ಮಧೂರು: ಈ ಶತಮಾನದ ಮೊದಲ ಮೂಡಪ್ಪ ಸೇವಾ ಸಂಭ್ರಮದಲ್ಲಿ ಪುಳಕಿತವಾದ ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ, ಆದಿಪೂಜಿತ ಕ್ಷೇತ್ರ ಶ್ರೀ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವಕ್ಕಿಂದು ಧ್ವಜಾರೋಹಣವಾಯಿತು.
ವಿಷು ಜಾತ್ರೆಯೆಂದೇ ಪ್ರಸಿದ್ಧವಾದ ಪಂಚದಿನ ಮಧೂರು ಜಾತ್ರೆಗೆ ಕೊಡಿ ಏರುವ ಸಂಭ್ರಮ ಕಣ್ತುಂಬಿಕೊಳ್ಳಲು ಅಸಂಖ್ಯ ಭಕ್ತರು ನೆರೆದಿದ್ದರು.
ಮೂಡಪ್ಪ ಸೇವೆಯ ಬೆನ್ನಲ್ಲೇ ಬಂದ ಜಾತ್ರಾ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಭಕ್ತಜನ ಸಂಖ್ಯೆ ಹೆಚ್ಚಿದ್ದು, ಜನಮನದಲ್ಲಿ ಸಂಭ್ರಮ ನೆಲೆಸಿದೆ.
ಕಾಸರಗೋಡಿನಲ್ಲಿ ವಿಷು ಹಬ್ಬಕ್ಕೆ ಪುಳಕ ನೀಡುವುದೇ ಮಧೂರು ಜಾತ್ರೆ. ವಿಷು ದಿನದ ಮುಂಜಾವದ ಅರುಣೋದಯಕ್ಕೆ ಕಣಿದರ್ಶನ ಸಹಿತ ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವರ ದರ್ಶನ ಪಡೆದು, ಹೊಸ ವರ್ಷಕ್ಕೆ ಕಾಲೂರುವುದು ಕುಂಬಳೆ ಸೀಮೆಯ ಸನಾತನ ಸಂಪ್ರದಾಯ. ಈ ಪರಂಪರೆ ಈಗಲೂ ಮುಂದುವರಿಯುತ್ತಿದೆ. ಇದರಂತೆ ವಿಷು ದಿವಸದ ಮುಂಜಾವ ಕ್ಷೇತ್ರದಲ್ಲಿ ಭಾರೀ ಜನದಟ್ಟಣೆ ಇರುವುದು ವಾಡಿಕೆ...

ಎ.13ರಿಂದ 17ರ ವರೆಗೆ ಮಧೂರು ಜಾತ್ರಾ ಉತ್ಸವ ನಡೆಯಲಿದೆ. ಉತ್ಸವಾರಂಭದ ಅಂಗವಾಗಿ ಇಂದು ಬೆಳಿಗ್ಗೆ ವೇದ ಪಾರಾಯಣ ನಡೆಯಿತು. ಬಳಿಕ ಧ್ವಜಾರೋಹಣಗೊಂಡು ಕುಂಭಾಭಿಷೇಕ, ತುಲಾಭಾರ ಸೇವೆ ಜರುಗಿತು. ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ, ಸಂಜೆ ತಾಯಂಬಕ, ದೀಪಾರಾಧನೆ, ರಾತ್ರಿ 8ಕ್ಕೆ ಉತ್ಸವ ಬಲಿ ನಡೆಯಲಿದೆ.

ಎ.14ರಂದು ವಿಷುಕಣಿ ದಿನದಂದು ಬೆಳಗ್ಗೆ 5ಕ್ಕೆ ದೀಪೋತ್ಸವ, ವಿಷು ಕಣಿಯಂಗವಾಗಿ ವಿಶೇಷ ಪೂಜೆ, ಶ್ರೀದೇವರ ಬಲಿ ಉತ್ಸವ, ರಾಜಾಂಗಣ ಪ್ರಸಾದ, ಮಹಾಪೂಜೆ ಜರುಗಲಿದೆ.
15ರಂದು ಬೆಳಿಗ್ಗೆ 5ಕೆ ದೀಪೋತ್ಸವ, ಉತ್ಸವ ಬಲಿ, ರಾತ್ರಿ 8ಕ್ಕೆ ನಡುದೀಪೋತ್ಸವ, ಸೇವಾ ಸುತ್ತುಗಳು ನಡೆಯಲಿವೆ. 16ರಂದು ಬೆಳಿಗ್ಗೆ ದೀಪೋತ್ಸವ, ದರ್ಶನಬಲಿ, ತುಲಾಭಾರ, ರಾತ್ರಿ 7ಕ್ಕೆ ಮೂಲಸ್ಥಾನ ಉಳಿಯತಡ್ಕಕ್ಕೆ ಶ್ರೀದೇವರ ಶೋಭಿಯಾತ್ರೆ, ತಾಲೀಮು ಪ್ರದರ್ಶನ ನಡೆಯಲಿದೆ. ಬಳಿಕ ಬೆಡಿಕಟ್ಟೆಯಲ್ಲಿ ಕಟ್ಟೆಪೂಜೆ, ವಾಡಿಕೆಯ ಸಿಡಿಮದ್ದು ಪ್ರದರ್ಶನ ನಡೆಯಲಿದೆ.

17ರಂದು ಬೆಳಗ್ಗೆ 7ಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆ,ರಾತ್ರಿ ಉತ್ಸವಬಲಿ, ಬಳಿಕ ವಿಶೇಷಾಲಂಕೃತ ಕ್ಷೇತ್ರ ಕೆರೆಯಲ್ಲಿ ಅವಭೃತ ಸ್ನಾನ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದದೊಂದಿಗೆ ಉತ್ಸವಕ್ಕೆ ಸಮಾಪ್ತಿಯಾಗಲಿದೆ.
ಚಿತ್ರಗಳು: ಶ್ರೀಕಾಂತ್, ಕಾಸರಗೋಡು







