ಬಣ್ಣದೋಕುಳಿಯಲ್ಲಿ ಮಿಂದು ವರ್ಣಮಯ ಪ್ರಪಂಚವನ್ನೇ ಸೃಷ್ಟಿಸುವ ಹೋಳಿ ಹಬ್ಬ ಬಂತೆಂದರೆ ಉತ್ತರ ಭಾರತದಲ್ಲಿ ಸಂಭ್ರಮೋಲ್ಲಾಸದ ಸಡಗರ. ಬಡವ ಬಲ್ಲಿದನೆಂಬ ಭೇದ ಇಲ್ಲದೇ ರಂಗಿನೋಕುಳಿಯಲ್ಲಿ ಮಿಂದಾಡುವ ಹೋಳಿ ಎಂದರೆ
ಕಲರ್ ಫುಲ್ ಸಂಭ್ರಮ. ಇಂಥ ಹೋಳಿ ಹಬ್ಬದ ದಿನದಂದು ಒಬ್ಬನೇ ಒಬ್ಬ ಪುರುಷ ಊರಲ್ಲಿ ನಿಲ್ಲದೇ, ಊರನ್ನಿಡೀ ಪ್ರಮೀಳಾ ಸಾಮ್ರಾಜ್ಯವನ್ನಾಗಿಸಿ, ಊರೇ ಬಿಟ್ಟು ಹೊರ ನಡೆವ ಊರೊಂದಿದೆ ಬಲ್ಲಿರಾ?
ಇದು ರಾಜಸ್ಥಾನದ ಕತೆ…
ಅಲ್ಲಿನ ಟಾಂಗ್ ಜಿಲ್ಲೆಯ ನಗರ್ ಗ್ರಾಮದಲ್ಲಿ ಇಂದಿಗೂ ಹೋಳಿ ಹಬ್ಬದ ದಿನ ಒಬ್ಬನೇ ಒಬ್ಬ ಪುರುಷ ಊರಲ್ಲಿ ನಿಲ್ಲುವುದೇ ಇಲ್ಲ…!
ಕಳೆದ 500ಕ್ಕೂ ಅಧಿಕ ವರ್ಷಗಳಿಂದ ಚಾಲ್ತಿಯಲ್ಲಿರುವ ಗ್ರಾಮೀಣರ ಜನಪದ ನಂಬಿಕೆಯಂತೆ ಈ ಆಚಾರ ನಡೆಯುತ್ತಿದೆ. ಹೋಳಿ ಹಬ್ಬದ ದಿನ ಬೆಳಗಾದರೆ ಇಡೀ ಗ್ರಾಮದ ಪುರುಷರು ಕಡ್ಡಾಯ ಊರು ತೊರೆಯಲೇ ಬೇಕು. ಇದರಂತೆ ಬೆಳಿಗ್ಗೆ 10ಗಂಟೆಯ ಮೊದಲೇ ಪುರುಷರು ಗ್ರಾಮ ಬಿಟ್ಟು, ಪ್ರಾಂತ ಪ್ರದೇಶದ ಚಾಮುಂಡಾ ಮಾತಾ ದೇವಾಲಯಕ್ಕೆ ಹೋಗುತ್ತಾರೆ. ಐದರ ಹರೆಯದ ಮೇಲ್ಪಟ್ಟ ಪ್ರತಿಯೊಬ್ಬ ಪುರುಷನೂ ಈ ಆಚಾರ ಪಾಲಿಸತಕ್ಕದ್ದು. ಅದಲ್ಲದಿದ್ದರೆ ಆ ದಿನ ಮಹಿಳೆಯರಿಂದಲೇ ಚಾಟಿಯೇಟಿನ ಶಿಕ್ಷೆಯೂ ಕಾದಿದೆ!
ಪುರುಷರು ಗ್ರಾಮ ತೊರೆದರೆ ಮತ್ತೆ ಊರಿಡೀ ಮಹಿಳಾ ಸ್ವಾಧೀನ. ಅವರು ಬೀದಿಯಲ್ಲಿ ರಂಗುಚೆಲ್ಲುತ್ತಾ, ನಾಟ್ಯವಾಡುತ್ತಾ ಕುಣಿದು ಸಂಭ್ರಮಿಸುತ್ತಾರೆ. ಪುರುಷರು ಈ ಸಂದರ್ಭ ಊರು ತೊರೆಯಬೇಕು ಮಾತ್ರವಲ್ಲ, ಮಹಿಳಾ ಮಣಿಯರ ಹೋಳಿ ಸಂಭ್ರಮವನ್ನು ಕಣ್ಣೆತ್ತಿಯೂ ನೋಡಬಾರದು!
ಯಾರಾದರೊಬ್ಬ ಊರಲ್ಲಿ ಬಾಕಿಯಾಗಿ ಹೋಳಿ ನೋಡಿದರೆ ಆತನಿಗೆ ಚಾಟಿಯೇಟಿನೊಂದಿಗೆ ಗ್ರಾಮದಿಂದಲೇ ಗಡೀಪಾರಿನ ಶಿಕ್ಷೆ ಇದೆಯಂತೆ!
ಏನೀ ಆಚಾರದ ಹಿನ್ನೆಲೆ..?
ಐದು ದಶಕ ದಾಟಿದ ಈ ಆಚಾರ ಈಗ ಆಧುನಿಕ ಯುಗದಲ್ಲೂ ಮುಂದುವರಿಯುತ್ತಿದೆ. ಹಿಂದೆ ಮಹಿಳೆಯರು ಪುರುಷರುಳ್ಳ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಸಂಪ್ರದಾಯ ಇರಲಿಲ್ಲ. ಹೀಗಾಗಿ ಮಹಿಳೆಯರು ಹೋಳಿ ಆಚರಿಸಿಕೊಳ್ಳಲೆಂದೇ ಪುರುಷರಿಲ್ಲದ ಬೀದಿ ಸೃಷ್ಟಿಸಲು ಈ ಸಂಪ್ರದಾಯ ಬಂದಿದೆಯಂತೆ. ಮಹಿಳೆಯರು ಹೋಳಿ ಆಚರಿಸಲೆಂದೇ ಸ್ವಯಂಪ್ರೇರಿತರಾಗಿ ಪುರುಷರು ಊರು ಬಿಡಲಾರಂಭಿಸಿದರಂತೆ. ಹೀಗೆ ಊರು ಬಿಡುವ ಪುರುಷ ಪುಂಗವರು ಕತ್ತಲಾಗುವಂತೆಯೇ ಗ್ರಾಮದ ಮನೆಗೆ ಮರಳಿ ಬರುತ್ತಾರೆ.