ಕಾಸರಗೋಡು : ಬಿಡುಗಡೆಗೆ ಸಜ್ಜಾಗಿರುವ, ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಿಡುಗಡೆಗೆ ಮುನ್ನವೇ ಬಾಚಿಕೊಂಡಿರುವ ಮಲಯಾಳಂ ಸಿನಿಮಾ “ನಜಸ್ಸ್” ನಲ್ಲೊಂದು ಸಂಪೂರ್ಣ ಕನ್ನಡ ಹಾಡು ಬಳಕೆಯಾಗಿದ್ದು, ವಿಶೇಷ ಜನಮೆಚ್ಚುಗೆಯೊಂದಿಗೆ ಆಕರ್ಷಿಸಿ ಗಮನಿಸಲ್ಪಟ್ಟಿದೆ.
“ಮಲ್ಲಿಗೇ..ಮಲ್ಲಿಗೇ..” ಎಂದಾರಂಭವಾಗುವ, ಕೇಳುಗರನ್ನು ಮೌನವಾಗಿಸಿ, ತಾಳದ ತಾದಾತ್ಮ್ಯತೆಗೆ ಒಯ್ಯುವ ಮನಮೋಹಕವಾದ ಈ ಹಾಡು ಕೂಡಾ ಚಿತ್ರ ಬಿಡುಗಡೆಗೆ ಮುನ್ನವೇ ಜನಮೆಚ್ಚುಗೆಯ ಪ್ರಶಂಸೆ ಪಡೆದಿದೆ.

- ಗಾಯಕ, ಗೀತೆ ರಚನೆಗಾರ ರತ್ನಾಕರ ಓಡಂಗಲ್ಲು
ಗಡಿನಾಡು ಕಾಸರಗೋಡಿನ ಬದಿಯಡ್ಕ ನಿವಾಸಿ ಹವ್ಯಾಸಿ ಗಾಯಕ, ಗೀತೆ ರಚನೆಕಾರ ರತ್ನಾಕರ ಓಡಂಗಲ್ಲು ಅವರು ಮಲಯಾಳ ಸಿನಿಮಕ್ಕೆ ಬರೆದ ಮೊದಲ ಹಾಡು ಇದಾಗಿದೆ. ಸಿನಿಮಾದಲ್ಲಿ ಇದಕ್ಕೆ ಕೇರಳದ ಜನಪ್ರಿಯ ಗಾಯಕಿ ಪುಷ್ಪಾವತಿ ದನಿ ನೀಡಿದ್ದಾರೆ. ಸಂಗೀತ ನಿರ್ದೇಶಕ ಪಿ.ಸುನಿಲ್ ಕುಮಾರ್ ಸಂಗೀತ ಸಂಯೋಜನೆಯಲ್ಲಿ ಈ ಹಾಡು ರೂಪುಗೊಂಡಿದೆ. ಶ್ರೀಜಿತ್ ಪೊಯಿಲ್ ಕಾವ್ಎಂಬವರ ಕತೆ-ಚಿತ್ರಕಥೆ-ನಿರ್ದೇಶನದಲ್ಲಿ ಸಿದ್ಧವಾಗಿರುವ ‘ನಜಸ್ಸ್’ ಎಂಬ ಚಿತ್ರ ಕೇರಳದ ಕಾಕನಾಡ್ ಎಂಬಲ್ಲಿನ ಪೆಟ್ಟಿಮುಡಿ ದುರಂತದ ನೈಜ ಕತೆಯನ್ನು ಸಾರುವ ಸಿನಿಮ ಆಗಿದೆ.
ಹೆಣ್ಣು ನಾಯಿಯೊಂದು ಹೆಂಗರುಳಿನ ಮಗುವನ್ನು ಕಾಪಾಡಿದ ಕತೆ ಇದಾಗಿದೆ. ಹೆಣ್ಣು ನಾಯಿ ಚಿತ್ರದ ಕೇಂದ್ರ ಪಾತ್ರವಾಗಿದೆ.
ಮಲಯಾಳಂ ಸಿನಿಮದಲ್ಲಿ ಕನ್ನಡ ಭಾಷೆ, ಸಂಸ್ಕೃತಿಗಳನ್ನು ಅಲ್ಪ ಸ್ವಲ್ಪ ತೋರಿಸುವ ತುಣುಕುಗಳಷ್ಟೇ ಈ ವರೆಗೆ ಬಂದಿತ್ತು. ಆದರೆ ಸಂಪೂರ್ಣವಾದ ಒಂದು ಕನ್ನಡ ಹಾಡನ್ನು ಬಳಸುವುದು ಇದೇ ಪ್ರಥಮವಾಗಿದೆ. ಹೀಗೊಂದು ಗೀತೆ ರಚನೆಯ ಅವಕಾಶ ಗಾಯಕ ರತ್ನಾಕರ ಓಡಂಗಲ್ಲು ಅವರಿಗೆ ಒಲಿಯುವುದು ಕೂಡಾ ಇದೇ ಪ್ರಥಮವಾಗಿದೆ.
ಕನ್ನಡ, ತುಳು ನಾಟಕಗಳಿಗೆ ನೂರಾರು ಗೀತೆ ರಚಿಸಿ ಹಾಡಿರುವ ರತ್ನಾಕರ್ ಚಿತ್ರಗೀತೆಗಳನ್ನು ಕೂಡಾ ಭಾಷಾಂತರಿಸಿ ಹಾಡುವ ಕವಿ ಹೃದಯದ ಪ್ರತಿಭೆ. ಮಲಯಾಳಂ ಮನೆಮಾತಿನ ಗಡಿನಾಡ ಕನ್ನಡಿಗನಾದ ರತ್ನಾಕರ್ ಓಡಂಗಲ್ಲು ಅವರಿಂದ ಹೀಗೊಂದು ಹಾಡು ಬರೆಸಲು ಚಿತ್ರದ ನಿರ್ದೇಶಕ ಶ್ರೀಜಿತ್ ಪೊಯಿಲ್ಕಾವ್
ಮಾರ್ಗದರ್ಶನ ನೀಡಿದ್ದಾರೆ. ಈ ತಿಂಗಳ 29ರ ಸುಮಾರಿಗೆ ತೆರೆ ಕಾಣಲಿರುವ “ನಜಸ್ಸ್”ನ ಹಾಡುಗಳು ಮೊನ್ನೆಯಷ್ಟೇ ಬಿಡುಗಡೆಯಾಗಿವೆ. ಆ ಬಳಿಕ ಮೆಲ್ಲಮೆಲ್ಲಗೆ ‘ಮಲ್ಲಿಗೆ’ ಹಾಡು ಸದ್ದು ಮಾಡತೊಡಗಿದೆ. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಗಡಿನಾಡ ಬದಿಯಡ್ಕದ ಕನ್ನಡಿಗನ ಹೆಜ್ಜೆಯೂ ಮೂಡುವಂತಾಗಿದೆ.





