-
Fathers day ಗುಂಗಿನಲ್ಲಿ ಅಪ್ಪನ ನೆನಪಿನ ಲಲಿತ ಬರಹ
✍️ *ರಜನಿ ಭಟ್- ಈ ವಾರ
Fathers Day…
ನಿನ್ನೆಗೆ ಮುಗಿಯಿತು. ಹಲವರು ತಮ್ಮ ತಮ್ಮ ಅಪ್ಪನ ಫೋಟೊ, ವಿಡಿಯೊ ಶೇರ್ ಮಾಡಿದ್ದು ಕಂಡೆ. ಮೊಬೈಲ್ ಎಂಬ ಜೋಳಿಗೆಯಲ್ಲಿ ಭದ್ರವಾಗಿದ್ದ ನನ್ನ ಅಪ್ಪನ ವಿಡಿಯೊಗಳನ್ನು ತೆರೆದು ನೋಡಿ ನಾನೂ ಸಂತಸಪಟ್ಟೆ. ಮೊಬೈಲ್ ಲ್ಲಿ ಚಿತ್ರೀಕರಿಸಿದ್ದು ಕಣ್ಣೆದುರು ತೆರೆದರೆ ಮಾತ್ರ ಕಂಡೀತು. ಅವರ ಜತೆ ಕಳೆದ ದಿನಗಳನ್ನು ಮನಪಟಲವೆಂಬ ಸ್ಕ್ರೀನ್ ನಲ್ಲಿ ಒನ್ಸ್ ಮೋರ್ ಎಂದು ನನಗೆ ನಾನೇ ಹೇಳಿಕೊಂಡು ಓಡಿಸಲು ನನಗಿರುವ ದಿನ ಇದು ಸಹ ಒಂದು , ಕಾರಣ ನನಗೆ ಅನುದಿನವೂ… father’s day…
ಅಪ್ಪನನ್ನು ಕಳಕೊಳ್ಳದೆ ಇರುವ ಮಕ್ಕಳ ‘ಅಪ್ಪಂದಿರ ದಿನ’ಕ್ಕು, ಅಪ್ಪನ ಕಳಕೊಂಡವರ ‘ಅಪ್ಪಂದಿರ ದಿನ’ಕ್ಕು ಬಹಳ ವ್ಯತ್ಯಾಸವಿದೆ. ಎರಡನೆಯ ಕೆಟಗರಿಯಲ್ಲಿ ನಾನಿರುವವಳು.
ಅಪ್ಪನನ್ನು ಕಳಕೊಂಡ ನನ್ನಂತವರು ನತದೃಷ್ಟರು ಅನ್ನಬೇಕು. ಅವರ ಜತೆಗೆ ಕಳೆದ ಮಧುರ ಕ್ಷಣಗಳನ್ನು ನೆನೆದೊ, ಬರೆದೊ , ದಿನವಿಡೀ ಅವರ ಬಗ್ಗೆ ಮಾತಾಡುತ್ತಾ ಒಂಥರಾ ಕಾಡುವ ದಿನವಷ್ಟೆ ನಮ್ಮ ಪಾಲಿಗೆ.
ಅಪ್ಪನೆಂಬ ಜೀವ ಬದುಕಿರುವಾಗ ನಾವು ಹೇಗೆ ಅವರ ಜತೆ ಇರುತ್ತೇವೆ, ಅವರಿಗೆ ಏನು ಕೊಡುತ್ತೇವೆ ಎನ್ನುವುದು ಅವರನ್ನು ಕಳಕೊಂಡಾಗ ಮೂಡುವ ‘ಮಿಸ್’ ಫೀಲ್ ಇದ್ಯಲ್ಲ ಅನುಲೋಮ ಅನುಪಾತವನ್ನು ಹೊಂದಿಕೊಂಡಿದೆ. ಚೆನ್ನಾಗಿ ನೋಡಿಕೊಂಡರೆ ಧನ್ಯತಾ ಭಾವ, ಇಲ್ಲವಾದರೆ ಜೀವನದುದ್ದಕ್ಕೂ ಕಾಡುವ ಪಾಶವಾಗಿ ನಮ್ಮ ಜತೆ ಇರುತ್ತದೆ. ಕಾಡುತ್ತದೆ..
ನಾನು ಅಪ್ಪನನ್ನು ಕಳಕೊಂಡು ಏಳು ತಿಂಗಳಾಗುತ್ತಾ ಬಂತು. ಅಪ್ಪನದು ಪುಟ್ಟ ಪುಟ್ಟ ಆಸೆಗಳು. ಅದು ನಮಗೇನು ಕೊಡಿಸಲಾಗದವುಗಳಲ್ಲ. ಕೊಡಿಸಿದ್ದೆವು ಕೂಡಾ! ವೃದ್ಧಾಪ್ಯದ ಮರೆವು ಹೇಗೂ ಇತ್ತು. ನಂತರ ಮೊಣ ಕೈಯಲ್ಲಿ ಸಣ್ಣ ಕುರುವೊಂದು ಉಂಟಾಗಿ ಕೀವು ಇಡೀ ಶರೀರ ವ್ಯಾಪಿಸಿದಾಗ ತಡೆಯಲಾರದ ನೋವಿನಿಂದ ಬಸವಳಿದಿದ್ದರು.

ಅಪ್ಪನ ಮರೆವಿನ ಖಾಯಿಲೆಯಂದ
ಆಸ್ಪತ್ರೆಯಲ್ಲಿ ಭರ್ತಿ ಮಾಡುವ ಹಾಗೆ ಸಹ ಇರಲಿಲ್ಲ. ಎರಡು ದಿನಗಳಿಗೊಮ್ಮೆ ಮಂಗಳೂರಿಗೆ ಬಂದು ವೈದ್ಯರನ್ನು ಕಂಡು ಔಷಧಿ ಪಡೆದು ಹೋಗುವ ಮಟ್ಟಿಗೆ ಅದು ಜೋರಾಯಿತು. ಆದರರೂ ಹಠ ಬಿಡದೆ ವೈದ್ಯರು ಹೇಳಿದ್ದನ್ನು ಅವರಿಗಾಗಿ ಚಾಚು ತಪ್ಪದೆ ಮಾಡುತ್ತಿದ್ದೆವು.
ಅಪ್ಪನಿಗೆ ಮಂಗಳೂರಿನ ಬಲ್ಮಠದಲ್ಲಿರುವ ‘ಸ್ವಾಗತ್ ಹೋಟೆಲ್’ ನ ಮಸಾಲ ದೋಸೆ ಎಂದರೆ ಇಷ್ಟವೇ. ಅದರ ಜತೆ ಸಿಗುವ ಸ್ಟ್ರಾಂಗ್ ಕಾಫಿಯೂ. ಆ ಬಾರಿ ವೈದ್ಯರಲ್ಲಿಗೆ ಬಂದಾಗ ” ಅಪ್ಪಾ…ಹೇಂಗೆ ಒಂದು ಕಾಫಿ ಕುಡಿವನ” ಅಂತ ಕೇಳಿದೆ. ಮುಖ ಕೆಳಗೆ ಮಾಡಿ ವೀಲ್ ಚೇರ್ ನಲ್ಲಿ ಕುಳಿತಿದ್ದ ಅವರು ” ಹೂಂ” ಅಷ್ಟೆ ಅಂದರು.
ವೈದ್ಯರನ್ನು ಕಂಡು ಹೊರ ಬಂದಾಗ ಪುನಃ ಕೇಳಿದೆ ” ಸ್ವಾಗತ್ ಕ್ಕೆ ಹೋಪನ?”
ಆಗ ಅವರ ಮುಖದಲ್ಲಿ ನಗುವೊಂದು ಹಾದು ಹೋಯಿತು. ” ಹಾ ಅದು ಆಗಬಹುದು ಬೆಸ್ಟ್” ಅಂದರು.
ನಂತರ ನಮ್ಮ ಸವಾರಿ ಸ್ವಾಗತ ಹೋಟೆಲ್ ಗೆ ಹೋಯ್ತು. ಅಲ್ಲಿ ಅಪ್ಪನ ಇಷ್ಟದ ಮಸಾಲ ದೋಸೆ ಆರ್ಡರ್ ಮಾಡಲಾಯಿತು. ನಡೆಯಲು ಕಷ್ಟವಾದ ಕಾರಣ ಅವರು ಕುಳಿತಿದ್ದ ರಿಕ್ಷಾಗೆ ಹೋಟೆಲ್ ನವರು ತಂದು ಕೊಟ್ಟರು. ಕೈ ನೋವಿದ್ದ ಕಾರಣ ತಿನ್ನುವುದು ಕಷ್ಟವಾದಾಗ ಊರಿಂದ ಬಂದ ಅಟೋಡ್ರೈವರ್ ಪ್ರಶಾಂತ ದೇವಾಡಿಗ ಅಪ್ಪನಿಗೆ ದೋಸೆ ತುಂಡು ಮಾಡಿ ಚಟ್ನಿಯಲ್ಲಿ ಅದ್ದಿ ಬಾಯಿಗಿರಿಸಿದ್ದು, ಕಾಫಿ ಕುಡಿಸಿದ್ದು ಎಲ್ಲವೂ ಅಪ್ಪನ ಮುಖದಲ್ಲಿ ” ನೀವೆಷ್ಟು ನನ್ನ ಪ್ರೀತಿಸುತ್ತೀರಿ” ಎಂಬ ಉದ್ಘಾರ ಹೊರಡಿಸಿದ್ದು ಸತ್ಯ. ಅವರ ಮುಖದಲ್ಲಿದ್ದ ತೃಪ್ತಿ, ಧನ್ಯತಾ ಭಾವ ನನಗೆ ಕಾಣಿಸಿತ್ತು. ಆ ಸಂತೃಪ್ತಿಯ ನಗುವಿನ ಮುಖ ” ಸಾಕು ಹೊಟ್ಟೆ ತುಂಬ ಆತು.ಹೋಪ” ಎಂದು ಹೇಳಿಸಿತ್ತು. ತದ ನಂತರ ನಾವು ಅಲ್ಲಿಂದ ಹೊರಟಿದ್ದು.
ಮರುದಿನ ಸೋಡಿಯಂ ಕಡಿಮೆ ಆಗಿ ಬಿದ್ದುಬಿಟ್ಟು ಆಸ್ಪತ್ರೆಗೆ ಭರ್ತಿ ಮಾಡುವ ಅನಿವಾರ್ಯ ಬಂದಿದ್ದು ಸುಮಾರು ಹದಿನೈದು ದಿನಗಳ ಕಾಲ ಅಲ್ಲಿ ಇದ್ದು ಮನೆಗೆ ಬಂದು ಕೆಲವು ದಿನಗಳು ಇಹದ ಪರಿವೆ ಇರದೆ ಜೀವ ಮಾತ್ರವಿದ್ದು , ಮತ್ತೊಂದು ದಿನ ಮಧ್ಯಾಹ್ನ ನಮ್ಮನ್ನ ಬಿಟ್ಟು ಅಗಲಿದ್ದು ಎಲ್ಲ ಈಗ ನೆನಪಷ್ಟೆ! ನೆನದಾಗ ನಿಡಿದಾದ ಉಸಿರು ಬಿಡುವುದಷ್ಟೆ!
ನೆನಪುಗಳೇ ಹಾಗಲ್ಲವೇ…?
ಅವರು ಇಲ್ಲವೆನ್ನುವುದು ಅರಗಿಸಿಕೊಳ್ಳಲಾಗದೆ, ಅದೆಷ್ಟು ಬರೆದು ಗೀಚಿ ಹಗುರಾಗಿಕೊಳ್ಳಲು ನೋಡಿದಷ್ಟು ಹೆಚ್ಚೆಚ್ಚು ಭಾರವಾದೆ. ದಿನ ಕಳೆದರು ಹೊರ ಪ್ರಪಂಚಕ್ಕೆ ಅದು ಕಾಣಿಸದಿದ್ದರು ಒಳಗೊಳಗೆ ನನಗೆ ನಾನೇ ಸೋತುಹೋಗಿದ್ದೆ. ಇಂದಿಗೆ ಸಹ ಅಪ್ಪ ದಿನವೂ ನೆನಪಾಗುತ್ತಾರೆ. ಆಗ ಒಮ್ಮೆ ಮಾನಸಿಕವಾಗಿ ಅವರ ಜತೆ ಬಾಲ್ಯಕ್ಕೆ ಹೋಗಿ ಬರುತ್ತೇನೆ. ಅವರ ಜತೆ ಕಳೆದ ದಿನಗಳ ನೆನೆಯುತ್ತೇನೆ.
ಅಪ್ಪ ಆಗಸ ಎನ್ನಲಾರೆ ನಾನು, ಅಪ್ಪ ಆಪ್ತಮಿತ್ರ ಎನ್ನಲಾರೆ, ಅಪ್ಪ ಎಂಬ ಅದ್ಭುತ ಸಹ ಎನ್ನಲಾರೆ. ಬಹುಶಃ ಅವರ ನಮ್ಮ ನಡುವೆ ಭಯ ಎನ್ನುವ ವಾತಾವರಣ ಕಲ್ಪಿಸದೆ ಗೆಳೆಯನಂತೆ ಇದ್ದ ಕಾರಣ ಅಪ್ಪ ಅಂದರೆ ಅಪ್ಪ, ಎಲ್ಲರಂತೆ ಸಾಮಾನ್ಯ ಮನುಷ್ಟ ಎಂದು ಅವರ ಜೀವನದಿಂದ ತಿಳಿಸಿದವರು.
ಧೋ ಎಂದು ಮಳೆ ಸುರಿದು ಮರದ ಎಲೆಗಳ ತುದಿಯಿವ ತೊಟ್ಟಿಕ್ಕುವ ಹನಿನೀರಿನಂತೆ ಅಪ್ಪಂದಿರ ದಿನಾಚರಣೆಯ ನಿನ್ನೆಯ ದಿನದಲ್ಲಿ ಕಂಡ ಆಚರಣೆಯ ಮರುದಿನವಾದ ಇವತ್ತಿನ ನನ್ನ ಫೀಲ್. ಒಂಥರಾ ಅಪ್ಪನ ಮುಖವು ಸ್ಪಷ್ಟವಾಗಿ ಗೋಚರಿಸುತ್ತಾ ಅವರ ಮಾತುಗಳು ನನ್ನೊಳಗೆ ರಿಂಗಣಿಸುತ್ತಾ ನೆನಪುಗಳ ಬುತ್ತಿ ಬಿಚ್ಚಿಟ್ಟು ಮತ್ತೊಮ್ಮೆ ಕುಳಿತಿದ್ದೇನೆ.
ವಯಸ್ಸು ಕಳೆದಾಗ ನಾವು ಸಹ ಹಾಗೆ. ಅಪ್ಪನೊ ಅಮ್ಮನೊ ಅವರಿಗೆ ಬೇಕಿರುವುದು ಉಣಲು ಒಂದು ಹಿಡಿ ಅನ್ನ, ಮಲಗಲು ಒಂದು ಚಾಪೆ, ಅನಿವಾರ್ಯ ಇದ್ದವರಿಗೆ ಔಷಧಿ ಜತೆಗೆ ನಮ್ಮಿಂದಾದಷ್ಟು ಮಾತು ಹಾಗು ಪ್ರೀತಿ ಎಂಬ ಅಮೃತ ಇಷ್ಟೆ! ಹೆತ್ತವರು ಇರುವ ತನಕ ನಮಗೆ ವಯಸ್ಸು ಎಷ್ಟೇ ಆಗಲಿ ಮಕ್ಕಳು ನಾವು. ಮಕ್ಕಳಾಗಿ ಮಕ್ಕಳಾಟಿಕೆಯಲ್ಲಿ ಜತೆ ಅವರ ಇದ್ದರೆ ಪ್ರೀತಿಯಲ್ಲಿ ಗದರುವಷ್ಟು ನಾವು ಶಿಶುವಾಗಬೇಕು. ಅ ವಯಸ್ಸಲ್ಲು ಅವರೊಳಗಿನ ಅಮ್ಮ ಅಥವಾ ಅಪ್ಪ ಅನ್ನುವ ಪ್ರೀತಿ ಆಗಲೇ ಕಾಣುವುದು.
ಒಂದಂತು ನಿಜ, ಇರುವಷ್ಟು ದಿನ ಜೋಪಾನ ಮಾಡಿ ಇಡಬೇಕಾದ “ನಿಧಿ” ಯಾ(ವುದೆಂ)ರೆಂದು ಕೇಳಿದರೆ ಅದು ಹೆತ್ತವರು. ಹೌದು ತಾನೇ …ಏನಂತೀರಾ?

- ಲೇಖಕಿ ರಜನಿ ಭಟ್ ಮಂಗಳೂರಿನವರು. ಗೃಹಿಣಿ. ಕನ್ನಡದ ಪ್ರಮುಖ ಪತ್ರಿಕೆ, ನಿಯತಕಾಲಿಕಗಳ ಬರಹಗಾರರು. ಲಲಿತಬರಹಗಳು ಅವರಿಷ್ಟದ ಆಸಕ್ತಿ






