ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಬ್ರಹ್ಮಕಲಶಕ್ಕೆ ದಿನ ಸಮೀಪಿಸುತ್ತಿರುವಂತೆಯೇ ಕ್ಷೇತ್ರದ ತಂತ್ರಸ್ಥಾನ ಇತ್ಯರ್ಥ ವಿವಾದ ಇನ್ನೂ ಬಗೆ ಹರಿಯದೇ ಮತ್ತೊಮ್ಮೆ ದೂರು ಹೈಕೋರ್ಟು ಅಂಗಳದಲ್ಲಿದೆ. ಇದರಿಂದಾಗಿ ಮಧೂರು ಬ್ರಹ್ಮಕಲಶದ ಕುರಿತು ನಾಗರಿಕ ಮನದಲ್ಲಿ ಗೊಂದಲ ಸೃಷ್ಟಿಯಾಗಿದೆ.
ತಂತ್ರಸ್ಥಾನ ವಿವಾದವು ಹೈಕೋರ್ಟು ಮೆಟ್ಟಿಲೇರಿದ ಹಿನ್ನೆಲೆ ಮತ್ತು ಕೋರ್ಟು ತೀರ್ಪಿನಂತೆ ಘೋಷಿತ ಬ್ರಹ್ಮಕಲಶದ ಕರ್ಮಿಕತ್ವವನ್ನು ಡಾ.ದೇರೆಬೈಲು ಶಿವಪ್ರಸಾದ ತಂತ್ರಿಗಳ ನೇತೃತ್ವದಲ್ಲೂ, ಅನಂತರದ ಮೂಡಪ್ಪ ಸೇವೆಯನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ತಂತ್ರಿಗಳ ಕರ್ಮಿಕತ್ವದಲ್ಲೂ ನಡೆಸಬೇಕೆಂದು ಮಾ.5ರಂದು ನಡೆದ ಸಭೆಯಲ್ಲಿ ನಿರ್ಣಯವಾಗಿತ್ತು. ಮಲಬಾರ್ ದೇವಸ್ವಂ ಆಯುಕ್ತರು ಮತ್ತು ಉಪ ಆಯುಕ್ತರ ನೇತೃತ್ವದಲ್ಲಿ ಉಭಯ ತಂತ್ರಿಗಳ ಸಮ್ಮುಖ, ಬ್ರಹ್ಮಕಲಶೋತ್ಸವ ಸಮಿತಿ ಉಪಸ್ಥಿತಿಯಲ್ಲಿ ಮಧೂರು ದೇವಳದ ಗೆಸ್ಟ್ ಹೌಸ್ ನಲ್ಲಿ ಸೇರಿದ ಸಂಯುಕ್ತ ಸಭೆ ಈ ನಿರ್ಣಯಕ್ಕೆ ಬಂದಿತ್ತು. ಮಧೂರು ದೇವಳದ ತಂತ್ರಸ್ಥಾನವನ್ನು ಉಭಯ ತಂತ್ರಿಗಳೂ ಹಂಚಿ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ನಡೆಸಬೇಕು ಮತ್ತು ತಂತ್ರಿಗಳೊಳಗೆ ಸಾಮರಸ್ಯದ ಬೆರೆಯುವಿಕೆ ಹಾಗೂ ಕೋರ್ಟು ತೀರ್ಪನ್ನು ಅನುಷ್ಟಾನಗೊಳಿಸಬೇಕೆಂದು ದೇವಸ್ವಂ ಆಯುಕ್ತರಿಗೆ ಕೋರ್ಟು ನಿರ್ದೇಶಿಸಿತ್ತು. ಇದರಂತೆ ಉಭಯ ತಂತ್ರಿಗಳ ಸಮಕ್ಷಮ, ಅವರ ಪೂರ್ಣ ಸಮ್ಮತಿಯೊಂದಿಗೆ ತಂತ್ರಸ್ಥಾನ ಹಂಚಿ ಸಮಸ್ಯೆ ಇತ್ಯರ್ಥವಾಯಿತೆಂದು ಘೋಷಿಸಲಾಗಿತ್ತು.
ಆದರೆ ಪ್ರಸ್ತುತ ಸಮಾಲೋಚನಾ ಸಭೆಯಲ್ಲಿ ಬ್ರಹ್ಮಕಲಶ ಸಮಿತಿಯ ಅಹವಾಲನ್ನು ದೇವಸ್ವಂ ಆಯುಕ್ತರು ಪರಿಗಣಿಸಲಿಲ್ಲ ಮತ್ತು ಹೈಕೋರ್ಟು ನೀಡಿದ ತೀರ್ಪಿನ ಅನುಷ್ಟಾನದಲ್ಲಿ ಆಯುಕ್ತರು ಏಕಪಕ್ಷೀಯ ಧೋರಣೆಯಿಂದ ವರ್ತಿಸಿದ್ದಾರೆಂಬ ಆರೋಪಗಳೊಂದಿಗೆ ಮಧೂರು ಬ್ರಹ್ಮಕಲಶ ಸಮಿತಿಯ ಪರವಾಗಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಹೈಕೋರ್ಟಿಗೆ ದೂರು ಸಲ್ಲಿಸಿದ್ದಾರೆ. ದೂರುದಾತರ ಪರವಾಗಿ ವಕೀಲ ಎಸ್.ಶ್ರೀಕುಮಾರ್ ಹೈಕೋರ್ಟಿನಲ್ಲಿ ವಾದಮಂಡಿಸಿದರು.
ಇದರನ್ವಯ ಹೈಕೋರ್ಟು ದೇವಸ್ವಂ ಮಂಡಳಿ ಆಯುಕ್ತರಲ್ಲಿ ಸ್ಪಷ್ಟನೆ ಕೋರಿದೆ. ಹೈಕೋರ್ಟು ತೀರ್ಪಿನ ಅನುಷ್ಟಾನವನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ, ದೇವಸ್ವಂ ಆಯುಕ್ತರು ನೀಡುವ ಉತ್ತರ ಪರಿಗಣಿಸಿ ಹೈಕೋರ್ಟು ನಿರ್ಧಾರ ಕೈಗೊಳ್ಳಲಿದೆ.