ಬ್ರಹ್ಮಕಲಶಕ್ಕೆ ಸಜ್ಜಾದ ದೇಲಂಪಾಡಿ ದೇಗುಲದಲ್ಲಿದೆ 11ನೇ ಶತಮಾನದ ಅತ್ಯಂತ ಪ್ರಾಚೀನ ದೇಶಶಿಲ್ಪಶಾಸ್ತ್ರ ವೈಶಿಷ್ಯದ ಅಪೂರ್ವ ಶಾಸ್ತಾರ ವಿಗ್ರಹ..!

ಕೇರಳದ ಶಾಸ್ತಾರಾಧನೆಯ ಪ್ರಾಚ್ಯ ವಿಗ್ರಹ ಸಹಸ್ರ ವರ್ಷಗಳ ಹಿಂದೆ ದೇಲಂಪಾಡಿಗೆ ಹೇಗೆ ಬಂತು..?

by Narayan Chambaltimar

ಪುತ್ತಿಗೆ ಅಂಗಡಿಮೊಗರು ಮಾಗಣೆ ಕ್ಷೇತ್ರವಾಗಿದ್ದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ನಾಳೆಯಿಂದ (ಮೇ6)
ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಸಂಪನ್ನಗೊಳ್ಳಲಿದೆ. ಇದೇ ವೇಳೆ ಸಹಸ್ರ ವರ್ಷದ ಪ್ರಾಚೀನತೆ ಸಾರುವ ದೇವಾಲಯದಿಂದ ಬಗೆದಷ್ಟೂ ಕೌತುಕದ ವಿಶೇಷ ವೈಶಿಷ್ಟ್ಯ ದ ಕಥನಗಳು ಬಯಲಾಗುತ್ತಿವೆ…
ಇದು ಶ್ರೀ ದೇವಾಲಯದ ವೈಶಿಷ್ಠ್ಯ ಭಿನ್ನತೆಯನ್ನು ಸಾರುತ್ತಿದೆ.,ಆಕರ್ಷಣೆ ಪಡೆಯುತ್ತಿದೆ.

  • ವಿಶೇಷ ವರದಿ: ಎಂ.ನಾ.ಚಂಬಲ್ತಿಮಾರ್
    ———————————

ದೇಲಂಪಾಡಿ ದೇವಾಲಯದೊಳಗೆ ತಗ್ಗು ಮಾಡಿನ ವಿಶೇಷ ವಾಸ್ತುಶೈಲಿಯ ಶ್ರೀ ಧರ್ಮ ಶಾಸ್ತಾರನ ಉಪ ದೇವಾಲಯವಿದ್ದು, ಇಲ್ಲಿನ ಪ್ರತಿಷ್ಟಾ ವಿಗ್ರಹ 1ಸಾವಿರ ವರ್ಷದಷ್ಟು ಹಿಂದಿನ 11ನೇ ಶತಮಾನದ ಇತಿಹಾಸಕ್ಕೆ ಅಪೂರ್ವ ಸಾಕ್ಷಿ ನುಡಿಯುತ್ತಿದೆ. ಇದು ಅತ್ಯುತ್ತರ ಭಾರತದಲ್ಲೇ ಅಪೂರ್ವ ವೈಶಿಷ್ಟ್ಯದ, ದೇವಶಿಲ್ಪ ಶಾಸ್ತ್ರಾ ವಿಭಿನ್ನತೆಯ ವಿಶೇಷ ಶಾಸ್ತಾರ ವಿಗ್ರಹವಾಗಿದೆ. ದೇವಾಲಯದ ಪ್ರಧಾನ ಪ್ರತಿಷ್ಟೆಯಾದ ಮಹಾಲಿಂಗೇಶ್ವರನ ಲಿಂಗವು ಋಷಿ ಮುನಿಗಳಿಗೆ ಪಕ್ಕದ ಹೊಳೆಯಿಂದ ಸಿಕ್ಕಿದ್ದೆಂದೂ, ಅವರು ತಮ್ಮ ತಪೋಭೂಮಿಯಾದ ದೇಲಂಪಾಡಿಯ ಈ ಕಾಡಲ್ಲದನ್ನು ಪ್ರತಿಷ್ಟಾಪಿಸಿದರೆಂದೂ ಇಲ್ಲಿನ ಐತಿಹ್ಯ ಸಾರುತ್ತಿದೆ. ಆದರೆ ಕೇರಳದ ಅತ್ಯಂತ ವಿಶಿಷ್ಟ ಆರಾಧನೆಯಾದ ಶಾಸ್ತಾರ ಆರಾಧನೆಯ ಅಪೂರ್ವ ಶಿಲ್ಪವೈಶಿಷ್ಟ್ಯದ ಸುಮಾರು 11ನೇ ಶತಮಾನದ ಶಾಸ್ತಾರ ವಿಗ್ರಹ ಗಡಿನಾಡಿನ ಈ ದೇಗುಲಕ್ಕೆ ಹೇಗೆ ಬಂತು? ಇಲ್ಲಿ ಉಪ ದೇವತೆಯಾಗಿ ಆರಾಧನೆ ಪಡೆಯಲು ಕಾರಣ ಏನು? ಇದು ವರ್ತಮಾನದಲ್ಲಿ ಜಿಜ್ಞಾಸೆ ಮತ್ತು ಅಧ್ಯಯನಕ್ಕೆ ಪೂರಕವಾದ ಆಧುನಿಕ ವಿಶೇಷ ಎನಿಸಿ ಕೌತುಕ ಮೂಡಿಸಿದೆ.

ಇಷ್ಟಕ್ಕೂ ಶಾಸ್ತಾರ ಎಂದರೆ ಅಯ್ಯಪ್ಪನಲ್ಲ!
ಅಯ್ಯಪ್ಪ ಸ್ವಾಮಿಯು ಪಂದಳ ರಾಜಕುಮಾರ ಮಣಿಕಂಠನಾಗಿ ಜನಿಸಿ, ಬಾಲ್ಯದಲ್ಲೇ ದೇವಾಂಶ ಸಂಭೂತ ಲೀಲೆ ಪ್ರಕಟಿಸಿ, ದಟ್ಟ ಕಾಡಿಂದ ಹುಲಿಯನೇರಿ ಬಂದು ಕೊನೆಗೆ ಶಬರಿಮಲೆಯ ಶ್ರೀಧರ್ಮ ಶಾಸ್ತಾರನಲ್ಲಿ ವಿಲೀನನಾಗಿ ಅಯ್ಯಪ್ಪ ಎನ್ನಿಸಿಕೊಂಡದ್ದು ಕಲಿಯುಗದ ಕಣ್ಕಂಡ ದೇವರ ಇತಿಹಾಸ.
ಆದ್ದರಿಂದ ಮಣಿಕಂಠನಿಗೂ ಮೊದಲೇ ಮೋಹಿನೀ ಸುತನಾಗಿ ಶಾಸ್ತಾರ ಅವತಾರವಾಗಿತ್ತು ಎಂಬುದು ವೇದ್ಯ. ಇಂಥ ಶಾಸ್ತಾರನ ಕುರಿತು ಸ್ಕಂದ ಪುರಾಣದಲ್ಲೇ ಉಲ್ಲೇಖವಿದೆ ಎನ್ನಲಾಗಿದೆ.

ಹುಲಿಯನ್ನೇರಿ ಕಾಡಿಂದ ಬರುವಾಗ ಮುಗುಳುನಗೆಯ ಮಣಿಕಂಠನ ಕೈಯ್ಯಲ್ಲಿ ಆಯುಧ ಕಾಣುತ್ತದೆಯೇ ಹೊರತು ಅಯ್ಯಪ್ಪ ವಿಗ್ರಹದಲ್ಲೆಲ್ಲೂ ಆಯುಧ ಧಾರಿಯಾದುದು ಕಾಣುವುದಿಲ್ಲ. ಆದರೆ ದೇಲಂಪಾಡಿಯ ಪ್ರಾಚೀನ ಶಾಸ್ತಾರ ವಿಗ್ರಹದ ಬಲಗೈಯ್ಯಲ್ಲಿ ಆಯುಧವಿದೆ. ಅಯ್ಯಪ್ಪ ಚಿನ್ಮುದ್ರೆಯಿಂದ ಕುಳಿತ ವಿಗ್ರಹ ಕಂಡರೆ ಶಾಸ್ತಾರನ ಕುಳಿತ ಭಂಗಿಯೂ ಭಿನ್ನ!

ಶಾಸ್ತಾರ ಎಂದರೆ ಯಾರು…?
ಶಾಸ್ತಾರ ಕ್ಷಿಪ್ರ ಪ್ರಸನ್ನತೆಯಿಂದ ಭಕ್ತರ ಅಭೀಷ್ಟ ಪೊರೆದು ಪ್ರಸಾದಿಸುವ ದೇವ. ವಿಷ್ಣುವಿನ ಮೋಹಿನಿ ಸ್ವರೂಪದಲ್ಲಿ ಶಿವ ಸಂಯೋಗದಿಂದ ಜನಿಸುವ ದೇವನೇ ಶಾಸ್ತಾರ. ಈತನನ್ನು ದ.ಭಾರತದಲ್ಲಿ ಅಯ್ಯನಾರ್, ತಮಿಳುನಾಡಲ್ಲಿ ಸಾತ್ತಾನ್, ಸಿಂಹಳೀಯರು ಅಯ್ಯನಾಯಕ ಎಂದರೇ ಕೇರಳೀಯರು ಧರ್ಮ ಶಾಸ್ತಾರನಾಗಿ ಆರಾಧಿಸುತ್ತಾರೆ.
ಶಾಸ್ತಾರನಿಗೆ ಅಷ್ಟ ಪ್ರತೀಕಗಳಿವೆ. ಆದಿ ಮಹಾಶಾಸ್ತಾರ, ಧರ್ಮಶಾಸ್ತಾರ, ಸಮ್ಮೋಹನ ಶಾಸ್ತಾರ, ಸಂತಾನ ಪ್ರಾಪ್ತಿ ಶಾಸ್ತಾರ, ವೇದಶಾಸ್ತಾರ, ವೀರ ಶಾಸ್ತಾರ ಮೊದಲಾದ ಅಷ್ಟ ಶಾಸ್ತಾರ ಸ್ವರೂಪಗಳು ಗುರುತಿಸಲ್ಪಟ್ಟಿವೆ. ಇಷ್ಟಕ್ಕೂ ಕೇರಳದಲ್ಲಿ ಶ್ರೀಧರ್ಮ ಶಾಸ್ತಾರನ ಸ್ವತಂತ್ರ ಕ್ಷೇತ್ರ ಅಸ್ತಿತ್ವಕ್ಕೆ ಬಂದುದೇ ಎ.ಡಿ. 11ನೇ ಶತಮಾನದಿಂದ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುಳು ನಾಡಿನ ಚಂದ್ರಗಿರಿಯ ಹೊರತಾಗಿ ದೇಲಂಪಾಡಿಯಲ್ಲಿ ಮಾತ್ರವೇ ಪ್ರಾಚೀನತೆಗೆ ಕನ್ನಡಿ ಹಿಡಿಯುವ ಧರ್ಮಶಾಸ್ತಾ ವಿಗ್ರಹ ಪ್ರತಿಷ್ಟೆಯಾದುದು ಕೌತುಕದ ಕಾಳಜಿಗೆ ಕಾರಣವಾಗಿದೆ. ಏಕೆಂದರೆ ಶಾಸ್ತಾರನ ಆರಾಧನೆ ಇದ್ದರೂ ಪ್ರಾಚ್ಯ ವಿಗ್ರಹಾರಾಧನೆ ಅತ್ಯಂತ ಅಪರೂಪ.
ಆದ್ದರಿಂದಲೇ ಒಂದು ಸಾವಿರ ವರ್ಷದ ಶಾಸ್ತಾರ ಆರಾಧನಾ ಹಿನ್ನೆಲೆಗೆ ದೇಲಂಪಾಡಿಯ ಶಾಸ್ತಾರ ವಿಗ್ರಹ ಕಣ್ಣೋಡಿಸುವಂತೆ ಮಾಡಿದೆ. ಪ್ರಸ್ತುತ ಬಾಲಾಲಯದಲ್ಲಿರುವ ವಿಗ್ರಹವನ್ನು ಭಕ್ತ ಜನತೆ ಸಾಮೀಪ್ಯದಿಂದ ಕಂಡಿದ್ದಾರೆ. ಮೇ11ರಂದು ಪುನರ್ ಪ್ರತಿಷ್ಟೆ ಮೂಲಕ ಮತ್ತೆ ಗರ್ಭಗುಡಿ ಸೇರಿದರೆ ಮುಂದಿನ ಬ್ರಹ್ಮಕಲಶಕ್ಕಷ್ಟೇ ಮತ್ತೆ ಭಕ್ತರಿಗೆ ಇದನ್ನು ಹತ್ತಿರದಿಂದ ಕಾಣಲು ಸಾಧ್ಯ.
ವಿಶಿಷ್ಟ ಭಂಗಿಯ ವಿಶೇಷ ಶೈಲಿಯ ಈ ಶಾಸ್ತಾರ ಪ್ರತಿಮೆ ದೇಲಂಪಾಡಿ ದೇಗುಲಕ್ಕೊಂದು ಐಶ್ವರ್ಯ.
ಇಷ್ಟಕ್ಕೂ ಇದರ ಮತ್ತೊಂದು ವಿಶೇಷತೆಯೆಂದರೆ ಶಿವಸುತನಾದ ಶಾಸ್ತಾರ ಶಿವಾಲಯದಲ್ಲೇ ಉಪದೇವತೆಯಾಗಿರುವುದು ಕೂಡಾ ಹೌದು!

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00