- ಮಧೂರಿಗೆ ಸಮರ್ಪಣೆಯಾಯಿತು ಕಾರ್ಯಾಡು ಕಾಡಿನ ಬಳ್ಳಿಗಳಿಂದ ಕೊರಗರು ಹೆಣೆದ ಭಕ್ತಿಯ ಬುಟ್ಟಿಗಳು…!
- ಬ್ರಹ್ಮಕಲಶ – ಮೂಡಪ್ಪ ಸೇವೆಗೆ ಬಳಸಲು ತಾಜಾ ನಾಡಬಳ್ಳಿಗಳ ನಾನೂರಕ್ಕೂ ಅಧಿಕ ಬುಟ್ಟಿ, ಊರಲ್ಲೇ ನಿರ್ಮಿತಿ
ಮಧೂರು: ಪೆರ್ಲ ಸಮೀಪದ ಉಕ್ಕಿನಡ್ಕದ ಕಾರ್ಯಾಡು ಕಾಡಿನಿಂದ ತಾಜಾ ಬಳ್ಳಿ ಎಳೆದು ಕಾರ್ಯಾಡಿನ ಕೊರಗರು ಹೆಣೆದ ನಾನೂರು ಬುಟ್ಟಿಗಳು ಇಂದು ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕನ ಬ್ರಹ್ಮಕಲಶ -ಮೂಡಪ್ಪ ಸೇವೆಗೆ ಸಮರ್ಪಣೆಯಾದುವು.
ಬ್ರಹ್ಮಕಲಶೋತ್ಸವಕ್ಕೆ ನಾಡಿನಿಂದಲೇ ತಾಜಾ ಬುಟ್ಟಿಗಳನ್ನೊದಗಿಸುವ ಹೊಣೆ ವಹಿಸಿದ್ದ ದಂಬೆಮೂಲೆ ನಾರಾಯಣ ಭಟ್ಟರ ನೇತೃತ್ವದಲ್ಲಿ ಬುಟ್ಟಿಯ ಪಯಣ ಕಾರ್ಯಾಡಿನಿಂದ ಮಧೂರಿಗೆ ಸಾಗಿತು.
ಮಧೂರಿನಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯವರು ಬುಟ್ಟಿಯೊಂದಿಗೆ ಬಂದ ತಂಡವನ್ನು ಸ್ವಾಗತಿಸಿಕೊಂಡರು. ಬಳಿಕ ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವರಿಗೆ ಬುಟ್ಟಿ ಸಹಿತ ಪ್ರದಕ್ಷಿಣೆ ಬಂದು ಬುಟ್ಟಿ ಸೇವಾಕರ್ತರು ದೇವಕಾರ್ಯಕ್ಕೆ ಭಕ್ತಿಯ ಬುಟ್ಟಿ ಸಮರ್ಪಿಸಿದರು. ಬ್ರಹ್ಮಕಲಶೋತ್ಸವದ ಅನ್ನ ಸಂತರ್ಪಣೆ ಮತ್ತು ಮೂಡಪ್ಪ ಸೇವೆಯ ಅಪ್ಪ ಸಂಗ್ರಹಕ್ಕಾಗಿರುವ ಈ ಬುಟ್ಟಿಗಳನ್ನೀಗ ಮಧೂರು ಮಧುವಾಹಿನಿ ಹೊಳೆಯಲ್ಲಿ ನೆನೆಯಲಿಡಲಾಗಿದೆ.
ಭಕ್ತಿಯ ಬುಟ್ಟಿ -ಸ್ವದೇಶಿ ಚಿಂತನೆ
ಬ್ರಹ್ಮಕಲಶಕ್ಕೆ ನೂರಾರು ಬುಟ್ಟಿಗಳ ಅಗತ್ಯವಿದ್ದು ಅದನ್ನೇಕೆ ಮಾರುಕಟ್ಟೆಯಿಂದ ಖರೀದಿಸಬೇಕು?
ನಮ್ಮದೇ ಊರಿನ ಕಾಡಿನ ಬಳ್ಳಿಗಳಿಂದ, ನಮ್ಮದೇ ನೆಲಮೂಲ ಪರಂಪರೆಯ ಕೊರಗರಿಂದಲೇ ಮಾಡಿಸಬಾರದೇಕೆ? ಕಾರ್ಯಾಡು ನಾರಾಯಣ ಭಟ್ಟರಿಗೆ ಹೀಗೊಂದು ಯೋಚನೆ ಬಂದಾಗ ಅವರು ಕಾರ್ಯಪ್ರವೃತ್ತರಾದರು. ಕಾರ್ಯಾಡು ಕೊರಗ ಕಾಲನಿಯ ಬಟ್ಯ ಎಂಬವರಲ್ಲಿ ಬುಟ್ಟಿ ಒದಗಿಸಬಹುದೇ? ಕೇಳಿದರು. ಹೆಣೆಯಲು ಜನ ಸಿಕ್ಕಿದರೆ ನೋಡುವ ಎಂದ ಬಟ್ಯ ಕೊರಗರ ಕಾಲನಿಯಲ್ಲಿ ಬುಟ್ಟಿ ಹೆಣೆಯುವ ನೈಪುಣ್ಯದ ಅಳಿದುಳಿದವರನ್ನು ಜೋಡಿಸಿದರು. ಹೀಗೆ ಐದು ಮಂದಿ ಒಟ್ಟಾಗಿ ಸುಮಾರು 20ದಿನಗಳಲ್ಲಿ ಹೆಣೆದದ್ದೇ ನಾನೂರಕ್ಕೂ ಅಧಿಕ ಬುಟ್ಟಿಗಳು!
ಈ ಕಾಯಕದಲ್ಲಿ ಕೊರಗ ಸಮಾಜದ ಕಾರ್ಮಿಕರ ನಿಷ್ಟೆಯ, ಭಯಭಕ್ತಿಯ ಕೊಡುಗೆ ಇದೆ. ದೇವರ ಬುಟ್ಟಿ ಎಂಬ ನಿರ್ಮಲ ಮಮತೆಯಿದೆ. ಅದು ಸ್ವಚ್ಛ, ಪವಿತ್ರ,ಎಂಬ ಕಳಕಳಿಯ ಬೆವರ ಹನಿಗಳಿವೆ..
ಬುಟ್ಟಿಯೆಂಬ ಸೇವಾಯಜ್ಞ..
ಇಷ್ಟಕ್ಕೂ ದೇವಳದ ಬ್ರಹ್ಮಕಲಶ ಸಮಿತಿಯಿಂದ ಹಣ ಪಡೆದು ಇದನ್ನೇಕೆ ಮಾಡಬೇಕು? ಇದೊಂದು ಸೇವಾ ಯಜ್ಞವಾಗಲೆಂದು ನಾರಾಯಣ ಭಟ್ಟರು ವಾಟ್ಸಪ್ ಗ್ರೂಪ್ ಮಾಡಿದರು. ಒಂದು ಬುಟ್ಟಿಗೆ ಕಾರ್ಮಿಕರಿಗೆ ನೀಡುವ 300ರೂ. ಇತ್ತರೆ ಬುಟ್ಟಿಯ ಪ್ರಾಯೋಜಕರಾಗಿ ಸೇವೆಮಾಡುವ ಅವಕಾಶ ಇದೆ ಎಂದರು. ನೋಡುನೋಡುತ್ತಲೇ ನಾನೂರು ಬುಟ್ಟಿಯೂ ಸೇವಾಕರ್ತರಿಂದಲೇ ಸಮರ್ಪಣೆಯಾಯಿತು. ಹೀಗೆ ಕೈಗೂಡಿ ಬಂದ ಹಣ ಬುಟ್ಟಿಗಿಂತಲೂ ಅಧಿಕ! ಉಳಿಕೆಯಾದ 21,000ಹಣವನ್ನು ದಂಬೆಮೂಲೆ ನಾರಾಯಣ ಭಟ್ಟರು ಇಂದು ಮಧೂರು ಬ್ರಹ್ಮಕಲಶೋತ್ಸವ ಸಮಿತಿಗೆ ಒಪ್ಪಿಸಿ ಬಂದಾಗ ಅವರ ಮುಖದಲ್ಲಿ ತೃಪ್ತ, ಸಾರ್ಥ್ಯಕ್ಯದ ಸೇವಾಕಿಂಕರನ ಭಾವ….
ಚಿತ್ರಗಳು : ಶ್ಯಾಂಪ್ರಸಾದ್ ಸರಳಿ