ಕ್ರೀಡಾಂಗಣದಲ್ಲಿ ಬಹುಬಾಷಾ ಕಮೆಂಟರಿಯ ಭಾವಗೀತೆ…

ದಿವಾಕರ್ ಉಪ್ಪಳ ಭಾಷಾ ಮೆರುಗಿನ ಕಂಠಸಿರಿಯ ಕಮೆಂಟರಿ ಪಯಣಕ್ಕಿದು 27ವರ್ಷದ ಹೊಳಪು

by Narayan Chambaltimar
  • ಕ್ರೀಡೆಯನ್ನು ಪ್ರೇಕ್ಷಕ ಮನಸ್ಸಿಗೆ ಅದೇ ಆವೇಶಭರಿತ ಸ್ಪೂರ್ತಿಯಿಂದ ತಲುಪಿಸುವ ವಾಞ್ಮಯ ಕಲೆ ಕಮೆಂಟರಿಯಲ್ಲಿ ದಿವಾಕರ್ ಉಪ್ಪಳ ದೇಶದಲ್ಲೇ ಭಿನ್ನ ಪ್ರತಿಭೆ. ತುಳು,ಕನ್ನಡ, ಮಲಯಾಳಂ, ಮರಾಠಿ, ಹಿಂದಿ-ಇಂಗ್ಲೀಷ್ ಸಹಿತ ಆರು ಭಾಷೆಗಳಲ್ಲಿ ಅರಳು ಹುರಿದಂತೆ ಆವೇಶಭರಿತರಾಗಿ ಕಮೆಂಟರಿ ಹೇಳುವ ದಿವಾಕರ್ ಕಮೆಂಟರಿ ಪಯಣಕ್ಕಿದು 27ನೇ ವರ್ಷ.
  • ವೃತ್ತಿಯಲ್ಲಿ ಕೇಬಲ್ ಟಿವಿ ಆಪರೇಟರ್, ಕಮೆಂಟರಿ ಇಷ್ಟದ ಹವ್ಯಾಸ. ಬಹುಭಾಷಾ ಕಾಮೆಂಟರಿಯೇಟರ್ ಎಂದು ಅಂತರಾಷ್ಟ್ರೀಯ ವೇದಿಕೆಯಲ್ಲಿ ಗಡಿನಾಡ ಭಾಷಾ ಸೊಬಗು ಬಿತ್ತಿದ ಇವರು
    ಮೊನ್ನೆ ಕಾರ್ಯಕ್ರಮವೊಂದರಲ್ಲಿ ಸಿಕ್ಕರು. ತುಸು ಹೊತ್ತಿನ ಪಿಸುಮಾತಲ್ಲಿ ಮನಬಿಚ್ಚಿದರು.
    ಅದಿಲ್ಲಿ ಅಕ್ಷರದ ಮೂಲಕ ನಮ್ಮ ಓದುಗರ ಮುಂದಿದೆ..

✍️ ಎಂ.ನಾ.ಚಂಬಲ್ತಿಮಾರ್

ಕ್ರೀಡಾಂಗಣಕ್ಕೆ ಆವೇಶದ ಕಿಚ್ಚಿಡುವ ಭಾವಗೀತೆಯಂಥ ವಾಗ್ಝಾಲದ ಝರಿ ಹರಿಸುವ ಕಮೆಂಟರಿಗಾರ ದಿವಾಕರ ಉಪ್ಪಳ ಇಂದು ಕೇರಳ -ಕರ್ನಾಟಕದ ಕಬಡಿ, ಕ್ರಿಕೆಟ್ ಪ್ರೇಮಿಗಳಿಗೆಲ್ಲ ಚಿರಪರಿಚಿತರು.
ಆಟದಂಗಣದಲ್ಲಿ ಆವೇಶ ಬಿತ್ತುವ ಇವರ ಮಾತಿನ ವರಸೆಯಿಂದಲೇ ಅವರು ಖ್ಯಾತರು. ಅವರ ಪಯಣದ ಕತೆ ಅವರದೇ ನುಡಿಯಲ್ಲಿ ಇಲ್ಲಿದೆ…

 

 

ನನ್ನ ಕಾಮೆಂಟರಿ ಪಯಣಕ್ಕೆ ಬೀಜಾಂಕುರವಾದದ್ದೇ ಮುಂಬೈಯಿಂದ.

ನಾನು ಸ್ವಲ್ಪ ಕಾಲ ಮುಂಬೈಯಲ್ಲಿದ್ದೆ. ಆಗ ಅರೆ ಬರೆ ಹಿಂದಿ ಕಲ್ತಿದ್ದೆ. ನನಗೆ ಕ್ರಿಕೆಟೆಂದರೆ ಬಾಲ್ಯದಲ್ಲೇ ಅತೀವ ಪ್ರೀತಿ. ರೇನಡಿಯೋ ಕಾಮೆಂಟರಿ ಕೇಳಿ ಬೆಳೆದವ ನಾನು. ಆ ಗುಂಗಿನಲ್ಲಿ ನನಗೂ ಕಾಮೆಂಟರಿ ಹೇಳೋ ಆಸೆ..
ಆದರೆ ಅವಕಾಶ ಬೇಕಲ್ಲ…?
ಆಗ ಊರಿನ ಗಲ್ಲಿಗಳಲ್ಲಿ ಇಡೀ ರಾತ್ರಿಯ/ ಹಗಲಿನ ಟೂರ್ನ್ ಮೆಂಟ್ ಗಳಾಗುತ್ತಿದ್ದುವು. ನಾನಲ್ಲಿಗೆ ಅವಕಾಶ ಕೋರಿ ಹೋಗುತ್ತಿದ್ದೆ. ನೂರು ರೂಪಾಯಿಗೆ ಇಡೀ ರಾತ್ರಿ ಹಿಂದಿ ಮಿಶ್ರಿತ ಕಾಮೆಂಟರಿ ಹೇಳಿದ್ದ ದಿನಗಳವು..
ಹೊಟ್ಟೆಪಾಡಿಗೆಂದು ಮತ್ತೊಮ್ಮೆ ಮುಂಬಯಿಗೆ ಹೋದೆ. ಮೂರ್ನಾಲ್ಕು ವರ್ಷ ಇದ್ದೆ. ಆ ವೇಳೆ ಹಿಂದಿ, ಮರಾಠಿ ಭಾಷೆ ಸುಧಾರಿಸಿಕೊಂಡೆ.
ಮರಳಿ ಊರಿಗೆ ಬಂದವನೇ ಮತ್ತದೇ ಕಾಮೆಂಟರಿ ಒಲವಿನಿಂದ ಅವಕಾಶ ಹುಡುಕಿದೆ. ನಮ್ಮೂರಿನ ತುಳು, ಕನ್ನಡ,ಮಲಯಾಳಂ ಜತೆ ಹಿಂದಿ-ಇಂಗ್ಲೀಷ್, ಮರಾಟಿ ಸಹಿತ ಸ್ಥಾನೀಯ ಭಾಷೆಗಳನ್ನೂ ಸೇರಿಸಿ ಭಾಷೆಗಳ ಮಿಸಲ್ ಬಾಜಿ ಥರ ಕಾಮೆಂಟರಿ ಹೇಳಿದೆ. ಕೇಳುಗರಿಗೆ, ಆಟಗಾರರಿಗೆ ವಿನೂತನ ಅನುಭವಗಳಾಯಿತು. ಕೇರಳ -ಕರ್ನಾಟಕದಿಂದ ಅವಕಾಶದ ಕರೆಗಳು ಬರಲಾರಂಭಿಸಿತು.
ಕೇರಳದಲ್ಲಿ ನನ್ನ ಕ್ರಿಕೆಟ್ ಕಾಮೆಂಟರಿಗೆ ಬೇಡಿಕೆಯಾದರೆ ಕರ್ನಾಟಕದಲ್ಲಿ ಕಬಡಿಗೆ ಬೇಡಿಕೆ ಅಧಿಕ!

  • ದೇಶ-ವಿದೇಶಕ್ಕೆ ಒಯ್ದ ಕಬಡಿ…

ಆರಂಭದಲ್ಲಿ ಕ್ರಿಕೆಟಿಗಷ್ಟೇ ಕಾಮೆಂಟರಿ ಹೇಳಿದ್ದೆ. 20ವರ್ಷಗಳ ಮೊದಲು ಕಬಡಿಗೂ ಕಾಲಿಟ್ಟೆ. ಅದು ನನ್ನ ಅವಕಾಶ ಹಿಗ್ಗಿಸಿತು. ಈ ವರೆಗೆ ಸುಮಾರು 14 ಎ ಗ್ರೇಡ್ ರಾಷ್ಟ್ರೀಯ ಕಬಡ್ಡಿ ಟೂರ್ನಿಯಲ್ಲಿ ಕಾಮೆಂಟರಿ ಹೇಳುವ ಅವಕಾಶಗಳೊಲಿಯಿತು.
ದೇಶದ ಅತ್ಯಂತ ಪ್ರಸಿದ್ಧ, ಪ್ರಧಾನ ಆಟಗಾರರು ಪಾಲ್ಗೊಳ್ಳುವ ಟೂರ್ನಿಯೇ ಎ ಗ್ರೇಡ್. ಅದರಲ್ಲಿ ಉ ಭಾರತದ ಆಟಗಾರರೇ ಜಾಸ್ತಿ. ಅವರಿಗೆ ಹಿಂದಿ ಕಾಮೆಂಟರಿಯೇ ಮುಖ್ಯ. ಆದ್ದರಿಂದ ಮೊದಲ ಕರೆ ನನಗೆ ಬಂದೇ ಬರುತ್ತದೆ.
ಈ ವರೆಗೆ ಕೇರಳ-ಕರ್ನಾಟಕದ ಎಲ್ಲಾ ಜಿಲ್ಲೆ ಸಹಿತ ಮಹಾರಾಷ್ಟ್ರದಲ್ಲಿ ಕಮೆಂಟರಿ ಹೇಳಿದ್ದೇನೆ. ವಿಶೇಷ ಎಂದರೆ 2019ರಲ್ಲಿ ಕೊರೋನಕ್ಕಿಂತ ಮುನ್ನ ದುಬಾಯಿ, 2023ರಲಿ ಖತ್ತರ್ ನಲ್ಲಿ ನಡೆದ ಅಂತರ್ ರಾಷ್ಟ್ರೀಯ ಕಬಡಿ ಟೂರ್ನಿಗೂ ದಿವಾಕರ್ ಅವರ ಬಹುಭಾಷಾ ಕಾಮೆಂಟರಿ ಮೆರುಗು ನೀಡಿದೆ.
ಕೇವಲ ಕಬಡಿ-ಕ್ರಿಕೆಟ್ ಕಾಮೆಂಟರಿಯಷ್ಟೇ ಅಲ್ಲ ದಿವಾಕರ್ ಉಪ್ಪಳ ಇತರ ರಸಮಂಜರಿ, ಮದುವೆ, ಸಾಂಸ್ಕೃತಿಕ ಸಮಾರಂಭ ಏನಿದ್ದರೂ ನಿರೂಪಣೆ ನಿರ್ವಹಿಸುತ್ತಾರೆ. ತನ್ನದೇ ವೈವಿಧ್ಯತೆಯಿಂದ ಸಮಾರಂಭ ಚಂದಗಾಣಿಸುತ್ತಾರೆ.

  • ಓಡುವ ಕಾಲದ ಜತೆ ಕ್ಷಣ ಕ್ಷಣ ಬದಲಾಗಬೇಕು..

ಕಾಮೆಂಟರಿ ಎನ್ನುವುದು ನಿತ್ಯ ಸವಾಲಿನ ಕೆಲಸ.ಇಲ್ಲಿ ನಾವು ವರ್ತಮಾನಕ್ಕೆ, ಕ್ಷಣ ಕ್ಷಣ ಅಪ್ಟೇಡ್ ಆಗುತ್ತಲೇ ಇರಬೇಕು. ಇದು ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯ ಹೌದು. ಮಲಯಾಳದಲ್ಲೊಂದು ಮಾತಿದೆ “ಸ್ವಯಂ ಮಾರುವಿನ್ , ಅಲ್ಲಂಗಿಲ್ ನಿಂಙಳ್ ಮಾತಪ್ಪಡುಂ” ಎಂದಃ. ಅಂದ್ರೆ ನಾವು ಬದಲಾಗುತ್ತಲೇ ಇರುವ ಕಾಲದ ಜತೆ ಬದಲಾಗುತ್ತಲೇ ಇರಬೇಕು. ಅಲ್ಲದಿದ್ರೆ ಕಾಲವೇ ನಮ್ಮನ್ನು ಬದಿಗೆ ಸರಿಸಿ ಮುಂದಕ್ಕೆ ಓಡುತ್ತದೆ”ಎಂದರ್ಥ. ಇದು ಪ್ರತಿಯೊಬ್ಬರೂ ನೆಪಪಿಡಬೇಕಾದ ಮಾತು..
ಏಕೆಂದರೆ ಬದಲಾವಣೆಯೇ ಜಗದ ಧರ್ಮ.
ಆದರೆ ಜಗತ್ತು ಬದಲಾದರೂ ಬದಲಾಗದ ಕೆಲವರಿರುತ್ತಾರೆ ನೋಡಿ..
ಒಮ್ಮೆ ಕರ್ನಾಟಕದ ಒಂದ್ಕಡೆ ದೊಡ್ಡ ಕಬಡಿ ಟೂರ್ನಿ. ನನ್ನನ್ನು ಬಹುಭಾಷೆಯ ಕಾಮೆಂಟರಿಗೆಂದೇ ಸಂಘಟಕರು ಕರೆಸಿದ್ದರು. ನಾನು ಪರಿಸರ ಗಮನಿಸಿಯೇ ಭಾಷೆ ಬಳಸುತ್ತಿದ್ದೆ. ಕಾಮೆಂಟರಿ ಹೇಳುವಾಗ ಸ್ವಲ್ಪ ಸ್ವಲ್ಪ ತುಳು, ಮಲಯಾಳಂ ಸೇರಿಸುವುದು ನನ್ನ ರೂಢಿ.ಅದಕ್ಕೆಂದೇ ಅಲ್ಲವೇ ನನ್ನನ್ನು ಕರೆಸುವುದು?
ಅಲ್ಲೇನಾಯಿತೆಂದರೆ ಬೇರೆ ಭಾಷೆ ಬಳಸಿದಾಗ ಪ್ರೇಕ್ಷಕರ ಕಡೆಯಿಂದ ಭಾಷಾ ದುರಭಿಮಾನಿ ಗುಂಪೊಂದು “ಲೋ ಕನ್ನಡದಲ್ಲಿ ಹೇಳೋ…”ರೇಗಿ ಬೊಬ್ಬಿಟ್ಟರು!
ಸಾವಿರಾರು ಮಂದಿಗಳ ನಡುವೆ ನನ್ನನ್ನೇ ಗುರಿಯಾಗಿಸಿದಾಗ
ನನಗದು ಬೇಸರ ಮೂಡಿಸಿತು.ಮೂಡ್ ಕೆಡಿಸಿತು. ಕಾಮೆಂಟರಿಯೇ ಹಾಳಾಯಿತು.
ಇದು ಎಲ್ಲೆಡೆಗಳಲ್ಲಿ ಇಲ್ಲ. ಅಪರೂಪ ಕೆಲವೆಡೆ ಮಾತ್ರ. ನಾನೂ ಓರ್ವ ಗಡಿನಾಡ ಕನ್ನಡಿಗನಲ್ಲವೇ?
ನಾವು ಭಾಷೆಗಳನ್ನು ಪ್ರೀತಿಸಿದರೆ ಮಾತ್ರವೇ ಬದುಕನ್ನು ಪ್ರೀತಿಸಲು ಸಾಧ್ಯ ಎಂದು ಮಲಯಾಳಿ ಮನೆಮಾತಿನ ಕನ್ನಡಿಗ ದಿವಾಕರ್ ನಿಟ್ಟುಸಿರಿಟ್ಟರು.!

ಕ್ರಿಕೆಟ್ ಕಾಮೆಂಟರಿಗೆ ಜೆಫ್ರಿ ಬಾಯ್ಕಾಟ್ ಸ್ಪೂರ್ತಿ..
ಕಬಡಿಯಲ್ಲಿ ನನ್ನದೇ ನಡೆ..*

ನಾವು 90ರ ದಶಕದ ಕ್ರಿಕೆಟ್ ಹುಚ್ಚರು! ಅದು ಸಚಿನ್ ಯುಗ.
ಆ ದಿನಗಳಲ್ಲೊಮ್ಮೆ ಸಚಿನ್ ಬರ್ತ್ ಡೇ ದಿನ ಶಾರ್ಜಾದಲ್ಲಿ ಕ್ರಿಕೆಟಿನ ದೇವರು ಸಚಿನ್ ಸೆಂಚುರಿಲಹೊಡೆದರು. ಅಂದು ಕ್ರಿಕೆಟಿನ ಮಹಾದೇವತೆ ಜೆಫ್ರೀ ಬಾಯ್ಕಾಟ್ ಹೇಳಿದ ಕಾಮೆಂಟರಿ ಉಂಟಲ್ಲ ಅದು ಅನನ್ಯ,ಅದ್ಭುತ!
ಅಂಥಾ ಕಮೆಂಟರಿ ಮತ್ತೆಂದೂ ಕೇಳಿಲ್ಲ…
ಕ್ರಿಕೆಟಿನಲ್ಲಿ ನನಗೆ ಅವರ ಕಮೆಂಟರಿಯೇ ಸ್ಪೂರ್ತಿ, ಮಾದರಿ!
ಹಾಗಂತ ಕಬಡಿಯಲ್ಲಿ ನನ್ನ ಕಮೆಂಟರಿ ನನ್ನದೇ ಹಾದಿಯಲ್ಲಿ ರೂಪುಗೊಂಡದ್ದು. ಇದು ಸ್ವತಸಿದ್ದ ಶೈಲಿ.

ಕಮೆಂಟರಿ ಎಂದರೆ ಒಟ್ಟಾರೆ ಹೇಳುವುದಲ್ಲವೇ ಅಲ್ಲ. ಅಲ್ಲಿ ಪ್ರಜ್ಞೆ ಮುಖ್ಯ. ಖಚಿತವಾದ ಅರಿವೂ ಪ್ರಧಾನ. ಅದರಲ್ಲೂ ಲೈವ್ ಕಮೆಂಟರಿಯೇ ಬೇರೆ. ಟಿ.ವಿ ಚ್ಯಾನೆಲ್ ಕಮೆಂಟರಿ ಬೇರೆ. ಲೈವ್ ಕಮೆಂಟರಿ ಎಂದರೆ ಆಟ ನೋಡುತ್ತಿರುವವರ ನಡುವಿನಿಂದ ಆಟ ನೋಡುತ್ತಲೇ ನೀಡುವ ನೇರ ವೀಕ್ಷಕ ವಿವರಣೆ. ಇಲ್ಲಿ ನಾವು ಹೇಳುವ ಮಾತುಗಳು ಆಟ, ಆಟಗಾರರ ಮೇಲೆ ನೇರ ಪ್ರಭಾವ ಬೀರುತ್ತದೆ. ಆದ್ದರಿಂದ ಇಲ್ಲಿ ಆಟ ವ್ಯಾಖ್ಯಾನಿಸಿ ಉಪದೇಶ, ಸಲಹೆ ನೀಡುವಂತಿಲ್ಲ! ಆದರೆ ಕಣ್ಮುಂದೆ ಆಟಗಾರರೇ ಇಲ್ಲದೇ, ಆಟಕ್ಕೆ ನೀಡುವ ಕಮೆಂಟರಿ ಇದೆ. ಅಲ್ಲಿ
ಕಾಮೆಂಟರಿ ಮೂಲಕ ಉಪದೇಶ, ವಿಮರ್ಶೆ, ಟೀಕೆ, ಪ್ರಶಂಸೆ ಮಾಡಬಹುದು. ಇದು ಕಾಮೆಂಟರಿಯವರು ತಿಳಿದಿರಬೇಕಾದ ಪ್ರಧಾನ ಅಂತರ.

ಒಟ್ಟಿನಲ್ಲಿ ಕಾಮೆಂಟರಿಗೂ ನಿಬಂಧನೆಗಳ ಗೆರೆಗಳಿವೆ. ಇದು ನಿಜಕ್ಕೂ ಭಾಷೆಯಲ್ಲಾಡುವ ಆಟ. ಕ್ರೀಡಾಳುಗಳು ಮೈದಾನದಲ್ಲಾಡುವ ಆಟಕ್ಕೆ ನಾವು ಭಾಷೆಯ ಮೂಲಕ ನೀಡುವ ಪ್ರತಿಕ್ರಿಯೆಗಳ ಭಾವವೇ ಕಮೆಂಟರಿ. ಅದು ಆಟವನ್ನು ತಕ್ಷಣವೇ ವೀಕ್ಷಕರಿಗೆ ಅಥವಾ ಶೋತೃಗಳಿಗೆ ಪಡಿಯಚ್ಚಿನಂತೆ ಬೆಚ್ಚಗೆ ಮುಟ್ಟಿಸುತ್ತದೆ. ಹೀಗೆ ಪ್ರೇಕ್ಷಕರನ್ನು ಮುಟ್ಟಬೇಕಾದರೆ ಭಾಷೆಯ ಭಾವಗೀತೆಯಾಗಿ ಕಾಮೆಂಟರಿ ಮೊಳಗಬೇಕು. ನಮ್ಮ ಗಡಿನಾಡು ಇದಕ್ಕೆ ಪೂರಕ ವೇದಿಕೆ. ನಮ್ಮಲ್ಲನೇಕ ಭಾಷೆಯ ಜನಾಂಗದವರಿದ್ದಾರೆ. ಹಿಂದಿ-ಇಂಗ್ಲೀಷ್ ಜತೆಗೆ ನಮ್ಮದೇ ಭಾಷೆಯಲ್ಲಿ ಕಾಮೆಂಟರಿ ಕೇಳುವಾಗ ಜನರಲ್ಲಾಗುವ ಖುಷಿ ಉಂಟಲ್ಲಾ..ಅದು ನನಗೆ ಪ್ರಶಸ್ತಿಗೆ ಸಮಾನ!

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00