಚಾರ ಮಾತನಾಡಿದರೆ ಅಲ್ಲಿಗೆ ಮಾತು ಖತಂ.ಮುಗಿಯಿತು… ಮುಂದೆ ಕಾಟಾಚಾರಕ್ಕೆ ಮಾತಷ್ಟೆ. ಬಹಳ ಸಮಯದ ನಂತರ ಮತ್ತೆ ಭೇಟಿ ಆದರೆ ಜಸ್ಟ್ ಫರ್ ಫಾರ್ಮಾಲಿಟಿಗೆ ನಗು ಮಾತು ಅಷ್ಟೆ!
ಕೆಲವರನ್ನು ಇಷ್ಟವಾಗಲು ಕಾರಣಗಳು ಬೇಕಿಲ್ಲ! ಹಾಗೆಯೇ ಇಷ್ಟಪಡದಿರಲು ಸಕಾರಣಗಳು ಇದ್ದರು ಅಕಾರಣವಾಗಿ ಸಹ ಇಷ್ಟ ಆಗದವರು ಇದ್ದಾರೆ.
ಒಂದು ನಗು ಒಂದು ಮಾತು ಒಂದು ನೋಟ ಒಬ್ಬರ ಬದುಕನ್ನು ಬದಲಿಸಬಹುದು. ಹಾಗೆಯೇ ಕೇಳುವಿಕೆಯೂ ಸಹ!

ನಮ್ಮ ಮನೆಯಿಂದ ಸಾಗುವಾಗ ಒಂದು ಅಶ್ವತ್ಥ ಕಟ್ಟೆ ಸಿಗುತ್ತದೆ. ಅದರಲ್ಲಿರುವ ಮರದ ಟಿಸಿಲುಗಳು ವಿಶಾಲವಾಗಿ ಬಾನೆತ್ತೆರಕ್ಕೆ ಹರಡಿ ತನ್ನ ಬಾಹುಗಳನ್ನು ಚಾಚಿ ನಿಂತಿದೆ. ಅದರ ಅಡಿ ನಡೆಯುವಾಗ ಸಮಾಧಾನ, ಏನೋ ವಿಶೇಷವಾದ ಅನುಭವ ನನಗಾಗುವುದು. ಒಂದೆರಡು ಬಾರಿ ಅಲ್ಲ ಪ್ರತಿಬಾರಿಯು! ಅದು ನಮ್ಮೂರ ದೇವಸ್ಥಾನ ಕಾವೂರು ಮಹಾಲಿಂಗೇಶ್ವರ ಕೃಪೆ, ಅನುಗ್ರಹ ಇರುವ ಕಟ್ಟೆ. ನನಗರಿವಿಲ್ಲದೆ ನಾನು ಅದಕ್ಕೆ ಕನೆಕ್ಟ್ ಆಗುತ್ತೇನೆ. ಅದು ರೂಢಿಸಿಕೊಂಡಿರುವುದರಿಂದಲೋ ಏನೋ ಅಲ್ಲಿ ನಡೆವ ಆ ಪುಟ್ಟ ಸಮಯದಲ್ಲಿ ನನ್ನೆಲ್ಲ ದುಃಖ, ಸಂತೋಷ,ಸಂಭ್ರಮಗಳನ್ನು ಒಂದುಸಿರಿನಲ್ಲಿ ಅರುಹಿ ನಡೆಯುತ್ತೇನೆ. ಅದು ಭರವಸೆ ಆ ಮರ ನನ್ನನ್ನು ಕೇಳುತ್ತದೆ ಎಂದು!
ಮುಂದಕ್ಕೆ ನಡೆದಾಗ ಅಲ್ಲೊಂದು ಪುಟ್ಟ ಮನೆ, ಮನೆಯಲ್ಲಿ ಆಕೆ ಇರುತ್ತಾಳೆ. ಅವಳಾಯಿತು ಅವಳ ಕೆಲಸ ಆಯಿತು ಎಂಬಂತೆ ಇದ್ದವಳು ನನಗೆ ಅವಳೆಂದರೆ ವಿಶೇಷ ಕಾಳಜಿ ಎಂದೆನ್ನಬಹುದು. ಆ ಕಾಳಜಿಗೆ ಕಾರಣಗಳು ಏನೂ ಇಲ್ಲ.. ಒಂದೆರಡು ಬಾರಿ ನಡೆದು ಸಾಗುವಾಗ ನನ್ನ ನೋಡಿ ಮಂದಹಾಸ ಬೀರಿದವಳು, ಮುಂದೆ ಕಂಡಾಗ ಹಲ್ಲುಬಿಟ್ಟು ನಕ್ಕಿದ್ದಳು. ತದ ನಂತರ ಪುಟ್ಟ ಮಗುವನ್ನು ಸ್ಕೂಟರಲ್ಲಿ ಕೂರಿಸಿಕೊಂಡು ಹೋಗುವವಳು ನಿಲ್ಲಿಸಿ ” ಮೇಡಂ ಇಲ್ಲಿಗೆ ಹೊಸಬರಾ?” ಎಂದು ಪ್ರಶ್ನಿಸಿದ್ದಳು.
ನಾನು ಮನಸ್ಸಲ್ಲಿ ಸಂವಹನ ನಡೆಸುತ್ತಿದ್ದ ಅಶ್ವತ್ಥ ಮರ ಆಗ ನನ್ನ ಕರೆದಂತೆ ಭಾಸವಾಗಿತ್ತು.
” ಹೊಸಬಳು ಅಲ್ಲ ಅನ್ನು … ನಾನಿದ್ದೇನೆ ಅನ್ನು”ಎಂದು ಹಿಂದಿನಿಂದ ಒತ್ತಿ ಒತ್ತಿ ಕೂಗಿ ಕರೆದಂತಾಗಿತ್ತು

ಅಲ್ಲಿಂದ ನಮ್ಮ ನಡುವಿನ ಬಾಂಧವ್ಯ ಆರಂಭವಾಯಿತು. ಹಸನ್ಮುಖಿ ಆಕೆ. ದುಡಿದು ಮಗಳನ್ನು ಬೆಳೆಸುವ ಗಟ್ಟಿಗಳು.ಪುಟ್ಟ ರೂಮಿನಲ್ಲಿ ವಾಸ.ಗಂಡ ಅನ್ನುವವ ಎಲ್ಲೋ ಇದ್ದಾನೆ. ನನ್ನ ಪಂಗಡವಲ್ಲ,ಜಾತಿ,ಧರ್ಮವೂ ಅಲ್ಲ. ಅವಳ ಮಾತು ಅದೆಷ್ಟು ಮೃದು. ಕಷ್ಟಪಟ್ಟು ಡಿಗ್ರಿ ಸಂಪಾದಿಸಿದವಳು. ಅವಳು ನಿಧಾನವಾಗಿ ಅವಳ ಕಥೆ ಬಿಚ್ಚಿಡುತ್ತಾ ಹೋದಳು. ಸಮಯ ಸಿಕ್ಕಾಗಲೆಲ್ಲ ಹೊಲಿಗೆ ಮೆಶಿನ್ ಮೆಟ್ಟುತ್ತಾಳೆ. ಅವಳ ಹೊಲಿಗೆ ಮೆಶಿನ್ ಸದ್ದಿನೊಂದಿಗೆ ರೀಲಿನಂತೆ ಕಥೆಯೂ ಸಾಗುತ್ತದೆ. ಕೆಲವು ಕಡೆ ವೇಗ ಕೆಲವು ಕಡೆ ನಿಧಾನಗತಿ! ಮೆಶೀನೂ ..ಅವಳ ಬದುಕೂ… ನಾನು ಕಿವಿಯಾಗುತ್ತೇನೆ. ಕೊನೆಗೊಂದು ಅವಳ ನಿಟ್ಟುಸಿರಿನೊಂದಿಗೆ ನನ್ನದೂ ಒಂದು ನಿಟ್ಟುಸಿರು… ಹೀಗಕ್ಕ ಬದುಕು ಅಂತಾಳೆ… ಸಾಫ್ಟ್ ಇರಬಾರದು ಅಂತಾಳೆ. ಇದ್ದರೆ ಬದುಕುವುದು ಕಷ್ಟ ಅಂತಾಳೆ. ಮೊದಮೊದಲು ಅಳುತ್ತಿದ್ದೆ ಅಂತಿದ್ದವಳು ನಂತರ ಎಲ್ಲೂ ಕಣ್ಣ ನೀರು ಹರಿಸದೆ ಬದುಕು ಕಟ್ಟಿಕೊಂಡಿದ್ದಾಳೆ.
ನಾನು ಅವಳಲ್ಲಿ ನನ್ನ ಸೀರೆಗೆ ರವಿಕೆ ಹೊಲಿಸುತ್ತೇನೆ. ಕೆಲವು ಸಲ ಏನೇನೊ ಹೊಲಿದು ಕೊಟ್ಟಿದ್ದಾಳೆ. ಕೆಲವು ಸಲ ಪರ್ಪೆಕ್ಟ್. ಕೆಲವೆಲ್ಲ ಡಿಸೈನ್ ಕಳಿಸಿ ಯಾವುದು ಆದೀತು ಅಂತ ಖುಷಿಯಿಂದ ಆಸಕ್ತಿಯಿಂದ ಕೇಳ್ತಾಳೆ. ನಿನಗೆ ಯಾವುದು ಇಷ್ಟವೋ ಅದನ್ನೆ ಹಾಕು ಅಂತೇನೆ. ಇನ್ನು ಕೆಲವು ಸಲ ನನ್ನ ಆಯ್ಕೆಗೆ ನಾನು ಹೋಗಿ ಕಳಿಸುತ್ತೇನೆ. ಹೊಲಿದ ರವಿಕೆ ,ಅದರ ಡಿಸೈನ್ ನ ಪೋಟೊವನ್ನು ನಡುರಾತ್ರೆಯಾದರು ಕಳಿಸಿಯೇ ಅವಳು ಮಲಗೋದು. ಹಣ ಮಾತ್ರ ಕೊಡಿ ಅಂತ ಅವಳು ಕೇಳೋದೆ ಇಲ್ಲ, ನಾನು ನೆನಪಿಸಿ ಕಳಿಸಬೇಕು. ಈಗ ಹೊಲಿಗೆಯಲ್ಲಿ ಅವಳ ಕೈ ಕೂತಿದೆ. ಮುಂದುವರೀತಾಳೆ ಬದುಕಲ್ಲಿ. ಹೊಲಿದ ನನ್ನ ರವಿಕೆಗಳು ಹಾಳಾದಾಗ ಬೆದರಿದ್ದಳು. “ಹೆದರಬೇಡ, ಕೆಲವು ಆಗತ್ತೆ ಹಾಗೆ” ಅಂದಿದ್ದೆ. ಮತ್ತೆ ಚಿಗುರಿ ನಳನಳಿಸಿದ್ದಳು. ನಳನಳಿಸುತ್ತಿದ್ದಾಳೆ ಕೂಡಾ!
ರವಿಕೆ ಹೊಲಿದದ್ದು ಹಾಳಾಗಿದ್ದಾಗ ನನಗೆ ಅವಳ ಮೇಲೆ ಸಿಟ್ಟು ಬಂದಿರಲಿಲ್ಲ. ರವಿಕೆ ಪೀಸ್ ಬೇರೆ ತಗೋಬಹುದು. ಆದರೆ ಆ ಸಣ್ಣ ಕಾರಣದಿಂದ ಅವಳ ಬಾಂಧವ್ಯವನ್ನು ಕಡಿಯಲು ಮನಸ್ಸಿಲ್ಲ. ಬಾಂಧವ್ಯ ಬೆಳೆಯಲು ಬೆಳೆಯಲು ವರುಷಗಳು ಬೇಕು. ಕಡಿಯಲು ಒಂದು ಮಾತು, ಒಂದು ನೋಟ, ಒಂದು ಸಣ್ಣ ಮೂವ್ ಸಾಕಾಗತ್ತೆ, ಅದರಲ್ಲು ಅಂತಹ ಮುಗ್ಧ ಪ್ರೀತಿ ತೋರುವ ಮನಸ್ಸುಗಳಿಗೆ ನೆವರ್.. ಮಾಡಲೇಬಾರದು.
ಕೆಲವೊಂದು ಸಲ ಕಿವಿಯಾಗೋದು ಒಂದು ಭಾಗ್ಯ. ಅದರಿಂದ ಕಳಕೊಳ್ಳುವುದು ಏನೂ ಇಲ್ಲ ಅಂದ್ರೆ ಯಾಕೆ ಕಿವಿಯಾಗಬಾರದು. ಇದರಿಂದ ನಮಗರಿವಿಲ್ಲದೆ ನಾವು ಬೆಳೀತೇವೆ. ಸಹನೆ ಮತ್ತಷ್ಟು ಹೆಚ್ಚತ್ತೆ. ಒಂದು ಬಾಂಧವ್ಯ ಸಿಗಲು ಅದನ್ನು ಉಳಿಸುವ ಬಗೆ ಸಹ ಗೊತ್ತಾಗತ್ತೆ. ಕಿವಿಯಾಗೋದು ತಪ್ಪಲ್ಲ ಆದರೆ ಅದು ಜನರು ಜಾಗ ಇವುಗಳನ್ನು ಹೊಂದಿಕೊಂಡಿದೆ.
ಬದುಕು ಯಾವ ರೀತಿ ಬರತ್ತೆ ಯಾವ ರೀತಿ ಹೋಗತ್ತೆ ಒಂದು ಅರಿಯದು. ಅದರಲ್ಲು ಇಂದಿನ ಈ ವೇಗದ ಯುಗದಲ್ಲಿ ಸಂಬಂಧಗಳನ್ನು ಉಳಿಸಿ ಬೆಳೆಸಲು ಹೆಣಗಾಡುವ ಸಮಯದಲ್ಲಿ ಇಂತಹ ಮುಗ್ಧ ಜೀವಗಳಿಗೆ ಕಿವಿಯಾಗೋದು ಒಂಥರ ಖುಷಿಯ ಕೆಲಸವೇ!

- (ಲೇಖಕಿ ರಜನಿ ಭಟ್ ಕನ್ನಡದ ಸೃಜನಶೀಲ ಲಲಿತ ಬರಹಗಳ ಲೇಖಕಿ. ಗೃಹಿಣಿ.
ಅವರ ಬರಹದಲ್ಲಿ ಜೀವನ ಜನ್ಯ ಬಂಧುತ್ವದ ಒಲವಿನಕ್ಕರೆ ಇದೆ…)








