- ಕೆ. ಗೋವಿಂದ ಭಟ್ ಇವರಿಗೆ “ಯಕ್ಷವಿದ್ಯಾ ಮಾನ್ಯ” ಪ್ರಶಸ್ತಿ.
ಉಡುಪಿ : ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅನುಗ್ರಹ ಪೂರ್ವಕವಾಗಿ ಕೊಡ ಮಾಡುವ “ಯಕ್ಷವಿದ್ಯಾ ಮಾನ್ಯ” ಪ್ರಶಸ್ತಿಗೆ ತೆಂಕುತಿಟ್ಟಿನ ಶ್ರೇಷ್ಠ ಕಲಾವಿದರಾದ ಶ್ರೀ ಕೆ. ಗೋವಿಂದ ಭಟ್ ಆಯ್ಕೆಯಾಗಿದ್ದಾರೆ.
ಕೂಡ್ಲು, ಇರಾ, ಸುರತ್ಕಲ್ ಮತ್ತು ದೀರ್ಘಕಾಲ ಧರ್ಮಸ್ಥಳ ಮೇಳದಲ್ಲಿ ಪ್ರದಾನ ವೇಷಧಾರಿಯಾಗಿ ಒಟ್ಟು ಸುಮಾರು ಏಳು ದಶಕಗಳಿಗೂ ಅಧಿಕ ಕಾಲ ಯಕ್ಷತಿರುಗಾಟ ಮಾಡಿದ್ದಾರೆ. ಎಲ್ಲಾ ರೀತಿಯ ವೇಷಗಳನ್ನು ಮಾಡಿರುವ ಇವರು ಹಲವು ಪೌರಾಣಿಕ ಪಾತ್ರಗಳನ್ನು ಅಪೂರ್ವವಾಗಿ ಚಿತ್ರಿಸಿದ್ದಾರೆ. ಯಕ್ಷಗುರುಗಳಾಗಿ ನೂರಾರು ವಿದ್ಯಾರ್ಥಿಗಳನ್ನು ಈ ಕ್ಷೇತ್ರಕ್ಕೆ ನೀಡಿದ ಇವರಿಗೆ ಎಪ್ರಿಲ್ 10, 2025 ಗುರುವಾರ ಪೂರ್ವಾಹ್ನ 10.30 ಗಂಟೆಗೆ ಪಲಿಮಾರಿನಲ್ಲಿ ನಡೆಯಲಿರುವ ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ “ಯಕ್ಷವಿದ್ಯಾ ಮಾನ್ಯ” ಪುರಸ್ಕಾರವನ್ನು ಪ್ರಶಸ್ತಿ ಫಲಕ ಮತ್ತು ರೂ. 50,000/- ನಿಧಿಯೊಂದಿಗೆ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ದಿವಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಳು ದಶಕಕ್ಕೂ ಅಧಿಕ ಯಕ್ಷಗಾನ ತಿರುಗಾಟಗೈದ ಅವರು ಧರ್ಮಸ್ಥಳ ಮೇಳವೊಂದರಲ್ಲೇ ಐದು ದಶಕ ತಿರುಗಾಟಗೈದವರು. ತೆಂಕಣ ಯಕ್ಷಗಾನದ ಬಗೆಗೆ ಇದಮಿತ್ಥಂ ಎಂದು ಮಾತನಾಡ ಬಲ್ಲ ಅವರೀಗ ವಿಶ್ರಾಂತ ಜೀವನದಲ್ಲಿದ್ದಾರೆ.