ನಾಟ್ಯಾಚಾರ್ಯ ಬಾಲಕೃಷ್ಣ ಮಂಜೇಶ್ವರ : ನೃತ್ಯಾಸಕ್ತಿಯಿಂದ ಈ ಕ್ಷೇತ್ರಕ್ಕೆ ಬಂದವರೇ ಅಲ್ಲ..! ಆದ್ರೆ ಬರೋಬ್ಬರಿ 20ಸಾವಿರಕ್ಕೂ ಅಧಿಕ ಪ್ರತಿಭೆಗಳಿಗೆ ಗೆಜ್ಜೆ ಕಟ್ಟಿದ ನೃತ್ಯ ಗುರು..!!

ಗಡಿನಾಡ ನೆಲದಲ್ಲಿ ನೃತ್ಯ ಕಲಾ ಸಂಸ್ಕಾರ -ಶಿಕ್ಷಣವಿತ್ತು ತಲೆಮಾರೊಂದನ್ನು ರೂಪಿಸಿದ ನಾಟ್ಯ ನಿಲಯಂ ಸಾಧನೆಗೆ 42ರ ಗಜ ನಡಿಗೆ..

by Narayan Chambaltimar

ಎ.29- ಅಂತರಾಷ್ಟ್ರೀಯ ನೃತ್ಯ ದಿನಾಚರಣೆ. ಸಾಂಸ್ಕೃತಿಕ, ಸಾಮಾಜಿಕ ಅಡೆತಡೆಗಳನ್ನು ಮೀರಿ ನೃತ್ಯದ ಸೌಂದರ್ಯ, ವೈವಿಧ್ಯಗಳನ್ನು ನಾಗರಿಕ ಸಮಾಜಕ್ಕೆ ಪರಿಚಯಿಸಿ ಕಲೆಯ ಮೂಲಕ ಮನಸ್ಸುಗಳನ್ನು ಭಾವೈಕ್ಯತೆಯಿಂದ ಬೆಸೆದು ಬೆಳಗಿಸುವುದೇ ದಿನಾಚರಣೆಯ ಆದ್ಯಂತಿಕ ಉದ್ದೇಶ. ಭಾರತದಲ್ಲಂತೂ ಸಾಂಪ್ರದಾಯಿಕ ನೃತ್ಯ ಪರಂಪರೆಗೆ ಸಾವಿರಾರು ವರ್ಷಗಳ ಪ್ರಾಚೀನ,ಪೌರಾಣಿಕ ಹಿನ್ನೆಲೆ ಇದೆ. ಋಗ್ವೇದದಲ್ಲೇ ನಾಟ್ಯ,ನೃತ್ತಗಳ ಉಲ್ಲೇಖವಿದೆ. ಆದರದು ಜನತೆಯ ಕಲೆಯಾಗಿ ವಿಕಸಿತಗೊಂಡು, ಮಾನವ ನಿರ್ಮಾಣದ ಸದಭಿರುಚಿಯಲ್ಲಿ ತೊಡಗಿದ್ದು ಈಚಿನ ದಶಕಗಳಿಂದ. ಅಂತರಾಷ್ಟ್ರೀಯ ನೃತ್ಯ ದಿನಾಚರಣೆ ಆರಂಭಗೊಂಡದ್ದೇ 1982ರಿಂದ.

ನೃತ್ಯ ದಿನಾಚರಣೆ ನಿಮಿತ್ತ ಪುಟ್ಟ ನುಡಿಚಿತ್ರ…

✍️ ಎಂ.ನಾ.ಚಂಬಲ್ತಿಮಾರ್

ನಾನು ನಿಜಕ್ಕೂ ನಾಟ್ಯಾಸಕ್ತಿಯಿಂದ ಈ ಕ್ಷೇತ್ರಕ್ಕೆ ಬಂದವನೇ ಅಲ್ಲ. ಕುಡುಕರಿಗೆ ಆರಂಭದಲ್ಲಿ ಯಾರೋ ಒತ್ತಾಯದ ಗೆಳೆತನದಲ್ಲಿ ಕುಡಿಸುತ್ತಾರೆ, ಕ್ರಮೇಣ ಅದು ಚಟವಾಗುತ್ತದಧಲ್ಲ? ಹಾಗಾಯಿತು ನನ್ನ ಕತೆ. ನನ್ನಕ್ಕನಿಗೆ ಶಾಸ್ತ್ರೀಯ ನೃತ್ಯ ಕಲಿಸಬೇಕೆಂದು ಅಮ್ಮನಿಗೆ ಆಸೆ ಇತ್ತು. ಅವಳನ್ನು ನಾಟ್ಯ ಶಿಕ್ಷಣಕ್ಕಾಗಿ ಗುರು ಉಳ್ಳಾಲ ಮೋಹನ ಕುಮಾರ್ ಬಳಿಗೆ ಕಳಿಸುವಾಗ ಜತೆಗೆ ನನ್ನನ್ನೂ ಕಳಿಸಿದರು. ಆಕೆ ನೋಡಲಷ್ಟೇನೂ ಸ್ಪುರದ್ರೂಪಿಯಲ್ಲ, ನಾನಾದರೋ ತೆಳ್ಳಗೆ, ಬೆಳ್ಳಗೆ ಇದ್ದೆ. ನೃತ್ಯ,ಕಲಿಯಲು ಹೋದದ್ದು ಅವಳಾದರೆ, ಗುರುಗಳು ನನ್ನನ್ನೂ ಒತ್ತಾಯಿಸಿ ಕಲಿಸಿದರು. ನನಗರಿಯದೇ ನಾನು ನೃತ್ಯಕ್ಕೆ ಮನಸೋತೆ. ಗುರುಗಳ ಸೇವೆ ಮಾಡುತ್ತಾ, ಗುರುಮನೆಯಲ್ಲೇ ಉಳಿದು ಗುರುಪರಂಪರಾ ವಿಧಾನದಲ್ಲಿ ಶಾಸ್ತ್ರೀಯ ನೃತ್ಯ ಶಿಕ್ಷಣವನ್ನು ಗುರುಪ್ರಸಾದ ಎಂಬಂತೆ ಪಡೆದೆ. ಈಗ ನನ್ನ ನಾಟ್ಯ ಪಯಣಕ್ಕೆ ಭರ್ತಿ 42ವರ್ಷಗಳಾಯಿತು ಎನ್ನುತ್ತಾ ನಾಟ್ಯನಿಲಯಂ ಮಂಜೇಶ್ವರ ಬಾಲಕೃಷ್ಣ ಮಾಸ್ತರ್ ನೆನಪುಗಳ ತೇರನೇರಿದರು. ನಾಟ್ಯ ಯಾನದ ಕಥನ ಹೇಳಿದರು. ಅದರಲ್ಲಿ,ಗಡಿನಾಡಿನ ಶಾಸ್ತ್ರೀಯ ನೃತ್ಯ ಪರಂಪರೆ ಅರಳಿದ ಇತಿಹಾಸ ಇದೆ.

  • 42ವರ್ಷಗಳ ನಾಟ್ಯ ಪಯಣ..

42ವರ್ಷಗಳ ನಾಟ್ಯ ಪಯಣ..ಗುರು ಉಳ್ಳಾಲ ಮೋಹನಕುಮಾರ್ ಅವರ ಗರಡಿಯಲ್ಲಿ ಅರಳಿದ ಬಾಲಕೃಷ್ಣ ಮಂಜೇಶ್ವರ ಹೈಸ್ಕೂಲು ದಾಟುವ ಮುನ್ನ 9ನೇ ತರಗತಿಯಲ್ಲೇ ನಾಟ್ಯ ಗುರುಗಳಾಗಿದ್ದರು! ಗುರುಗಳ ಅನುಪಸ್ಥಿತಿಯಲ್ಲಿ ಅವರ ಶಿಷ್ಯರಿಗೆ ಇವರೇ ಶಿಕ್ಷಣ ನೀಡುತ್ತಿದ್ದರು. ಎಳೆಯ ಹರೆಯದಲ್ಲೇ ಗುರುವಾಗಿ ಪಳಗಲು ಗುರುಗಳಿತ್ತ ಭರವಸೆಯ ಅವಕಾಶವೇ ಇವರ ಮುನ್ನಡೆಯ ಏಣಿ.

1983ರ ಆಜೂಬಾಜಿನಲ್ಲಿ ಮಂಜೇಶ್ವರ-ಕುಂಬಳೆ- ಬದಿಯಡ್ಕ ಮುಂತಾದ ಗಡಿನಾಡಿನಲ್ಲಿ ಇವರು ಶಾಸ್ತ್ರೀಯ ನೃತ್ಯ ಶಿಕ್ಷಣ ನೀಡಲಾರಂಭಿಸಿದ ಕಾಲಕ್ಕೆ
ಈ ನೆಲದಲ್ಲಿ ಶಾಸ್ತ್ರೀಯ ನೃತ್ಯ ದ ಸಾಂಪ್ರದಾಯಿಕ ಗುರುಗಳೇ ಇರಲಿಲ್ಲ. ನಾಟ್ಯ ಕಲೆಯನ್ನು ಪೋಷಿಸಿ ಪ್ರೋತ್ಸಾಹಿಸುವ ವಾತಾವರಣವೂ ಇರಲಿಲ್ಲ.
ಇಂಥ ನೆಲದಲ್ಲೇ ‘ನಾಟ್ಯ ನಿಲಯಂ ಮಂಜೇಶ್ವರ’ ಎಂಬ ತನ್ನ ಸಂಸ್ಥೆಯನ್ನು ಶಾಸ್ತ್ರೀಯ ನೃತ್ಯದ ಪ್ರತಿಷ್ಠಿತ ಸಂಸ್ಥೆಯನ್ನಾಗಿ ಕಟ್ಟಿದ್ದು ಇವರ ಸಾಧನೆಯ ಹೆಗ್ಗುರುತು. ಅದಕ್ಕೀಗ 42ವರ್ಷಗಳ ಹಿರಿತನ…

ಬಾಲಕೃಷ್ಣ ಮಾಸ್ತರ್ ರ ನಾಟ್ಯಶಿಕ್ಷಣ, ರಂಗನಿರ್ದೇಶನದ ಪ್ರದರ್ಶನಗಳಿಗೆ ಗಡಿನಾಡು ಕಾಸರಗೋಡು ತಾಲೂಕಿನಿಂದ ಮೊದಲ್ಗೊಂಡು ಕರಾವಳಿಯಾದ್ಯಂತ ಜನಪ್ರಿಯತೆ, ಜನಾಕರ್ಷಣೆ ಇದೆ. ಕಾರಣ ನೃತ್ಯದ ಶಾಸ್ತ್ರೀಯ ಸಾಂಪ್ರದಾಯಿಕತೆಯನ್ನು ಕಾಪಾಡುತ್ತಲೇ ಪ್ರದರ್ಶನಕ್ಕವರು ರಸ ಪೋಷಿತ ರಂಗವಿನ್ಯಾಸ ನೀಡಿದ್ದಾರೆ. ನೃತ್ಯದಷ್ಟೇ ಹಿಮ್ಮೇಳದ ಗಾನ – ಮೇಳಕ್ಕೂ ಪ್ರಾಶಸ್ತ್ಯ ಕೊಟ್ಟಿದ್ದಾರೆ.


ಪ್ರದರ್ಶನಗಳು ಜನಾಕರ್ಷಣೀಯವಾಗಿ , ಜನಮನ ರಂಜಿಸಬೇಕು. ಎಲ್ಲವರ್ಗದ ಜನರೂ ನಾಟ್ಯವನ್ನು ಆಸ್ವಾದಿಸಿ ಆನಂದಿಸಬೇಕು. ಎಲ್ಲ ಜನತೆಯನ್ನೂ ನೃತ್ಯ ಮುಟ್ಟಬೇಕು. ಎಲ್ಲರಿಗೂ ನಾಟ್ಯದರಿವು, ಅಭಿರುಚಿ ಮೂಡಬೇಕು. ಶಾಸ್ತ್ರೀಯ ನೃತ್ಯವನ್ನು ಬೌದ್ಧಿಕ ಅಳತೆಗೋಲಿನಲ್ಲಿ ನೋಡುವಾಗ ಇದು ತಪ್ಪೆಂದನ್ನಿಸಿದ್ದರೂ , ನಾವು ಪ್ರದರ್ಶನ ನೀಡುವುದು ಕೇವಲ ಪಂಡಿತ ವಿದ್ವಾಂಸರಿಗಲ್ಲ ತಾನೇ? ಎಲ್ಲಾ ಜನವರ್ಗದ ಜನರಿಗೆ ನೃತ್ಯ ರಂಜನೆ ಕೊಡಬೇಕು, ನೃತ್ಯ ಕಲಿಯುವ ವಿದ್ಯಾರ್ಥಿಗಳು ನಾಟ್ಯದಲ್ಲಿ ಪಳಗಲು ಅವಕಾಶಗಳೂ ಒಲಿಯಬೇಕು. ಈ ದೃಷ್ಟಿಯಲ್ಲಿ ನಾನು ಸಂಯೋಜಿಸಿದ ಜನಪದ-ಶಾಸ್ತ್ರೀಯ ಮಿಶ್ರಿತ ರಂಗ ಪ್ರಸ್ತುತಿಗಳು ಜನಾಕರ್ಷಣೆ ಪಡೆದುವು. ಅದು ನೋಟಕರಿಗೆ ಹೊಸ ಅನುಭವಗಳಾದುವು. ಸ್ವೀಕೃತಿಯೊಂದಿಗೆ ಪ್ರಶಂಸೆ ಪಡೆಯಿತು.
ಈಗ ಈ ವಿಧಾನವನ್ನೇ ಉಳಿದೆಲ್ಲರೂ ಅನುಕರಿಸುತ್ತಾರೆ. ಹೊರತು ಶಾಸ್ತ್ರೀಯ ನೃತ್ಯದಲ್ಲಿ ಹೊಸತು ಯಾರೂ ನೀಡಿದ್ದಿಲ್ಲ, ಹೊಸತನದ ಅಧ್ಯಯನದ ಪ್ರಸ್ತುತಿಯೂ ಕಾಣುತ್ತಿಲ್ಲ ಎಂದರು ನಾಟ್ಯಾಚಾರ್ಯ ಬಾಲಕೃಷ್ಣ ಮಂಜೇಶ್ವರ.

  • 20ಸಾವಿರಕ್ಕೂ ಅಧಿಕ ನೃತ್ಯ ವಿದ್ಯಾರ್ಥಿಗಳಿಗೆ ಗೆಜ್ಜೆಕಟ್ಟಿದ ಸಾಧಕ!

ಕಳೆದ ನಾಲ್ಕು ದಶಕದಲ್ಲಿ ಗಡಿನಾಡಿನುದ್ದಕ್ಕೂ ಊರೂರು ತೆರಳಿ, ನಿತ್ಯ ಸಂಚರಿಸಿ ಬಾಲಕೃಷ್ಣ ಮಾಸ್ತರ್ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. ಕರಾವಳಿಯುದ್ದಗಲದ ದೇವಾಲಯಗಳಲ್ಲಿ ಇವರ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ನಡೆಯದ ಜಾಗಗಳೇ ಇಲ್ಲ. ಈ ವರೆಗೆ ಸರಿಸುಮಾರು 30ಸಾವಿರದಷ್ಟು ಮಂದಿ ನಾಟ್ಯ ಶಿಕ್ಷಣಕ್ಕಾಗಿ ಇವರನ್ನು ಸಮೀಪಿಸಿದ್ದಾರೆ. ಈ ಪೈಕಿ ಅನೇಕರು ಶಿಕ್ಷಣ ಮುಂದುವರಿಸದೇ ಬಿಟ್ಟವರಿದ್ದಾರೆ. ಆದರೆ ಸ್ವತಃ ನಾನೇ ನನ್ನ ಕೈಯ್ಯಾರೆ 20ಸಾವಿರದಷ್ಟು ನೃತ್ಯ ವಿದ್ಯಾರ್ಥಿಗಳ ಕಾಲಿಗೆ ಗೆಜ್ಜೆ ಕಟ್ಟಿದ್ದೇನೆ. ನಾಟ್ಯ ಶಿಕ್ಷಣವನ್ನು ಧಾರೆ ಎರೆದಿದ್ದೇನೆ ಎನ್ನುವ ಬಾಲಕೃಷ್ಣ ಮಾಸ್ತರ್ ರ ಶಿಷ್ಯೆಯರನೇಕರು ನಾಟ್ಯರಂಗದಲ್ಲೀಗ ಮುಂಚೂಣಿಯ ಹೆಸರುಳ್ಳವರಾಗಿ ಬೆಳೆದಿದ್ದಾರೆ.
ಅವರ ಶಿಷ್ಯ ಪರಂಪರೆಯೂ ಗುರು ಪಂಪರೆಯಾಗಿ ಬೆಳೆದಿದೆ.
ಈ ಸಾಲಿನಲ್ಲಿ ತನ್ನ ಪುತ್ರಿ ಡಾ.ಸಾತ್ವಿಕಾ ಕೃಷ್ಣ ಅವರನ್ನು ಕೂಡಾ ವೈದ್ಯೆ ಮತ್ತು ಪ್ರತಿಭಾವಂತ ನರ್ತಕಿಯಾಗಿ ರೂಪಿಸಿರುವುದು ಅವರ ಕಲಾಪ್ರೀತಿಯ ಕನ್ನಡಿ.

ಕಾಸರಗೋಡು ತಾಲೂಕಿನಂತಹ ಬಹುಭಾಷಿಕ ನೆಲದಲ್ಲಿ ನೃತ್ಯ ಸಂಸ್ಕಾರಕ್ಕೆ ಸಭ್ಯ ಅಡಿಪಾಯವನ್ನು ಹಾಕಿದ ಬಾಲಕೃಷ್ಣ ಮಂಜೇಶ್ವರ ಅವರಿಗೆ ಶಾಸ್ತ್ರೀಯ ನೃತ್ಯ ಎಂದರೆ ಕಸುಬಲ್ಲ, ಕಲೋಪಾಸನೆ. ಅವರು ತನ್ನ ವಿದ್ಯಾರ್ಥಿಗಳು ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಕುಣಿಯುವುದನ್ನು ಒಪ್ಪದವರು. ಸ್ಪರ್ಧಾ ಕಾರ್ಯಕ್ರಮಗಳಿಗೂ ಒಪ್ಪದವರು. ಅವರದ್ದು ಗುರು ಪರಂಪರೆಯ ಯಾನ. ಆದ್ದರಿಂದಲೇ ಅವರಿಗೆ ನೃತ್ಯ ನಿತ್ಯೋತ್ಸವದ ಆರಾಧನೆ. ತನ್ನ ವಿದ್ಯಾರ್ಥಿಗಳು ಪಕ್ವ, ಪ್ರಬುದ್ಧ ಪ್ರದರ್ಶನ ನೀಡಬೇಕು ಮತ್ತುದು ನಾಟ್ಯ ನಿಲಯಂ ಮಂಜೇಶ್ವರದ ಪ್ರಸ್ತುತಿ ಎಂದೇ ಗಜಮುದ್ರೆ ಒತ್ತಬೇಕೆಂದು ಬಯಸುವ ಅವರು ಪ್ರದರ್ಶನದ ಗುಣಮಟ್ಟದಲ್ಲಿ ರಾಜಿ ಇಲ್ಲದ,ಒಲ್ಲದ ಕಲಾಪ್ರೇಮಿ. ನಾಲ್ಕು ದಶಕಗಳಿಂದ ಈ ರಂಗಶಿಸ್ತು ಕಾಪಾಡುತ್ತಾ ಅವರು ಗಡಿನಾಡಿಗೆ ನೃತ್ಯಾಭಿರುಚಿಯ ಕಲಾ ಸಂಸ್ಕಾರ ಧಾರೆ ಎರೆದಿದ್ದಾರೆ. ಹಳ್ಳಿಗಾಡಿನ ಸಾವಿರಾರು ನೃತ್ಯ ಪ್ರತಿಭೆಗಳ ಅನಾವರಣಕ್ಕೆ ಕಾರಣರಾಗಿದ್ದಾರೆ. ಗುರು ಪರಂಪರೆಯ ಕಲೆಯನ್ನು ಕಲಾವಿದರಿಗೂ, ಸಭ್ಯ, ಸ್ವಚ್ಛ ಕಲಾಪ್ರೀತಿಯ ಸಂಸ್ಕಾರವನ್ನು ಪ್ರೇಕ್ಷಕರಿಗೂ ಹಸ್ತಾಂತರಿಸಿ ನಾಟ್ಯದ ಒಲುಮೆಯ ಒಂದು ತಲೆಮಾರನ್ನು ರೂಪಿಸಿ, ದಾಟಿಸಿದ್ದಾರೆ. ಅದು ಕಾಸರಗೋಡು,ಮಂಜೇಶ್ವರ ತಾಲೂಕಿನ ಗಡಿನಾಡಿನಲ್ಲಿ ಶಾಸ್ತ್ರೀಯ ನೃತ್ಯದ ನವಶಕೆಯೊಂದನ್ನು ನಿರ್ಮಿಸಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00