ಕುಂಬಳೆಯ ಇತಿಹಾಸದಲ್ಲೇ ಮೊದಲು : ಪಾರೆಸ್ಥಾನದಲ್ಲಿ ಕೊಡಿ ಏರಿದರೂ ನಡೆಯದ ಕಳಿಯಾಟ..!

ಆಚಾರ ಉಲ್ಲಂಘನೆ ಆರೋಪ, ಲಿಖಿತ ಭರವಸೆಯ ಬೇಡಿಕೆ - ದೈವ ಕಟ್ಟದಿರಲು ತೈಯ್ಯಂ ಕಲಾವಿದರ ನಿರ್ಧಾರ

by Narayan Chambaltimar

ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಕಾರಣಿಕದ ಪಾರೆಸ್ಥಾನ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರದ ವಾರ್ಷಿಕ ಕಳಿಯಾಟಕ್ಕೆ ನಿನ್ನೆ ಕೊಡಿ (ಧ್ವಜಾರೋಹಣ) ಏರಿದ್ದರೂ, ಇತಿಹಾಸದಲ್ಲೇ ಮೊದಲ ಬಾರಿಗೆ ತೈಯ್ಯಂ ನಡೆಯದೇ ಕಳಿಯಾಟ ರದ್ದುಗೊಂಡಿದೆ. ನಿನ್ನೆ ಕೊಡಿಯೇರಿದ ಪಾರೆಸ್ಥಾನದಲ್ಲಿ ನಾಳೆ ಮೊದಲ ಕಳಿಯಾಟ ನಡೆದು, ಎ.6ರಂದು ಆಲಿದೈವ ಸಹಿತ ಭಗವತಿಯ ಹೂಮುಡಿ ನಡೆಯಬೇಕಿತ್ತು.

ಪಾರೆಸ್ಥಾನ ಆಲಿಚಾಮುಂಡಿ ಭಗವತಿ ಕ್ಷೇತ್ರವು ಕುಂಬಳೆಯ ನೂರು ವಿಲ್ಲಂ ತೀಯಾ ಸಮಾಜದ ಕ್ಷೇತ್ರವಾಗಿದ್ದು, ಇಲ್ಲಿ ಭಂಡಾರ ಸ್ಥಾನದ ಹಕ್ಕು ವಿಚಾರದಲ್ಲಿ ವಿವಾದ ಉಂಟಾಗಿ ಸಮುದಾಯದೊಳಗೆ ವಿಘಟನೆ ಉಂಟಾಗಿದೆ. ಪ್ರಕರಣ ಹೈಕೋರ್ಟಿಗೆ ತಲುಪಿದ್ದು, ಇತ್ತೀಚಿಗೆ ಈಹಿಂದಿನ ವಾಡಿಕೆಯಂತೆ ಕಳಿಯಾಟ ನಡೆಯಬೇಕೆಂದು ಕೋರ್ಟು ಆದೇಶಿಸಿತ್ತು.
ಇದರಂತೆ ಕಳಿಯಾಟಕ್ಕೆ ನಿನ್ನೆ ಬೆಳಿಗ್ಗೆ ಕೊಡಿಯೇರಿತ್ತು. ಆದರೆ ಸಾಂಪ್ರದಾಯಿಕ ಹಕ್ಕಿನಂತೆ ದೈವ ಕಟ್ಟುವವರು ಮೂಲ ಭಂಡಾರಮನೆಯಿಂದಲೇ ಭಂಡಾರ ಬಂದರಷ್ಟೇ ದೈವ ಕಟ್ಟುವುದಾಗಿ ಪಟ್ಟು ಹಿಡಿದ ಕಾರಣ ಮತ್ತು ಉದ್ಭವಿಸಿದ ಸಮಸ್ಯೆಗೆ ಆರು ತಿಂಗಳಲ್ಲಿ ಪರಿಹಾರ ಒದಗಿಸುವ ಲಿಖಿತ ಭರವಸೆ ನೀಡಬೇಕೆಂದು ಬಯಸಿದ್ದನ್ನು ಕಳಿಯಾಟ ನಡೆಸಲು ಮುಂದಾದ ವಿಭಾಗ ಒಪ್ಪದ ಹಿನ್ನೆಲೆಯಲ್ಲಿ ದೈವ ಕಟ್ಟುವವರು ದೈವಕಟ್ಟದೇ ಇರಲು ನಿರ್ಣಯಿಸಿದ್ದಾರೆ. ಪಾರೆಸ್ಥಿನದಲ್ಲಿ ದೈವ ಕಟ್ಟುವುದಕ್ಕೆ ಪಾರಂಪರಿಕ ಕ್ರಮಗಳಿವೆ. ಈ ಆಚಾರ ಉಲ್ಲಂಘಿಸಿ
ಕಳಿಯಾಟ ನಡೆಸುವಂತಿಲ್ಲ. ಪಾರೆಸ್ಥಾನದಲ್ಲಿ ಆಚಾರ ಉಲ್ಲಂಘನೆಯಾಗುತ್ತಿದ್ದು, ಅದನ್ನಷ್ಟೇ ನಾವು ಪ್ರಶ್ನಿಸಿದ್ದೇವೆ ಎಂದು ತೈಯ್ಯಂ ಅನುಷ್ಟಾನ ಸಂರಕ್ಷಣ ಸಂಘದ ಪದಾಧಿಕಾರಿಯಾದ ತೈಯ್ಯಂ ಕಲಾವಿದ ರಾಜು ತಿಳಿಸಿದ್ದಾರೆ.

ಪಾರೆಸ್ಥಾನದ ಕೇಸಿನ ಹಿನ್ನೆಲೆಯಲ್ಲಿ ದೇವಸ್ವಂ ನಿಯೋಗಿಸಿದ ಫಿಟ್ ಪರ್ಸನ್ ಮುತುವರ್ಜಿಯಲ್ಲಿ ಕಳಿಯಾಟ ನಡೆಸಲು ಧ್ವಜಾರೋಹಣವಾಗಿತ್ತು. ದೈವ ಕಟ್ಟುವವರು ಸಮಸ್ಯೆ ಪರಿಹಾರದ ಲಿಖಿತ ಭರವಸೆ ಇತ್ತರೆ ದೈವಕಟ್ಟಲು ಸಿದ್ಧರಿದ್ದಾರೆ. ಆದರೆ ಭಂಡಾರ ಸ್ಥಾನದ ವಿಚಾರದಲ್ಲಿ ಸಮುದಾಯದೊಳಗೆ ತರ್ಕವಿದ್ದು ಇತಿಹಾಸದಲ್ಲೇ ಮೊದಲ ಬಾರಿಗೆ ಪಾರೆಸ್ಥಾನದ ಕಳಿಯಾಟ ರದ್ದಾಗಿದೆ.

ಕುಂಬಳೆ ಪಾರೆಸ್ಥಾನದ ಆಲಿಚಾಮುಂಡಿ ಭಗವತಿ ದೈವವು ಅತ್ಯಂತ ಕಾರಣಿಕದ ಪ್ರಸಿದ್ಧ ದೈವಸ್ಥಾನವಾಗಿದ್ದು, ಅಲ್ಲಿ ಕಳಿಯಾಟವೇ ರದ್ದುಗೊಂಡದ್ದು ಕುಂಬಳೆಯನ್ನಷ್ಟೇ ಅಲ್ಲ ತೀಯಾ ಸಮಾಜವನ್ನು ಬಾಧಿಸಲಿದೆ ಎಂದು ಹಿರಿಯರಾಡಿಕೊಳ್ಳುತ್ತಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00