ಕಾಸರಗೋಡು: ಒಂದು ವಾರದ ದುರ್ಬಲ ಮುಂಗಾರಿನ ಬಳಿಕ ಜೂನ್ 11ರೊಂದಿಗೆ ಮಲಬಾರ್ ಸಹಿತ ಕೇರಳ ಮತ್ತು ಕರಾವಳಿ ಸಹಿತ ಕರ್ನಾಟಕದಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ. ಕೇರಳದಲ್ಲಿ ಮುಂದಿನ ಏಳು ದಿನ ಭಾರೀ ಮಳೆಯಾಗುವ ಸಾಧ್ಯತೆಗಳನ್ನು ಸೂಚಿಸಲಾಗಿದೆ.14ರಂದು ಕೇರಳ ತೀರದಲ್ಲಿ ಗಂಟೆಗೆ 50-60ಕೀ ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಜೂನ್ 12, 14ರಂದು ಕಾಸರಗೋಡು ಜಿಲ್ಲೆಯಲ್ಲಿ ಓರೆಂಜ್ ಅಲರ್ಟ್ ಘೋಷಣೆಯಾಗಿದೆ. ಅಂದು ರೆಡ್ ಅಲರ್ಟ್ ಗೆ ಸಮಾನವಾದ ಮಳೆ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರು ವರದಿ:
ಕರ್ನಾಟಕದಲ್ಲಿ ಮಳೆ ಮತ್ತೆ ಅಬ್ಬರಿಸುವ ಲಕ್ಷಣಗಳಿದ್ದು, ಜೂನ್ 11 ರಿಂದ ಜೂನ್14ರ ವರೆಗೆ ಕರಾವಳಿ ಕರ್ನಾಟಕ ಸೇರಿದಂತೆ 13 ಜಿಲ್ಲೆಗಳ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಈ ಜಿಲ್ಲೆಗಳಿಗೆ ಜೂನ್ 12 ರಿಂದ 14ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿಯಾರ್‌ಝೋನ್ 15 ಡಿಗ್ರಿ ಉತ್ತರ ಅಕ್ಷಾಂಶದ ಉದ್ದಕ್ಕೂ ಇದ್ದು, 3.1 ಕಿ.ಮೀ ಹಾಗೂ 5.1 ಕಿ.ಮೀ ಎತ್ತರದ ಮಧ್ಯದಲ್ಲಿ ಇದೆ. ಇದರ ಪ್ರಭಾವದಿಂದ ಕರ್ನಾಟಕ ರಾಜ್ಯಾದ್ಯಂತ ಜೂನ್ 11ರಂದು ಹಲವು ಕಡೆ ಮಳೆಯಾಗಲಿದೆ. ಜೂನ್ 12 ರಿಂದ 16ರ ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಗುಡುಗು, ಮಿಂಚು ಸಮೇತವಾಗಿ ಮಳೆಯಾಗಲಿದೆ. ಮಳೆಯ ಜೊತೆಗೆ ಗಾಳಿಯ ವೇಗವು ಸುಮಾರು 50 ಕಿ.ಮೀ ಇರಲಿದೆ ಎಂದು ತಿಳಿಸಿದ್ದಾರೆ.
ಯಾವ ಜಿಲ್ಲೆಗಳಲ್ಲಿ ಮಳೆ ?
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳ ಕೆಲವು ಕಡೆ ಅತೀ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.
ಈ ಜಿಲ್ಲೆಗಳಿಗೆ ಜೂನ್ 11 ರಂದು ಹಳದಿ ಅಲರ್ಟ್ ಘೋಷಿಸಿದರೆ, ಜೂನ್ 12 ರಿಂದ 14ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.





