ವೈಭವ್ ಸೂರ್ಯವಂಶಿ…
ಐಪಿಎಲ್ ನಂತಹ ರಣರೋಚಕ ಕ್ರಿಕೆಟ್ ಕದನದಲ್ಲಿ ತಾನು ಚೊಚ್ಚಲ ಎದುರಿಸಿದ ಮೊದಲ ಎಸೆತವನ್ನೇ ನಿರ್ದಾಕ್ಷಿಣ್ಯ ಸಿಕ್ಸರ್ ಗೆ ಅಟ್ಟಿ ವೈಭವದ ಬರೋಣವನ್ನು ಸಾರಿದ್ದಾನೆ ಇನ್ನೂ 9ನೇ ತರಗತಿಯ 14ರ ಹುಡುಗ ವೈಭವ್ ಸೂರ್ಯವಂಶಿ..!
ಈ ಮೂಲಕ ಐಪಿಎಲ್ ಪಾದಾರ್ಪಣೆ ಮಾಡಿದ ಅತೀಕಿರಿಯ ಎಂಬುದಷ್ಟೇ ಅಲ್ಲ, ಎದುರಿಸಿದ ಮೊದಲ ಚೆಂಡನ್ನೇ ಸಿಕ್ಸರ್ ಗೆ ಎತ್ತಿದ ಅಪೂರ್ವ ದಾಖಲೆ ಈತನದಾಗಿದೆ…

ನಿನ್ನೆ ಲಕ್ನೋ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಕಪ್ತಾನ ಸಂಜು ಸ್ಯಾಂಮ್ಸನ್ ಅಲಭ್ಯತೆಯಿಂದ ತೆರವಾದ ಜಾಗದಲ್ಲಿ ಅವಕಾಶ ಪಡೆದ ಈ ಹುಡುಗ ಮೊದಲ ಐಪಿಎಲ್ ಗೆ ಕಾಲೂರುವಾಗ ಇನ್ನೂ 14ವರ್ಷ 27ದಿನಗಳಷ್ಟೇ ವಯಸ್ಸು!
ರಾಜಸ್ಥಾನ ಪರ ಯಶಸ್ವೀ ಜೈಸ್ವಾಲ್ ಜತೆ ಆರಂಭಿಕನಾಗಿ ಕಣಕ್ಕಿಳಿದ ಈ ಹಾಲುಗಲ್ಲದ ಹುಡುಗ ಇಡೀ ಕ್ರಿಕೆಟ್ ಮೈದಾನದಲ್ಲೇ ಆಟಗಾರರಲ್ಲಿ ಅತೀ ಕಿರಿಯವನಾಗಿದ್ದ. ಆದರೆ ಮೊದಲ ಓವರಿನ ಮೂರನೇ ಮತ್ತು ತಾನೆದುರಿಸಿದ ಮೊದಲ ಎಸೆತವನ್ನೇ ಭರ್ಜರಿ ಸಿಕ್ಸರಿಗೆತ್ತಿದ್ದಾಗ ಈತ ಕ್ರಿಕೆಟ್ ಪ್ರೇಮಿಗಳ ಹೃದಯವನ್ನೇ ಗೆದ್ದುಬಿಟ್ಟಿದ್ದ!
ಕಮೆಂಟರಿ ಮೊಳಗಿದ್ದೂ ಹಾಗೆಯೇ “ಭವಿಷ್ಯದ ಭಾರತದ ತಾರೋದಯ” ಎಂದೇ..!
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಲಕ್ನೋ 20ಓವರಿನಲ್ಲಿ 180ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನದ ಪರ ಯಶಸ್ವಿ ಜೈಸ್ವಾಲ್ ಜತೆ ಮೊದಲ ಐಪಿಎಲ್ ಆಡುವ ಅನನುಭವಿ ವೈಭವ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಲಕ್ನೋ ಪರ ಶಾರ್ದೂಲ್ ಠಾಕೂರ್ ಮೊದಲ ಓವರ್ ಎಸೆದರು. ಮೊದಲ ಮೂರು ಎಸೆತಗಳನ್ನು ಜೈಸ್ವಾಲ್ ಆಡಿದ್ದರೆ, ನಾಲ್ಕನೇ ಎಸೆತ ವೈಭವ್ ಪಾಲಿಗೊಲಿಯಿತು. ಆದರೆ ತನ್ನ ಐಪಿಎಲ್ ಪಾದಾರ್ಪಣೆಯ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿ ಬರೋಣದ ರಾಜಮುದ್ರೆಯನ್ನು ವೈಭವ್ ಸೂರ್ಯವಂಶಿ ಒತ್ತುವರೆಂದು ಯಾರೂ ನಿರೀಕ್ಷಿಸಿರಲೇ ಇಲ್ಲ.
ಒಟ್ಟು 20ಎಸೆತಗಳಲ್ಲಿ ಎರಡು ಬೌಂಡರಿ, ಮೂರು ಗಗನಚುಂಬಿ ಸಿಕ್ಸರ್ ಸಿಡಿಸಿ 34ರನ್ ಗಳೀಸಿ ಔಟಾದರೂ ವೈಭವ್ ಅಬ್ಬರ ರಾಜಸ್ಥಾನಕ್ಕೆ ಸ್ಪೋಟಕ ಆರಂಭ ನೀಡಿದ್ದಂತೂ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದೆ.
2008ರಲ್ಲಿ ಐ.ಪಿ.ಎಲ್ ಹುಟ್ಟಿಕೊಂಡ ಬಳಿಕವಷ್ಟೇ 2011ರಲ್ಲಿ ಜನಿಸಿದ್ದ ವೈಭವ್ ಐಪಿಎಲ್ ಶುರುವಾದ ಬಳಿಕ ಜನಿಸಿ, ಐಪಿಎಲ್ ಆಡಿದ ಮೊದಲ ಕ್ರಿಕೆಟಿಗನೂ ಹೌದು!
ಕಳೆದ ವರ್ಷ ನಡೆದ ಐಪಿಎಲ್ ಏಲಂನಲ್ಲಿ ಈ ಹುಡುಗನನ್ನು ರಾಜಸ್ಥಾನ ರಾಯಲ್ಸ್ 1.1ಕೋಟಿಗೆ ಖರೀದಿಸಿತ್ತು. ಈಗಾಗಲೇ 12ರ ಹರೆಯದಲ್ಲೇ ರಣಜಿ ಕ್ರಿಕೆಟಿಗೂ ಕಾಲೂರಿರುವ ವೈಭವ್ ಗೆ ಇಷ್ಟುದಿನ ರಾಜಸ್ಥಾನ ರಾಯಲ್ಸ್ ಅವಕಾಶವೇ ನೀಡಿರಲಿಲ್ಲ. ಇದಕ್ಕೆ ಕ್ಯಾಪ್ಟನ್ ಸಂಜು ವಿರುದ್ದ ಟೀಕೆಗಳೂ ಮೊಳಗಿದ್ದುವು.








