ಮಾನ್ಯ: ಕುಂಬಳೆ ಸೀಮೆಯ ನೆಲಮೂಲದ ಕಲೆ ಯಕ್ಷಗಾನವನ್ನು ಈ ನೆಲದಲ್ಲಿ ಹೊಸ ತಲೆಮಾರಿಗೆ ಕೈದಾಟಿಸಿ, ಹೊಸ ಪೀಳಿಗೆಗೂ ನೆಲದ ಸಂಸ್ಕೃತಿ ಪ್ರೇಮ ಮೂಡಿಸಿ
ಮಾನ್ಯ ಪರಿಸರದಲ್ಲಿ ಯಕ್ಷಗಾನಾಭಿರುಚಿಯ ಬೀಜ ಬಿತ್ತಿ, ಕಲಾಪ್ರೀತಿಯ ವೃಕ್ಷ ಬೆಳೆಸುವಲ್ಲಿ “ಯಕ್ಷ ಮಿತ್ರರು ಮಾನ್ಯ” ನೀಡಿದ ಕೊಡುಗೆ ಶ್ಲಾಘನೀಯ. ಮಾನ್ಯ ಪರಿಸರ ಸುಸಂಸ್ಕೃತ ನಾಗರಿಕ ಲಕ್ಷಣದಿಂದ ರೂಪುಗೊಂಡಿದ್ದರೆ ಅದಕ್ಕೆ ಈ ನೆಲದ ಯಕ್ಷಗಾನ ಪ್ರೀತಿಯೂ ಕಾರಣ. ಈ ಹಿನ್ನೆಲೆಯಲ್ಲಿ ರಜತ ಮಹೋತ್ಸವದತ್ತ ಹೆಜ್ಜೆ ಎತ್ತಿದ ‘ಯಕ್ಷಮಿತ್ರರು ಮಾನ್ಯ’ ಇದರ ಸಾಂಸ್ಕೃತಿಕ ಚಟುವಟಿಕೆಗೆ ನಾಡು ಒಲುಮೆಯ ಒಮ್ಮತದ ಬೆಂಬಲ ನೀಡಬೇಕು.ಏಕೆಂದರೆ ಇದು ನಾಡು-ನುಡಿ ಕಟ್ಟುವ ಪ್ರಾಮಾಣಿಕ ಕಾಯಕ ಎಂದು ಶ್ರೀಮದೆಡನೀರು ಮಠದ ಶ್ರೀ ಸಚ್ಛಿದಾನಂದ ಭಾರತಿ ಶ್ರೀಪಾದಂಗಳವರು ನುಡಿದರು.
ಮಾನ್ಯದಲ್ಲಿ ಮೇ10ರಂದು ನಡೆದ “ಯಕ್ಷಮಿತ್ರರು ಮಾನ್ಯ” ಸಂಸ್ಥೆಯ 24ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀಗಳವರು ಆಶೀರ್ವಚನ ನೀಡುತ್ತಿದ್ದರು.
ಮಾನ್ಯ ಎಂದರೆ ಕಲಾವಿದರ ನಾಡು. ಕಲಾಪೋಷಣೆಯ ಪ್ರೇಕ್ಷಕರ ನಾಡು. ಆದ್ದರಿಂದಲೇ ಸಹೃದಯತೆಯ ಮಾನವೀಯತೆ ಇಲ್ಲಿ ನೆಲೆಯೂರಿದೆ ಎಂದು ಶ್ರೀಗಳು ನುಡಿದರು.

ಸಾಧಕತ್ರಯ ಕಲಾವಿದರಿಗೆ
ಮಾನ್ಯದ ಮನ್ನಣೆಯ ಸನ್ಮಾನ
—————————–
ವಾರ್ಷಿಕೋತ್ಸವದ ಅಂಗವಾಗಿ ಹನುಮಗಿರಿ ಮೇಳದ ಪ್ರಸಿದ್ಧ ಕಲಾವಿದರಾದ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್, ಹಿಮ್ಮೇಳ ವಾದಕ ದೇಲಂತ ಮಜಲು ಸುಬ್ರಹ್ಮಣ್ಯ ಭಟ್, ಸ್ತ್ರೀವೇಷಧಾರಿ ಸಂತೋಷ್ ಕುಮಾರ್ ಹಿಲಿಯಾಣ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ ನಿಧಿ ಸಹಿತ ಅಭಿನಂದಿಸಲಾಯಿತು.
ಎಡನೀರು ಶ್ರೀಗಳವರು ಕಲಾವಿದರನ್ನು ಸನ್ಮಾನಿಸಿದರು.
ಮೇಳದ ಮೇನೇಜರ್ , ಅರ್ಥದಾರಿ ಹರೀಶ ಬಳಂತಿಮೊಗರು ಅಭಿನಂದನಾ ಭಾಷಣ ಮಾಡಿದರು.
ಕಲಾವಿದರ ಪಾಲಿಗೆ ಪ್ರೇಕ್ಷಕ, ಕಲಾಪೋಷಕರ ಮನ್ನಣೆಯ ಸನ್ಮಾನವೇ ಪ್ರೋತ್ಸಾಹದ ಉಸಿರು. ಮಾನ್ಯದ ನೆಲ ಕಲಾವಿದರನ್ನು ಪ್ರೋತ್ಸಾಹಿಸುವ ಸಂಸ್ಕಾರ ಹೊಂದಿದೆ. ಪ್ರತಿಭೆ ಮಾನಿಸಿ ಮಾನ್ಯತೆ ನೀಡುವ ಈ ನೆಲದ ಗುಣ ಸಂಪನ್ನತೆಗೆ ಕೃತಜ್ಞತೆ ಎಂದು ಸನ್ಮಾನಿತರು ಹೇಳಿದರು.
ಯಕ್ಷನಿಧಿ ಕೂಪನ್ ಬಿಡುಗಡೆ
——————–
ಮಾನ್ಯ ಪರಿಸರದಲ್ಲಿ ನಿರಂತರ ಯಕ್ಷಗಾನೀಯ ಚಟುವಟಿಕೆ ನಡೆಸಿ ಕಲಾ ಪರಂಪರೆಯ ಮೂಲಕ ನಾಡು -ನುಡಿ ಮತ್ತು ಸಂಸ್ಕೃತಿಯನ್ನು ಪೋಷಿಸಲು
ಯಕ್ಷಮಿತ್ರರು ವತಿಯಿಂದ ನಿಧಿ ಸಂಚಯನಕ್ಕಾಗಿ “ಯಕ್ಷನಿಧಿ” ಯೋಜನೆ ರೂಪಿಸಲಾಗಿದೆ.
ವಾರ್ಷಿಕೋತ್ಸವದಲ್ಲಿ ಎಡನೀರು ಶ್ರೀಗಳವರು ಯಕ್ಷನಿಧಿ ಸಂಚಯನ ಯೋಜನೆ ಉದ್ಘಾಟಿಸಿದರು.
ಗ್ರಾಮೀಣ ಪ್ರದೇಶ ಮಾನ್ಯದಲ್ಲಿ ಕಲಾ ವಾತಾವರಣದ ಸಾಂಸ್ಕೃತಿಕ ಪರಿಸರ ಕಾನಪಾಡಲು ನಿರಂತರ ಚಟುವಟಿಕೆ ಅಗತ್ಯವಾಗಿದೆ. ಇದಕ್ಕೆ ತಗಲುವ ವೆಚ್ಚ ಭರಿಸಲು ಕಲಾಪೋಷಕರ ಸಹಾಯ ಪಡೆಯುವುದೇ ಯಕ್ಷನಿಧಿ ಯೋಜನೆಯಾಗಿದೆ.
ಸುಂದರ ಶೆಟ್ಟಿ ಕೊಲ್ಲಂಗಾನ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಚಿತ್ರಾ ವಿಜಯಕುಮಾರ್, ಹರ್ಷಿತಾ ಪುರುಷೋತ್ತಮ, ಶಾಲಿನಿ ಮಹೇಶ್ ಸನ್ಮಾನ ಪತ್ರ ವಾಚಿಸಿದರು.
ನಿತ್ಯಾನಂದ ಎಂ.ಆರ್.ಮಾನ್ಯ, ರಾಮ ಕಾರ್ಮಾರು, ಸೂರ್ಯ ಬೆಂಗಳೂರು, ಪುರುಷೋತ್ತಮ, ಮಹೇಶ್ ವಳಕುಂಜ ಸಹಕರಿಸಿದರು. ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿಜಯ ಕುಮಾರ್ ಮಾನ್ಯ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಪೆಹಲ್ಗಾಂ ಆಕ್ರಮಣ ಮತ್ತು ಗಡಿ ಉದ್ವಿಗ್ನತೆಯಲ್ಲಿ ಬಲಿದಾನಿಗಳಾದ ಭಾರತೀಯ ಪೌರರ ವಿಯೋಗಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹೃದ್ಯಾನುಭೂತಿ ನೀಡಿದ ‘ಸಾಕೇತ ಸಾಮ್ರಾಜ್ಞಿ’
————————
ವಾರ್ಷಿಕೋತ್ಸವದಂಗವಾಗಿ ಹನುಮಗಿರಿ ಮೇಳದ ಈ ಸಾಲಿನ ಜನಪ್ರಿಯ ಪ್ರಸಂಗ ‘ಸಾಕೇತ ಸಾಮ್ರಾಜ್ಞಿ’ ಯ 88ನೇ ಪ್ರದರ್ಶನ ಮಾನ್ಯದ ಪ್ರೇಕ್ಷಕರನ್ನು ಮುದಗೊಳಿಸಿತು. ಗಟ್ಟಿ ಕಥಾ ಹಂದರದ ಪ್ರೌಢ ವಿಚಾರಧಾರೆಗಳ ಈ ಆಖ್ಯಾನ ತೆಂಕು – ಬಡಗಿನ ಪ್ರೇಕ್ಷಕರ ಮನಗೆದ್ದ ಪ್ರಸ್ತುತಿಯಾಗಿದೆ.





