ಕಠಿಣ ಬೇಸಿಗೆಯ ದಿನಗಳು ಬರುವ ಮೊದಲೇ ಈ ಬಾರಿ ನಾಡು ಅತ್ಯುಷ್ಣದ ಬಿಸಿಲ ತಾಪದಿಂದ ಕುದಿಯತೊಡಗಿದ್ದು, ಗಡಿನಾಡು ಕಾಸರಗೋಡು ಸಹಿತ ಕರಾವಳಿಯಲ್ಲಿ ಅಂತರ್ಜಲ ಮಟ್ಟ ಗಣನೀಯ ಕುಸಿದಿದೆ. ಪ್ರಖರ ಬಿಸಿಲಿನೊಂದಿಗೆ ಬಿಸಿಗಾಳಿಯೂ ಬೀಸುತ್ತಿದ್ದು, ಅಂತರಿಕ್ಷದ ಹವಾಮಾನದ ವೈಪರೀತ್ಯ ಅನುಭವಗಳು ನಾಗರಿಕರನ್ನು ಕಂಗೆಡಿಸುವಂತೆ ಮಾಡಿದೆ.
ಈ ಬಾರಿ ಕೇರಳ -ಕರ್ನಾಟಕದ ಎಲ್ಲೆಡೆ ಅತ್ಯುಷ್ಣ ಹವೆಯ ವಾತಾವರಣ ಫೆ.ತಿಂಗಳಲ್ಲೇ ಆರಂಭವಾಗಿದೆ. ಕಾಸರಗೋಡು ಪ್ರದೇಶ ಪಶ್ಚಿಮಘಟ್ಟದ ನೆರಳಿನಲ್ಲಿರುವುದು ಉಳಿದ ಪ್ರದೇಶಕ್ಕಿಂತ ಅಲ್ಪ ಪ್ರಮಾಣದ ಉಷ್ಣಾಂಶ ಕಡಿಮೆಗೆ ಕಾರಣವಾಗಿದೆ. ಆದರೆ ಕೊಂಕಣ ಪ್ರದೇಶದೊಂದಿಗೆ ಜೋಡಿಸಲ್ಪಟ್ಟಿರುವುದರಿಂದ ಗಡಿನಾಡಿನಲ್ಲಿ ಮಾ.ತಿಂಗಳಾರಂಭದಲ್ಲೇ ಉಷ್ಣಹವೆ, ಉಷ್ಣಗಾಳಿ ಬೀಸಲಾರಂಭವಾಗಲು ಕಾರಣವೆಂದು ಹೇಳಲಾಗುತ್ತಿದೆ. ಅತ್ಯುತ್ತರ ಕೇರಳಕ್ಕಿಂತ ಭಿನ್ನವಾಗಿ ಕರಾವಳಿಯ ದ.ಕ ಜಿಲ್ಲೆಯೊಂದಿಗೆ ಸೇರಿಕೊಂಡ ಪ್ರದೇಶವಾದುದರಿಂದ ಅದೇ ಹವೆ ಇಲ್ಲಿಯೂ ಪ್ರತಿಫಲಿಸುವುದಾಗಿ ಹವಾಮಾನ ಇಲಾಖಾ ಪ್ರತಿನಿಧಿಗಳು ಹೇಳುತ್ತಾರೆ..
ಅತ್ಯುಷ್ಣ ಹವೆಯ ಬಿಸಿಗಾಳಿಯ ಒಣ ವಾತಾವರಣದೊಂದಿಗೆ ನಾಡಲ್ಲಿ ಅಲ್ಲಲ್ಲಿ ಅಗ್ನಿ ಅನಾಹುತಗಳು ನಿಯಂತ್ರಣಾತೀತವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ 60ದಿನದಲ್ಲಿ 90ಅಗ್ನಿ ಅನಾಹುತಗಳು ಸಂಭವಿಸಿವೆ.
ರಾಣಿಪುರದಲ್ಲಿ ಹೆಕ್ಟೇರ್ ಗಟ್ಟಲೆ ವನ್ಯಭೂಮಿಗೆ ಅಗ್ನಿ ಆಕಸ್ಮಿಕವಾಗಿದ್ದು, ಬೃಹತ್ ದುರಂತದಿಂದ ನಾಡು ಪಾರಾಗಿದೆ.
ಅತ್ಯುಷ್ಣದ ಬೇಗೆಯ ತೊಂದರೆ ಮನುಷ್ಯರಷ್ಟೇ ಪ್ರಮಾಣದಲ್ಲಿ ಜಾನುವಾರುಗಳಿಗೂ ಅಪಾಯಕಾರಿಯಾಗಿದೆ. ಆದ್ದರಿಂದ ಈ ವಾತಾವರಣದಲ್ಲಿ ಸಾಕು ಪ್ರಾಣಿಗಳನ್ನು ಬಿಸಿಲಿಗೆ ಬಿಡಬಾರದೆಂದು ಆರೋಗ್ಯ ಇಲಾಖೆ ಪ್ರಕಟಿಸಿದೆ. ಸಾಕುಪ್ರಾಣಿಗಳನ್ನು ಬೆಳಿಗ್ಗೆ 9ರಿಂದ ಸಂಜೆ 3ರ ತನಕ ಬಿಸಿಲಿಗೆ ಮೇಯಲು ಬಿಡಬಾರದೆಂದೂ, ಸಾಕಷ್ಟು ದ್ರವ ಆಹಾರ, ಜಲ ಲಭ್ಯತೆ ಒದಗಿಸಬೇಕೆಂದೂ ಇಲಾಖೆ
ಮುನ್ನೆಚ್ಚರಿಕೆ ನೀಡಿದೆ.
ಜಾನುವಾರಗಳನ್ನು ಎರಡು ಹೊತ್ತು ಮೀಯಿಸಬೇಕೆಂದೂ, ಅನಾರೋಗ್ಯ ಲಕ್ಷಣವಿದ್ದರೆ ಕೂಡಲೇ ಮೃಗಾಸ್ಪತ್ರೆ ಸಂಪರ್ಕಿಸಬೇಕೆಂದೂ ತಿಳಿಸಲಾಗಿದೆ.